
ಹೈದರಾಬಾದ್[ಏ.30]: ಸತತ 7 ಅರ್ಧಶತಕ ಸಿಡಿಸುವುದರ ಜತೆಗೆ ಸನ್’ರೈಸರ್ಸ್ ಹೈದರಾಬಾದ್ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದ ಡೇವಿಡ್ ವಾರ್ನರ್ ಇದೀಗ ಆಸ್ಟ್ರೇಲಿಯಾಗೆ ಮರಳಿದ್ದಾರೆ. ವಿಶ್ವಕಪ್ ಟೂರ್ನಿಗೆ ತಯಾರಿ ನಡೆಸುವ ಸಲುವಾಗಿ ಆಸಿಸ್ ತಂಡ ಕೂಡಿಕೊಳ್ಳುವ ಉದ್ದೇಶದಿಂದ ವಾರ್ನರ್ ತವರಿಗೆ ಮರಳಿದ್ದು, ಭಾವನಾತ್ಮಕ ಸಂದೇಶದೊಂದಿಗೆ 12ನೇ ಆವೃತ್ತಿಯ ಐಪಿಎಲ್’ಗೆ ಗುಡ್’ಬೈ ಹೇಳಿದ್ದಾರೆ.
ವಿಶ್ವಕಪ್ ಟೂರ್ನಿಗೆ ಬಲಿಷ್ಠ ತಂಡ ಪ್ರಕಟಿಸಿದ ಆಸ್ಟ್ರೇಲಿಯಾ
ಹೈದರಾಬಾದ್’ನಲ್ಲಿ ನಡೆದ ಕಿಂಗ್ಸ್ ಇಲೆವನ್ ಪಂಜಾಬ್ ವಿರುದ್ಧದ ಪಂದ್ಯದಲ್ಲಿ ಡೇವಿಡ್ ವಾರ್ನರ್ 81 ರನ್ ಸಿಡಿಸಿದ್ದರು. ಈ ಪಂದ್ಯವನ್ನು ಸನ್’ರೈಸರ್ಸ್ ತಂಡ 45 ರನ್ ಅಂತರದಲ್ಲಿ ಗೆದ್ದು ಅಂಕಪಟ್ಟಿಯಲ್ಲಿ ನಾಲ್ಕನೇ ಸ್ಥಾನಕ್ಕೇರಿದೆ. ಲೀಗ್ ಹಂತದಲ್ಲಿ ಇನ್ನೆರಡು ಪಂದ್ಯಗಳು ಬಾಕಿಯಿರುವಾಗಲೇ ವಾರ್ನರ್ ಐಪಿಎಲ್’ಗೆ ಗುಡ್’ಬೈ ಹೇಳಿದ್ದಾರೆ. ವಿಶ್ವಕಪ್ ಟೂರ್ನಿಗೆ ಆಸ್ಟ್ರೇಲಿಯಾ ಮೇ.02ರಿಂದ ಟ್ರೈನಿಂಗ್ ಕ್ಯಾಂಪ್ ಆರಂಭಿಸಲಿದ್ದು, ರಾಷ್ಟ್ರೀಯ ತಂಡಕೂಡಿಕೊಳ್ಳಲಿದ್ದಾರೆ.
