
ಹಾಂಗ್ಝೂ(ಸೆ.30): 2 ಬಾರಿ ವಿಶ್ವ ಚಾಂಪಿಯನ್, 2022ರ ಕಾಮನ್‌ವೆಲ್ತ್ ಗೇಮ್ಸ್ ಚಾಂಪಿಯನ್ ನಿಖಾತ್ ಜರೀನ್ ಈ ಬಾರಿ ಏಷ್ಯಾಡ್‌ನಲ್ಲಿ ಸೆಮಿಫೈನಲ್ ಪ್ರವೇಶಿಸಿ ಕನಿಷ್ಠ ಕಂಚಿನ ಪದಕ ಖಚಿತಪಡಿಸಿಕೊಂಡಿದ್ದಾರೆ. ಜೊತೆಗೆ 2024ರ ಒಲಿಂಪಿಕ್ಸ್‌ಗೂ ಅರ್ಹತೆ ಪಡೆದ ಭಾರತದ ಮೊದಲ ಬಾಕ್ಸರ್ ಎನ್ನುವ ಹಿರಿಮೆಗೂ ಪಾತ್ರರಾಗಿದ್ದಾರೆ.
ಶುಕ್ರವಾರ ಮಹಿಳೆಯರ 50 ಕೆ.ಜಿ. ವಿಭಾಗದ ಕ್ವಾರ್ಟರ್ ಫೈನಲ್‌ನಲ್ಲಿ ಜರೀನಾ, ಜೊರ್ಡನ್‌ನ ನಸ್ಸರ್ ಹನನ್ ವಿರುದ್ಧ ಕೇವಲ 2 ನಿಮಿಷಗಳಲ್ಲಿ ಗೆಲುವು ಸಾಧಿಸಿದರು. ನಿಖಾತ್‌ನ ಆಕ್ರಮಣಕಾರಿ ಆಟಕ್ಕೆ ಹಸನ್ ಬೆಚ್ಚಿದ ಪರಿಣಾಮ, ಮೊದಲ ಸುತ್ತಲ್ಲೇ ರೆಫ್ರಿ ಸ್ಪರ್ಧೆ ನಿಲ್ಲಿಸಿ ನಿಖಾತ್ ಪರ ಫಲಿತಾಂಶ ನೀಡಿದರು. ಇದೇ ವೇಳೆ ಮಹಿಳೆಯರ 57 ಕೆ.ಜಿ. ವಿಭಾಗದಲ್ಲಿ ಪರ್ವೀನ್ ಚೀನಾದ ಕ್ಸು ಝಿಚುನ್ ವಿರುದ್ಧ ಗೆದ್ದು ಕ್ಟಾರ್ಟರ್‌ಗೇರಿದರೆ, ಪುರುಷರ 80 ಕೆ.ಜಿ. ಸ್ಪರ್ಧೆಯಲ್ಲಿ ಲಕ್ಷ್ಯ ಚಹರ್ ಸೋತು ಹೊರಬಿದ್ದರು.
Asian Games 2023: ಭಾರತೀಯ ಶೂಟರ್ಸ್ ಐತಿಹಾಸಿಕ ಸಾಧನೆ..!
37 ವರ್ಷದ ಬಳಿಕ ಪುರುಷರ ಬ್ಯಾಡ್ಮಿಂಟನ್ ಪದಕ ಖಚಿತ!
ಭಾರತದ ಬ್ಯಾಡ್ಮಿಂಟನ್ ಪುರುಷರ ತಂಡ ಈ ಬಾರಿ ಏಷ್ಯಾಡ್‌ನಲ್ಲಿ ಸೆಮಿಫೈನಲ್ ಪ್ರವೇಶಿಸಿದ್ದು, 1986ರ ಬಳಿಕ ಮೊದಲ ಬಾರಿ ಪದಕ ಖಚಿತಪಡಿಸಿಕೊಂಡಿದೆ. 1986ರಲ್ಲಿ ದ.ಕೊರಿಯಾದ ಸೋಲ್‌ನಲ್ಲಿ ನಡೆದ ಕ್ರೀಡಾಕೂಟದಲ್ಲಿ ಪುರುಷರ ತಂಡ ಕೊನೆ ಬಾರಿ ಕಂಚು ಗೆದ್ದಿತ್ತು. ಶುಕ್ರವಾರ ನಡೆದ ಕ್ವಾರ್ಟರ್ ಫೈನಲ್‌ನಲ್ಲಿ ಭಾರತ ತಂಡ ನೇಪಾಳ ವಿರುದ್ಧ 3-0 ಅಂತರದಲ್ಲಿ ಜಯಗಳಿಸಿತು. ಲಕ್ಷ್ಯ ಸೇನ್, ಕಿದಂಬಿ ಶ್ರೀಕಾಂತ್ ಹಾಗೂ ಮಿಥುನ್ ಮಂಜುನಾಥ್ ಜಯಗಳಿಸಿದರು. ಇದೇ ವೇಳೆ ಮಹಿಳೆಯರ ತಂಡ ಕ್ವಾರ್ಟರ್‌ನಲ್ಲಿ ಥಾಯ್ಲೆಂಡ್ ವಿರುದ್ಧ ಸೋತು ಹೊರಬಿತ್ತು. ಸಿಂಗಲ್ಸ್‌ನಲ್ಲಿ ತಾರಾ ಶಟ್ಲರ್ ಪಿ.ವಿ.ಸಿಂಧು, ಅಶ್ಮಿತಾ, ಡಬಲ್ಸ್‌ನಲ್ಲಿ ತ್ರೀಸಾ-ಗಾಯತ್ರಿ ಜೋಡಿ ಸೋಲನುಭವಿಸಿತು. ಭಾರತ ಮಹಿಳಾ ತಂಡ 1982, 2014ರಲ್ಲಿ ಕಂಚು ಗೆದ್ದಿದೆ.
