ಭಾರತದ ಪಾಲಿಗೆ ಅವಿಸ್ಮರಣೀಯ ಏಷ್ಯಾಡ್..! ಸಾರ್ವಕಾಲಿಕ ಶ್ರೇಷ್ಠ ಪ್ರದರ್ಶನ

By Naveen KodaseFirst Published Oct 9, 2023, 11:28 AM IST
Highlights

ಭಾರತೀಯರು ಈ ಸಲ ಚಿನ್ನದ ಗಳಿಕೆಯಲ್ಲಿ ಹಿಂದೆ ಬೀಳಿಲಿಲ್ಲ. ನಿರೀಕ್ಷೆ ಇಟ್ಟಿದ್ದ ಸ್ಪರ್ಧೆಗಳ ಜೊತೆಗೆ ಇನ್ನಿತರ ಕೆಲ ಸ್ಪರ್ಧೆಗಳಲ್ಲೂ ಮೊದಲ ಬಾರಿ ಚಿನ್ನದ ಸಾಧನೆ ಮಾಡಿತು. ಪುರುಷರ ಡಬಲ್ಸ್‌ನಲ್ಲಿ ಸಾತ್ವಿಕ್‌-ಚಿರಾಗ್‌ ಏಷ್ಯಾಡ್‌ನಲ್ಲೇ ಭಾರತಕ್ಕೆ ಬ್ಯಾಡ್ಮಿಂಟನ್‌ನ ಮೊದಲ ಚಿನ್ನ ತಂದುಕೊಟ್ಟರು. ಕ್ರಿಕೆಟ್‌ನಲ್ಲಿ ಪುರುಷ, ಮಹಿಳಾ ತಂಡಗಳೂ ಚೊಚ್ಚಲ ಚಾಂಪಿಯನ್‌ ಎನಿಸಿಕೊಂಡಿತು.

ಹಾಂಗ್‌ಝೋ(ಅ.09): 19ನೇ ಆವೃತ್ತಿ ಏಷ್ಯಾಡ್‌ ಭಾರತದ ಪಾಲಿಗೆ ಅವಿಸ್ಮರಣೀಯ. ನಿರೀಕ್ಷೆಯಂತೆಯೇ ಭಾರತ ಪದಕ ಗಳಿಕೆಯಲ್ಲಿ ಸಾರ್ವಕಾಲಿಕ ಶ್ರೇಷ್ಠ ಸಾಧನೆ ಮಾಡಿದ್ದು, 28 ಚಿನ್ನ ಸೇರಿ 107 ಪದಕಗಳೊಂದಿಗೆ ತವರಿಗೆ ಹಿಂದಿರುಗಿದೆ. ಭಾರತೀಯ ಅಥ್ಲೀಟ್‌ಗಳು ಈ ಬಾರಿ ಕೆಲ ವಿಭಾಗಗಳಲ್ಲಿ ಅನಿರೀಕ್ಷಿತ ಸಾಧನೆ ಮಾಡಿದರೆ, ಕೆಲ ಸ್ಪರ್ಧೆಗಳಲ್ಲಿ ಚೊಚ್ಚಲ ಪದಕ ತಂದುಕೊಟ್ಟಿದ್ದಾರೆ. ಕೆಲ ಕ್ರೀಡೆಗಳಲ್ಲಿ ಸಾರ್ವಕಾಲಿಕ ಶ್ರೇಷ್ಠ ಪ್ರದರ್ಶನವನ್ನೂ ದಾಖಲಿಸಿದೆ. ಹಲವು ಸ್ಪರ್ಧಿಗಳು ಭಾರತದ ಕೆಲ ದಶಕಗಳ ಪದಕ ಬರವನ್ನೂ ನೀಗಿಸಿದರು.

