
ಹಾಂಗ್‌ಝೋ(ಅ.07): ಕೋಟ್ಯಂತರ ಕ್ರೀಡಾಭಿಮಾನಿಗಳ ಪ್ರಾರ್ಥನೆ, ಹಾರೈಕೆ ಈಡೇರಿದೆ. ಈ ಬಾರಿ ಏಷ್ಯನ್ ಗೇಮ್ಸ್‌ನಲ್ಲಿ ಭಾರತ ಪದಕಗಳ ಸೆಂಚುರಿ ಬಾರಿಸಿ ಸಂಭ್ರಮಿಸಿದೆ. ಶುಕ್ರವಾರ ಒಂದೇ ದಿನ ಭಾರತ 1 ಚಿನ್ನ, 2 ಬೆಳ್ಳಿ ಸೇರಿದಂತೆ ಒಟ್ಟು 9 ಪದಕಗಳನ್ನು ಖಾತೆಗೆ ಸೇರ್ಪಡೆಗೊಳಿಸಿತು. ಹೀಗಾಗಿ ಪದಕ ಸಂಖ್ಯೆ 95ಕ್ಕೆ ಏರಿಕೆಯಾಗಿದೆ. ಇನ್ನೂ ಕನಿಷ್ಠ 6 ಪದಕಗಳು ಭಾರತಕ್ಕೆ ಖಚಿತವಾಗಿದ್ದು, ಶನಿವಾರ ಭಾರತದ ಪದಕ ಸಂಖ್ಯೆ ಅಧಿಕೃತವಾಗಿ 100ರ ಗಡಿ ದಾಟಲಿದೆ. ಈಗಾಗಲೇ ಚೀನಾ, ಜಪಾನ್, ದಕ್ಷಿಣ ಕೊರಿಯಾ ಈ ಬಾರಿ 100 ಪದಕಗಳ ಸಾಧನೆ ಮಾಡಿವೆ.
ಶುಕ್ರವಾರ ಭಾರತ ಹಾಕಿಯಲ್ಲಿ ಐತಿಹಾಸಿಕ ಚಿನ್ನದ ಸಾಧನೆ ಮಾಡಿದರೆ, ಆರ್ಚರಿಯಲ್ಲಿ ಬೆಳ್ಳಿ ಜೊತೆ ಕಂಚಿನ ಪದಕವನ್ನೂ ತನ್ನದಾಗಿಸಿಕೊಂಡಿತು. ಕುಸ್ತಿಪಟುಗಳು ಚಿನ್ನದ ನಿರೀಕ್ಷೆ ಹುಸಿಗೊಳಿಸಿದರೂ 3 ಕಂಚಿನ ಪದಕಗಳನ್ನು ಗೆದ್ದರು. ಇನ್ನು, ಸೆಪಕ್‌ಟಕ್ರಾ(ಕಿಕ್ ವಾಲಿಬಾಲ್) ಹಾಗೂ ಇಸ್ಪೀಟ್ ಎಲೆಗಳನ್ನು ಬಳಸಿ ಆಡುವ ಬ್ರಿಡ್ಜ್ ಕ್ರೀಡೆಯಲ್ಲೂ ಪದಕ ಒಲಿಯಿತು. ಸದ್ಯ ಭಾರತ 22 ಚಿನ್ನ, 34 ಬೆಳ್ಳಿ ಹಾಗೂ 39 ಕಂಚಿನೊಂದಿಗೆ ಪಟ್ಟಿಯಲ್ಲಿ 4ನೇ ಸ್ಥಾನ ಕಾಯ್ದುಕೊಂಡಿದೆ.
