ವಿಶ್ವ ಚಾಂಪಿಯನ್’ಶಿಪ್’ನಲ್ಲಿ ಮುನ್ನಡೆದ ಸೈನಾ, ಶ್ರೀಕಾಂತ್

First Published Aug 1, 2018, 10:08 AM IST
Highlights

ಮೊದಲ ಸುತ್ತಿನಲ್ಲಿ ಬೈ ಪಡೆದಿದ್ದ ಸೈನಾ, ಮಂಗಳವಾರ ನಡೆದ 2ನೇ ಸುತ್ತಿನ ಪಂದ್ಯದಲ್ಲಿ ಟರ್ಕಿಯ ಅಲಿಯೆ ಡೆಮಿರ್ಬಾಗ್‌ರನ್ನು 21-17, 21-8 ನೇರ ಗೇಮ್‌ಗಳಿಂದ ಮಣಿಸಿ 3ನೇ ಸುತ್ತಿಗೆ ಪ್ರವೇಶಿಸಿದರು.

ನಾನ್ಜಿಂಗ್ (ಚೀನಾ) ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್‌ನಲ್ಲಿ ಭಾರತದ ತಾರಾ ಶಟ್ಲರ್‌ಗಳ ಪ್ರಾಬಲ್ಯ ಮುಂದುವರಿದಿದ್ದು, ಮಹಿಳಾ ಸಿಂಗಲ್ಸ್'ನಲ್ಲಿ ಸೈನಾ ನೆಹ್ವಾಲ್ 3ನೇ ಸುತ್ತಿಗೆ ಹಾಗೂ ಪುರುಷರ ಸಿಂಗಲ್ಸ್’ನಲ್ಲಿ ಕಿದಾಂಬಿ ಶ್ರೀಕಾಂತ್ 2ನೇ ಸುತ್ತಿಗೆ ಪ್ರವೇಶಿಸಿದ್ದಾರೆ.

ಮೊದಲ ಸುತ್ತಿನಲ್ಲಿ ಬೈ ಪಡೆದಿದ್ದ ಸೈನಾ, ಮಂಗಳವಾರ ನಡೆದ 2ನೇ ಸುತ್ತಿನ ಪಂದ್ಯದಲ್ಲಿ ಟರ್ಕಿಯ ಅಲಿಯೆ ಡೆಮಿರ್ಬಾಗ್‌ರನ್ನು 21-17, 21-8 ನೇರ ಗೇಮ್‌ಗಳಿಂದ ಮಣಿಸಿ 3ನೇ ಸುತ್ತಿಗೆ ಪ್ರವೇಶಿಸಿದರು. ವಿಶ್ವ ಚಾಂಪಿಯನ್ ಶಿಪ್‌ನಲ್ಲಿ ಬೆಳ್ಳಿ ಮತ್ತು ಕಂಚು ಗೆದ್ದಿರುವ ಸೈನಾ, 3ನೇ ಸುತ್ತಿನಲ್ಲಿ ಮಾಜಿ ಚಾಂಪಿಯನ್ ಥಾಯ್ಲೆಂಡ್‌ನ ರಚನೋಕ್ ಇಂಟನನ್ ಸವಾಲು ಎದುರಿಸಲಿದ್ದಾರೆ.

ಪುರಷರ ಸಿಂಗಲ್ಸ್‌ನ ಆರಂಭಿಕ ಸುತ್ತಿನ ಪಂದ್ಯದಲ್ಲಿ ಶ್ರೀಕಾಂತ್, ಐರ್ಲೆಂಡ್‌ನ ಎಂಗ್ವೆಯನ್ ವಿರುದ್ಧ 21-15, 21-16 ನೇರ ಗೇಮ್‌ಗಳಿಂದ ಜಯ ಸಾಧಿಸಿ, 2ನೇ ಸುತ್ತಿಗೆ ಪ್ರವೇಶಿಸಿದ್ದಾರೆ. ಶ್ರೀಕಾಂತ್ 2ನೇ ಸುತ್ತಿನಲ್ಲಿ ಸ್ಪೇನ್‌ನ ಪಾಬ್ಲೊ ಅಬಿಯನ್‌ರನ್ನು ಎದುರಿಸಲಿದ್ದಾರೆ. ಬಿ. ಸಾಯಿಪ್ರಣೀತ್‌ಗೆ ಆರಂಭಿಕ ಸುತ್ತಿನಲ್ಲಿ ಬೈ ದೊರೆತಿದ್ದು, 2ನೇ ಸುತ್ತಿನಲ್ಲಿ ಸ್ಪೇನ್‌ನ ಲೂಯಿಸ್ ಎನ್ರಿಕ್‌ರನ್ನು
ಎದುರಿಸಲಿದ್ದಾರೆ.

ಅಶ್ವಿನಿ ಜೋಡಿಗೆ ಜಯ: ಮಿಶ್ರ ಡಬಲ್ಸ್‌ನಲ್ಲಿ 4 ಜೋಡಿಗಳು 2ನೇ ಸುತ್ತಿಗೆ ಪ್ರವೇಶಿಸಿದ್ದವು. ಆದರೆ ಮಂಗಳವಾರ ಗೆಲುವು ಸಾಧಿಸಿದ್ದು ಅಶ್ವಿನಿ ಪೊನ್ನಪ್ಪ-ಸಾತ್ವಿಕ್ ಸಾಯಿರಾಜ್ ಜೋಡಿ ಮಾತ್ರ. ಜರ್ಮನಿಯ ಮಾರ್ಕ್ ಲ್ಯಾಮ್ಸ್‌ಫಸ್ ಮತ್ತು ಇಸಾಬೆಲ್ ಹರ್ಟ್ರಿಚ್‌ರನ್ನು 10-21, 21-17, 21-18 ಗೇಮ್‌ಗಳಿಂದ ಮಣಿಸಿ, ಸಾತ್ವಿಕ್-ಅಶ್ವಿನಿ ಪ್ರಿ ಕ್ವಾರ್ಟರ್ ಫೈನಲ್‌ಗೆ ಪ್ರವೇಶಿಸಿತು. ಈ ಜೋಡಿ ಕ್ವಾರ್ಟರ್ ಫೈನಲ್'ಗೇರಲು ಮಲೇಷ್ಯಾದ ಗೋ ಸೂನ್ ಹಾತ್-ಶೆವಾನ್ ಜೆಮೀ ಲೈರನ್ನು ಸೋಲಿಸಬೇಕಿದೆ. 

click me!