Asian Games 2023: ಶಾಟ್‌ಫುಟ್‌ನಲ್ಲಿ ಕಿರಣ್‌ಗೆ ಐತಿಹಾಸಿಕ ಕಂಚು..!
ರಾಜ್ಯ ಕಿರಿಯರ ಅಥ್ಲೆಟಿಕ್ಸ್: ಮತ್ತೆ 6 ಕೂಟ ದಾಖಲೆ
ಮಂಗಳೂರು: ಕರ್ನಾಟಕ ರಾಜ್ಯ ಅಥ್ಲೆಟಿಕ್ಸ್ ಸಂಸ್ಥೆ ಆಯೋಜಿಸುತ್ತಿರುವ ರಾಜ್ಯ ಕಿರಿಯರ ಹಾಗೂ ಅಂಡರ್-20 ಅಥ್ಲೆಟಿಕ್ಸ್ ಕೂಟದ 3ನೇ ದಿನವಾದ ಶುಕ್ರವಾರ ಒಟ್ಟು 6 ಕೂಟ ದಾಖಲೆಗಳು ನಿರ್ಮಾಣವಾದವು. ಬಾಲಕರ ಅಂಡರ್-16 ವಿಭಾಗದ 80 ಮಿ. ಹರ್ಡಲ್ಸ್‌ನಲ್ಲಿ ಬೆಂಗಳೂರಿನ ವೀರೇಶ್ 11.1 ಸೆಕೆಂಡ್‌ಗಳಲ್ಲಿ ಕ್ರಮಿಸಿ ದಾಖಲೆ ಬರೆದರು. ಬಾಲಕರ ಅಂಡರ್-23 ಲಾಂಗ್‌ಜಂಪ್‌ನಲ್ಲಿ ಹಾಸನದ ಪುರುಶೋತ್ತಮ್ 7.41 ಮೀ. ದೂರ ಜಿಗಿದರೆ, 1500 ಮೀ.ನಲ್ಲಿ ಬೆಳಗಾವಿಯ ತುಷಾರ್ 4 ನಿಮಿಷ 02.34 ಸೆಕೆಂಡ್‌ಗಳಲ್ಲಿ ಕ್ರಮಿಸಿ ದಾಖಲೆ ನಿರ್ಮಿಸಿದರು. ಅಂಡರ್-20 ಬಾಲಕಿಯರ 1500 ಮೀ.ನಲ್ಲಿ ಬೆಂಗಳೂರಿನ ಪ್ರಿಯಾಂಕಾ 4 ನಿಮಿ 37.94 ಸೆಕೆಂಡ್‌ಗಳಲ್ಲಿ ಕ್ರಮಿಸಿದರೆ, ಅಂಡರ್-16 ಬಾಲಕಿಯರ 2000 ಮೀ.ನಲ್ಲಿ 6 ನಿಮಿಷ 51.64 ಸೆಕೆಂಡ್‌ಗಳಲ್ಲಿ ದ.ಕನ್ನಡದ ಚರಿಷ್ಮಾ ಗುರಿ ತಲುಪಿ ಅಗ್ರಸ್ಥಾನಿಯಾದರು. 300 ಮೀ. ಓಟದಲ್ಲಿ ದ.ಕನ್ನಡದ ರೀತು ಶ್ರೀ 40.95 ಸೆಕೆಂಡ್‌ಗಳಲ್ಲಿ ಕ್ರಮಿಸಿದರು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.