ಇಂದು ಬರ್ಮಿಂಗ್‌ಹ್ಯಾಮ್‌ ಗೇಮ್ಸ್‌ಗೆ ವೈಭವದ ತೆರೆ; ಮತ್ತಷ್ಟು ಪದಕಗಳ ಬೇಟೆಗೆ ಭಾರತ ರೆಡಿ

By Kannadaprabha News  |  First Published Aug 8, 2022, 11:06 AM IST

* ಬರ್ಮಿಂಗ್‌ಹ್ಯಾಮ್‌ ಕಾಮನ್‌ವೆಲ್ತ್‌ ಗೇಮ್ಸ್‌ಗೆ ಇಂದು ಅದ್ದೂರಿ ತೆರೆ
* 22ನೇ ಆವೃತ್ತಿಯ ಕಾಮನ್‌ವೆಲ್ತ್‌ ಕ್ರೀಡಾಕೂಟಕ್ಕೆ ಬರ್ಮಿಂಗ್‌ಹ್ಯಾಮ್ ಅಚ್ಚುಕಟ್ಟಾಗಿ ಆಯೋಜನೆ
* ನಿರೀಕ್ಷೆಯಂತೆ ಆಸ್ಪ್ರೇಲಿಯಾ, ಆತಿಥೇಯ ಇಂಗ್ಲೆಂಡ್‌ನ ಕ್ರೀಡಾಪಟುಗಳು ಪ್ರಾಬಲ್ಯ


ಬರ್ಮಿಂಗ್‌ಹ್ಯಾಮ್‌(ಆ.08): ಕಳೆದ 11 ದಿನಗಳಿಂದ ನಡೆಯುತ್ತಿರುವ 22ನೇ ಆವೃತ್ತಿಯ ಕಾಮನ್‌ವೆಲ್ತ್‌ ಕ್ರೀಡಾಕೂಟಕ್ಕೆ ಸೋಮವಾರ ತೆರೆ ಬೀಳಲಿದೆ. ಅಂತಿಮ ದಿನ ಭಾರತ ಮತ್ತಷ್ಟು ಚಿನ್ನದ ಪದಕಗಳನ್ನು ಗೆಲ್ಲುವ ನಿರೀಕ್ಷೆಯಲ್ಲಿದ್ದು, ಕ್ರೀಡಾಕೂಟವನ್ನು ಯಶಸ್ವಿಯಾಗಿ ಮುಕ್ತಾಯಗೊಳಿಸಲು ಕಾಯುತ್ತಿದೆ. ನಿರೀಕ್ಷೆಯಂತೆ ಆಸ್ಪ್ರೇಲಿಯಾ, ಆತಿಥೇಯ ಇಂಗ್ಲೆಂಡ್‌ನ ಕ್ರೀಡಾಪಟುಗಳು ಪ್ರಾಬಲ್ಯ ಮೆರೆದಿದ್ದಾರೆ. ಉದ್ಘಾಟನಾ ಸಮಾರಂಭದ ರೀತಿಯಲ್ಲೇ ಸಮಾರೋಪ ಸಮಾರಂಭವನ್ನೂ ಅದ್ಧೂರಿಯಾಗಿ ನಡೆಸಲು ಆಯೋಜಕರು ಸಿದ್ಧತೆ ನಡೆಸಿದ್ದಾರೆ.

ಕೊನೆಯ ದಿನ ಬ್ಯಾಡ್ಮಿಂಟನ್‌ನಲ್ಲಿ ಪಿ ವಿ ಸಿಂಧು, ಲಕ್ಷ್ಯ ಸೆನ್‌, ಪುರುಷರ ಡಬಲ್ಸ್‌ನಲ್ಲಿ ಸಾತ್ವಿಕ್‌ರಾಜ್ ರಂಕಿರೆಡ್ಡಿ, ಚಿರಾಗ್‌ ಶೆಟ್ಟಿ ತಮ್ಮ ವಿಭಾಗಗಳಲ್ಲಿ ಫೈನಲ್‌ ಪ್ರವೇಶಿಸಿದ್ದು, ಚಿನ್ನದ ಪದಕದ ಮೇಲೆ ಕಣ್ಣಿಟ್ಟಿದ್ದಾರೆ. ಇನ್ನು ಪುರುಷರ ಟೇಬಲ್‌ ಟೆನಿಸ್‌ನಲ್ಲಿ ಶರತ್ ಕಮಲ್‌ ಹಾಗೂ ಭಾರತ ಪುರುಷರ ಹಾಕಿ ತಂಡವು ಫೈನಲ್‌ ಪ್ರವೇಶಿಸಿದ್ದು, ಇಂದು ಚಿನ್ನದ ಪದಕಕ್ಕಾಗಿ ಸೆಣಸಾಟ ನಡೆಸಲಿದೆ

