ಹ್ಯಾಟ್ರಿಕ್ ಶತಕ ಸಿಡಿಸಿದ ಟಾಪ್ 10 ಬ್ಯಾಟ್ಸ್’ಮನ್’ಗಳಿವರು..!

By Naveen KodaseFirst Published Oct 28, 2018, 6:15 PM IST
Highlights

ಸೀಮಿತ ಓವರ್’ಗಳ ಕ್ರಿಕೆಟ್’ನಲ್ಲಿ ಶತಕ ಸಿಡಿಸಲು ಸಾಕಷ್ಟು ತಾಳ್ಮೆ ಹಾಗೂ ಕೌಶಲ ಬೇಕಾಗುತ್ತದೆ. ಒಂದು ಕೆಟ್ಟ ಹೊಡೆತಕ್ಕೆ ಬ್ಯಾಟ್ಸ್’ಮನ್ ಬೆಲೆತೆರಬೇಕಾಗಿ ಬರಬಹುದು. ಏಕದಿನ ಕ್ರಿಕೆಟ್’ನಲ್ಲಿ ಸತತ ಒಂದೆರಡು ಶತಕ ಸಿಡಿಸಿದ ಹಲವು ಬ್ಯಾಟ್ಸ್’ಮನ್’ಗಳನ್ನು ನೋಡಿದ್ದೇವೆ. ಆದರೆ ಹ್ಯಾಟ್ರಿಕ್ ಶತಕ ಸಿಡಿಸಿದ ಆಟಗಾರರು ಮಾತ್ರ ಬೆರಳೆಣಿಕೆಯಷ್ಟು.

ಬೆಂಗಳೂರು[ಅ.28]: ಸೀಮಿತ ಓವರ್’ಗಳ ಕ್ರಿಕೆಟ್’ನಲ್ಲಿ ಶತಕ ಸಿಡಿಸಲು ಸಾಕಷ್ಟು ತಾಳ್ಮೆ ಹಾಗೂ ಕೌಶಲ ಬೇಕಾಗುತ್ತದೆ. ಒಂದು ಕೆಟ್ಟ ಹೊಡೆತಕ್ಕೆ ಬ್ಯಾಟ್ಸ್’ಮನ್ ಬೆಲೆತೆರಬೇಕಾಗಿ ಬರಬಹುದು. ಏಕದಿನ ಕ್ರಿಕೆಟ್’ನಲ್ಲಿ ಸತತ ಒಂದೆರಡು ಶತಕ ಸಿಡಿಸಿದ ಹಲವು ಬ್ಯಾಟ್ಸ್’ಮನ್’ಗಳನ್ನು ನೋಡಿದ್ದೇವೆ. ಆದರೆ ಹ್ಯಾಟ್ರಿಕ್ ಶತಕ ಸಿಡಿಸಿದ ಆಟಗಾರರು ಮಾತ್ರ ಬೆರಳೆಣಿಕೆಯಷ್ಟು.

