ಆಡಳಿತ ಸಮಿತಿ ಮೇಲೆ ಬಿಸಿಸಿಐ ಗರಂ!

By Web DeskFirst Published Oct 3, 2018, 11:39 AM IST
Highlights

ಮಾಹಿತಿ ಆಯೋಗದ ತೀರ್ಪಿನ ಪ್ರಕಾರ, ಬಿಸಿಸಿಐ ರಾಷ್ಟ್ರೀಯ ಕ್ರೀಡಾ ಫೆಡರೇಷನ್‌ (ಎನ್‌ಎಸ್‌ಎಫ್‌) ಎಂದು ಪರಿಗಣಿಸಲ್ಪಡುತ್ತದೆ. ಆದರೆ ಬಿಸಿಸಿಐ ತಾನು ಸ್ವಾಯತ್ತ ಸಂಸ್ಥೆ ಎಂದು ತನ್ನನ್ನು ತಾನು ಪರಿಗಣಿಸಿಕೊಂಡಿದೆ. ‘ಕಾನೂನು ಪ್ರಾತಿನಿಧ್ಯದಲ್ಲಿ ಆಡಳಿತ ಸಮಿತಿಯ ವೈಫಲ್ಯವೇ ಹಿನ್ನಡೆ ಉಂಟಾಗಲು ಕಾರಣ’ ಎಂದು ಬಿಸಿಸಿಐನ ಹಿರಿಯ ಅಧಿಕಾರಿಯೊಬ್ಬರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನವದೆಹಲಿ(ಅ.03) ಮಾಹಿತಿ ಹಕ್ಕು (ಆರ್‌ಟಿಐ) ಕಾಯ್ದೆಯಡಿ ಭಾರತೀಯ ಕ್ರಿಕೆಟ್‌ ನಿಯಂತ್ರಣ ಮಂಡಳಿ (ಬಿಸಿಸಿಐ)ಯನ್ನು ಸೇರಿಸಿ ಕೇಂದ್ರ ಮಾಹಿತಿ ಆಯೋಗ ಸೋಮವಾರ ಮಹತ್ವದ ಆದೇಶ ಹೊರಡಿಸಿತ್ತು. ಇದರಿಂದ ವಿಚಲಿತಗೊಂಡಿರುವ ಬಿಸಿಸಿಐ, ಆದೇಶ ಪ್ರಶ್ನಿಸಿ ನ್ಯಾಯಾಲಯದ ಮೆಟ್ಟಿಲೇರಲು ಗಂಭೀರ ಚಿಂತನೆ ನಡೆಸಿದೆ. ಜತೆಗೆ ಈ ಹೋರಾಟದಲ್ಲಿ ತನಗೆ ಹಿನ್ನಡೆಯಾಗಲು ಸುಪ್ರೀಂ ಕೋರ್ಟ್‌ ನೇಮಿತ ಆಡಳಿತ ಸಮಿತಿಯೇ ಕಾರಣ ಎಂದು ಬಿಸಿಸಿಐ ದೂರಿದೆ.

ಮಾಹಿತಿ ಆಯೋಗದ ತೀರ್ಪಿನ ಪ್ರಕಾರ, ಬಿಸಿಸಿಐ ರಾಷ್ಟ್ರೀಯ ಕ್ರೀಡಾ ಫೆಡರೇಷನ್‌ (ಎನ್‌ಎಸ್‌ಎಫ್‌) ಎಂದು ಪರಿಗಣಿಸಲ್ಪಡುತ್ತದೆ. ಆದರೆ ಬಿಸಿಸಿಐ ತಾನು ಸ್ವಾಯತ್ತ ಸಂಸ್ಥೆ ಎಂದು ತನ್ನನ್ನು ತಾನು ಪರಿಗಣಿಸಿಕೊಂಡಿದೆ. ‘ಕಾನೂನು ಪ್ರಾತಿನಿಧ್ಯದಲ್ಲಿ ಆಡಳಿತ ಸಮಿತಿಯ ವೈಫಲ್ಯವೇ ಹಿನ್ನಡೆ ಉಂಟಾಗಲು ಕಾರಣ’ ಎಂದು ಬಿಸಿಸಿಐನ ಹಿರಿಯ ಅಧಿಕಾರಿಯೊಬ್ಬರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮಾಹಿತಿ ಆಯೋಗ ಬಿಸಿಸಿಐಗೆ 15 ದಿನಗಳ ಗಡುವು ನೀಡಿದ್ದು, ಅಷ್ಟರೊಳಗೆ ಆನ್‌ಲೈನ್‌ ಹಾಗೂ ಆಫ್‌ಲೈನ್‌ನಲ್ಲಿ ಅರ್ಜಿಗಳನ್ನು ಸಲ್ಲಿಸಲು ವ್ಯವಸ್ಥೆ ಕಲ್ಪಿಸಬೇಕು ಎಂದು ಸೂಚಿಸಿದೆ.

ಇದನ್ನು ಓದಿ: ಆರ್‌ಟಿಐ ವ್ಯಾಪ್ತಿಗೆ ಬಿಸಿಸಿಐ..!

