Asian Games 2023: ಹಾಂಗ್ಝೋ ಏಷ್ಯಾಡ್‌ಗೆ ವೈಭವದ ತೆರೆ..!

By Kannadaprabha NewsFirst Published Oct 9, 2023, 12:51 PM IST
Highlights

ಅದ್ಧೂರಿ ಉದ್ಘಾಟನಾ ಸಮಾರಂಭದೊಂದಿಗೆ ಆರಂಭಗೊಂಡಿದ್ದ ಕ್ರೀಡಾಕೂಟಕ್ಕೆ ಆಯೋಜಕರು ಅಷ್ಟೇ ಆಕರ್ಷಕ ಸಮಾರೋಪ ಸಮಾರಂಭವನ್ನು ಆಯೋಜಿಸಿದ್ದರು. ಲೇಸರ್ ಶೋ, ಆಗಸದಲ್ಲಿ ಚಿತ್ತಾರ ಮೂಡಿಸಿದ ಸಿಡಿ ಮದ್ದುಗಳನ್ನು ಕಂಡು ಮೂಕವಿಸ್ಮಿತರಾದ ಪ್ರೇಕ್ಷಕರು, ನೃತ್ಯ, ಸಂಗೀತದ ಸುಧೆಯಲ್ಲಿ ಮುಳುಗೆದ್ದರು. ಕ್ರೀಡಾಕೂಟದ ಕೆಲ ರೋಚಕ ಕ್ಷಣಗಳನ್ನು ದೊಡ್ಡ ಪರದೆಯ ಮೇಲೆ ಪ್ರದರ್ಶಿಸಿ, ಆ ಕ್ಷಣಗಳನ್ನು ಮೆಲುಕು ಹಾಕಲಾಯಿತು.

ಹಾಂಗ್ಝೋ(ಅ.09): ಕಳೆದ ಎರಡು ವಾರಗಳ ಕಾಲ ನಡೆದ 19ನೇ ಆವೃತ್ತಿಯ ಏಷ್ಯನ್ ಗೇಮ್ಸ್‌ಗೆ ವೈಭವದ ತೆರೆ ಬಿದ್ದಿದೆ. 45 ರಾಷ್ಟ್ರಗಳ ಕ್ರೀಡಾಪಟುಗಳ ನಡುವೆ ಪದಕಗಳಿಗಾಗಿ ಭಾರಿ ಪೈಪೋಟಿಗೆ ಸಾಕ್ಷಿಯಾದ ಈ ಕ್ರೀಡಾಕೂಟವು ಸ್ನೇಹ, ವಿಶ್ವಾಸವನ್ನು ಮುಂದುವರೆಸುವ, ಕ್ರೀಡಾ ಸ್ಪೂರ್ತಿಯನ್ನು ಎತ್ತಿಹಿಡಿಯುವ ಶಪಥದೊಂದಿಗೆ ಮುಕ್ತಾಯವಾಯಿತು.   

ಅದ್ಧೂರಿ ಉದ್ಘಾಟನಾ ಸಮಾರಂಭದೊಂದಿಗೆ ಆರಂಭಗೊಂಡಿದ್ದ ಕ್ರೀಡಾಕೂಟಕ್ಕೆ ಆಯೋಜಕರು ಅಷ್ಟೇ ಆಕರ್ಷಕ ಸಮಾರೋಪ ಸಮಾರಂಭವನ್ನು ಆಯೋಜಿಸಿದ್ದರು. ಲೇಸರ್ ಶೋ, ಆಗಸದಲ್ಲಿ ಚಿತ್ತಾರ ಮೂಡಿಸಿದ ಸಿಡಿ ಮದ್ದುಗಳನ್ನು ಕಂಡು ಮೂಕವಿಸ್ಮಿತರಾದ ಪ್ರೇಕ್ಷಕರು, ನೃತ್ಯ, ಸಂಗೀತದ ಸುಧೆಯಲ್ಲಿ ಮುಳುಗೆದ್ದರು. ಕ್ರೀಡಾಕೂಟದ ಕೆಲ ರೋಚಕ ಕ್ಷಣಗಳನ್ನು ದೊಡ್ಡ ಪರದೆಯ ಮೇಲೆ ಪ್ರದರ್ಶಿಸಿ, ಆ ಕ್ಷಣಗಳನ್ನು ಮೆಲುಕು ಹಾಕಲಾಯಿತು.

