ವಿಶ್ವಕಪ್ ಹಾಕಿ: ಕ್ವಾರ್ಟರ್’ಗೆ ಭಾರತದ ವನಿತೆಯರು

By Web Desk  |  First Published Aug 1, 2018, 11:24 AM IST

ಇಲ್ಲಿನ ಲೀ ವ್ಯಾಲಿ ಹಾಕಿ ಸೆಂಟರ್‌ನಲ್ಲಿ ಮಂಗಳವಾರ ರಾತ್ರಿ ನಡೆದ ಕ್ವಾರ್ಟರ್ ಫೈನಲ್ ಪ್ಲೇ-ಆಫ್(ಕ್ರಾಸ್ ಓವರ್) ಪಂದ್ಯದಲ್ಲಿ ಭಾರತ, ಇಟಲಿ ವಿರುದ್ಧ 3-0 ಗೋಲುಗಳ ಭರ್ಜರಿ ಗೆಲುವು ದಾಖಲಿಸಿತು. ಈ ಪಂದ್ಯದಲ್ಲಿ ಗೆದ್ದು 42 ವರ್ಷಗಳ ಬಳಿಕ ಕ್ವಾರ್ಟರ್ ಫೈನಲ್‌ಗೇರುವ ಇಟಲಿಯ ಕನಸನ್ನು ಭಾರತ ನುಚ್ಚು ನೂರು ಮಾಡಿತು.


ಲಂಡನ್[ಆ.01]: ಅಮೋಘ ಪ್ರದರ್ಶನ ತೋರಿದ ಭಾರತ ವನಿತೆಯರ ತಂಡ, ಮಹಿಳಾ ವಿಶ್ವ ಹಾಕಿ ಚಾಂಪಿಯನ್‌ಶಿಪ್‌ನಲ್ಲಿ ಕ್ವಾರ್ಟರ್ ಫೈನಲ್'ಗೇರಿತು. ಭಾರತ ಕ್ವಾರ್ಟರ್ ಫೈನಲ್‌ನಲ್ಲಿ ಆಗಸ್ಟ್ 2ರಂದು, ಐರ್ಲೆಂಡ್ ತಂಡವನ್ನು ಎದುರಿಸಲಿದೆ.

ಇಲ್ಲಿನ ಲೀ ವ್ಯಾಲಿ ಹಾಕಿ ಸೆಂಟರ್‌ನಲ್ಲಿ ಮಂಗಳವಾರ ರಾತ್ರಿ ನಡೆದ ಕ್ವಾರ್ಟರ್ ಫೈನಲ್ ಪ್ಲೇ-ಆಫ್(ಕ್ರಾಸ್ ಓವರ್) ಪಂದ್ಯದಲ್ಲಿ ಭಾರತ, ಇಟಲಿ ವಿರುದ್ಧ 3-0 ಗೋಲುಗಳ ಭರ್ಜರಿ ಗೆಲುವು ದಾಖಲಿಸಿತು. ಈ ಪಂದ್ಯದಲ್ಲಿ ಗೆದ್ದು 42 ವರ್ಷಗಳ ಬಳಿಕ ಕ್ವಾರ್ಟರ್ ಫೈನಲ್‌ಗೇರುವ ಇಟಲಿಯ ಕನಸನ್ನು ಭಾರತ ನುಚ್ಚು ನೂರು ಮಾಡಿತು. ಭಾರತದ ಪರ ಲಲ್ರೆಮ್ಸಿಯಾಮಿ, ನೇಹಾ ಗೋಯಲ್ ಮತ್ತು ವಂದನಾ ಕಟಾರಿಯಾ ತಲಾ ಒಂದೊಂದು ಗೋಲು ಗಳಿಸಿ ತಂಡದ ಗೆಲುನಲಿ ಪ್ರಮುಖ ಪಾತ್ರ ವಹಿಸಿದರು.

