Asian Games 2023: ಈಕ್ವೆಸ್ಟ್ರಿಯನ್‌ ಚಿನ್ನ ಗೆದ್ದು ಭಾರತ ಇತಿಹಾಸ!

By Kannadaprabha News  |  First Published Sep 27, 2023, 10:06 AM IST

ಅನುಷ್‌ ಅಗರ್‌ವಾಲಾ (71.088 ಅಂಕ), ಹೃದಯ್‌ ವಿಪುಲ್‌ (69.941) ಹಾಗೂ ದಿವ್ಯಕೃತಿ ಸಿಂಗ್‌ (68.176) ಅವರನ್ನೊಳಗೊಂಡ ತಂಡ ಒಟ್ಟು 209.205 ಅಂಕಗಳೊಂದಿಗೆ ಅಗ್ರಸ್ಥಾನ ಪಡೆದು ಚಿನ್ನ ಸಂಪಾದಿಸಿತು. ಸುದೀಪ್ತಿ ಹಜೇಲಾ (66.706) ಕೂಡಾ ಸ್ಪರ್ಧೆಯಲ್ಲಿದ್ದರೂ ತಂಡದ ಅಗ್ರ-3 ಸ್ಪರ್ಧಿಗಳ ವೈಯಕ್ತಿಕ ಅಂಕಗಳನ್ನು ಮಾತ್ರ ತಂಡದ ಫಲಿತಾಂಶಕ್ಕೆ ಪರಿಗಣಿಸಲಾಗುತ್ತದೆ. ಇದೇ ವೇಳೆ ಚೀನಾದ ಸ್ಪರ್ಧಿಗಳು ಒಟ್ಟು 204.882 ಅಂಕಗಳನ್ನು ಪಡೆದು ಬೆಳ್ಳಿ ಗೆದ್ದರೆ, 204.852 ಅಂಕ ಗಳಿಸಿದ ಹಾಂಕಾಂಗ್‌ ಕಂಚಿನ ಪದಕಕ್ಕೆ ತೃಪ್ತಿಪಟ್ಟಿತು.


ಹಾಂಗ್‌ಝೋ(ಸೆ.27): 1982ರ ನವದೆಹಲಿ ಗೇಮ್ಸ್‌ನಲ್ಲಿ ಮೊದಲ ಬಾರಿ ಈಕ್ವೆಸ್ಟ್ರಿಯನ್‌(ಕುದುರೆ ಸವಾರಿ) ಸ್ಪರ್ಧೆಯನ್ನು ಪರಿಚಯಿಸಲಾಗಿತ್ತು. ಆ ಕ್ರೀಡಾಕೂಟದಲ್ಲಿ 3 ಚಿನ್ನದ ಪದಕಕ್ಕೆ ಕೊರಳೊಡ್ಡಿದ್ದ ಭಾರತ, ಬಳಿಕ ಮತ್ತೊಂದು ಚಿನ್ನಕ್ಕಾಗಿ ಬರೋಬ್ಬರಿ 41 ವರ್ಷ ಕಾಯಬೇಕಾಯಿತು. ಈ ಬಾರಿ ಹಾಂಗ್‌ಝೋ ಏಷ್ಯನ್‌ ಗೇಮ್ಸ್‌ನಲ್ಲಿ ಭಾರತ ಈಕ್ವೆಸ್ಟ್ರಿಯನ್‌ನ ಡ್ರೆಸ್ಸೇಜ್‌ ತಂಡ ವಿಭಾಗದಲ್ಲಿ ಸ್ವರ್ಣ ಸಾಧನೆ ಮಾಡಿದ್ದು, 4 ದಶಕಗಳ ಚಿನ್ನದ ಪದಕದ ಬರ ನೀಗಿಸಿದೆ.

