ಭಾರತಕ್ಕೆ ಕಾಮನ್‌ವೆಲ್ತ್ ಗೇಮ್ಸ್ ನಲ್ಲಿ ಒಲಿದ ನಾಲ್ಕನೇ ಪದಕ. ವೇಟ್ ಲಿಫ್ಟಿಂಗ್ ನಲ್ಲಿ ಭಾರತಕ್ಕೆ ಇದು ನಾಲ್ಕನೇ ಪದಕ .ಸಂಕೇತ್, ಗುರುರಾಜ ಹಾಗೂ ಮೀರಾಬಾಯಿ ಚಾನು ಬಳಿಕ ಬಿಂದ್ಯಾರಾಣಿ ದೇವಿಗೆ ಒಲಿದ ಬೆಳ್ಳಿ.
ಇಂಗ್ಲೆಂಡ್ (ಜು.31): ಬರ್ಮಿಂಗ್‌ಹ್ಯಾಮ್ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಭಾರತದ ಪದಕ ಬೇಟೆ ಮುಂದುವರೆದಿದೆ. ವೇಟ್‌ಲಿಫ್ಟರ್ ಬಿಂದ್ಯಾರಾಣಿ ದೇವಿ ಮಹಿಳೆಯರ 55 ಕೆಜಿ ವಿಭಾಗದಲ್ಲಿ ಬೆಳ್ಳಿ ಗೆದ್ದುಕೊಂಡಿದ್ದು, ಈ ಮೂಲಕ ಭಾರತ ಒಂದೇ ದಿನ ಒಂದು ಚಿನ್ನ, ಎರಡು ಬೆಳ್ಳಿ ಮತ್ತು ಒಂದು ಕಂಚು ಒಟ್ಟು 4 ಗೆದ್ದು ಕೊಂಡಂತಾಗಿದೆ. ಮಾತ್ರವಲ್ಲ ನಾಲ್ಕೂ ಪದಕಗಳನ್ನು ವೇಟ್ ಲಿಫ್ಟಿಂಗ್ ನಲ್ಲೇ ಭಾರತ ಪಡೆದುಕೊಂಡಿದೆ. ಬಿಂದ್ಯಾರಾಣಿ ದೇವಿ ಶನಿವಾರ ನಡೆದ ಮ್ಯಾಚ್ ನಲ್ಲಿ ಒಟ್ಟು 202ಕೆಜಿ (86ಕೆಜಿ+116ಕೆಜಿ) ಭಾರ ಎತ್ತಿ ಎರಡನೇ ಸ್ಥಾನ ಪಡೆದರು. 116 ಕೆಜಿ ಕ್ಲೀನ್ ಮತ್ತು ಜರ್ಕ್ ಲಿಫ್ಟ್ನೊಂದಿಗೆ ಈ ಪದಕ ಗೆದ್ದಿದ್ದು, ಇದು ಅತ್ಯುತ್ತಮ ಸಾಧನೆ ಎಂದೂ ದಾಖಲಾಯ್ತು. ನೈಜೀರಿಯಾದ ಆದಿಜತ್ ಅಡೆನಿಕೆ ಒಲರಿನೊಯ್ ಅವರು 203 ಕೆಜಿ (92 ಕೆಜಿ +111 ಕೆಜಿ) ಭಾರ ಎತ್ತುವ ಮೂಲಕ ಚಿನ್ನದ ಪದಕಕ್ಕೆ ಮುತ್ತಿಟ್ಟರು. ಇಂಗ್ಲೆಂಡ್‌ನ ಫ್ರೇರ್ ಮಾರೊ ಅವರು ಒಟ್ಟು 198 ಕೆಜಿ (86 ಕೆಜಿ +109 ಕೆಜಿ) ಎತ್ತುವ ಮೂಲಕ ಮೂರನೇ ಸ್ಥಾನ ಪಡೆದರು.
