Commonwealth Games 2022: ರವಿ ಕುಮಾರ್‌ ದಹಿಯಾ, ವಿನೇಶ್‌ ಪೋಗಟ್‌, ನವೀನ್‌ಗೆ ಸ್ವರ್ಣ!

By Santosh NaikFirst Published Aug 6, 2022, 11:36 PM IST
Highlights

ಕಾಮನ್ವೆಲ್ತ್‌ ಗೇಮ್ಸ್‌ನಲ್ಲಿ ಭಾರತದ ರೆಸ್ಲರ್‌ಗಳ ಚಿನ್ನದ ಬೇಟೆ ಮುಂದುವರಿದಿದೆ. ಶನಿವಾರ ನಡೆದ ಸ್ಪರ್ಧೆಗಳಲ್ಲಿ ಭಾರತದ ರವಿಕುಮಾರ್‌ ದಹಿಯಾ, ನವೀನ್‌ ಹಾಗೂ ವಿನೇಶ್‌ ಪೋಗಟ್‌ ಸ್ವರ್ಣ ಪದಕ ಸಾಧನೆ ಮಾಡಿದ್ದಾರೆ. ಸತತ 2ನೇ ದಿನ ಭಾರತ ತಂಡ ಕುಸ್ತಿಯಲ್ಲಿ ಭಾರತದ ರೆಸ್ಲರ್‌ಗಳು ಒಂದೇ ದಿನ ಮೂರು ಸ್ವರ್ಣ ಪದಕ ಗೆದ್ದಂತಾಗಿದೆ.

ಬರ್ಮಿಂಗ್‌ ಹ್ಯಾಂ (ಆ. 6): ಬರ್ಮಿಂಗ್‌ಹ್ಯಾಂ ಕಾಮನ್ವೆಲ್ತ್‌ ಗೇಮ್ಸ್‌ನ ಸತತ 2ನೇ ದಿನವೂ ಭಾರತದ ರೆಸ್ಲರ್‌ಗಳು ಹ್ಯಾಟ್ರಿಕ್‌ ಸ್ವರ್ಣ ಪದಕ ಸಾಧನೆ ಮಾಡಿದ್ದಾರೆ. ಶುಕ್ರವಾರ ನಡೆದ ಸ್ಪರ್ಧೆಯಲ್ಲಿ ಭಜರಂಗ್ ಪೂನಿಯಾ, ಸಾಕ್ಷಿ ಮಲೀಕ್‌ ಹಾಗೂ ದೀಪಕ್‌ ಪೂನಿಯಾ ಸ್ವರ್ಣ ಸಾಧನೆ ಮಾಡಿದ್ದರೆ, ಶನಿವಾರದ ಸ್ಪರ್ಧೆಯಲ್ಲಿ ಟೋಕಿಯೋ ಒಲಿಂಪಿಕ್ಸ್‌ ಬೆಳ್ಳಿ ಪದಕ ವಿಜೇತ ರವಿ ಕುಮಾರ್‌ ರಹಿಯಾ, ವಿನೇಶ್‌ ಪೋಗಟ್‌ ಹಾಗೂ ನವೀನ್‌ ಸ್ವರ್ಣ ಪದಕ ಸಾಧನೆ ಮಾಡಿದರು.  ರವಿ ಕುಮಾರ್ ದಹಿಯಾ ಪುರುಷರ 57 ಕೆಜಿ ವಿಭಾಗದಲ್ಲಿ ಚಿನ್ನದ ಪದಕ ಜಯಿಸಿದರೆ, ನವೀನ್‌ ಪುರಷುರ 74 ಕೆಜಿ ವಿಭಾಗದಲ್ಲಿ ಪಾಕಿಸ್ತಾನದ ರೆಸ್ಲರ್‌ಅನ್ನು ಮಣಿಸುವ ಮೂಲಕ ಬಂಗಾರದ ಪದಕದ  ಸಾಧನೆ ಮಾಡಿದರು. ಮಹಿಳೆಯರ 53 ಕೆಜಿ ವಿಭಾಗದಲ್ಲಿ ವಿನೇಶ್‌ ಪೋಗಟ್‌ ಚಿನ್ನದ ಪದಕ ಗೆದ್ದುಕೊಂಡರು. ಸತತ ಮೂರನೇ ಕಾಮನ್ವೆಲ್ತ್‌ ಗೇಮ್ಸ್‌ ಕೂಟದಲ್ಲಿ ವಿನೇಶ್‌ ಪೋಗಟ್‌ ಚಿನ್ನದ ಪದಕ ಸಾಧನೆ ಮಾಡಿದಂತಾಗಿದೆ. 2014ರ ಗ್ಲಾಸ್ಗೋ ಗೇಮ್ಸ್‌ನ 48 ಕೆಜಿ ವಿಭಾಗದಲ್ಲಿ ಚಿನ್ನ ಗೆದ್ದಿದ್ದ ವಿನೇಶ್‌ ಪೋಗಟ್‌, 2018ರ ಗೋಲ್ಡ್‌ ಕೋಸ್ಟ್‌ ಗೇಮ್ಸ್‌ನಲ್ಲಿ ಮಹಿಲೆಯರ 50 ಕೆಜಿ ವಿಭಾಗದಲ್ಲಿ ಚಿನ್ನ ಜಯಿಸಿದ್ದರು. ಇದರೊಂದಿಗೆ ಕೂಟದಲ್ಲಿ ಭಾರತ ಈವರೆಗೂ 12 ಚಿನ್ನ, 11 ಬೆಳ್ಳಿ ಹಾಗೂ 11 ಕಂಚಿನೊಂದಿಗೆ ಒಟ್ಟು 34 ಪದಕ ಸಾಧನೆ ಮಾಡುವ ಮೂಲಕ ಪದಕ ಪಟ್ಟಿಯಲ್ಲಿ ಐದನೇ ಸ್ಥಾನಕ್ಕೇರಿದೆ. 

