FIDE ವಿಶ್ವ ಚೆಸ್‌ ಉಪಾಧ್ಯಕ್ಷರಾಗಿ ವಿಶ್ವನಾಥನ್‌ ಆನಂದ್‌ ಆಯ್ಕೆ

By Kannadaprabha News  |  First Published Aug 8, 2022, 10:25 AM IST

ವಿಶ್ವ ಚೆಸ್‌ ಫೆಡರೇಶನ್‌ ಉಪಾಧ್ಯಕ್ಷರಾಗಿ ವಿಶ್ವನಾಥನ್‌ ಆನಂದ್‌ ಆಯ್ಕೆ
44ನೇ ಚೆಸ್‌ ಒಲಿಂಪಿಯಾಡ್‌ ವೇಳೆ ನಡೆದ ಮತದಾನ
ರಷ್ಯಾದ ಅರ್ಕಾಡಿ ಡೊರ್ಕೊವಿಚ್‌ 2ನೇ ಅವಧಿಗೆ ಅಧ್ಯಕ್ಷರಾಗಿ ಮುಂದುವರಿಕೆ


ಚೆನ್ನೈ(ಆ.08): ಭಾರತದ ದಿಗ್ಗಜ ಚೆಸ್‌ ಆಟಗಾರ ವಿಶ್ವನಾಥನ್‌ ಆನಂದ್‌ ಅವರು ವಿಶ್ವ ಚೆಸ್‌ ಫೆಡರೇಶನ್‌(ಫಿಡೆ) ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದು, ರಷ್ಯಾದ ಅರ್ಕಾಡಿ ಡೊರ್ಕೊವಿಚ್‌ 2ನೇ ಅವಧಿಗೆ ಅಧ್ಯಕ್ಷರಾಗಿ ಮುಂದುವರಿಯಲಿದ್ದಾರೆ.  5 ಬಾರಿ ವಿಶ್ವ ಚಾಂಪಿಯನ್‌ ಆನಂದ್‌ ಅವರು ಡೊರ್ಕೊವಿಚ್‌ ತಂಡದಲ್ಲಿ ಚುನಾವಣೆಯಲ್ಲಿ ಸ್ಪರ್ಧಿಸಿದ್ದರು. 44ನೇ ಚೆಸ್‌ ಒಲಿಂಪಿಯಾಡ್‌ ವೇಳೆ ನಡೆದ ಮತದಾನದಲ್ಲಿ ಡೊರ್ಕೊವಿಚ್‌ 157 ಮತಗಳನ್ನು ಪಡೆದು ಅಧ್ಯಕ್ಷ ಸ್ಥಾನಕ್ಕೆ ಮರು ಆಯ್ಕೆಯಾದರೆ, ಅವರ ವಿರುದ್ಧ ಸ್ಪರ್ಧಿಸಿದ್ದ ಉಕ್ರೇನ್‌ನ ಆ್ಯಂಡ್ರಿ ಬ್ಯಾರಿಶ್‌ಪೋಲೆಟ್ಸ್‌ ಕೇವಲ 16 ಅಂಕ ಪಡೆದು ಸೋಲನುಭವಿಸಿದರು. 

ಆನಂದ್‌ ಇದೇ ಮೊದಲ ಬಾರಿ ಫಿಡೆ ಸಮಿತಿಯಲ್ಲಿ ಸ್ಥಾನ ಪಡೆದಿದ್ದು, ಚೆಸ್‌ ಸ್ಪರ್ಧೆಯನ್ನು ಒಲಿಂಪಿಕ್ಸ್‌ನಲ್ಲೂ ಸೇರಿಸುವ ಗುರಿ ಹೊಂದಿದ್ದಾರೆ. ಭಾರತದ ಮೊದಲ ಗ್ರ್ಯಾಂಡ್‌ಮಾಸ್ಟರ್‌(1988) ಆಗಿರುವ ಅವರು ಸದ್ಯ ಚೆನ್ನೈನಲ್ಲಿ ನಡೆಯುತ್ತಿರುವ ಒಲಿಂಪಿಯಾಡ್‌ನ ಭಾರತ ತಂಡದ ಮಾರ್ಗದರ್ಶಕರಾಗಿ ಕಾರ‍್ಯನಿರ್ವಹಿಸುತ್ತಿದ್ದಾರೆ.

Tap to resize

Latest Videos

ಚೆಸ್‌ ಒಲಿಂಪಿಯಾಡ್‌: ಅಗ್ರಸ್ಥಾನದಲ್ಲೇ ಭಾರತ

ಮಹಾಬಲಿಪುರಂ: 44ನೇ ಚೆಸ್‌ ಒಲಿಂಪಿಯಾಡ್‌ ನಿರ್ಣಾಯಕ ಹಂತ ತಲುಪಿದ್ದು, ಮಹಿಳಾ ವಿಭಾಗದಲ್ಲಿ ಭಾರತ ‘ಎ’ ತಂಡ 9ನೇ ಸುತ್ತಿನಲ್ಲಿ ಪೋಲೆಂಡ್‌ ವಿರುದ್ಧ 1.5-2.5ರಲ್ಲಿ ಸೋತರೂ ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಕಾಯ್ದುಕೊಂಡಿದೆ. ಭಾರತ ‘ಬಿ’ ತಂಡ ಸ್ವಿಜರ್‌ಲೆಂಡ್‌ ವಿರುದ್ಧ 4-0 ಅಂತರದಲ್ಲಿ ಜಯಿಸಿದರೆ, ಭಾರತ ‘ಸಿ’ ತಂಡ ಎಸ್ಟೋನಿಯಾ ವಿರುದ್ಧ 3-0 ಅಂತರದಲ್ಲಿ ಗೆಲುವು ಪಡೆಯಿತು. 