ಮಂಗಳವಾರ ಅನುಷ್‌ ಅಗರ್‌ವಾಲಾ (71.088 ಅಂಕ), ಹೃದಯ್‌ ವಿಪುಲ್‌ (69.941) ಹಾಗೂ ದಿವ್ಯಕೃತಿ ಸಿಂಗ್‌ (68.176) ಅವರನ್ನೊಳಗೊಂಡ ತಂಡ ಒಟ್ಟು 209.205 ಅಂಕಗಳೊಂದಿಗೆ ಅಗ್ರಸ್ಥಾನ ಪಡೆದು ಚಿನ್ನ ಸಂಪಾದಿಸಿತು. ಸುದೀಪ್ತಿ ಹಜೇಲಾ (66.706) ಕೂಡಾ ಸ್ಪರ್ಧೆಯಲ್ಲಿದ್ದರೂ ತಂಡದ ಅಗ್ರ-3 ಸ್ಪರ್ಧಿಗಳ ವೈಯಕ್ತಿಕ ಅಂಕಗಳನ್ನು ಮಾತ್ರ ತಂಡದ ಫಲಿತಾಂಶಕ್ಕೆ ಪರಿಗಣಿಸಲಾಗುತ್ತದೆ. ಇದೇ ವೇಳೆ ಚೀನಾದ ಸ್ಪರ್ಧಿಗಳು ಒಟ್ಟು 204.882 ಅಂಕಗಳನ್ನು ಪಡೆದು ಬೆಳ್ಳಿ ಗೆದ್ದರೆ, 204.852 ಅಂಕ ಗಳಿಸಿದ ಹಾಂಕಾಂಗ್‌ ಕಂಚಿನ ಪದಕಕ್ಕೆ ತೃಪ್ತಿಪಟ್ಟಿತು.

Latest Videos

undefined

'ಕ್ರಿಕೆಟ್ ದೇವತೆ' ಸ್ಮೃತಿ ಮಂಧನಾ ನೋಡಲು ಬೀಜಿಂಗ್‌ನಿಂದ ಹಾಂಗ್ಝೂಗೆ ಬಂದ ಚೀನಿ ಅಭಿಮಾನಿ..!

4ನೇ ಚಿನ್ನದ ಪದಕ: ಇದು ಏಷ್ಯಾಡ್‌ ಇತಿಹಾಸದಲ್ಲಿ ಈಕ್ವೆಸ್ಟ್ರಿಯನ್‌ನಲ್ಲಿ ಭಾರತಕ್ಕೆ ಲಭಿಸಿದ 4 ಚಿನ್ನದ ಪದಕ. ಈ ಮೊದಲು ಎಲ್ಲಾ 3 ಚಿನ್ನದ ಪದಕ 1982ರಲ್ಲಿ ಸಿಕ್ಕಿತ್ತು. ವೈಯಕ್ತಿಕ ಇವೆಂಟಿಂಗ್‌ನಲ್ಲಿ ರಘುವೀರ್‌ ಸಿಂಗ್‌ ಚಿನ್ನ ಗೆದ್ದಿದ್ದರು. ಬಳಿಕ ರಘುವೀರ್‌, ಗುಲಾಂ ಮುಹಮ್ಮದ್‌ ಖಾನ್‌, ಬಿಶಾಲ್‌ ಸಿಂಗ್‌, ಮಿಲ್ಖಾ ಸಿಂಗ್‌ ಅವರಿದ್ದ ತಂಡಕ್ಕೂ ಬಂಗಾರ ಲಭಿಸಿತ್ತು. ಅದೇ ಕ್ರೀಡಾಕೂಟದ ವೈಯಕ್ತಿಕ ಟೆಂಟ್‌ ಪೆಗ್ಗಿಂಗ್‌ ವಿಭಾಗದಲ್ಲಿ ರೂಪಿಂದರ್‌ ಸಿಂಗ್‌ ಬ್ರಾರ್‌ ಚಿನ್ನ ಸಂಪಾದಿಸಿದ್ದರು. ಇನ್ನು, 1986ರಲ್ಲಿ ಡ್ರೆಸ್ಸೇಜ್‌ ವಿಭಾಗದಲ್ಲಿ ಭಾರತ ಕೊನೆ ಬಾರಿ ಕಂಚಿನ ಪದಕ ಗೆದ್ದಿತ್ತು.

ಈಜಿನಲ್ಲಿ 2 ದಾಖಲೆ: ಆದರೂ ಪದಕವಿಲ್ಲ!