ಸತತ ಮೂರನೇ ಪಂದ್ಯದಲ್ಲೂ ತಾಂತ್ರಿಕ ಶ್ರೇಷ್ಠತೆಯ ಗೆಲುವು:  ರವಿಕುಮಾರ್ ದಹಿಯಾ 2022ರ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಪುರುಷರ ಫ್ರೀಸ್ಟೈಲ್ 57 ಕೆಜಿ ವಿಭಾಗದ ಫೈನಲ್‌ನಲ್ಲಿ ನೈಜೀರಿಯಾದ ಎಬಿಕೆವೆನಿಮೊ ವೆಲ್ಸನ್ ಅವರನ್ನು ಸೋಲಿಸಿ ಚಿನ್ನದ ಪದಕ ಜಯಿಸಿದರು. ಭಾರತದ ರೆಸ್ಲರ್‌ ಫೈನಲ್‌ ಪಂದ್ಯದಲ್ಲಿ ನೈಜಿರಿಯಾದ ರೆಸ್ಲರ್‌ನಿಂದ ದೊಡ್ಡ ಮಟ್ಟದ ಪ್ರತಿರೋಧ ಎದುರಿಸಿದರು. ಅಂದಾಜು ಎರಡು ನಿಮಿಷದ ಬಳಿಕ ರವಿ ದಹಿಯಾ ಮೊದಲ ಅಂಕ ಸಂಪಾದನೆ ಮಾಡಿದ್ದರು. ಆದರೆ, ಮೊದಲ ಘಾತಕ ದಾಳಿಯಲ್ಲಿಯೇ ರವಿ ಕುಮಾರ್‌ ದಹಿಯಾ ಎಂಟು ಅಂಕ ಸಂಪಾದನೆ ಮಾಡಿದರು. ಆ ಬಳಿಕ ಮತ್ತೊಂದು ಟೇಕ್‌ಡೌನ್‌ ಮಾಡಿದ್ದರಿಂದ 10 ಅಂಕ ಮುಟ್ಟುವ ಮೂಲಕ ತಾಂತ್ರಿಕ ಶ್ರೇಷ್ಠತೆಯ ಗೆಲುವು ಕಂಡರು. ಇದು ಕೂಟದಲ್ಲಿ ರವಿಕುಮಾರ್‌ ದಹಿಯಾ ಅವರ ಸತತ ಮೂರನೇ ಟೆಕ್ನಿಕಲ್‌ ಸುಪೀರಿಯಾರಿಟಿ ಗೆಲುವು ಎನಿಸಿದೆ.

ಪಾಕ್‌ ರೆಸ್ಲರ್‌ ಮಣಿಸಿ ಚಿನ್ನ ಗೆದ್ದ ನವೀನ್‌: ಪುರುಷರ ಫ್ರೀಸ್ಟೈಲ್ 74 ಕೆಜಿ ವಿಭಾಗದಲ್ಲಿ ನವೀನ್ ಶನಿವಾರ ನಡೆದ ಫೈನಲ್‌ನಲ್ಲಿ ಪಾಕಿಸ್ತಾನದ ಮುಹಮ್ಮದ್ ಷರೀಫ್ ತಾಹಿರ್ ಅವರನ್ನು ಸೋಲಿಸಿ ಚಿನ್ನದ ಪದಕ ಪಡೆದರು. ಮೊದಲ ಸುತ್ತಿನ ಅಂತ್ಯಕ್ಕೆ ನವೀನ್ 2-0ಯಿಂದ ಮುನ್ನಡೆ ಸಾಧಿಸಿದರು. ಎರಡನೇ ಸುತ್ತಿನಲ್ಲಿ, ಅವರು 9-0 ಪಂದ್ಯವನ್ನು ಗೆಲ್ಲಲು ಏಳು ಪಾಯಿಂಟ್‌ಗಳ ಸುರಿಮಳೆಗೈದರು.