ಇದೀಗ ಭಾರತ ತೊರೆಯುವ ಮುನ್ನ ಸಾಮಾಜಿಕ ಜಾಲತಾಣಗಳಾದ ಟ್ವಿಟರ್ ಹಾಗೂ ಇನ್’ಸ್ಟಾಗ್ರಾಂನಲ್ಲಿ ಸನ್’ರೈಸರ್ಸ್ ಪ್ರಾಂಚೈಸಿಗೆ ಧನ್ಯವಾದಗಳನ್ನು ಅರ್ಪಿಸಿದ್ದಾರೆ. ನನ್ನ ಪ್ರಸಕ್ತ ಆವೃತ್ತಿ ಮಾತ್ರವಲ್ಲದೇ ಕಳೆದ ವರ್ಷವೂ ನನ್ನ ಬೆಂಬಲಕ್ಕೆ ನಿಂತ ಸನ್’ರೈಸರ್ಸ್ ಕುಟುಂಬಕ್ಕೆ ನಾನು ಕೃತಜ್ಞತೆಯನ್ನು ಸಲ್ಲಿಸುತ್ತೇನೆ. ದೀರ್ಘಕಾಲದ ಕಾಯುವಿಕೆಯ ಬಳಿಕ ತಂಡವನ್ನು ಕೂಡಿಕೊಂಡರೂ ಅವಿಸ್ಮರಣೀಯ ಕ್ಷಣಗಳು ನನಗೆ ಸಿಕ್ಕವು. ನನ್ನನ್ನು ಆತ್ಮೀಯವಾಗಿ ಸ್ವಾಗತಿಸಿದ ತಂಡದ ಮಾಲೀಕರಿಗೆ, ಸಹಾಯಕ ಸಿಬ್ಬಂದಿಗಳಿಗೆ, ಸಹ ಆಟಗಾರರಿಗೆ ಹಾಗೂ ಅಭಿಮಾನಿಗಳಿಗೆ ಅನಂತ ವಂದನೆಗಳು. ಈ ಆವೃತ್ತಿಯನ್ನು ನಾನು ನಿಜಕ್ಕೂ ಆನಂದಿಸಿದೆ. ಉಳಿದ ಪಂದ್ಯಗಳಲ್ಲೂ ತಂಡಕ್ಕೆ ಯಶಸ್ಸು ಸಿಗಲಿ ಎಂದು ಡೇವಿಡ್ ವಾರ್ನರ್ ಹೇಳಿದ್ದಾರೆ.
ರಾಹುಲ್ ಏಕಾಂಗಿ ಹೋರಾಟ ವ್ಯರ್ಥ- SRHಗೆ 45 ರನ್ ಗೆಲುವು!
2018ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಕೇಪ್’ಟೌನ್’ನಲ್ಲಿ ನಡೆದ ಮೂರನೇ ಟೆಸ್ಟ್ ಪಂದ್ಯದ ವೇಳೆ ಆಸ್ಟ್ರೇಲಿಯಾ ತಂಡದ ನಾಯಕ ಸ್ಟೀವ್ ಸ್ಮಿತ್, ಉಪನಾಯಕ ಡೇವಿಡ್ ವಾರ್ನರ್ ಹಾಗೂ ಕ್ಯಾಮರೋನ್ ಬೆನ್’ಕ್ರಾಫ್ಟ್ ಬಾಲ್ ಟ್ಯಾಂಪರಿಂಗ್ ಮಾಡಿ ಸಿಕ್ಕಿಬಿದ್ದಿದ್ದರು. ಹೀಗಾಗಿ ಸ್ಮಿತ್ ಹಾಗೂ ವಾರ್ನರ್ ಮೇಲೆ 12 ತಿಂಗಳು ಹಾಗೂ ಬೆನ್’ಕ್ರಾಫ್ಟ್ 9 ತಿಂಗಳು ನಿಷೇಧ ಹೇರಲಾಗಿತ್ತು. ಹೀಗಾಗಿ 2018ನೇ ಐಪಿಎಲ್ ಆವೃತ್ತಿಯಲ್ಲಿ ಸ್ಮಿತ್ ಹಾಗೂ ವಾರ್ನರ್ ಟೂರ್ನಿಯಿಂದ ಹೊರಗುಳಿದಿದ್ದರು. ಇದೀಗ ನಿಷೇಧ ಮುಕ್ತಾಯವಾದ ಹಿನ್ನಲೆಯಲ್ಲಿ ವಾರ್ನರ್ ಹಾಗೂ ಸ್ಮಿತ್ 2019ರ ಏಕದಿನ ಕ್ರಿಕೆಟ್ ವಿಶ್ವಕಪ್ ಟೂರ್ನಿಗೆ ಆಸ್ಟ್ರೇಲಿಯಾ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.