Tap to resize

Latest Videos

ಸಮರೋಪ ಸಮಾರಂಭ: ರಾತ್ರಿ 11.30ಕ್ಕೆ,

ನೇರ ಪ್ರಸಾರ: ಸೋನಿ ಟೆನ್‌

ಭಾರತದ ಇಂದಿನ ಸ್ಪರ್ಧೆಗಳು

ಬ್ಯಾಡ್ಮಿಂಟನ್‌

ಮಹಿಳಾ ಸಿಂಗಲ್ಸ್‌ ಫೈನಲ್‌-ಪಿ.ವಿ.ಸಿಂಧು(ಮಧ್ಯಾಹ್ನ 1.20ಕ್ಕೆ)

ಪುರುಷರ ಸಿಂಗಲ್ಸ್‌ ಫೈನಲ್‌-ಲಕ್ಷ್ಯ ಸೆನ್‌(ಮಧ್ಯಾಹ್ನ 2.10ಕ್ಕೆ)

ಪುರುಷರ ಡಬಲ್ಸ್‌ ಫೈನಲ್‌-ಸಾತ್ವಿಕ್‌/ಚಿರಾಗ್‌(ಮಧ್ಯಾಹ್ನ 3.50ಕ್ಕೆ)

ಪುರುಷರ ಹಾಕಿ

ಫೈನಲ್‌: ಭಾರತ-ಆಸ್ಪ್ರೇಲಿಯಾ(ಸಂಜೆ 5ಕ್ಕೆ)

ಟೇಬಲ್‌ ಟೆನಿಸ್‌

ಸಿಂಗಲ್ಸ್‌- ಸತ್ಯನ್‌, ಶರತ್‌ (ಮಧ್ಯಾಹ್ನ 3.30ರ ಬಳಿಕ)

ಸತ್ಯನ್‌-ಶರತ್‌ಗೆ ಟಿಟಿ ರಜತ

ಕ್ರೀಡಾಕೂಟದ ಟೇಬಲ್‌ ಟೆನಿಸ್‌ನಲ್ಲಿ ಭಾರತದ ಶರತ್‌ ಕಮಲ್‌-ಜಿ.ಸತ್ಯನ್‌ ಬೆಳ್ಳಿ ಪದಕ ತಮ್ಮದಾಗಿಸಿಕೊಂಡಿದ್ದಾರೆ. ಭಾನುವಾರ ಪುರುಷರ ಡಬಲ್ಸ್‌ ಫೈನಲ್‌ನಲ್ಲಿ ಭಾರತದ ಜೋಡಿ ಇಂಗ್ಲೆಂಡ್‌ ವಿರುದ್ಧ 2-3ರಿಂದ ಸೋತು ಬೆಳ್ಳಿಗೆ ತೃಪ್ತಿಪಟ್ಟುಕೊಂಡಿತು. ಇನ್ನು ಮಹಿಳಾ ಸಿಂಗಲ್ಸ್‌ ಕಂಚಿನ ಪದಕ ಪಂದ್ಯದಲ್ಲಿ ಶ್ರೀಜಾ ಅಕುಲಾ ಸೋತು ಪದಕ ತಪ್ಪಿಸಿಕೊಂಡರು.

ಜಾವೆಲಿನ್‌ನಲ್ಲಿ ರಾಣಿಗೆ ಕಂಚು

ಭಾರತದ ಅನ್ನು ರಾಣಿ ಜಾವೆಲಿನ್‌ ಎಸೆತದಲ್ಲಿ ಕಂಚು ಗೆದ್ದಿದ್ದು, ಕಾಮನ್‌ವೆಲ್ತ್‌ ಇತಿಹಾಸದಲ್ಲೇ ಜಾವೆಲಿನ್‌ನಲ್ಲಿ ಪದಕ ಗೆದ್ದ ಭಾರತದ ಮೊದಲ ಮಹಿಳಾ ಅಥ್ಲಿಟ್‌ ಎನಿಸಿಕೊಂಡಿದ್ದಾರೆ. ಭಾನುವಾರ ಮಹಿಳಾ ವಿಭಾಗದ ಫೈನಲ್‌ನಲ್ಲಿ ರಾಣಿ ತಮ್ಮ 3ನೇ ಪ್ರಯತ್ನದಲ್ಲಿ 60 ಮೀ. ದೂರ ಎಸೆದು ಕಂಚು ಪಡೆದರು. 