ಏಕದಿನ ಕ್ರಿಕೆಟ್ ಇತಿಹಾಸದಲ್ಲಿ ಇದುವರೆಗೂ 4062 ಅಂತರಾಷ್ಟರೀಯ ಏಕದಿನ ಪಂದ್ಯಗಳು ನಡೆದಿದ್ದು ಕೇವಲ 10 ಬ್ಯಾಟ್ಸ್’ಮನ್’ಗಳು ಮಾತ್ರ ಹ್ಯಾಟ್ರಿಕ್ ಶತಕ ಸಿಡಿಸಿದ ಸಾಧನೆ ಮಾಡಿದ್ದಾರೆ. ಈ ಪಟ್ಟಿಗೆ ಇದೀಗ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಪಾತ್ರರಾಗಿದ್ದಾರೆ. 2018ರಲ್ಲೇ ಇಬ್ಬರು ಬ್ಯಾಟ್ಸ್’ಮನ್’ಗಳು ಈ ಅಪರೂಪದ ಪಟ್ಟಿಗೆ ಸೇರ್ಪಡೆಯಾಗಿರುವುದು ಇನ್ನೊಂದು ವಿಶೇಷ... ಕಳೆದ ಆವೃತ್ತಿಯ ಐಪಿಎಲ್’ನಲ್ಲಿ ಆರ್’ಸಿಬಿ ತಂಡವನ್ನು ಪ್ರತಿನಿಧಿಸಿದ್ದ ವಿರಾಟ್ ಕೊಹ್ಲಿ, ಎಬಿ ಡಿವಿಲಿಯರ್ಸ್ ಹಾಗೂ ಕ್ವಿಂಟನ್ ಡಿ’ಕಾಕ್ ಹ್ಯಾಟ್ರಿಕ್ ಸೆಂಚುರಿ ಸಿಡಿಸಿದ ಸಾಧನೆ ಮಾಡಿದ್ದಾರೆ. ಇನ್ನು ಏಕದಿನ ಕ್ರಿಕೆಟ್’ನಲ್ಲಿ ಅತಿಹೆಚ್ಚು ವಿಶ್ವಕಪ್ ಗೆದ್ದ ಆಸ್ಟ್ರೇಲಿಯಾ ತಂಡದ ಯಾವೊಬ್ಬ ಬ್ಯಾಟ್ಸ್’ಮನ್ ಕೂಡಾ ಹ್ಯಾಟ್ರಿಕ್ ಸೆಂಚುರಿ ಸಿಡಿಸಿಲ್ಲ ಎನ್ನೋದು ಇನ್ನೊಂದು ಅಚ್ಚರಿ..!


ಹ್ಯಾಟ್ರಿಕ್ ಶತಕ ಸಿಡಿಸಿದ ಟಾಪ್ 10 ಬ್ಯಾಟ್ಸ್’ಮನ್’ಗಳ ಪಟ್ಟಿ ನಿಮಗಾಗಿ

10. ಜಹೀರ್ ಅಬ್ಬಾಸ್:


ಭಾರತ-ಪಾಕಿಸ್ತಾನ ಕ್ರಿಕೆಟ್ ಅಭಿಮಾನಿಗಳು ಜಹೀರ್ ಅಬ್ಬಾಸ್ ಹೆಸರನ್ನು ಮರೆಯಲು ಸಾಧ್ಯವೇ ಇಲ್ಲ. ಭಾರತ ತಂಡವು 1983ರಲ್ಲಿ ಪಾಕಿಸ್ತಾನ ಪ್ರವಾಸ ಕೈಗೊಂಡಾಗ ಜಹೀರ್ ಅಬ್ಬಾಸ್ ಹ್ಯಾಟ್ರಿಕ್ ಶತಕ ಸಿಡಿಸಿ ಹೊಸ ಇತಿಹಾಸ ಬರೆದಿದ್ದರು. ಮುಲ್ತಾನ್’ನಲ್ಲಿ 118, ಲಾಹೋರ್’ನಲ್ಲಿ 105 ಹಾಗೂ ಕರಾಚಿಯಲ್ಲಿ 113 ರನ್ ಸಿಡಿಸಿದ್ದರು. ಈ ಮೂಲಕ ಹ್ಯಾಟ್ರಿಕ್ ಶತಕ ಸಿಡಿಸಿದ ಪಾಕಿಸ್ತಾನದ ಮೊದಲ ಬ್ಯಾಟ್ಸ್’ಮನ್ ಎನ್ನುವ ಕೀರ್ತಿಗೆ ಅಬ್ಬಾಸ್ ಪಾತ್ರರಾಗಿದ್ದರು.

9. ಸಯೀದ್ ಅನ್ವರ್:


ಪಾಕಿಸ್ತಾನದ ಆರಂಭಿಕ ಬ್ಯಾಟ್ಸ್’ಮನ್ ಸಯೀದ್ ಅನ್ವರ್ 1993ರಲ್ಲಿ ಶಾರ್ಜಾದಲ್ಲಿ ನಡೆದ ಪೆಪ್ಸಿ ಚಾಂಪಿಯನ್ಸ್ ಟ್ರೋಫಿಯಲ್ಲಿ ಸತತ ಮೂರು ಶತಕ ಸಿಡಿಸಿದ ಸಾಧನೆ ಮಾಡಿದ್ದರು. ಶ್ರೀಲಂಕಾ ವಿರುದ್ಧ 107, ಆ ಬಳಿಕ ವೆಸ್ಟ್ ಇಂಡೀಸ್ ಎದುರು 131 ಹಾಗೂ ಮತ್ತೆ ಶ್ರೀಲಂಕಾ ಎದುರು 11 ರನ್ ಸಿಡಿಸಿ ಮಿಂಚಿದ್ದರು. 