Tap to resize

Latest Videos

ಆರಂಭದಿಂದಲೂ ಪಂದ್ಯದ ಮೇಲೆ ನಿಯಂತ್ರಣ ಸಾಧಿಸಿದ ಭಾರತ ವನಿತೆಯರು, ವಿಶ್ವಕಪ್ ಟೂರ್ನಿಯಿಂದ ಇಟಲಿ ತಂಡವನ್ನು ಹೊರಹಾಕುವಲ್ಲಿ ಯಶಸ್ವಿಯಾದರು. ಪ್ರಯಾಸದಿಂದಲೇ ಕ್ರಾಸ್‌ಓವರ್ ಹಂತಕ್ಕೇರಿದ್ದ ಭಾರತ, ಮಂಗಳವಾರ ಆತ್ಮವಿಶ್ವಾಸದಿಂದಲೇ ಕಣಕ್ಕಿಳಿಯಿತು. ಪಂದ್ಯದ 9ನೇ ನಿಮಿಷದಲ್ಲಿ ದೊರೆತ ಪೆನಾಲ್ಟಿಯನ್ನು ಗೋಲಾಗಿ ಪರಿವರ್ತಿಸಿದ ಲಲ್ರೆಮ್ಸಿಯಾಮಿ, ಭಾರತಕ್ಕೆ 1-0 ಮುನ್ನಡೆ ತಂದುಕೊಟ್ಟರು.

2ನೇ ಕ್ವಾರ್ಟರ್‌ನಲ್ಲಿ ಯಾವುದೇ ಗೋಲು ದಾಖಲಾಗಲಿಲ್ಲ. ಇದರಿಂದಾಗಿ ಭಾರತ ಮೊದಲಾರ್ಧದ ವೇಳೆಗೆ ಮುನ್ನಡೆ ಉಳಿಸಿಕೊಂಡಿತು. ದ್ವಿತೀಯಾರ್ಧದಲ್ಲಿ ಭಾರತದ ವನಿತೆಯರು ತಮ್ಮ ಆಟಕ್ಕೆ ಮತ್ತಷ್ಟು ಚುರುಕು ನೀಡಿದರು. ಈ ವೇಳೆ 37ನೇ ನಿಮಿಷದಲ್ಲಿ ಸುನಿತಾ ಲಕ್ರಾ ಗ್ರೀನ್ ಕಾರ್ಡ್ ಪಡೆದರು. ಭಾರತದ ಮುನ್ನಡೆಯಿಂದ ಒತ್ತಡಕ್ಕೊಳಗಾದಂತೆ ಕಂಡ ಇಟಲಿ, ಮತ್ತಷ್ಟ ತಪ್ಪುಗಳನ್ನೆಸಗಿತು. ಭಾರತ ಇದರ ಲಾಭ ಎತ್ತಿತು. 46ನೇ ನಿಮಿಷದಲ್ಲಿ ಭಾರತ ಮತ್ತೊಂದು ಪೆನಾಲ್ಟಿ ಅವಕಾಶ ಪಡೆಯಿತು. ಈ ಪೆನಾಲ್ಟಿಯಲ್ಲಿ ಚೆಂಡನ್ನು ಗುರಿ ತಲುಪಿಸಿದ ನೇಹಾ ಗೋಯಲ್, ಭಾರತ 2-0 ಮುನ್ನಡೆ ತಂದುಕೊಟ್ಟರು. ಪಂದ್ಯದ 55ನೇ ನಿಮಿಷದಲ್ಲಿ ಇಟಲಿಯ ರಕ್ಷಣಾ ಕೋಟೆಗೆ ಲಗ್ಗೆ ಇಟ್ಟ ವಂದನಾ ಕಟಾರಿಯಾ ಭಾರತದ ಖಾತೆಗೆ 3ನೇ ಗೋಲು ಸೇರಿಸಿ, ತಂಡದ ಗೆಲುವಿನ ಅಂತರವನ್ನು ಮತ್ತಷ್ಟು ಹೆಚ್ಚಿಸಿದರು. ಕ್ವಾರ್ಟರ್ ಫೈನಲ್‌ನಲ್ಲಿ ಭಾರತ, ಐರ್ಲೆಂಡ್ ತಂಡವನ್ನು ಎದುರಿಸಲಿದೆ.

click me!