ಹೈಕಮಿಶನ್ ಕಚೇರಿಗೆ ಟೀಂ ಇಂಡಿಯಾ ಜೊತೆ ಅನುಷ್ಕಾ ಶರ್ಮಾ ಹೋಗಿದ್ದೇಕೆ?

By Web Desk  |  First Published Aug 9, 2018, 1:35 PM IST

ಟೀಂ ಇಂಡಿಯಾ ಜೊತೆ ಲಂಡನ್ ಭಾರತೀಯ ಹೈಕಮಿಶನ್ ಕಚೇರಿಗೆ ಭೇಟಿ ನೀಡಿದ ನಾಯಕ ವಿರಾಟ್ ಕೊಹ್ಲಿ ಪತ್ನಿ ಅನುಷ್ಕಾ ಶರ್ಮಾ ವಿರುದ್ಧ ಆಕ್ರೋಶ ವ್ಯಕ್ತವಾಗಿತ್ತು. ಇದೀಗ ಅನುಷ್ಕಾ ಉಪಸ್ಥಿತಿ ಕುರಿತು ಬಿಸಿಸಿಐ ಸ್ಪಷ್ಟನೆ ನೀಡಿದೆ. ಅಷ್ಟಕ್ಕೂ ತಂಡದ ಜೊತೆ ಅನುಷ್ಕಾ ಶರ್ಮಾ ಹೋಗಿದ್ದೇಕೆ? ಇಲ್ಲಿದೆ ವಿವರ.


ಮುಂಬೈ(ಆ.09): ಇಂಗ್ಲೆಂಡ್ ಪ್ರವಾಸದಲ್ಲಿರುವ ಟೀಂ ಇಂಡಿಯಾ  ದ್ವಿತೀಯ ಟೆಸ್ಟ್ ಪಂದ್ಯಕ್ಕೂ ಮುನ್ನ ಲಂಡನ್‌ ಭಾರತೀಯ ಹೈಕಮಿಶನ್ ಕಚೇರಿಗೆ ಭೇಟಿ ನೀಡಿತ್ತು. ಭೇಟಿ ವೇಳೆ ಟೀಂ ಇಂಡಿಯಾ ಜೊತೆ ನಾಯಕ ವಿರಾಟ್ ಕೊಹ್ಲಿ ಪತ್ನಿ ಅನುಷ್ಕಾ ಶರ್ಮಾ ಕೂಡ ಉಪಸ್ಥಿತರಿದ್ದರು.

ಟೀಂ ಇಂಡಿಯಾ ಭೇಟಿ ಫೋಟೋವನ್ನ ಬಿಸಿಸಿಐ ಅಪ್‌ಲೋಡ್ ಮಾಡುತ್ತಿದ್ದಂತೆ, ಅನುಷ್ಕಾ ಶರ್ಮಾ ಟ್ರೋಲ್ ಆಗಿದ್ದರು. ಅನುಷ್ಕಾ ಶರ್ಮಾ ಟೀಂ ಇಂಡಿಯಾ ಸೇರಿಕೊಂಡಿದ್ದು ಯಾವಾಗ ಅನ್ನೋ ಪ್ರಶ್ನೆ ಎದ್ದಿತ್ತು. ಇಷ್ಟೇ ಅಲ್ಲ ಉಪನಾಯಕ ಅಜಿಂಕ್ಯ ರಹಾನೆ ಅಂತಿಮ ಸಾಲಿನಲ್ಲಿದ್ದು, ಅನುಷ್ಕಾ ಮೊದಲ ಸಾಲಿನಲ್ಲಿದ್ದಾರೆ. ಈ ಮೂಲಕ ರಹಾನೆಯನ್ನ ಕಡೆಗಣಿಸಲಾಗಿದೆ ಅನ್ನೋ ಮಾತುಗಳು ಕೇಳಿಬಂದಿತ್ತು. ಇದೀಗ ಟ್ವಿಟರಿಗರ ಆರೋಪಕ್ಕೆ ಬಿಸಿಸಿಐ ಸ್ಪಷ್ಟನೆ ನೀಡಿದೆ.

Tap to resize

Latest Videos

ಇದನ್ನು ಓದಿ: ಲಾರ್ಡ್ಸ್ ಟೆಸ್ಟ್’ನಲ್ಲಿ ಅನುಷ್ಕಾ ಶರ್ಮಾ ಕ್ರಿಕೆಟ್ ಆಡ್ತಾರಾ..?

ಲಂಡನ್ ಭಾರತೀಯ ಹೈಕಮಿಶನ್ ಕಚೇರಿಗೆ ಭೇಟಿಯಲ್ಲಿ ಯಾವುದೇ ಕಾನೂನು ಉಲ್ಲಂಘನೆ ಮಾಡಿಲ್ಲ ಎಂದು ಬಿಸಿಸಿಐ ಮೂಲಗಳು ಹಿಂದುಸ್ತಾನ್ ಟೈಮ್ಸ್‌ಗೆ ಹೇಳಿದೆ. ಪ್ರತಿ ಇಂಗ್ಲೆಂಡ್ ಪ್ರವಾಸದಲ್ಲಿ ಟೀಂ ಇಂಡಿಯಾವನ್ನ ಭಾರತೀಯ ಹೈಕಮಿಶನ್ ಆಹ್ವಾನಿಸುತ್ತಿದೆ. ತಂಡದ ಜೊತೆಗೆ ಪತ್ನಿಯರು, ಸಂಬಂಧಿಕರಿಗೂ ಲಂಡನ್ ಹೈಕಮಿಶನ್ ಆಹ್ವಾನ ನೀಡುತ್ತಿದೆ. ಈ ಬಾರಿಯೂ ಈ ಸಂಪ್ರದಾಯ ಮುಂದುವರಿದಿದೆ.

ಇದನ್ನು ಓದಿ:ಲಂಡನ್ ಹೈಕಮಿಶನ್ ಭೇಟಿಯಾದ ಟೀಂ ಇಂಡಿಯಾ

ಲಂಡನ್ ಹೈಮಿಶನ್ ಆಹ್ವಾನದ ಮೇರೆಗೆ ವಿರಾಟ್ ಕೊಹ್ಲಿ ಪತ್ನಿ ಟೀಂ ಇಂಡಿಯಾ ಜೊತೆಗೆ ತೆರಳಿದ್ದಾರೆ. ಫೋಟೋ ಸಂದರ್ಭದಲ್ಲಿ ಅಜಿಂಕ್ಯ ರಹಾನೆಗೆ  ಯಾರೂ ಕೂಡ  ಹಿಂಬದಿ ಸಾಲಿನಲ್ಲಿ ನಿಲ್ಲುವಂತೆ ಸೂಚಿಸಿಲ್ಲ. ಟೀಂ ಇಂಡಿಯಾ ಹೈಕಮಿಶನ್ ರೆಸಿಡೆನ್ಸಿ ಪ್ರವೇಶಿಸುತ್ತಿದ್ದಂತೆ ಫೋಟೋ ತೆಗೆಸಿಕೊಳ್ಳಲಾಗಿದೆ. ಹೀಗಾಗಿ ಇದು ಪೂರ್ವ ನಿರ್ಧಾರದ ಫೋಟೋ ಅಲ್ಲ ಎಂದು ಬಿಸಿಸಿಐ ವಿವಾದಕ್ಕೆ ತೆರೆ ಎಳೆಯಲು ಪ್ರಯತ್ನಿಸಿದೆ.
 

click me!