‘ಬಿಸಿಸಿಐ ಏಕೆ ಆರ್‌ಟಿಐ ವ್ಯಾಪ್ತಿಗೆ ಬರಬಾರದು ಎನ್ನುವ ಸಂಬಂಧ ಜುಲೈ 10ರಂದು ಮಾಹಿತಿ ಆಯೋಗದ ವಿಚಾರಣೆ ಇತ್ತು. ಆದರೆ ಬಿಸಿಸಿಐ ಇದಕ್ಕೆ ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ. ಬದಲಿಗೆ ಶೋಕಾಸ್‌ ನೋಟಿಸ್‌ಗಾಗಿ ಕಾಯುತ್ತಾ ಕುಳಿತುಕೊಂಡಿತು. ಸದ್ಯ ಹೈಕೋರ್ಟ್‌ನಲ್ಲಿ ಆಯೋಗದ ತೀರ್ಪನ್ನು ಪ್ರಶ್ನಿಸುವುದೊಂದೇ ನಮ್ಮ ಮುಂದಿರುವ ಆಯ್ಕೆ. ಅಲ್ಲಿಂದ ಮುಂದಕ್ಕೆ ಏನಾಗುತ್ತದೆ ಎಂಬುದನ್ನು ನೋಡಬೇಕು’ ಎಂದು ಬಿಸಿಸಿಐ ಹಿರಿಯ ಅಧಿಕಾರಿ ಹೇಳಿದ್ದಾರೆ. ಮೂಲಗಳ ಪ್ರಕಾರ, ಮಾಹಿತಿ ಆಯೋಗದ ತೀರ್ಪಿನ ಪ್ರತಿಯನ್ನು ಬಿಸಿಸಿಐ ವಕೀಲರು ಅಧ್ಯಯನ ನಡೆಸಿ ಬಳಿಕ ಮುಂದಿನ ನಡೆ ಬಗ್ಗೆ ನಿರ್ಧಾರ ಕೈಗೊಳ್ಳಲಿದ್ದಾರೆ ಎನ್ನಲಾಗಿದೆ.

ಈ ಬೆಳವಣಿಗೆ ಬಗ್ಗೆ ಪ್ರತಿಕ್ರಿಯಿಸಿರುವ ಮತ್ತೊಬ್ಬ ಬಿಸಿಸಿಐ ಅಧಿಕಾರಿ, ‘ಬಿಸಿಸಿಐ ಆರ್‌ಟಿಐ ವ್ಯಾಪ್ತಿಗೆ ಭಾಗಶಃ ಒಳಪಡಲು ಇಚ್ಛಿಸಿದೆ ಎನ್ನುವ ವಿಷಯ ನಮ್ಮ ಕಿವಿಗೆ ಬಿದ್ದಿದೆ. ಆದರೆ ಆಡಳಿತ ಸಮಿತಿ ಚುನಾವಣೆಗೂ ಮುನ್ನ ಮಂಡಳಿಯನ್ನು ಆರ್‌ಟಿಐ ಅಡಿ ಬರುವಂತೆ ಮಾಡಬೇಕು. ಬಿಸಿಸಿಐ ಸಂಪೂರ್ಣವಾಗಿ ಆರ್‌ಟಿಐ ವ್ಯಾಪ್ತಿಗೆ ಸೇರಬೇಕು ಇಲ್ಲವೇ ಅದರಿಂದ ಹೊರಗಿರಬೇಕು’ ಎಂದು ಹೇಳಿದ್ದಾರೆ.

ಪಾರದರ್ಶಕ ಆಡಳಿತಕ್ಕೆ ಆದ್ಯತೆ: ಕೇಂದ್ರ ಮಾಹಿತಿ ಆಯೋಗದ ತೀರ್ಪಿನ ಬಗ್ಗೆ ಪ್ರತಿಕ್ರಿಯೆ ನೀಡಿರುವ ಆಡಳಿತ ಸಮಿತಿ ಮುಖ್ಯಸ್ಥ ವಿನೋದ್‌ ರಾಯ್‌, ‘ಬಿಸಿಸಿಐನಲ್ಲಿ ಪಾರದರ್ಶಕ ಆಡಳಿತ ನಡೆಸಲು ನಾವು ಸಂಪೂರ್ಣ ಸಹಕಾರ ನೀಡುತ್ತೇವೆ. ಇದಕ್ಕಾಗೇ ದೃಢವಾದ ವೆಬ್‌ಸೈಟ್‌ ಆರಂಭಿಸಿದ್ದೇವೆ. ಆ ಮೂಲಕ ಸಾರ್ವಜನಿಕ ವೇದಿಕೆಯಲ್ಲಿ ನಮ್ಮ ಕಾರ್ಯವೈಖರಿ ಹಾಗೂ ನಿರ್ಧಾರಗಳ ಕುರಿತು ತಿಳಿಸುತ್ತಿದ್ದೇವೆ. ಮುಂದಿನ ದಿನಗಳಲ್ಲಿ ನಮ್ಮ ವೆಬ್‌ಸೈಟ್‌ ಮತ್ತಷ್ಟುಕ್ರಿಯಾಶೀಲಗೊಳ್ಳಲಿದೆ. ಹೆಚ್ಚು ಮುಕ್ತತೆ ಹಾಗೂ ಹೊಣೆಗಾರಿಕೆಗೆ ಒತ್ತು ನೀಡಲಿದ್ದೇವೆ. ಬಿಸಿಸಿಐನಲ್ಲಿ ಸಂಭಾವ್ಯತೆ ಹಾಗೂ ಮುಕ್ತತೆ ತರಲು ಆಡಳಿತ ಸಮಿತಿ ಬದ್ಧವಾಗಿದೆ. ಈಗಾಗಲೇ ನಾವು ವೃತ್ತಿಪರ ನಿರ್ವಹಣೆಯೊಂದಿಗೆ ಉತ್ತಮ ಆಡಳಿತ ನಡೆಸುತ್ತಿದ್ದೇವೆ’ ಎಂದು ಹೇಳಿದ್ದಾರೆ.
 

click me!