ಆಸ್ಪ್ರೇಲಿಯನ್ ಓಪನ್ ಗ್ರ್ಯಾಂಡ್‌ಸ್ಲಾಂ| ಮಹಿಳಾ ಸಿಂಗಲ್ಸ್ ಪ್ರಶಸ್ತಿ ಗೆದ್ದ ಜಪಾನಿನ ನವೊಮಿ| ಫೈನಲ್‌ನಲ್ಲಿ ಚೆಕ್ ಗಣರಾಜ್ಯದ ಪೆಟ್ರಾ ಕ್ವಿಟೋವಾ ವಿರುದ್ಧ ಜಯ| ಒಸಾಕಗೆ ವಿಶ್ವ ನಂ.1 ಪಟ್ಟ
ಮೆಲ್ಬರ್ನ್: ಆಸ್ಪ್ರೇಲಿಯನ್ ಓಪನ್ ಟೆನಿಸ್ ಗ್ರ್ಯಾಂಡ್‌ಸ್ಲಾಂನಲ್ಲಿ ಹೊಸ ಚಾಂಪಿಯನ್‌ನ ಉದಯವಾಗಿದೆ. ಜಪಾನಿನ 21 ವರ್ಷದ ನವೊಮಿ ಒಸಾಕ ಮಹಿಳಾ ಸಿಂಗಲ್ಸ್ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ. ಶನಿವಾರ ನಡೆದ ಫೈನಲ್‌ನಲ್ಲಿ ಚೆಕ್ ಗಣರಾಜ್ಯದ ಪೆಟ್ರಾ ಕ್ವಿಟೋವಾ ವಿರುದ್ಧ 7-6(7/2),5-7,6-4 ಸೆಟ್‌ಗಳಲ್ಲಿ ಗೆಲುವು ಸಾಧಿಸಿ ಒಸಾಕ ಚೊಚ್ಚಲ ಆಸ್ಪ್ರೇಲಿಯನ್ ಓಪನ್ ಗೆದ್ದರು. ಕಳೆದ ವರ್ಷ ಯುಎಸ್ ಓಪನ್ ಗೆದ್ದಿದ್ದ ಜಪಾನ್ ಆಟಗಾರ್ತಿ, ಸತತ 2 ಗ್ರ್ಯಾಂಡ್‌ಸ್ಲಾಂಗಳನ್ನು ಗೆದ್ದ ಸಾಧನೆಗೈದರು.
2 ಗಂಟೆ 27 ನಿಮಿಷಗಳ ಕಾಲ ನಡೆದ ಪ್ರಶಸ್ತಿ ಸುತ್ತಿನ ರೋಚಕ ಹೋರಾಟದಲ್ಲಿ ಗೆಲುವು ಬೀಗಿದ ಒಸಾಕಗೆ ಮೆಲ್ಬರ್ನ್ ಪಾರ್ಕ್ನಲ್ಲಿ ನೆರೆದಿದ್ದ ಅಭಿಮಾನಿಗಳಿಂದ ಭಾರೀ ಬೆಂಬಲ ದೊರೆಯಿತು. 7-6ರಲ್ಲಿ ಮೊದಲ ಸೆಟ್ ಗೆದ್ದ ಬಳಿಕ ಒಸಾಕ, 2ನೇ ಸೆಟ್‌ನಲ್ಲಿ 5-3 ಗೇಮ್‌ಗಳಿಂದ ಮುಂದಿದ್ದರು. ಅವರ ಬಳಿ 3 ಚಾಂಪಿಯನ್‌ಶಿಪ್ ಅಂಕಗಳಿದ್ದವು. ಆದರೆ ಕ್ವಿಟೋವಾ ಸುಲಭವಾಗಿ ಸೋಲೊಪ್ಪಿಕೊಳ್ಳಲು ಸಿದ್ಧರಿರಲಿಲ್ಲ. ಪುಟಿದೆದ್ದ ಚೆಕ್ ಆಟಗಾರ್ತಿ, 7-5ರಲ್ಲಿ ಗೇಮ್ ತಮ್ಮದಾಗಿಸಿಕೊಂಡು ಪಂದ್ಯವನ್ನು ಅಂತಿಮ ಸೆಟ್‌ಗೆ ಕೊಂಡೊಯ್ದರು.