ಮೀರಾಬಾಯಿ ಚಾನು ‘ಚಿನ್ನ’ದ ಚಮತ್ಕಾರ, ಭಾರತಕ್ಕೆ ಮೊದಲ ಚಿನ್ನ
ಒಲಿಂಪಿಕ್ಸ್ ಪದಕ ವಿಜೇತೆ, ಮಾಜಿ ವಿಶ್ವ ಚಾಂಪಿಯನ್ ಮೀರಾಬಾಯಿ ಚಾನು ಬರ್ಮಿಂಗ್‌ಹ್ಯಾಮ್ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಭಾರತಕ್ಕೆ ಮೊದಲ ಚಿನ್ನದ ಪದಕ ತಂದುಕೊಟ್ಟಿದ್ದಾರೆ. ಮಹಿಳೆಯರ 44 ಕೆ.ಜಿ. ವಿಭಾಗದ ವೇಟ್‌ಲಿಫ್ಟಿಂಗ್ ಸ್ಪರ್ಧೆಯಲ್ಲಿ ಚಾನು ಒಟ್ಟು 201 ಕೆ.ಜಿ.(88 ಕೆ.ಜಿ. + 113 ಕೆ.ಜಿ.) ತೂಕ ಎತ್ತಿ ದಾಖಲೆಯೊಂದಿಗೆ ಮೊದಲ ಸ್ಥಾನ ಪಡೆದರು. 2ನೇ ಸ್ಥಾನ ಪಡೆದ ಸ್ಪರ್ಧಿಗಿಂತ 29 ಕೆ.ಜಿ. ಹೆಚ್ಚು ತೂಕ ಎತ್ತಿ ಗಮನ ಸೆಳೆದರು.
ಸ್ನಾ್ಯಚ್‌ನಲ್ಲಿ 88 ಕೆ.ಜಿ. ತೂಕ ಎತ್ತುವ ಮೂಲಕ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಹೊಸ ದಾಖಲೆ ಬರೆದ ಚಾನು, ತಮ್ಮ ವೈಯಕ್ತಿಕ ಶ್ರೇಷ್ಠ ಪ್ರದರ್ಶನವನ್ನು ಸರಿಗಟ್ಟಿದರು. 2ನೇ ಸ್ಥಾನ ಪಡೆದ ಲಿಫ್ಟರ್‌ಗಿಂತ ಚಾನು 12 ಕೆ.ಜಿ. ಹೆಚ್ಚು ತೂಕ ಎತ್ತಿ ಭಾರೀ ಮುನ್ನಡೆ ಪಡೆದರು. ಕ್ಲೀನ್ ಅಂಡ್ ಜರ್ಕ್ ವಿಭಾಗದ ಮೊದಲ ಯತ್ನದಲ್ಲೇ 109 ಕೆ.ಜಿ. ಭಾರ ಎತ್ತಿ ಚಿನ್ನ ಖಚಿತ ಪಡಿಸಿಕೊಂಡ ಚಾನು, 2ನೇ ಯತ್ನದಲ್ಲಿ 113 ಕೆ.ಜಿ. ಎತ್ತಿದರು. 3ನೇ ಯತ್ನದಲ್ಲಿ 115 ಕೆ.ಜಿ. ಭಾರ ಎತ್ತುವಲ್ಲಿ ವಿಫಲರಾದರು. ಆದರೆ 113 ಕೆ.ಜಿ.ಯೊಂದಿಗೆ ಕ್ಲೀನ್ ಅಂಡ್ ಜರ್ಕ್ನಲ್ಲೂ ಹೊಸ ಕೂಟ ದಾಖಲೆ ಬರೆದರು.
ಮಾರಿಷಸ್‌ನ ರೊಯ್ಲ್ಯಾ ಒಟ್ಟು 172 ಕೆ.ಜಿ.(76 ಕೆ.ಜಿ.+96 ಕೆ.ಜಿ) ಬೆಳ್ಳಿ ಗೆದ್ದರೆ, ಕೆನಡಾದ ಹಾನ್ಹ ಕಿಮಿನ್ಸಿ$್ಕ ಒಟ್ಟು 171 ಕೆ.ಜಿ.(74 ಕೆ.ಜಿ.+97 ಕೆ.ಜಿ.) ಕಂಚು ಜಯಿಸಿದರು.