ಈಜು ಸ್ಪರ್ಧೆಯ 4*100 ಮೀ. ಮೆಡ್ಲೆ ವಿಭಾಗದಲ್ಲಿ ಭಾರತದ ಪುರುಷರ ತಂಡ ಮಂಗಳವಾರ ಎರಡೆರಡು ಬಾರಿ ರಾಷ್ಟ್ರೀಯ ದಾಖಲೆ ಬರೆದರೂ ಪದಕ ಗೆಲ್ಲಲು ಸಾಧ್ಯವಾಗಲಿಲ್ಲ. ಶ್ರೀಹರಿ ನಟರಾಜ್‌, ಲಿಖಿತ್‌ ಸೆಲ್ವರಾಜ್‌, ಸಾಜನ್‌ ಪ್ರಕಾಶ್‌, ತನಿಷ್‌ ಜಾರ್ಜ್‌ ಅವರನ್ನೊಳಗೊಂಡ ತಂಡ ಹೀಟ್ಸ್‌ನಲ್ಲಿ 3 ನಿಮಿಷ 40.84 ಸೆಕೆಂಡ್‌ಗಳಲ್ಲಿ ಕ್ರಮಿಸಿದರೆ, ಫೈನಲ್‌ನಲ್ಲಿ 3 ನಿಮಿಷ 40.20 ಸೆಕೆಂಡ್‌ಗಳಲ್ಲಿ ಗುರಿ ತಲುಪಿತು. ಇದರೊಂದಿಗೆ 3:44.94 ನಿಮಿಷಗಳ ರಾಷ್ಟ್ರೀಯ ದಾಖಲೆ ಮುರಿದರೂ, ಫೈನಲ್‌ನಲ್ಲಿ 5ನೇ ಸ್ಥಾನಕ್ಕೆ ತೃಪ್ತಿಪಟ್ಟಿತು. ಇನ್ನು, ಮಹಿಳೆಯರ 100 ಮೀ. ಫ್ರೀಸ್ಟೈಲ್‌ನಲ್ಲಿ ಶಿವಾಂಗಿ ಶರ್ಮಾ 17ನೇ, 200 ಮೀ. ಬ್ಯಾಕ್‌ಸ್ಟ್ರೋಕ್‌ನಲ್ಲಿ ಪಾಲಕ್‌ ಜೋಶಿ 14ನೇ, 1500 ಮೀ. ಫ್ರೀಸ್ಟೈಲ್‌ನಲ್ಲಿ ಆರ್ಯನ್‌ ನೆಹ್ರಾ 7, ಕುಶಾಗ್ರ ರಾವತ್‌ 8ನೇ ಸ್ಥಾನ ಪಡೆದರು.

Asian Games 2023: ರೋಯಿಂಗ್‌ನಲ್ಲಿ ಮತ್ತೆರಡು ಕಂಚು

ಹಾಕಿ: 16-1 ಗೋಲಿನಿಂದ ಗೆದ್ದ ಭಾರತದ ಪುರುಷರು

ಹಾಕಿಯಲ್ಲಿ ತನ್ನ ಪಾರುಪತ್ಯ ಮುಂದುವರಿಸಿದ ಭಾರತ ಪುರುಷರ ತಂಡ ಸತತ 2ನೇ ಪಂದ್ಯದಲ್ಲೂ 15+ ಗೋಲುಗಳ ಅಂತರದ ಗೆಲುವು ಸಾಧಿಸಿದೆ. ಮಂಗಳವಾರ ಹರ್ಮನ್‌ಪ್ರೀತ್‌ ಸಿಂಗ್‌ ನೇತೃತ್ವದ ಭಾರತ, ವಿಶ್ವ ನಂ.49 ಸಿಂಗಾಪೂರ ವಿರುದ್ಧ 16-1 ಗೋಲಿನಿದ ಜಯಗಳಿಸಿತು. ಹರ್ಮನ್‌ 4, ಮಂದೀಪ್‌ 3, ಅಭಿಷೇಕ್‌, ವರುಣ್‌ ಕುಮಾರ್‌ ತಲಾ 2, ಲಲಿತ್‌, ಗುರ್ಜಂತ್‌, ವಿವೇಕ್‌ ಸಾಗರ್‌, ಮನ್‌ಪ್ರೀತ್‌ ಸಿಂಗ್‌, ಶಂಶೇರ್‌ ಸಿಂಗ್‌ ತಲಾ 1 ಗೋಲು ಬಾರಿಸಿದರು. ಭಾನುವಾರ ‘ಎ’ ಗುಂಪಿನ ಮೊದಲ ಪಂದ್ಯದಲ್ಲಿ ಭಾರತ ತಂಡ ಉಜ್ಬೇಕಿಸ್ತಾನ ವಿರುದ್ಧ 16-0 ಅಂತರದಲ್ಲಿ ಗೆದ್ದಿತ್ತು. ಗುರುವಾರ ತನ್ನ 3ನೇ ಪಂದ್ಯದಲ್ಲಿ ಹಾಲಿ ಚಾಂಪಿಯನ್‌ ಜಪಾನ್‌ ವಿರುದ್ಧ ಸೆಣಸಲಿದೆ.
 

click me!