WI vs Ind: ಟಾಸ್‌ ಗೆದ್ದ ವೆಸ್ಟ್‌ ಇಂಡೀಸ್‌, ಭಾರತದ ಭರ್ಜರಿ ಆರಂಭ

By Santosh NaikFirst Published Aug 6, 2022, 9:14 PM IST
Highlights

ಆತಿಥೇಯ ವೆಸ್ಟ್‌ ಇಂಡೀಸ್‌ ವಿರುದ್ಧ ಐದು ಪಂದ್ಯಗಳ ಟಿ20 ಸರಣಿಯನ್ನು ವಶಪಡಿಸಿಕೊಳ್ಳುವ ಇರಾದೆಯಲ್ಲಿರುವ ಟೀಮ್‌ ಇಂಡಿಯಾ, ಟಾಸ್‌ ಸೋತು ಮೊದಲು ಬ್ಯಾಟಿಂಗ್‌ಗೆ ಇಳಿದಿದೆ. ಭಾರತ ತಂಡಕ್ಕೆ ರೋಹಿತ್‌ ಶರ್ಮ ಸೂರ್ಯಕುಮಾರ್‌ ಯಾದವ್‌ ಭರ್ಜರಿ ಆರಂಭ ನೀಡಿದ್ದಾರೆ.

ಫ್ಲೋರಿಡಾ, ಅಮೆರಿಕ (ಆ.6): ವೆಸ್ಟ್‌ ಇಂಡೀಸ್‌ ವಿರುದ್ಧದ ಐದು ಪಂದ್ಯಗಳ ಟಿ20 ಸರಣಿಯನ್ನು ಗೆಲ್ಲುವ ಗುರಿಯಲ್ಲಿ ಟೀಮ್‌ ಇಂಡಿಯಾ, 4ನೇ ಟಿ20 ಪಂದ್ಯದಲ್ಲಿ ಟಾಸ್‌ ಸೋಲು ಕಂಡಿದ್ದು ಮೊದಲು ಬ್ಯಾಟಿಂಗ್‌ಗೆ ಇಳಿದಿದೆ. ನಾಯಕ ರೋಹಿತ್‌ ಶರ್ಮ ಹಾಗೂ ಸೂರ್ಯಕುಮಾರ್‌ ಯಾದವ್ ತಂಡಕ್ಕೆ ಭರ್ಜರಿ ಅರಂಭ ನೀಡಿದ್ದು ಟೀಮ್‌ ಇಂಡಿಯಾ ದೊಡ್ಡ ಮೊತ್ತ ಬಾರಿಸುವ ಗುರಿಯಲ್ಲಿದೆ.  16 ಎಸೆತಗಳಲ್ಲಿ 3 ಸಿಕ್ಸರ್‌ ಹಾಗೂ 2 ಬೌಂಡರಿಗಳೊಂದಿಗೆ 33 ರನ್‌ ಬಾರಿಸಿದ್ದ ರೋಹಿತ್‌ ಶರ್ಮ, ಅಕೇಲ್‌ ಹುಸೇನ್‌ಗೆ ವಿಕೆಟ್‌ ಒಪ್ಪಿಸಿದ್ದಾರೆ. ಸೆಂಟ್ರಲ್ ಬ್ರೋವರ್ಡ್ ರೀಜನಲ್ ಪಾರ್ಕ್ ಸ್ಟೇಡಿಯಂ ಟರ್ಫ್ ಗ್ರೌಂಡ್‌ನಲ್ಲಿ ಶನಿವಾರ ಪಂದ್ಯ ನಡೆಯುತ್ತಿದ್ದು, ಟೀಮ್‌ ಇಂಡಿಯಾ ಮೂರು ಪ್ರಮುಖ ಬದಲಾವಣೆಗಳನ್ನು ಮಾಡಿದೆ. ವಿಶ್ವಕಪ್‌ ಅನ್ನು ಗುರಿಯಾಗಿಸಿಕೊಂಡು ತಂಡದಲ್ಲಿ ಬದಲಾವಣೆ ಮಾಡುತ್ತಿರುವುದಾಗಿ ರೋಹಿತ್‌ ಶರ್ಮ ಟಾಸ್‌ ವೇಳೆ ಹೇಳಿದ್ದಾರೆ. ರವಿ ಬಿಷ್ಣೋಯಿ, ಅಕ್ಸರ್ ಪಟೇಲ್‌ ಹಾಗೂ ಸಂಜು ಸ್ಯಾಮ್ಸನ್‌ ತಂಡದಲ್ಲಿ ಸ್ಥಾನ ಪಡೆದಿದ್ದರೆ, ಇದಕ್ಕಾಗಿ ಹಾರ್ದಿಕ್‌ ಪಾಂಡ್ಯ, ರವಿಚಂದ್ರನ್‌ ಅಶ್ವಿನ್‌ ಹಾಗೂ ಶ್ರೇಯಸ್‌ ಅಯ್ಯರ್‌ ಸ್ಥಾನ ತೆರವು ಮಾಡಿದ್ದಾರೆ. ಇನ್ನು ನಿಕೋಲಸ್‌ ಪೂರನ್‌ ನೇತತ್ವದ ವೆಸ್ಟ್‌ ಇಂಡೀಸ್‌ ತಂಡ ಆಡುವ ಬಳಗದಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ.