8. ಹರ್ಷೆಲ್ ಗಿಬ್ಸ್:


ದಕ್ಷಿಣ ಆಫ್ರಿಕಾ ತಂಡದ ಸ್ಫೋಟಕ ಬ್ಯಾಟ್ಸ್’ಮನ್ ಹರ್ಷೆಲ್ ಗಿಬ್ಸ್ ಕೂಡಾ ಹ್ಯಾಟ್ರಿಕ್ ಶತಕ ಸಿಡಿಸಿದ ಸಾಧನೆ ಮಾಡಿದ್ದಾರೆ. 2002ರಲ್ಲಿ ನಡೆದ ಟೂರ್ನಿಯಲ್ಲಿ ಕೀನ್ಯಾ ವಿರುದ್ಧ 116, ಭಾರತ ಎದುರು ಅಜೇಯ 116 ಹಾಗೂ ಬಾಂಗ್ಲಾದೇಶ ವಿರುದ್ಧ 153 ರನ್ ಚಚ್ಚಿ ಹೊಸ ಇತಿಹಾಸ ಬರೆದಿದ್ದರು. ಈ ಮೂಲಕ ಹ್ಯಾಟ್ರಿಕ್ ಸೆಂಚುರಿ ಬಾರಿಸಿದ ದಕ್ಷಿಣ ಆಫ್ರಿಕಾದ ಮೊದಲ ಬ್ಯಾಟ್ಸ್’ಮನ್ ಎನ್ನುವ ಕೀರ್ತಿಗೆ ಗಿಬ್ಸ್ ಪಾತ್ರರಾಗಿದ್ದರು.

7. ಎಬಿ ಡಿವಿಲಿಯರ್ಸ್:


ಆಧುನಿಕ ಕ್ರಿಕೆಟ್’ನ ಸೂಪರ್’ಸ್ಟಾರ್ ಎಂದೇ ಕರೆಸಿಕೊಳ್ಳುವ ಎಬಿ ಡಿವಿಲಿಯರ್ಸ್ ಕೂಡಾ ಹ್ಯಾಟ್ರಿಕ್ ಶತಕ ಸಿಡಿಸಿದ್ದಾರೆ. 2010ರಲ್ಲಿ ಭಾರತದ ವಿರುದ್ಧದ ಸರಣಿಯಲ್ಲಿ ಹ್ಯಾಟ್ರಿಕ್ ಶತಕ ಸಿಡಿಸಿ ಮಿಂಚಿದ್ದರು. ಗ್ವಾಲಿಯರ್ ಹಾಗೂ ಅಹಮದಾಬಾದ್’ನಲ್ಲಿ ಕ್ರಮವಾಗಿ ಅಜೇಯ 114 ಮತ್ತು 102 ರನ್ ಬಾರಿಸಿದ್ದ ಎಬಿಡಿ, ಆ ಬಳಿಕ ವೆಸ್ಟ್ ಇಂಡೀಸ್ ವಿರುದ್ಧದ ಸರಣಿಯ ಮೊದಲ ಪಂದ್ಯದಲ್ಲೇ 10 ರನ್ ಸಿಡಿಸಿ ಹ್ಯಾಟ್ರಿಕ್ ಶತಕ ಪೂರೈಸಿದ್ದರು.

6. ಕ್ವಿಂಟನ್ ಡಿ ಕಾಕ್:


ದಕ್ಷಿಣ ಆಫ್ರಿಕಾ ತಂಡದ ವಿಕೆಟ್’ಕೀಪರ್ ಬ್ಯಾಟ್ಸ್’ಮನ್ ಕ್ವಿಂಟನ್ ಡಿ ಕಾಕ್ 2013ರಲ್ಲಿ ಈ ಪ್ರತಿಷ್ಠಿತ ಕ್ಲಬ್’ಗೆ ಸೇರ್ಪಡೆಗೊಂಡಿದ್ದಾರೆ. ಭಾರತ ವಿರುದ್ಧದ ಸರಣಿಯಲ್ಲಿ ಜೊಹಾನ್ಸ್’ಬರ್ಗ್[135] ಹಾಗೂ ಡರ್ಬನ್[106] ಸತತ 2 ಶತಕ ಸಿಡಿಸಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದ ಡಿಕಾಕ್ ಸೆಂಚುರಿಯನ್’ನಲ್ಲಿ 101 ರನ್ ಬಾರಿಸಿದ್ದರು.