undefined
ಅಂತಿಮ ಸೆಟ್‌ನಲ್ಲಿ ಪ್ರಾಬಲ್ಯ ಮೆರೆದ ಒಸಾಕ, 6-4ರಲ್ಲಿ ಸುಲಭವಾಗಿ ಜಯಿಸಿ ಪಂದ್ಯವನ್ನು ತಮ್ಮದಾಗಿಸಿಕೊಂಡರು. ಇದರೊಂದಿಗೆ ಮಾರ್ಟಿನಾ ಹಿಂಗಿಸ್ (1998) ಬಳಿಕ ಸತತ 2 ಗ್ರ್ಯಾಂಡ್‌ಸ್ಲಾಂಗಳನ್ನು ಗೆದ್ದ ಅತಿಕಿರಿಯ ಆಟಗಾರ್ತಿ ಎನ್ನುವ ದಾಖಲೆಯನ್ನು ಒಸಾಕ ಬರೆದರು. ಒಂದೂ ಸೆಟ್ ಸೋಲದೆ ಫೈನಲ್ ಪ್ರವೇಶಿಸಿದ್ದ ಕ್ವಿಟೋವಾ, ಅಂತಿಮ ಪಂದ್ಯದಲ್ಲಿ ವೀರೋಚಿತ ಸೋಲು ಕಂಡರು.
ವಿಶ್ವ ನಂ.1 ಸ್ಥಾನಕ್ಕೇರಿದ ಏಷ್ಯಾದ ಮೊದಲ ಆಟಗಾರ್ತಿ
ಆಸ್ಪ್ರೇಲಿಯನ್ ಓಪನ್ ಗೆಲ್ಲುವ ಮೂಲಕ 2000 ರೇಟಿಂಗ್ ಅಂಕ ಗಳಿಸಿದ ನವೊಮಿ ಒಸಾಕ, ಮಹಿಳಾ ಟೆನಿಸ್ ವಿಶ್ವ ರಾರಯಂಕಿಂಗ್‌ನಲ್ಲಿ ಚೊಚ್ಚಲ ಬಾರಿಗೆ ನಂ.1 ಸ್ಥಾನಕ್ಕೇರಲಿದ್ದಾರೆ. ಸದ್ಯದಲ್ಲೇ ಪ್ರಕಟಗೊಳ್ಳಲಿರುವ ನೂತನ ರಾರಯಂಕಿಂಗ್ ಪಟ್ಟಿಯಲ್ಲಿ ಒಸಾಕ, ರೊಮೇನಿಯಾದ ಸಿಮೋನಾ ಹಾಲೆಪ್ ಹಿಂದಿಕ್ಕಿ ಅಗ್ರಸ್ಥಾನಕ್ಕೇರಲಿದ್ದಾರೆ. ಪುರುಷ ಇಲ್ಲವೇ ಮಹಿಳಾ ಸಿಂಗಲ್ಸ್‌ನ ರಾರಯಂಕಿಂಗ್ ಪಟ್ಟಿಯಲ್ಲಿ ಅಗ್ರಸ್ಥಾನ ಪಡೆದ ಏಷ್ಯಾದ ಮೊದಲ ಟೆನಿಸ್ ಪಟು ಎನ್ನುವ ದಾಖಲೆಯನ್ನು ಒಸಾಕ ಬರೆಯಲಿದ್ದಾರೆ. ಕ್ಯಾರೋಲಿನಾ ವೋಜ್ನಿಯಾಕಿ (2010) ಬಳಿಕ ಅಗ್ರಸ್ಥಾನಕ್ಕೇರಲಿರುವ ಅತಿಕಿರಿಯ ಆಟಗಾರ್ತಿ ಎನ್ನುವ ಕೀರ್ತಿಗೂ ಒಸಾಕ ಪಾತ್ರರಾಗಲಿದ್ದಾರೆ.
20.88 ಕೋಟಿ ಬಹುಮಾನ!
ಆಸ್ಪ್ರೇಲಿಯನ್ ಓಪನ್ ಚಾಂಪಿಯನ್ ಆದ ಒಸಾಕ .20.88 ಕೋಟಿ ಬಹುಮಾನ ಮೊತ್ತವನ್ನು ತಮ್ಮದಾಗಿಸಿಕೊಂಡಿದ್ದಾರೆ. ರನ್ನರ್-ಅಪ್ ಪ್ರಶಸ್ತಿ ಪಡೆದ ಕ್ವಿಟೋವಾಗೆ .10.44 ಕೋಟಿ ಬಹುಮಾನ ಮೊತ್ತ ಸಿಕ್ಕಿತು.