ಶಾಹಿದ್ ಅಫ್ರಿದಿ ದಾಖಲೆ ಮುರಿದ ರೋಹಿತ್‌ ಶರ್ಮ: ಮೂರು ಸಿಕ್ಸರ್‌ಗಳನ್ನು ಸಿಡಿಸಿದ ರೋಹಿತ್‌ ಶರ್ಮ ಈ ಹಾದಿಯಲ್ಲಿ ಗರಿಷ್ಠ ಅಂತಾರಾಷ್ಟ್ರೀಯ ಸಿಕ್ಸರ್‌ ಸಿಡಿಸಿದ ಬ್ಯಾಟ್ಸ್‌ಮನ್‌ಗಳ ಪಟ್ಟಿಯಲ್ಲಿ 2ನೇ ಸ್ಥಾನಕ್ಕೇರಿದರು. 553 ಸಿಕ್ಸರ್‌ ಸಿಡಿಸಿರುವ ಕ್ರಿಸ್‌ ಗೇಲ್‌ ಅಗ್ರಸ್ಥಾನದಲ್ಲಿದ್ದರೆ, 477 ಸಿಕ್ಸರ್‌ ಬಾರಿಸಿರುವ ರೋಹಿತ್‌ ಶರ್ಮ 2ನೇ ಸ್ಥಾನದಲ್ಲಿದ್ದಾರೆ. 476 ಸಿಕ್ಸರ್‌ ಬಾರಿಸಿರುವ ಪಾಕಿಸ್ತಾನದ ಶಾಹಿದ್ ಅಫ್ರಿದಿ ಮೂರನೇ ಸ್ಥಾನಕ್ಕೆ ಕುಸಿದಿದ್ದಾರೆ.

ಸರಣಿಯಲ್ಲಿ ಮುನ್ನಡೆಯಲ್ಲಿರುವ ಭಾರತ: ಮೂರು ಪಂದ್ಯಗಳ ಟಿ20 ಸರಣಿಯಲ್ಲಿ ಭಾರತ ಸದ್ಯ 2-1ರಿಂದ ಮುನ್ನಡೆಯಲ್ಲಿದೆ. ಮೊದಲ ಟಿ20 ಪಂದ್ಯದಲ್ಲಿ ಭರ್ಜರಿ ಜಯ ಕಂಡಿದ್ದ ಭಾರತ 2ನೇ ಟಿ20 ಪಂದ್ಯದಲ್ಲಿ ಸೋಲು ಕಂಡರೆ, ಮೂರನೇ ಪಂದ್ಯದಲ್ಲಿ ಜಯ ಕಂಡಿತ್ತು. ಪಂದ್ಯದ ಟಾಸ್‌ ವೇಳೆ ಮಾತನಾಡಿದ ರೋಹಿತ್‌ ಶರ್ಮ, ತಾವೂ ಕೂಡ ಮೊದಲು ಬೌಲಿಂಗ್‌ ಮಾಡುವ ಇಚ್ಛೆ ಹೊಂದಿದ್ದಾಗಿ ತಿಳಿಸಿದ್ದರು. ಪಿಚ್ ಹೇಗೆ ವರ್ತಿಸುತ್ತದೆ ಎನ್ನುವುದು ನಮಗೆ ತಿಳಿದಿಲ್ಲ. ಆದರೆ, ಮೊದಲು ಬ್ಯಾಟಿಂಗ್‌ ಮಾಡುವ ಅವಕಾಶ ಸಿಕ್ಕಿರುವ ಕಾರಣ, ಸ್ಕೋರ್‌ ಬೋರ್ಡ್‌ನಲ್ಲಿ ದೊಡ್ಡ ಮೊತ್ತ ಬಾರಿಸುವ ಗುರಿಯಲ್ಲಿದ್ದೇವೆ. ಪಂದ್ಯದಲ್ಲಿ ಎದುರಾಗುವ ಪ್ರತಿ ಸವಾಲಿಗೂ ತಂಡ ಸಿದ್ಧವಿರಬೇಕು. ಹೆಚ್ಚಿನ ಯುವ ಆಟಗಾರರಿಗೆ ಅವಕಾಶ ನೀಡುವ ಮೂಲಕ ಅವರಲ್ಲಿ ವಿಶ್ವಾಸ ವೃದ್ಧಿಸುವ ಕೆಲಸ ಮಾಡುತ್ತಿದ್ದೇವೆ. ವಿಶ್ವಕಪ್‌ ವೇಳೆಗೆ ಉತ್ತಮ ತಂಡವೊಂದು ಸಿದ್ಧವಾಗುವ ವಿಶ್ವಾಸದಲ್ಲಿದ್ದೇನೆ ಎಂದು ಹೇಳಿದ್ದಾರೆ.