5. ರಾಸ್ ಟೇಲರ್:


ನ್ಯೂಜಿಲೆಂಡ್ ತಂಡದ ಮಧ್ಯಮ ಕ್ರಮಾಂಕದ ಆಧಾರಸ್ತಂಭವಾಗಿರುವ ರಾಸ್ ಟೇಲರ್ ಭಾರತ ವಿರುದ್ಧ ತವರಿನಲ್ಲಿ ಹ್ಯಾಮಿಲ್ಟನ್ ಹಾಗೂ ವೆಲ್ಲಿಂಗ್ಟನ್’ನಲ್ಲಿ ಕ್ರಮವಾಗಿ 112 ಮತ್ತು 102 ರನ್ ಸಿಡಿಸಿದ್ದರು. ಆ ಬಳಿಕ ಅಬುದಾಬಿಯಲ್ಲಿ ಪಾಕಿಸ್ತಾನ ವಿರುದ್ಧ 105 ರನ್ ಚಚ್ಚಿ ಹ್ಯಾಟ್ರಿಕ್ ಶತಕದ ಸಾಧನೆ ಮಾಡಿದ್ದರು. ಈ ಮೂಲಕ ಹ್ಯಾಟ್ರಿಕ್ ಶತಕ ಸಿಡಿಸಿದ ಮೊದಲ ಕಿವೀಸ್ ಬ್ಯಾಟ್ಸ್’ಮನ್ ಎನ್ನುವ ಶ್ರೇಯಾ ಕೂಡಾ ಟೇಲರ್ ಪಾಲಾಗಿದೆ.

4. ಕುಮಾರ ಸಂಗಕ್ಕರ:


2015ರ ಏಕದಿನ ವಿಶ್ವಕಪ್ ಟೂರ್ನಿ’ಯಲ್ಲಿ ಕಪ್ ಗೆಲ್ಲದಿದ್ದರೂ ಕುಮಾರ ಸಂಗಕ್ಕರ ಪಾಲಿಗೆ ಯಾವತ್ತೂ ಅವಿಸ್ಮರಣೀಯವಾಗಿಯೇ ಉಳಿಯಲಿದೆ. ಕಾರಣ ಸತತ 4 ಶತಕ ಸಿಡಿಸುವ ಮೂಲಕ ವಿನೂತನ ವಿಶ್ವದಾಖಲೆ ಬರೆದಿದ್ದಾರೆ ದ್ವೀಪ ನಾಡಿನ ವಿಕೆಟ್’ಕೀಪರ್ ಬ್ಯಾಟ್ಸ್’ಮನ್. ಬಾಂಗ್ಲಾದೇಶ[105], ಇಂಗ್ಲೆಂಡ್[117], ಆಸ್ಟ್ರೇಲಿಯಾ[104] ಹಾಗೂ ಸ್ಕಾಟ್’ಲ್ಯಾಂಡ್[124] ವಿರುದ್ಧ ಶತಕ ಸಿಡಿಸಿ ಇತಿಹಾಸ ಬರೆದಿದ್ದಾರೆ.

3. ಬಾಬರ್ ಅಜಂ:


ಇತ್ತೀಚೆಗೆ ಅದ್ಭುತ ಫಾರ್ಮ್’ನಲ್ಲಿರುವ ಬಾಬರ್ ಅಜಂ ವೆಸ್ಟ್ ಇಂಡೀಸ್ ವಿರುದ್ಧ ಹ್ಯಾಟ್ರಿಕ್ ಶತಕ ಸಿಡಿಸಿದ ಸಾಧನೆ ಮಾಡಿದ್ದಾರೆ. ಜಹೀರ್ ಅಬ್ಬಾಸ್ ಹಾಗೂ ಸಯೀದ್ ಅನ್ವರ್ ಬಳಿಕ ಹ್ಯಾಟ್ರಿಕ್ ಶತಕ ಸಿಡಿಸಿದ ಮೂರನೇ ಬ್ಯಾಟ್ಸ್’ಮನ್ ಎನ್ನುವ ಕೀರ್ತಿಗೆ ಅಜಂ ಪಾತ್ರರಾಗಿದ್ದಾರೆ. ವೆಸ್ಟ್ ಇಂಡೀಸ್ ವಿರುದ್ಧ 2016ರಲ್ಲಿ ಬಾಬರ್ ಅಜಂ 123, 120 ಹಾಗೂ 117 ರನ್ ಸಿಡಿಸುವ ಮೂಲಕ ಈ ಸಾಧನೆ ಮಾಡಿದ್ದಾರೆ.