Asian Games 2023: ಜೈ ಹೋ ಇಂಡಿಯಾ, ಚಿನ್ನ ಗೆದ್ದ ಭಾರತಕ್ಕೆ ಪ್ಯಾರಿಸ್ ಒಲಿಂಪಿಕ್ಸ್ ಟಿಕೆಟ್ ಕನ್ಫರ್ಮ್
ಇನ್ನುಳಿದಂತೆ ಕ್ರಿಕೆಟ್‌ನಲ್ಲಿ ಫೈನಲ್‌ಗೇರಿರುವ ತಂಡ ಚಿನ್ನ ಗೆಲ್ಲುವ ಸಾಧ್ಯತೆ ಹೆಚ್ಚು. ಕಬಡ್ಡಿಯಲ್ಲಿ ಪುರುಷ, ಮಹಿಳಾ ತಂಡಗಳೂ ಚಿನ್ನದ ಮೇಲೆ ಕಣ್ಣಿಟ್ಟಿವೆ. ಆರ್ಚರಿಯಲ್ಲೂ 3 ಪದಕ ಭಾರತಕ್ಕೆ ಖಚಿತವಾಗಿದೆ. ಮತ್ತೊಂದೆಡೆ ಚೆಸ್‌ನ ಪುರುಷ, ಮಹಿಳಾ ತಂಡ ವಿಭಾಗಗಳಲ್ಲಿ ಭಾರತ ಪದಕ ಗೆಲ್ಲುವ ಸನಿಹದಲ್ಲಿದೆ. ಶನಿವಾರ ಕಣದಲ್ಲಿರುವ ನಾಲ್ವರು ಕುಸ್ತಿಪಟುಗಳಿಂದಲೂ ಹಲವು ಪದಕ ನಿರೀಕ್ಷೆಯಿದೆ.
ಏಷ್ಯನ್ ಹಾಕಿಗೆ ಭಾರತ ಕಿಂಗ್!
ಪುರುಷರ ಹಾಕಿಯಲ್ಲಿ ಟೂರ್ನಿಯುದ್ದಕ್ಕೂ ಅಬ್ಬರಿಸಿದ್ದ ಭಾರತ ಏಷ್ಯಾಡ್ ಇತಿಹಾಸದಲ್ಲೇ 4ನೇ ಬಾರಿ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಶುಕ್ರವಾರ ಫೈನಲ್‌ನಲ್ಲಿ ಹಾಲಿ ಚಾಂಪಿಯನ್ ಜಪಾನ್ ವಿರುದ್ಧ ಹರ್ಮನ್‌ಪ್ರೀತ್ ಪಡೆ 5-1 ಗೋಲಿನಿಂದ ಗೆಲುವು ಸಾಧಿಸಿತು. ಇದರೊಂದಿಗೆ 2024ರ ಪ್ಯಾರಿಸ್ ಒಲಿಂಪಿಕ್ಸ್‌ಗೆ ನೇರ ಅರ್ಹತೆ ಗಿಟ್ಟಿಸಿಕೊಂಡಿತು.
ಕೂಟದಲ್ಲಿ ತಾನೆದುರಿಸಿದ್ದ ಎಲ್ಲಾ ತಂಡಗಳನ್ನೂ ಚೆಂಡಾಡಿ, ಅಧಿಕಾರಯುತವಾಗಿಯೇ ಫೈನಲ್‌ಗೇರಿದ್ದ ಭಾರತ, ಕಳೆದ ಆವೃತ್ತಿಯ ಚಾಂಪಿಯನ್ ಜಪಾನ್ ವಿರುದ್ಧವೂ ಪ್ರಾಬಲ್ಯ ಸಾಧಿಸಿತು. 25ನೇ ನಿಮಿಷದಲ್ಲಿ ಮನ್‌ಪ್ರೀತ್ ಸಿಂಗ್ ಗೋಲಿನ ಖಾತೆ ತೆರೆದ ಬಳಿಕ ಭಾರತ ಹಿಂದಿರುಗಿ ನೋಡಲಿಲ್ಲ. ಹರ್ಮನ್‌ಪ್ರೀತ್(32 ಮತ್ತು 59ನೇ ನಿಮಿಷ), ಅಮಿತ್ ರೋಹಿದಾಸ್(36ನೇ ನಿ.), ಅಭಿಷೇಕ್(48ನೇ ನಿ.) ಗೋಲು ದಾಖಲಿಸಿ ದೊಡ್ಡ ಗೆಲುವಿಗೆ ಕಾರಣರಾದರು.