Commonwealth Games 2022: ನಡಿಗೆಯಲ್ಲಿ ಪ್ರಿಯಾಂಕಾ, ಸ್ಟೀಪಲ್‌ಚೇಸ್‌ನಲ್ಲಿ ಅವಿನಾಶ್‌ಗೆ ಬೆಳ್ಳಿ!

ವಿನೇಶ್‌ ಸ್ವರ್ಣದ ಹ್ಯಾಟ್ರಿಕ್‌: 2022 ರ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಮಹಿಳೆಯರ 53 ಕೆಜಿ ವಿಭಾಗದಲ್ಲಿ ಚಿನ್ನದ ಪದಕವನ್ನು ಖಚಿತಪಡಿಸಿಕೊಳ್ಳಲು ವಿನೇಶ್ ಫೋಗಟ್ ಶನಿವಾರ ಶ್ರೀಲಂಕಾದ ಚಮೋದ್ಯಾ ಕೇಶಾನಿ ಮಧುರಾವಲಗೆ ಡಾನ್ ವಿರುದ್ಧ ತನ್ನ ಕೊನೆಯ ಪಂದ್ಯವನ್ನು ಗೆಲ್ಲುವ ಮೂಲಕ ಚಿನ್ನ ಜಯಿಸಿದರು. ವಿನೇಶ್ ಫೋಗಟ್ ಕೇವಲೇ ಎರಡೇ ನಿಮಿಷದಲ್ಲಿ ಎದುರಾಳಿಯನ್ನು ಫಾಲ್‌ ಮಾಡುವ ಮೂಲಕ ಜಯಿಸಿದರು. ಬರ್ಮಿಂಗ್ಹ್ಯಾಮ್ ಕ್ರೀಡಾಕೂಟದಲ್ಲಿ ನಾರ್ಡಿಕ್ ವ್ಯವಸ್ಥೆಯನ್ನು ಅನುಸರಿಸಿದ 53 ಕೆಜಿ ತೂಕದ ವಿಭಾಗದಲ್ಲಿ ವಿನೇಶ್ ಎಲ್ಲಾ ಮೂರು ಪಂದ್ಯಗಳನ್ನು ಗೆದ್ದರು. ಅವರು ಶ್ರೀಲಂಕಾದ ಮಧುರಾವಲಗೆ, ನೈಜೀರಿಯಾದ ಅಡೆಕುರೊಯೆ ಮತ್ತು ಕೆನಡಾದ ಸ್ಟೀವರ್ಟ್ ಅವರನ್ನು ಸೋಲಿಸಿದರು. ವಿವಿಧ ತೂಕ ವಿಭಾಗದಲ್ಲಿ ಪದಕಗಳು ಬಂದಿದ್ದರೂ, ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಇದು ಫೋಗಾಟ್ ಅವರ ಸತತ ಮೂರನೇ ಚಿನ್ನದ ಪದಕವಾಗಿದೆ.

Commonwealth Games 2022: ಎದುರಾಳಿಯನ್ನು ಫಾಲ್‌ ಮಾಡಿ ಸೂಪರ್‌ ಗೆಲುವು ಕಂಡ ಸಾಕ್ಷಿಗೆ ಸ್ವರ್ಣ!

ಪೂಜಾಗೆ ಕಂಚಿನ ಪದಕ: ಮಹಿಳೆಯರ ಫ್ರೀಸ್ಟೈಲ್ 50 ಕೆಜಿ ವಿಭಾಗದಲ್ಲಿ ಪೂಜಾ ಗೆಹ್ಲೋಟ್ ಸ್ಕಾಟ್ಲೆಂಡ್‌ನ ಲೆಚಿಡ್ಜಿಯೊ ಅವರನ್ನು ಸೋಲಿಸಿ ಕಂಚಿನ ಪದಕ ಗೆದ್ದರು. ಗೆಹ್ಲೋಟ್ 12-2 ಅಂಕಗಳೊಂದಿಗೆ ತಾಂತ್ರಿಕ ಶ್ರೇಷ್ಠತೆಯ ಮೂಲಕ ಕಂಚಿನ ಪದಕವನ್ನು ಗೆದ್ದರು. ಭಾರತೀಯ ಆಟಗಾರ್ತಿ ಈ ಮೊದಲು ಎರಡರಲ್ಲಿ ಎರಡು ಗೆಲುವುಗಳೊಂದಿಗೆ ಅಗ್ರಸ್ಥಾನದಲ್ಲಿ ತನ್ನ ಗುಂಪನ್ನು ಮುಗಿಸಿದ್ದರು. ಆದಾಗ್ಯೂ, ಅವರು ಕೆನಡಾದ ಮ್ಯಾಡಿಸನ್ ಪಾರ್ಕ್ಸ್ ವಿರುದ್ಧ ಸೆಮಿಫೈನಲ್ ಪಂದ್ಯದಲ್ಲಿ ಸೋತರು.

click me!