ಉಡುಪಿ: ಕಾಮನ್‌ವೆಲ್ತ್‌ ಪದಕ ವೀರ ಗುರುರಾಜ್‌ಗೆ ಹುಟ್ಟೂರಿನಲ್ಲಿ ಅದ್ಧೂರಿ ಸ್ವಾಗತ

ಇನ್ನು ಮುಕ್ತ(ಪುರುಷರ) ವಿಭಾಗದ 9ನೇ ಸುತ್ತಿನಲ್ಲಿ ಭಾರತ ‘ಎ’ ತಂಡ ಬ್ರೆಜಿಲ್‌ ವಿರುದ್ಧ 3-1ರಲ್ಲಿ ಜಯ ಪಡೆದರೆ, ಭಾರತ ‘ಬಿ’ ತಂಡ 2-2ರಲ್ಲಿ ಅಜರ್‌ಬೈಜಾನ್‌ ವಿರುದ್ಧ ಡ್ರಾಗೆ ತೃಪ್ತಿಪಟ್ಟಿತು. ಸತತ ಗೆಲುವುಗಳನ್ನು ಸಾಧಿಸಿ ಗಮನ ಸೆಳೆದಿದ್ದ ಡಿ.ಗುಕೇಶ್‌ ಮೊದಲ ಬಾರಿಗೆ ಡ್ರಾಗೆ ಸಮಾಧಾನಪಟ್ಟರು. ಈ ಫಲಿತಾಂಶದಿಂದಾಗಿ ಭಾರತ ‘ಬಿ’ ತಂಡ ಅಂಕಪಟ್ಟಿಯಲ್ಲಿ 2ನೇ ಸ್ಥಾನಕ್ಕಿಳಿದಿದೆ. ಇನ್ನು ಭಾರತ ‘ಸಿ’ ತಂಡ ಪರುಗ್ವೆ ವಿರುದ್ಧ 3-1ರಲ್ಲಿ ಗೆಲುವು ಪಡೆಯಿತು.

ಪುರುಷರ ಹಾಕಿ: ಭಾರತ ಫೈನಲ್‌ಗೆ

ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಐತಿಹಾಸಿಕ ಕಂಚು ಗೆದ್ದಿದ್ದ ಭಾರತ ಪುರುಷರ ಹಾಕಿ ತಂಡ ಕಾಮನ್‌ವೆಲ್ತ್‌ ಗೇಮ್ಸ್‌ನಲ್ಲಿ ಫೈನಲ್‌ಗೆ ಲಗ್ಗೆ ಇಟ್ಟಿದೆ. 2010, 2014ರಲ್ಲೂ ಪದಕ ಸುತ್ತಿಗೇರಿದ್ದ ಭಾರತ 3ನೇ ಬಾರಿ ಫೈನಲ್‌ ತಲುಪಿದ್ದು, ಭಾನುವಾರ 6 ಬಾರಿ ಚಾಂಪಿಯನ್‌ ಆಸ್ಪ್ರೇಲಿಯಾ ವಿರುದ್ಧ ಸೆಣಸಾಡಲಿದೆ. ಶನಿವಾರ ಸೆಮಿಫೈನಲ್‌ನಲ್ಲಿ ಭಾರತ, ದ.ಆಫ್ರಿಕಾ ವಿರುದ್ಧ 3-2 ಗೋಲುಗಳಿಂದ ಜಯಗಳಿಸಿತು.

ಆರಂಭದಲ್ಲಿ ಉಭಯ ತಂಡಗಳಿಂದ ಸಮಬಲದ ಹೋರಾಟ ಕಂಡುಬಂದರೂ ಬಳಿಕ ಭಾರತ ಮೇಲುಗೈ ಸಾಧಿಸಿತು. ಅಭಿಷೇಕ್‌(20ನೇ ನಿಮಿಷ), ಮಂದೀಪ್‌ ಸಿಂಗ್‌(29ನೇ ನಿ.) 2ನೇ ಕ್ವಾರ್ಟರ್‌ನಲ್ಲಿ ಗೋಲು ಹೊಡೆದರೆ, 58ನೇ ನಿಮಿಷದಲ್ಲಿ ಜುಗ್‌ರಾಜ್‌ ಸಿಂಗ್‌ ಬಾರಿಸಿದ ಗೋಲು ಭಾರತಕ್ಕೆ ಜಯತಂದುಕೊಟ್ಟಿತು. ದ.ಆಫ್ರಿಕಾ ಪರ ರಾರ‍ಯನ್‌ ಜುಲೀಸ್‌(33ನೇ ನಿ.), ಮುಸ್ತಫಾ ಕಾಸೀಮ್‌(59ನೇ ನಿ.) ಗೋಲು ದಾಖಲಿಸಿದರು.

click me!