2. ಜಾನಿ ಬೇರ್’ಸ್ಟೋ:


ಇಂಗ್ಲೆಂಡ್ ತಂಡದ ಪ್ರತಿಭಾನ್ವಿತ ಕ್ರಿಕೆಟಿಗ ಜಾನಿ ಬೇರ್’ಸ್ಟೋ ಇದೇ ವರ್ಷದ ಮಾರ್ಚ್’ನಲ್ಲಿ ಹ್ಯಾಟ್ರಿಕ್ ಶತಕ ಸಿಡಿಸಿದ ಸಾಧನೆ ಮಾಡಿದ್ದಾರೆ. ನ್ಯೂಜಿಲೆಂಡ್ ವಿರುದ್ದ 138 ಹಾಗೂ 104 ಮತ್ತು ಸ್ಕಾಟ್’ಲೆಂಡ್ ವಿರುದ್ದ 105 ರನ್ ಸಿಡಿಸುವ ಮೂಲಕ ಹ್ಯಾಟ್ರಿಕ್ ಸೆಂಚುರಿ ಸಿಡಿಸಿದ ಸಾಧನೆ ಮಾಡಿದ್ದಾರೆ. 

1. ವಿರಾಟ್ ಕೊಹ್ಲಿ:


ಅಂಡರ್ 19 ವಿಶ್ವಕಪ್ ಗೆದ್ದು ಜಗತ್ತಿಗೆ ಪರಿಚಿತನಾದ ವಿರಾಟ್ ಕೊಹ್ಲಿ ಮುಟ್ಟಿದ್ದೆಲ್ಲಾ ಚಿನ್ನ. ಅಂತರಾಷ್ಟ್ರೀಯ ಕ್ರಿಕೆಟ್’ಗೆ ಕಾಲಿಟ್ಟ ದಿನದಿಂದಲೂ ಒಂದಲ್ಲಾ ಒಂದು ದಾಖಲೆ ಬರೆಯುತ್ತಲೇ ಮುನ್ನುಗ್ಗುತ್ತಿರುವ ಕೊಹ್ಲಿ ಕೂಡಾ ಇದೀಗ ಈ ಎಲೈಟ್ ಕ್ಲಬ್ ಸೇರ್ಪಡೆಗೊಂಡಿದ್ದಾರೆ. ವೆಸ್ಟ್ ಇಂಡೀಸ್ ವಿರುದ್ಧದ ಸರಣಿಯ ಮೊದಲ ಮೂರು ಪಂದ್ಯಗಳಲ್ಲಿ ಗುವಾಹಟಿ[140], ವಿಶಾಖಪಟ್ಟಣಂ[157*] ಹಾಗೂ ಪುಣೆ[107]ಯಲ್ಲಿ ಶತಕ ಸಿಡಿಸುವ ಮೂಲಕ ಸತತ ಮೂರು ಸೆಂಚುರಿ ಬಾರಿಸಿದ ಭಾರತದ ಮೊದಲ ಬ್ಯಾಟ್ಸ್’ಮನ್ ಎನ್ನುವ ಕೀರ್ತಿಗೆ ಪಾತ್ರರಾಗಿದ್ದಾರೆ. ಇನ್ನೂ ಸರಣಿಯಲ್ಲಿ ಎರಡು ಪಂದ್ಯಗಳು ಬಾಕಿಯಿದ್ದು ಅದರಲ್ಲೂ ಶತಕ ಸಿಡಿಸಿದರೆ ಅಚ್ಚರಿಪಡಬೇಕಿಲ್ಲ. 


 

click me!