Commonwealth Games 2022: ಕಂಚಿನ ಪದಕ ಜಯಿಸಿದ ಕನ್ನಡಿಗ ಗುರುರಾಜ ಪೂಜಾರಿ
ಕನ್ನಡಿಗನಿಗೆ ಒಲಿದ ಕಂಚಿನ ಪದಕ: ಭಾರತಕ್ಕೆ ಎರಡನೇ ಪದಕ ಗೆದ್ದುಕೊಡುವಲ್ಲಿ ಕನ್ನಡಿಗ ಗುರುರಾಜ ಪೂಜಾರಿ ಯಶಸ್ವಿಯಾಗಿದ್ದಾರೆ. ಪುರುಷರ 61 ಕೆ.ಜಿ. ವಿಭಾಗದ ವೇಟ್‌ಲಿಫ್ಟಿಂಗ್‌ನಲ್ಲಿ 269 ಕೆ.ಜಿ. ಭಾರ ಎತ್ತುವ ಮೂಲಕ ಅಂಕಪಟ್ಟಿಯಲ್ಲಿ ಮೂರನೇ ಸ್ಥಾನ ಪಡೆದು, ಎರಡನೇ ಬಾರಿ ಭಾರತಕ್ಕೆ ಪದಕ ಗೆದ್ದು ಕೊಟ್ಟಿದ್ದಾರೆ. ಈ ಮೊದಲು 2018ರಲ್ಲಿ ಗೋಲ್ಡ್ ಕೋಸ್ಟ್‌ನಲ್ಲಿ ನಡೆದ ಪುರುಷರ 56 ಕೆ.ಜಿ. ವಿಭಾಗದಲ್ಲಿ ಗುರುರಾಜ್ ಪೂಜಾರಿ ಬೆಳ್ಳಿ ಜಯಿಸಿದ್ದರು. ಗುರುರಾಜ್ ಪೂಜಾರಿ ಉಡುಪಿ ಜಿಲ್ಲೆಯ ಕುಂದಾಪುರದವರು. 61 ಕೆ.ಜಿ. ವಿಭಾಗದಲ್ಲಿ ಭಾರತ ಇದುರೆಗೂ ಪದಕ ಪಡೆದಿರಲಿಲ್ಲ ಎಂಬುದು ಗಮನಾರ್ಹ.
Commonwealth Games 2022: ದೇಶಕ್ಕೆ ಮೊದಲ ಪದಕ ಗೆದ್ದ ಸಂಕೇತ್ ಸಾಗರ್ ಬೆಂಕಿಯಲ್ಲಿ
ಇನ್ನು ಇದಕ್ಕೂ ಮುನ್ನ ಸಂಕೇತ್ ಸರ್ಗರ್ ಪುರುಷರ 55 ಕೆ.ಜಿ. ವಿಭಾಗದದಲ್ಲಿ ಬೆಳ್ಳಿ ಜಯಿಸಿ, ಭಾರತದ ಪದಕ ಖಾತೆ ತೆರೆದಿದ್ದರು. 2018ರ ಗೋಲ್ಡ್‌ಕೋಸ್ಟ್ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಕರ್ನಾಟಕದ ಗುರುರಾಜ ಪೂಜಾರಿ ಬೆಳ್ಳಿ ಗೆದ್ದಿದ್ದನ್ನು ನೋಡಿ ಸ್ಫೂರ್ತಿ ಪಡೆದ ಸಂಕೇತ್, ಮುಂದಿನ ಗೇಮ್ಸ್‌ನಲ್ಲಿ ನಾನೂ ಪದಕ ಗೆಲ್ಲಬೇಕು ಎಂದು ಪಣತೊಟ್ಟು ವೃತ್ತಿಪರ ತರಬೇತಿ ಪಡೆದಿದ್ದಾಗಿ ಹೇಳಿಕೊಂಡಿದ್ದಾರೆ.