ಆಸ್ಪ್ರೇಲಿಯಾ-ಬಾಂಗ್ಲಾದೇಶ ಪಂದ್ಯ ಮಳೆಯಿಂದ ರದ್ದು

Published : Jun 06, 2017, 10:35 AM ISTUpdated : Apr 11, 2018, 12:42 PM IST
ಆಸ್ಪ್ರೇಲಿಯಾ-ಬಾಂಗ್ಲಾದೇಶ ಪಂದ್ಯ ಮಳೆಯಿಂದ ರದ್ದು

ಸಾರಾಂಶ

ಈ ಪಂದ್ಯ ಡ್ರಾ ಆದ ಹಿನ್ನೆಲೆಯಲ್ಲಿ ಎರಡೂ ತಂಡಗಳಿಗೆ ತಲಾ 1 ಅಂಕ ಲಭಿಸಿದ್ದು, ಇತ್ತಂಡಗಳಿಗೆ ಸೆಮಿಫೈನಲ್‌ ಹಾದಿ ಕಠಿಣವಾಗಿದೆ. ‘ಎ' ಗುಂಪಿನಲ್ಲಿರುವ ಆಸ್ಪ್ರೇಲಿಯಾದ ಎರಡೂ ಪಂದ್ಯ ಮಳೆಗೆ ಆಹುತಿಯಾಗಿದ್ದು, ಅದು 2 ಅಂಕ ಗಳಿಸಿದೆ.

ಲಂಡನ್: ಚಾಂಪಿಯನ್ಸ್‌ ಟ್ರೋಫಿಯಲ್ಲಿನ 5ನೇ ಪಂದ್ಯವಾದ ಆಸ್ಪ್ರೇಲಿಯಾ ಮತ್ತು ಬಾಂಗ್ಲಾದೇಶ ನಡುವಣ ಪಂದ್ಯ ಮಳೆಯಿಂದಾಗಿ ರದ್ದಾಗಿದೆ. ಈ ಪಂದ್ಯಾವಳಿಯ ಮೊದಲ ಹೊನಲು- ಬೆಳಕಿನ ಪಂದ್ಯ ಇದಾಗಿದ್ದು ಭಾರತೀಯ ಕಾಲಮಾನ ಸಂಜೆ 6 ರಿಂದ ಪಂದ್ಯ ಆರಂಭವಾಗಿತ್ತು. ಪಂದ್ಯದ ಆರಂಭದಿಂದಲೂ ಆಟಕ್ಕೆ ಮಳೆ ಅಡ್ಡಿಪಡಿಸಿತ್ತು. ಬಾಂಗ್ಲಾದ 183 ರನ್‌'ಗಳ ಗುರಿಯನ್ನು ಬೆನ್ನತ್ತಿದ ಆಸ್ಪ್ರೇಲಿಯಾ ತಂಡ 16 ಓವರ್‌ಗಳಲ್ಲಿ 1 ವಿಕೆಟ್‌ಗೆ 83 ರನ್‌ ಗಳಿಸಿದ್ದಾಗ ಮಳೆ ಸುರಿದು ಪಂದ್ಯ ಸ್ಥಗಿತಗೊಂಡಿತು. ಬಳಿಕ ಪದೇ ಪದೇ ಮಳೆ ಸುರಿದು ತಡರಾತ್ರಿ 2 ಗಂಟೆಗೆ ಪಂದ್ಯವನ್ನು ರದ್ದುಗೊಳಿಸಲಾಯಿತು.

ಬಾಂಗ್ಲಾ ಕಳಪೆ ಬ್ಯಾಟಿಂಗ್‌: ಇದಕ್ಕೂ ಮುನ್ನದ ಓವಲ್‌ ಮೈದಾನದಲ್ಲಿ ಮಳೆಯ ಆತಂಕದ ನಡುವೆಯೂ ಟಾಸ್‌ ಗೆದ್ದು ಬ್ಯಾಟಿಂಗ್‌ ಆಯ್ಕೆ ಮಾಡಿಕೊಂಡ ಬಾಂಗ್ಲಾದೇಶ ಕಳಪೆ ಆರಂಭ ಪಡೆಯಿತು. ಸೌಮ್ಯ ಸರ್ಕಾರ್‌ 3, ಇಮ್ರುಲ್‌ ಕಯಾಸ್‌ 6 ಹಾಗೂ ಮುಷ್ಫಿಕರ್‌ ರಹೀಮ್‌ ಕೇವಲ 9 ರನ್‌ಗೆ ಔಟಾದರು. ತಮೀಮ್‌ 114 ಎಸೆತಗಳಲ್ಲಿ 6 ಬೌಂಡರಿ, 3 ಸಿಕ್ಸರ್‌ ಸಿಡಿಸಿ 95 ರನ್‌ ಗಳಿಸಿದರು. 