ಹಲವು ‘ಮೊದಲ ಚಿನ್ನ’

ಭಾರತೀಯರು ಈ ಸಲ ಚಿನ್ನದ ಗಳಿಕೆಯಲ್ಲಿ ಹಿಂದೆ ಬೀಳಿಲಿಲ್ಲ. ನಿರೀಕ್ಷೆ ಇಟ್ಟಿದ್ದ ಸ್ಪರ್ಧೆಗಳ ಜೊತೆಗೆ ಇನ್ನಿತರ ಕೆಲ ಸ್ಪರ್ಧೆಗಳಲ್ಲೂ ಮೊದಲ ಬಾರಿ ಚಿನ್ನದ ಸಾಧನೆ ಮಾಡಿತು. ಪುರುಷರ ಡಬಲ್ಸ್‌ನಲ್ಲಿ ಸಾತ್ವಿಕ್‌-ಚಿರಾಗ್‌ ಏಷ್ಯಾಡ್‌ನಲ್ಲೇ ಭಾರತಕ್ಕೆ ಬ್ಯಾಡ್ಮಿಂಟನ್‌ನ ಮೊದಲ ಚಿನ್ನ ತಂದುಕೊಟ್ಟರು. ಕ್ರಿಕೆಟ್‌ನಲ್ಲಿ ಪುರುಷ, ಮಹಿಳಾ ತಂಡಗಳೂ ಚೊಚ್ಚಲ ಚಾಂಪಿಯನ್‌ ಎನಿಸಿಕೊಂಡಿತು.

Asian Games 2023: ವಿಶ್ವ ನಂ.1 ಜೋಡಿ ಸಾತ್ವಿಕ್‌-ಚಿರಾಗ್‌ಗೆ ಐತಿಹಾಸಿಕ ಚಿನ್ನ!

ಅಥ್ಲೆಟಿಕ್ಸ್‌ನ ಪುರುಷರ 3000 ಮೀ. ಸ್ಟೀಪಲ್‌ಚೇಸ್‌ನಲ್ಲಿ ಅವಿನಾಶ್‌ ಸಾಬ್ಳೆ, ಮಹಿಳೆಯರ 5000 ಮೀಟರ್‌ನಲ್ಲಿ ಪಾರುಲ್‌, ಮಹಿಳೆಯರ ಜಾವೆಲಿನ್‌ನಲ್ಲಿ ಅನ್ನು ರಾಣಿ ಚಿನ್ನ ಗೆದ್ದು, ಈ ಸಾಧನೆ ಮಾಡಿದ ಮೊದಲಿಗರು ಎನಿಸಿಕೊಂಡರು. ಇನ್ನು, ಮಹಿಳೆಯರ ಗಾಲ್ಫ್‌, ಸೆಪಕ್‌ಟಕ್ರಾನಲ್ಲೂ ದೇಶಕ್ಕೆ ಮೊದಲ ಪದಕ ಲಭಿಸಿತು.

ಶೂಟಿಂಗ್‌, ಆರ್ಚರಿಯಲ್ಲಿ ಸಾರ್ವಕಾಲಿಕ ದಾಖಲೆ!

ಭಾರತೀಯರು ಈ ಬಾರಿ ಕೆಲ ಸ್ಪರ್ಧೆಗಳಲ್ಲಿ ಅಭೂತಪೂರ್ವ ಪ್ರದರ್ಶನ ತೋರಿ ಸಾರ್ವಕಾಲಿಕ ಶ್ರೇಷ್ಠ ಪದಕ ದಾಖಲೆ ಮಾಡಿದ್ದಾರೆ. ಶೂಟಿಂಗ್‌ನಲ್ಲಿ 7 ಚಿನ್ನ ಸೇರಿ 22 ಪದಕ ಗೆದ್ದಿದ್ದು ಈ ವರೆಗಿನ ಕೂಟಗಳಲ್ಲೇ ಹೆಚ್ಚು. ಇನ್ನು ಆರ್ಚರಿಯಲ್ಲಿ 9 ಪದಕ ಭಾರತದ ಖಾತೆ ಸೇರಿತು. ಇದು ಕೂಟ ಸಾರ್ವಕಾಲಿಕ ಶ್ರೇಷ್ಠ ಗಳಿಕೆ. ಇನ್ನು ಸ್ಕ್ಯಾಶ್‌ನಲ್ಲಿ 2 ಚಿನ್ನ ಸೇರಿ 5 ಪದಕ ಗೆದ್ದಿದ್ದೂ ದಾಖಲೆ ಎನಿಸಿತು. ಅಥ್ಲೆಟಿಕ್ಸ್‌ನಲ್ಲಿ ಗೆದ್ದ 29 ಪದಕ ಕಳೆದ 70 ವರ್ಷದಲ್ಲೇ ಕೂಟವೊಂದರ ಶ್ರೇಷ್ಠ ಸಾಧನೆ.

