ಆಸ್ಟ್ರೇಲಿಯನ್ ಓಪನ್: ಕ್ವಿಟೋವಾ Vs ಒಸಾಕ ಫೈನಲ್

By Web DeskFirst Published Jan 26, 2019, 12:52 PM IST
Highlights

ಒಸಾಕ 2018ರ ಯುಎಸ್ ಓಪನ್ ಫೈನಲ್‌ನಲ್ಲಿ ಸೆರೆನಾ ವಿಲಿಯಮ್ಸ್‌ರನ್ನು ಮಣಿಸಿ ಚಾಂಪಿಯನ್ ಆಗಿದ್ದರು. 2019ರ ಮೊದಲ ಗ್ರ್ಯಾಂಡ್‌ಸ್ಲಾಂನಲ್ಲಿ ಫೈನಲ್‌ಗೇರುವ ಮೂಲಕ ಒಸಾಕ ಚಾಂಪಿಯನ್ ಆಗುವ ವಿಶ್ವಾಸದಲ್ಲಿದ್ದಾರೆ.

ಮೆಲ್ಬರ್ನ್: ಚೊಚ್ಚಲ ಆಸ್ಟ್ರೇಲಿಯನ್ ಗ್ರ್ಯಾಂಡ್‌ಸ್ಲಾಂ ಕಿರೀಟ ಮುಡಿಗೇರಿಸಿಕೊಳ್ಳುವ ತವಕದಲ್ಲಿರುವ ಜಪಾನ್‌ನ ನವೊಮಿ ಒಸಾಕ, ಶನಿವಾರ ನಡೆಯಲಿರುವ ಮಹಿಳಾ ಸಿಂಗಲ್ಸ್ ಫೈನಲ್ ನಲ್ಲಿ ಚೆಕ್ ಗಣರಾಜ್ಯದ ಪೆಟ್ರಾ ಕ್ವಿಟೋವಾರನ್ನು ಎದುರಿಸಲಿದ್ದಾರೆ.

ಚಾಂಪಿಯನ್ ಆಗುವ ಆಟಗಾರ್ತಿ ವಿಶ್ವ ರ‍್ಯಾಂಕಿಂಗ್‌ನಲ್ಲಿ ಅಗ್ರಸ್ಥಾನಕ್ಕೇರುವ ಸಾಧ್ಯತೆ ಇರುವುದರಿಂದ ಪಂದ್ಯಕ್ಕೆ ಹೆಚ್ಚಿನ ಮಹತ್ವ ಬಂದಿದೆ. ಒಸಾಕ 2018ರ ಯುಎಸ್ ಓಪನ್ ಫೈನಲ್‌ನಲ್ಲಿ ಸೆರೆನಾ ವಿಲಿಯಮ್ಸ್‌ರನ್ನು ಮಣಿಸಿ ಚಾಂಪಿಯನ್ ಆಗಿದ್ದರು. 2019ರ ಮೊದಲ ಗ್ರ್ಯಾಂಡ್‌ಸ್ಲಾಂನಲ್ಲಿ ಫೈನಲ್‌ಗೇರುವ ಮೂಲಕ ಒಸಾಕ ಚಾಂಪಿಯನ್ ಆಗುವ ವಿಶ್ವಾಸದಲ್ಲಿದ್ದಾರೆ. ಆಸ್ಟ್ರೇಲಿಯನ್ ಓಪನ್‌ನಲ್ಲಿ ಫೈನಲ್‌ಗೇರಿದ ಮೊದಲ ಜಪಾನ್ ಟೆನಿಸ್ ಆಟಗಾರ್ತಿ ಎನಿಸಿರುವ ಒಸಾಕ, ಕ್ವಿಟೋವಾ ವಿರುದ್ಧ ಜಯದ ವಿಶ್ವಾಸದಲ್ಲಿದ್ದಾರೆ. ಸತತ 11 ಪಂದ್ಯಗಳನ್ನು ಗೆದ್ದಿರುವ 28 ವರ್ಷದ ಕ್ವಿಟೋವಾ 2 ಬಾರಿ ವಿಂಬಲ್ಡನ್ ಚಾಂಪಿಯನ್ ಆಗಿದ್ದಾರೆ.

ಕ್ವಿಟೋವಾ ಇಲ್ಲಿಯವರೆಗೂ ಒಂದು ಸೆಟ್‌ನಲ್ಲಿ ಹಿನ್ನಡೆ ಅನುಭವಿಸದೆ, ಎಲ್ಲಾ ಸೆಟ್‌ಗಳಲ್ಲಿ ಜಯ ಸಾಧಿಸಿದ್ದಾರೆ. 2016ರಲ್ಲಿ ತಮ್ಮ ಮನೆಯಲ್ಲಿಯೇ ಅಪರಿಚಿತ ವ್ಯಕ್ತಿಯಿಂದ ಹಲ್ಲೆಗೊಳಗಾದ ಬಳಿಕ ಕ್ವಿಟೋವಾ ಇದೇ ಮೊದಲ ಬಾರಿ ಗ್ರ್ಯಾಂಡ್‌ಸ್ಲಾಂ ಪಂದ್ಯಾವಳಿಯಲ್ಲಿ ಫೈನಲ್ ಪ್ರವೇಶಿಸಿದ್ದಾರೆ. 

ಜೋಕೋ ಫೈನಲ್’ಗೆ: 

ದಾಖಲೆಯ 7ನೇ ಆಸ್ಟ್ರೇಲಿಯನ್ ಓಪನ್ ಮೇಲೆ ಕಣ್ಣಿಟ್ಟಿರುವ ಅಗ್ರ ಶ್ರೇಯಾಂಕಿತ ಸರ್ಬಿಯಾದ ನೋವಾಕ್ ಜೋಕೋವಿಚ್, ಭಾನುವಾರ ನಡೆಯಲಿರುವ ಪುರುಷರ ಸಿಂಗಲ್ಸ್ ಫೈನಲ್‌ನಲ್ಲಿ ಸ್ಪೇನ್‌ನ ರಾಫೆಲ್ ನಡಾಲ್ ಎದುರು ಸೆಣಸಲಿದ್ದಾರೆ. 

ಶುಕ್ರವಾರ ನಡೆದ ಸೆಮೀಸ್‌ನಲ್ಲಿ ಜೋಕೋ, 28ನೇ ಶ್ರೇಯಾಂಕಿತ ಫ್ರಾನ್ಸ್‌ನ ಲುಕಾಸ್ ಪೌಯಿ ಲ್ಲೆ ವಿರುದ್ಧ 6-0, 6-2, 6-2ಸೆಟ್‌ಗಳಲ್ಲಿ ಜಯ ಸಾಧಿಸಿದರು. 2012ರ ಆಸ್ಟ್ರೇಲಿಯನ್ ಓಪನ್
ಫೈನಲ್‌ನಲ್ಲಿ ಜೋಕೋ ವಿಚ್, ನಡಾಲ್ ವಿರುದ್ಧ ಗೆಲುವು ಸಾಧಿಸಿದ್ದರು. ಅದೇ ಫೈನಲ್ ಪಂದ್ಯ 7 ವರ್ಷಗಳ ಬಳಿಕ ಮರುಕಳಿಸುವ ಸಾಧ್ಯತೆಯಿದೆ ಎಂಬ ಲೆಕ್ಕಚಾರ ಆರಂಭವಾಗಿದೆ.
 

click me!