ವಿಶ್ವಕಪ್‌ಗೆ ಹರ್ಷಲ್‌ ಪಟೇಲ್‌ ಅನುಮಾನ: ಟೀಮ್‌ ಇಂಡಿಯಾ ಹಾಗೂ ಆರ್‌ಸಿಬಿ ತಂಡದ ವೇಗಿ ಹರ್ಷಲ್‌ ಪಟೇಲ್‌ ಸೈಡ್‌ ಸ್ಟ್ರೈನ್‌ನಿಂದ ಬಳಲುತ್ತಿದ್ದು ಮುಂಬರುವ ಏಷ್ಯಾಕಪ್‌ ಟೂರ್ನಿ ಹಾಗೂ ಆ ಬಳಿಕ ನಡೆಯಲಿರುವ ಟಿ20 ವಿಶ್ವಕಪ್‌ಗೆ ಲಭ್ಯರಾಗುವುದು ಅನುಮಾನ ಎಂದು ಹೇಳಲಾಗಿದೆ.

ಭಾರತ (ಪ್ಲೇಯಿಂಗ್ ಇಲೆವೆನ್): ರೋಹಿತ್ ಶರ್ಮಾ(ಸಿ), ಸೂರ್ಯಕುಮಾರ್ ಯಾದವ್, ರಿಷಬ್ ಪಂತ್(ವಿ.ಕೀ), ಸಂಜು ಸ್ಯಾಮ್ಸನ್, ದೀಪಕ್ ಹೂಡಾ, ದಿನೇಶ್ ಕಾರ್ತಿಕ್, ಅಕ್ಸರ್ ಪಟೇಲ್, ಅವೇಶ್ ಖಾನ್, ಭುವನೇಶ್ವರ್ ಕುಮಾರ್, ರವಿ ಬಿಷ್ಣೋಯ್, ಆರ್ಶ್‌ ದೀಪ್‌ ಸಿಂಗ್

ವೆಸ್ಟ್ ಇಂಡೀಸ್ (ಪ್ಲೇಯಿಂಗ್ ಇಲೆವೆನ್‌): ಬ್ರಾಂಡನ್ ಕಿಂಗ್, ಕೈಲ್ ಮೇಯರ್ಸ್, ನಿಕೋಲಸ್ ಪೂರನ್ (ಸಿ), ರೋವ್‌ಮನ್ ಪೊವೆಲ್, ಶಿಮ್ರಾನ್ ಹೆಟ್ಮೆಯರ್, ಡೆವೊನ್ ಥಾಮಸ್ (ವಿ.ಕೀ), ಜೇಸನ್ ಹೋಲ್ಡರ್, ಡೊಮಿನಿಕ್ ಡ್ರೇಕ್ಸ್, ಅಕೇಲ್ ಹೋಸೇನ್, ಅಲ್ಜಾರಿ ಜೋಸೆಫ್, ಓಬೆಡ್ ಮೆಕಾಯ್
 

click me!