Asian Games 2023: ಕಬಡ್ಡಿಯಲ್ಲಿ ಭಾರತೀಯರ ಸ್ವರ್ಣ ಸಾಧನೆ.! ರಣರಂಗವಾದ ಕಬಡ್ಡಿ ಅಂಕಣ! ನಿಯಮದಲ್ಲಿ ಏನಿದೆ?

ಕಬಡ್ಡಿ, ಹಾಕಿಯಲ್ಲಿ ಪರಾಕ್ರಮ

ಕಳೆದ ಏಷ್ಯಾಡ್‌ನಲ್ಲಿ ನೀಡಿದ್ದ ನೀರಸ ಪ್ರದರ್ಶನದ ಕಹಿ ಅನುಭವವನ್ನು ಈ ಬಾರಿ ಭಾರತದ ಹಾಕಿ, ಕಬಡ್ಡಿ ತಂಡಗಳು ದೂರ ಮಾಡಿದವು. ಕಬಡ್ಡಿಯಲ್ಲಿ ಮತ್ತೆ ಪರಾಕ್ರಮ ಮೆರೆದ ಪುರುಷ, ಮಹಿಳಾ ತಂಡಗಳು ಕ್ರಮವಾಗಿ 8 ಮತ್ತು 3ನೇ ಬಾರಿ ಚಾಂಪಿಯನ್‌ ಆದವು. 2018ರಲ್ಲಿ ಈ ಎರಡೂ ವಿಭಾಗಗಳಲ್ಲಿ ಭಾರತಕ್ಕೆ ಚಿನ್ನ ಕೈತಪ್ಪಿತ್ತು. ಹಾಕಿಯಲ್ಲಿ ಕಳೆದ ಬಾರಿ ಕಂಚಿಗೆ ತೃಪ್ತಿಪಟ್ಟಿದ್ದ ಪುರುಷರ ತಂಡ ಈ ಬಾರಿ ಚಿನ್ನ ಗೆದ್ದಿತು.

ಕುಸ್ತಿ, ಬಾಕ್ಸಿಂಗ್‌ನಲ್ಲಿ ಸಿಗದ ಯಶಸ್ಸು, ಈಜಿನಲ್ಲಿ ಪದಕವಿಲ್ಲ

ಭಾರತ ಈ ಬಾರಿಯೂ ಕೆಲ ಸ್ಪರ್ಧೆಗಳಲ್ಲಿ ನಿರೀಕ್ಷೆ ಹುಸಿಗೊಳಿಸಿತು. ಹಲವು ಪದಕ ಗೆಲ್ಲುವ ಭರವಸೆ ಹುಟ್ಟಿಸಿದ್ದ ಬಾಕ್ಸಿಂಗ್‌ ಹಾಗೂ ಕುಸ್ತಿಪಟುಗಳು ಚಿನ್ನದ ಪದಕವಿಲ್ಲದೇ ತವರಿಗೆ ಮರಳಿದರು. ಕುಸ್ತಿಯಲ್ಲಿ 1 ಬೆಳ್ಳಿ, 5 ಕಂಚು, ಬಾಕ್ಸಿಂಗ್‌ನಲ್ಲಿ 1 ಬೆಳ್ಳಿ, 4 ಕಂಚು ಲಭಿಸಿತು. ಹಲವು ರಾಷ್ಟ್ರೀಯ ದಾಖಲೆಗಳನ್ನು ಬರೆದ ಭಾರತದ ಈಜುಪಟುಗಳು ಪದಕ ಗೆಲ್ಲುವಲ್ಲಿ ವಿಫಲರಾದರು. ವೇಟ್‌ಲಿಫ್ಟರ್‌ಗಳೂ ಬರಿಗೈಯಲ್ಲಿ ವಾಪಸಾದರು.
 

click me!