Asian Games 2023: ಟಾರ್ಗೆಟ್ 100ರತ್ತ ಭಾರತ ದಾಪುಗಾಲು..!
9 ವರ್ಷ ಬಳಿಕ ಚಿನ್ನ
ಭಾರತ ಈ ಮೊದಲು ಮೂರು ಬಾರಿ ಏಷ್ಯಾಡ್‌ನಲ್ಲಿ ಪ್ರಶಸ್ತಿ ಗೆದ್ದಿತ್ತು. 1966ರಲ್ಲಿ ಚೊಚ್ಚಲ ಚಾಂಪಿಯನ್ ಆಗಿದ್ದ ಭಾರತ ಬಳಿಕ 1988ರಲ್ಲೂ ಪ್ರಶಸ್ತಿ ಗೆದ್ದಿತ್ತು. ಆ ನಂತರ 2014ರಲ್ಲಿ ಕೊನೆಯ ಬಾರಿಗೆ ಚಿನ್ನ ಜಯಿಸಿತ್ತು. ಕಳೆದ ಆವೃತ್ತಿಯಲ್ಲಿ ಕಂಚಿಗೆ ತೃಪ್ತಿಪಟ್ಟಿದ್ದ ಭಾರತ 9 ವರ್ಷಗಳ ಬಳಿಕ ಮತ್ತೆ ಚಿನ್ನ. ಭಾರತ ಈವರೆಗೆ 9 ಬಾರಿ ರನ್ನರ್-ಅಪ್ ಆಗಿದೆ.
ಹಾಕಿ ಇಂಡಿಯಾದಿಂದ ತಲಾ ₹5 ಲಕ್ಷ
9 ವರ್ಷಗಳ ಬಳಿಕ ಏಷ್ಯನ್ ಗೇಮ್ಸ್‌ನಲ್ಲಿ ಚಿನ್ನದ ಪದಕ ಸಾಧನೆ ಮಾಡಿದ ಭಾರತ ಪುರುಷ ತಂಡದ ಆಟಗಾರರಿಗೆ ಹಾಕಿ ಇಂಡಿಯಾ ನಗದು ಬಹುಮಾನ ಘೋಷಿಸಿದೆ. ಪ್ರತಿ ಆಟಗಾರರಿಗೆ ತಲಾ 5 ಲಕ್ಷ ರು. ಹಾಗೂ ಸಹಾಯಕ ಸಿಬ್ಬಂದಿಗೆ ತಲಾ 2.5 ಲಕ್ಷ ರು. ನೀಡುವುದಾಗಿ ಮಾಹಿತಿ ನೀಡಿದೆ.
ಇಂದು ಭಾರತದ ಅಭಿಯಾನ ಅಂತ್ಯ
ಹಾಂಗ್‌ಝೋ ಏಷ್ಯನ್ ಗೇಮ್ಸ್‌ಗೆ ಭಾನುವಾರ ಅಧಿಕೃತವಾಗಿ ತೆರೆ ಬೀಳಲಿದೆಯಾದರೂ, ಭಾರತೀಯರ ಸ್ಪರ್ಧೆ ಶನಿವಾರವೇ ಮುಕ್ತಾಯಗೊಳ್ಳಲಿದೆ. ಭಾನುವಾರ ಆರ್ಟಿಸ್ಟಿಕ್ ಸ್ವಿಮ್ಮಿಂಗ್ ಹಾಗೂ ಕರಾಟೆ ಸ್ಪರ್ಧೆಗಳು ಮಾತ್ರ ನಿಗದಿಯಾಗಿದ್ದು, ಈ ಎರಡರಲ್ಲೂ ಭಾರತೀಯರಿಲ್ಲ. ಭಾರತದ ಪದಕ ಬೇಟೆ ಶನಿವಾರ ಅಂತ್ಯಗೊಳ್ಳಲಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.