‘ಬಿ’ ಗುಂಪಿನಲ್ಲಿ ಭಾರತ 3ನೇ ಸ್ಥಾನ ಪಡೆದರೆ, ‘ಎ’ ಗುಂಪಿನಲ್ಲಿ ಇಟಲಿ 2ನೇ ಸ್ಥಾನ ಪಡೆದಿತ್ತು. ವಿಶ್ವರ‍್ಯಾಂಕಿಂಗ್’ನಲ್ಲಿ 10ನೇ ಸ್ಥಾನದಲ್ಲಿರುವ ರಾಣಿ ರಾಂಪಾಲ್ ಪಡೆ ಪಂದ್ಯದಲ್ಲಿ ಗೆಲ್ಲುವ ನೆಚ್ಚಿನ ತಂಡವಾಗಿ ಕಣಕ್ಕಿಳಿಯಲಿದೆ. ಇಟಲಿ ವಿಶ್ವ ರ‍್ಯಾಂಕಿಂಗ್’ನಲ್ಲಿ 17ನೇ ಸ್ಥಾನದಲ್ಲಿದೆ.
ಲಂಡನ್[ಜು.31]: ಮಹಿಳಾ ಹಾಕಿ ವಿಶ್ವಕಪ್‌ನಲ್ಲಿ ಪ್ರಯಾಸದಿಂದ ಕ್ರಾಸ್ ಓವರ್ ಹಂತ (ಕ್ವಾರ್ಟರ್ ಫೈನಲ್ ಪ್ಲೇ-ಆಫ್)ಕ್ಕೆ ಪ್ರವೇಶಿಸಿರುವ ಭಾರತ, ಕ್ವಾರ್ಟರ್ ಫೈನಲ್‌ನಲ್ಲಿ ಸ್ಥಾನಕ್ಕಾಗಿ ಇಂದು ಇಟಲಿ ವಿರುದ್ಧ ಸೆಣಸಲಿದೆ. ‘ಬಿ’ ಗುಂಪಿನಲ್ಲಿ ಭಾರತ 3ನೇ ಸ್ಥಾನ ಪಡೆದರೆ, ‘ಎ’ ಗುಂಪಿನಲ್ಲಿ ಇಟಲಿ 2ನೇ ಸ್ಥಾನ ಪಡೆದಿತ್ತು.
ವಿಶ್ವರ‍್ಯಾಂಕಿಂಗ್’ನಲ್ಲಿ 10ನೇ ಸ್ಥಾನದಲ್ಲಿರುವ ರಾಣಿ ರಾಂಪಾಲ್ ಪಡೆ ಪಂದ್ಯದಲ್ಲಿ ಗೆಲ್ಲುವ ನೆಚ್ಚಿನ ತಂಡವಾಗಿ ಕಣಕ್ಕಿಳಿಯಲಿದೆ. ಇಟಲಿ ವಿಶ್ವ ರ‍್ಯಾಂಕಿಂಗ್’ನಲ್ಲಿ 17ನೇ ಸ್ಥಾನದಲ್ಲಿದೆ. ಮೊದಲ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ 1-1ರಲ್ಲಿ ಡ್ರಾ ಸಾಧಿಸಿದ್ದ ಭಾರತ, 2ನೇ ಪಂದ್ಯದಲ್ಲಿ ಐರ್ಲೆಂಡ್ ವಿರುದ್ಧ 0-1ರಲ್ಲಿ ಸೋಲುಂಡಿತ್ತು. ಅಮೆರಿಕ ವಿರುದ್ಧ ಗುಂಪು ಹಂತದ ಅಂತಿಮ ಪಂದ್ಯವನ್ನು 1-1ರಲ್ಲಿ ಡ್ರಾ ಮಾಡಿಕೊಂಡು ಪ್ಲೇ-ಆಫ್ ಹಂತಕ್ಕೆ ಅರ್ಹತೆ ಪಡೆಯಿತು.
ಮತ್ತೊಂದೆಡೆ ಇಟಲಿ, ಮೊದಲ ಪಂದ್ಯದಲ್ಲಿ ಚೀನಾ ವಿರುದ್ಧ 3-0, 2ನೇ ಪಂದ್ಯದಲ್ಲಿ ಕೊರಿಯಾ ವಿರುದ್ಧ 1-0 ಗೋಲಿನಿಂದ ಗೆಲುವು ಸಾಧಿಸಿತು. ಆದರೆ 3ನೇ ಪಂದ್ಯದಲ್ಲಿ ನೆದರ್ಲೆಂಡ್ಸ್ ವಿರುದ್ಧ 1-12 ಗೋಲುಗಳ ಅಂತರದಲ್ಲಿ ಹೀನಾಯವಾಗಿ ಸೋತು ಆಘಾತಕ್ಕೊಳಗಾಯಿತು. ಭಾರತ ತಂಡದ ರಕ್ಷಣಾ ಪಡೆ ಸದೃಢವಾಗಿದೆ. ಗೋಲ್ ಕೀಪರ್ ಸವಿತಾ ಉತ್ತಮ ಪ್ರದರ್ಶನ ಕಾಯ್ದುಕೊಂಡಿದ್ದಾರೆ. ಆದರೆ, ಫಾರ್ವರ್ಡ್ ಆಟಗಾರ್ತಿಯರಿಂದ ನಿರೀಕ್ಷಿತ ಪ್ರದರ್ಶನ ಮೂಡಿಬರುತ್ತಿಲ್ಲ. ಜತೆಗೆ ಪ್ರತಿ ಪಂದ್ಯದಲ್ಲೂ ಪೆನಾಲ್ಟಿ ಕಾರ್ನರ್ ಅವಕಾಶಗಳನ್ನು ವ್ಯರ್ಥ ಮಾಡುತ್ತಿದೆ. ಇಟಲಿ ವಿರುದ್ಧ ಗೆಲ್ಲಬೇಕಾದರೆ, ಭಾರತದ ಗೋಲು ಬಾರಿಸುವ ಸಾಮರ್ಥ್ಯ ಸುಧಾರಿಸಬೇಕಿದೆ.
ಪಂದ್ಯ ಆರಂಭ: ರಾತ್ರಿ 10.30ಕ್ಕೆ,
ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್ 2