3 ಬಾರಿ 95ಕ್ಕೆ ಔಟ್‌:
ತಮೀಮ್‌ ಇಕ್ಬಾಲ್‌ ಶತಕದ ಸಂಭ್ರಮವನ್ನು ಕೇವಲ 5 ರನ್‌ಗಳಿಂದ ತಪ್ಪಿಸಿಕೊಳ್ಳುವ ಮೂಲಕ ಮತ್ತೊಮ್ಮೆ ನಿರಾಸೆ ಅನುಭವಿಸಿದರು. ಏಕದಿನ ಕ್ರಿಕೆಟ್‌'ನಲ್ಲಿ 95 ರನ್‌ಗೆ ತಮೀಮ್‌ ವಿಕೆಟ್‌ ಕಳೆದುಕೊಂಡಿದ್ದು ಇದು ಮೂರನೇ ಬಾರಿ. 90ರ ಆಸುಪಾಸಿನಲ್ಲಿ ತಮೀಮ್‌ ಇನ್ಯಾವ ಮೊತ್ತಕ್ಕೂ ವಿಕೆಟ್‌ ಕಳೆದುಕೊಂಡ ಉದಾಹರಣೆಯೇ ಇಲ್ಲ. ಕಳೆದ ಆರು ಇನ್ನಿಂಗ್ಸ್‌ಗಳಲ್ಲಿ 4 ಬಾರಿ ತಮೀಮ್‌ 50ಕ್ಕಿಂತ ಹೆಚ್ಚು ರನ್‌ ಕಲೆಹಾಕುವ ಮೂಲಕ ಸ್ಥಿರ ಪ್ರದರ್ಶನ ಮುಂದುವರಿಸಿದ್ದು ವಿಶೇಷ.

ಈ ಪಂದ್ಯ ಡ್ರಾ ಆದ ಹಿನ್ನೆಲೆಯಲ್ಲಿ ಎರಡೂ ತಂಡಗಳಿಗೆ ತಲಾ 1 ಅಂಕ ಲಭಿಸಿದ್ದು, ಇತ್ತಂಡಗಳಿಗೆ ಸೆಮಿಫೈನಲ್‌ ಹಾದಿ ಕಠಿಣವಾಗಿದೆ. ‘ಎ' ಗುಂಪಿನಲ್ಲಿರುವ ಆಸ್ಪ್ರೇಲಿಯಾದ ಎರಡೂ ಪಂದ್ಯ ಮಳೆಗೆ ಆಹುತಿಯಾಗಿದ್ದು, ಅದು 2 ಅಂಕ ಗಳಿಸಿದೆ.

ಇನ್ನು, ಆಸೀಸ್‌ ಮುಂದಿನ ಹಂತಕ್ಕೇರಬೇಕಾದರೆ, ಇಂಗ್ಲೆಂಡ್‌ ವಿರುದ್ಧದ ಪಂದ್ಯದಲ್ಲಿ ಗೆಲ್ಲಲೇಬೇಕಾದ ಒತ್ತಡದಲ್ಲಿರಲಿದೆ. ಅತ್ತ ಬಾಂಗ್ಲಾದೇಶ 2 ಪಂದ್ಯಗಳಲ್ಲಿ ಒಂದನ್ನು ಸೋತಿದ್ದು, ಮತ್ತೊಂದು ಮಳೆಗೆ ಬಲಿಯಾಗಿದೆ. ಕಡೆಯ ಪಂದ್ಯವನ್ನು ಗೆದ್ದರಷ್ಟೇ ಅದು ಸೆಮಿಫೈನಲ್‌ ರೇಸ್‌ನಲ್ಲಿ ಉಳಿಯುವ ಕ್ಷೀಣ ಅವಕಾಶ ಹೊಂದಲಿದೆ.


ಬಾಂಗ್ಲಾದೇಶ 44.3 ಓವರ್‌ಗಳಲ್ಲಿ 182/10:
(ತಮೀಮ್‌ ಇಕ್ಬಾಲ್ 95, ಸ್ಟಾರ್ಕ್ 29ಕ್ಕೆ 4)

ಆಸ್ಪ್ರೇಲಿಯಾ 16 ಓವರ್‌ಗಳಲ್ಲಿ 83/1:
(ವಾರ್ನರ್‌ 40, ಸ್ಮಿತ್‌ 22, ರುಬೆಲ್‌ 21ಕ್ಕೆ 1)

epaper.kannadaprabha.in

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

20 ಮ್ಯಾಚ್ ಬಳಿಕ ಕೊನೆಗೂ ಟಾಸ್ ಗೆದ್ದ ಭಾರತ! ದಕ್ಷಿಣ ಆಫ್ರಿಕಾ ತಂಡದಲ್ಲಿ 2 ಬದಲಾವಣೆ!
ಭಾರತ ಎದುರಿನ 3ನೇ ಏಕದಿನ ಪಂದ್ಯಕ್ಕೂ ಮುನ್ನ ದಕ್ಷಿಣ ಆಫ್ರಿಕಾಗೆ ಬಿಗ್ ಶಾಕ್! 2 ಸ್ಟಾರ್ ಆಟಗಾರರು ಔಟ್!