ಆಸ್ಪ್ರೇಲಿಯಾದವರಾದ ವಿಶ್ವ ಚಾಂಪಿಯನ್‌ ಕೆಲ್ಸಿ ಲೀ ಬಾರ್ಬರ್‌ 64.43 ಮೀ. ದೂರದೊಂದಿಗೆ ಚಿನ್ನ ಪಡೆದರೆ, ಮ್ಯಾಕೆನ್ಜೀ ಲಿಟ್‌್ಲ(64.27 ಮೀ.) ಬೆಳ್ಳಿ ಗೆದ್ದರು. ರಾಣಿಗೂ ಮೊದಲು ಕಾಶಿನಾಥ್‌ ನಾಯ್ಕ್‌(ಕಂಚು-2010) ಹಾಗೂ ಒಲಿಂಪಿಕ್‌ ಚಾಂಪಿಯನ್‌ ನೀರಜ್‌ ಚೋಪ್ರಾ(ಚಿನ್ನ-2018) ಜಾವೆಲಿನ್‌ನಲ್ಲಿ ಪದಕ ಗೆದ್ದಿದ್ದರು.

ಸ್ಕ್ವ್ಯಾ ಶ್‌ನಲ್ಲಿ ಭಾರತಕ್ಕೆ ಕಂಚು

ಕ್ರೀಡಾಕೂಟದ ಸ್ಕ್ವ್ಯಾ ಶ್‌ನಲ್ಲಿ ಭಾರತದ ದೀಪಿಕಾ ಪಲ್ಲಿಕಲ್‌-ಸೌರವ್‌ ಘೋಷಲ್‌ ಜೋಡಿ ಕಂಚಿನ ಪದಕ ಗೆದ್ದುಕೊಂಡಿದೆ. ಭಾನುವಾರ ನಡೆದ ಮಿಶ್ರ ಡಬಲ್ಸ್‌ ಕಂಚಿನ ಪದಕದ ಪಂದ್ಯದಲ್ಲಿ ಭಾರತದ ಜೋಡಿ ಆಸ್ಪ್ರೇಲಿಯಾ ವಿರುದ್ಧ 11-8, 11-4 ಅಂತರದಲ್ಲಿ ಗೆದ್ದು ಪದಕ ಪಡೆಯಿತು. ಘೋಷಲ್‌ಗೆ ಕ್ರೀಡಾಕೂಟದಲ್ಲಿ ಇದು 2ನೇ ಪದಕ. ಅವರು ಪುರುಷರ ಸಿಂಗಲ್ಸ್‌ ವಿಭಾಗದಲ್ಲೂ ಕಂಚು ಗೆದ್ದಿದ್ದರು.

ವೇಗ ನಡಿಗೆಯಲ್ಲಿ ಸಂದೀಪ್‌ಗೆ ಕಂಚು

ಕಾಮನ್‌ವೆಲ್ತ್‌ನ 10000 ಮೀ. ವೇಗ ನಡಿಗೆಯಲ್ಲಿ ಭಾರತ 2ನೇ ಪದಕ ಗೆದ್ದಿದೆ. ಭಾನುವಾರ ಪುರುಷರ ವಿಭಾಗದ ಸ್ಪರ್ಧೆಯಲ್ಲಿ ಸಂದೀಪ್‌ ಕುಮಾರ್‌ 38 ನಿಮಿಷ 49.21 ಸೆಕೆಂಡ್‌ಗಳಲ್ಲಿ ಗುರಿ ತಲುಪಿ 3ನೇ ಸ್ಥಾನ ಪಡೆದರು. 

ಬಾಕ್ಸಿಂಗ್‌ನಲ್ಲಿ ಚಿನ್ನ ಗೆದ್ದ ನಿಖಾತ್ , ಸಂಭ್ರಮದಲ್ಲಿ ಭಾರತದ ಮಾನ ಕಳೆದ ತೆಲಂಗಾಣ ಕ್ರೀಡಾ ಪ್ರಾಧಿಕಾರ ಅಧ್ಯಕ್ಷ!

ಕೆನಡಾದ ಇವಾನ್‌ ಡನ್‌ಫೀ(38 ನಿ. 36.37 ಸೆ.) ಚಿನ್ನ, ಆಸ್ಪ್ರೇಲಿಯಾದ ಡೆಕ್ಲನ್‌(38 ನಿ. 42.33 ಸೆ.) ಬೆಳ್ಳಿ ಪದಕ ಗೆದ್ದರು. 3000 ಮೀ. ನಡಿಗೆ ಬಳಿಕ ಸಂದೀಪ್‌ ಮೊದಲ ಸ್ಥಾನದಲ್ಲಿದ್ದರು. ಆನಂತರ 3ನೇ ಸ್ಥಾನಕ್ಕೆ ಜಾರಿದರು. ಭಾರತದ ಮತ್ತೋರ್ವ ಸ್ಪರ್ಧಿ ಅಮಿತ್‌ 9ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡರು. ಶನಿವಾರ ಮಹಿಳೆಯರ 10,000 ಮೀ. ವೇಗ ನಡಿಗೆಯಲ್ಲಿ ಪ್ರಿಯಾಂಕ ಗೋಸ್ವಾಮಿ ಬೆಳ್ಳಿ ಪದಕ ಗೆದ್ದಿದ್ದರು.

click me!