Latest Videos

ಶ್ರೀಜೇಶ್ ಭಾರತದ ಧ್ವಜಧಾರಿ:

ಸಮಾರೋಪ ಸಮಾರಂಭದಲ್ಲಿ ಪಥಸಂಚಲನ ನಡೆಯಿತು. ಎಲ್ಲಾ 45 ರಾಷ್ಟ್ರಗಳ ಕ್ರೀಡಾಪಟುಗಳು, ಸಿಬ್ಬಂದಿ ಪಾಲ್ಗೊಂಡರು. ಭಾರತದ ಅಂದಾಜು 100 ಕ್ರೀಡಾಪಟುಗಳು, ಸಿಬ್ಬಂದಿ ಪಥಸಂಚಲನದಲ್ಲಿ ಪಾಲ್ಗೊಂಡರು. ಹಾಕಿ ತಂಡದ ಗೋಲ್ ಕೀಪರ್ ಪಿ.ಆರ್. ಶ್ರೀಜೇಶ್ ಭಾರತದ ಧ್ವಜಧಾರಿಯಾಗಿದ್ದರು,

ಭಾರತದ ಪಾಲಿಗೆ ಅವಿಸ್ಮರಣೀಯ ಏಷ್ಯಾಡ್..! ಸಾರ್ವಕಾಲಿಕ ಶ್ರೇಷ್ಠ ಪ್ರದರ್ಶನ

ಜಪಾನ್‌ನಲ್ಲಿ 2026ರ ಏಷ್ಯನ್ ಗೇಮ್ಸ್:

ಏಷ್ಯಾ ಒಲಿಂಪಿಕ್ ಸಮಿತಿ(ಒಸಿಎ)ಯ ಹಂಗಾಮಿ ಅಧ್ಯಕ್ಷ ರಣ್‌ಧೀರ್ ಸಿಂಗ್ ಕ್ರೀಡಾಕೂಟವು ಅಧಿಕೃತವಾಗಿ ಮುಕ್ತಾಯಗೊಂಡಿದೆ ಎಂದು ಘೋಷಿಸಿ, ಕ್ರೀಡಾಕೂಟದ ಧ್ವಜ ಹಾಗೂ ಕ್ರೀಡಾ ಜ್ಯೋತಿಯನ್ನು 2026ರ ಗೇಮ್ಸ್‌ಗೆ ಆತಿಥ್ಯ ವಹಿಸುವ ಜಪಾನ್‌ಗೆ ಹಸ್ತಾಂತರಿಸಿದರು.

ಈ ವೇಳೆ ಮಾತನಾಡಿದ ರಣ್‌ಧೀರ, 'ಏಷ್ಯಾದ ಯುವಕರು ಏಷ್ಯನ್ ಗೇಮ್ಸ್‌ ಅನ್ನು ಭ್ರಾತೃತ್ವದ ಭಾವನೆಯೊಂದಿಗೆ ಸಂಭ್ರಮಿಸಲಿ ಎಂದು ಆಶಿಸುತ್ತೇನೆ' ಎಂದರು. ಜಪಾನ್‌ನ ಐಚಿ ಹಾಗೂ ನಗೊಯಾದಲ್ಲಿ 20ನೇ ಆವೃತ್ತಿಯ ಏಷ್ಯಾಡ್‌ ನಡೆಯಲಿದೆ. 

ಚೀನಾಕ್ಕೆ ಸರಿಸಾಟಿಯೇ ಇಲ್ಲ!

ಹಾಂಗ್ಝೋ: ಏಷ್ಯಾಡ್‌ನ ಮೊದಲ 6 ಕ್ರೀಡಾಕೂಟಗಳಲ್ಲಿ ಪಾಲ್ಗೊಳ್ಳದಿದ್ದರೂ ಒಟ್ಟಾರೆ ಪದಕ ಗಳಿಕೆಯಲ್ಲಿ ಇತರೆಲ್ಲಾ ದೇಶಗಳನ್ನು ಹಿಂದಿಕ್ಕಿರುವ ಚೀನಾ ಈ ಬಾರಿ ಮತ್ತೆ ಅಧಿಪತ್ಯ ಸಾಧಿಸಿದೆ. ತನಗೆ ಸರಿಸಾಟಿ ಯಾರೂ ಇಲ್ಲ ಎಂಬಂತೆ ಈ ಬಾರಿಯೂ ಪದಕ ಕೊಳ್ಳೆ ಹೊಡೆದ ಆತೀಥೇಯ ಚೀನಾ, ಬರೋಬ್ಬರಿ 383 ಪದಕಗಳೊಂದಿಗೆ ಅಭಿಯಾನ ಕೊನೆಗೊಳಿಸಿದೆ.

ಇದರಲ್ಲಿ 201 ಪದಕ ಚಿನ್ನವೇ ಇದ್ದು, 111 ಬೆಳ್ಳಿ, 71 ಕಂಚಿನ ಪದಕಗಳನ್ನೂ ಗೆದ್ದಿದೆ. ಚೀನಾದ 2ನೇ ಶ್ರೇಷ್ಠ ಪ್ರದರ್ಶನವಿದು. 2010ರ ಗುವಾಂಗ್‌ಝೋ ಏಷ್ಯಾಡ್‌ನಲ್ಲಿ ಚೀನಾ 199 ಚಿನ್ನ ಸೇರಿ 415 ಪದಕ ಗೆದ್ದಿತ್ತು. ಈ ವರ್ಷ ಮೊದಲ ಬಾರಿಗೆ 200 ಚಿನ್ನದ ಪದಕಗಳ ಮೈಲಿಗಲ್ಲನ್ನು ಚೀನಾ ಸಾಧಿಸಿತು.

ಏಷ್ಯಾಡ್‌ನಲ್ಲಿ ಭಾರತ ಐತಿಹಾಸಿಕ ಶತಕಪದಕೋತ್ಸವ..!

ಇನ್ನು ಜಪಾನ್‌ 52 ಚಿನ್ನ ಸೇರಿ 188 ಪದಕ ಗೆದ್ದು 2ನೇ ಸ್ಥಾನಿಯಾದರೆ, ಜಪಾನ್‌ಗೆ ಭಾರೀ ಪೈಪೋಟಿ ನೀಡಿದ ದಕ್ಷಿಣ ಕೊರಿಯಾ 42 ಚಿನ್ನ ಸೇರಿ 190 ಪದಕ ತನ್ನದಾಗಿಸಿಕೊಂಡಿತು. ಅಗ್ರ-3ರ ಮೇಲೆ ಕಣ್ಣಿಟ್ಟಿದ್ದ ಭಾರತಕ್ಕೆ ಗುರಿ ಸಾಧಿಸಲಾಗದಿದ್ದರೂ 107 ಪದಕಗಳೊಂದಿಗೆ 4ನೇ ಸ್ಥಾನಿಯಾಯಿತು. ಉಜ್ಬೇಕಿಸ್ತಾನ 22 ಚಿನ್ನ ಸೇರಿ 71 ಪದಕ ಗೆದ್ದು 5ನೇ ಸ್ಥಾನಿಯಾಯಿತು.

ಭಾರತದ ನೆರೆ ಹೊರೆ ರಾಷ್ಟ್ರಗಳ ಸಾಧನೆ ಏನು?

ಏಷ್ಯಾಡ್‌ನಲ್ಲಿ ಭಾರತ 100 ಪದಕಗಳ ಮೈಲಿಗಲ್ಲು ತಲುಪಿದರೂ, ನೆರೆಹೊರೆಯ ರಾಷ್ಟ್ರಗಳಾದ ಪಾಕಿಸ್ತಾನ, ಶ್ರೀಲಂಕಾ, ನೇಪಾಳ, ಬಾಂಗ್ಲಾದೇಶದಿಂದ ದೊಡ್ಡ ಮಟ್ಟದ ಪ್ರದರ್ಶನವೇನೂ ಮೂಡಿಬರಲಿಲ್ಲ. ಚೀನಾ ಮಾತ್ರ ಎಂದಿನಂತೆ ಪದಕ ಬೇಟೆಯಲ್ಲಿ ಮುಂಚೂಣಿಯಲ್ಲೇ ಉಳಿಯಿತು. 2ನೇ ಸ್ಥಾನ ಪಡೆಯುವ ದೇಶ ಗೆಲ್ಲುವ ಒಟ್ಟು ಪದಕಕ್ಕಿಂತ ಹೆಚ್ಚು ಚಿನ್ನ ಗೆಲ್ಲಬೇಕು ಎನ್ನುವ ಚೀನಾದ ಕನಸು ಈಡೇರಿತು.

ಶ್ರೀಲಂಕಾ 1 ಚಿನ್ನ, ತಲಾ 2 ಬೆಳ್ಳಿ, ಕಂಚು ಜಯಿಸಿದರೆ, ಮ್ಯಾನ್ಮಾರ್‌ 1 ಚಿನ್ನ, 2 ಕಂಚು ಪಡೆಯಿತು. ಅಫ್ಘಾನಿಸ್ತಾನ 1 ಬೆಳ್ಳಿ, 4 ಕಂಚು, ಪಾಕಿಸ್ತಾನ 1 ಬೆಳ್ಳಿ, 2 ಕಂಚು, ನೇಪಾಳ ತಲಾ 1 ಬೆಳ್ಳಿ, ಕಂಚು, ಬಾಂಗ್ಲಾದೇಶ 2 ಕಂಚು ಪಡೆಯಿತು. ಮಾಲ್ಡೀವ್ಸ್‌ ಹಾಗೂ ಭೂತಾನ್‌ ಪದಕ ಖಾತೆಯನ್ನೇ ತೆರೆಯಲಿಲ್ಲ. ಏಷ್ಯಾಡ್‌ನಲ್ಲಿ ಚೊಚ್ಚಲ ಪದಕ ಗೆಲ್ಲುವ ಮಾಲ್ಡೀವ್ಸ್‌ ಹಾಗೂ ಭೂತಾನ್‌ನ ಕನಸು ಈ ಸಲವೂ ನನಸಾಗಲಿಲ್ಲ.
 

click me!