ಏಷ್ಯಾಕಪ್ ಗೆದ್ದರೂ ಬಗೆಹರಿಯದ ಟೀಂ ಇಂಡಿಯಾದ ಈ ಸಮಸ್ಯೆ

By Web DeskFirst Published Oct 1, 2018, 10:01 AM IST
Highlights

ಮಧ್ಯಮ ಕ್ರಮಾಂಕದ ಸಮಸ್ಯೆಗೆ ಏಷ್ಯಾಕಪ್‌ನಲ್ಲಿ ಉತ್ತರ ಸಿಗಲಿದೆ ಎನ್ನುವ ವಿಶ್ವಾಸ ಭಾರತ ತಂಡದ್ದಾಗಿತ್ತು. ಆದರೆ ಉತ್ತರ ಮಾತ್ರ ಸಿಗಲಿಲ್ಲ. ಕೊಹ್ಲಿ ಇಲ್ಲದ ಮಧ್ಯಮ ಕ್ರಮಾಂಕ ಎಷ್ಟು ದುರ್ಬಲವಾಗಿದೆ ಎನ್ನುವುದು ಈ ಟೂರ್ನಿಯಲ್ಲಿ ಕಾಣಿಸಿತು. ಅಂಬಟಿ ರಾಯುಡುಗೆ 3ನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡಲು ಅವಕಾಶ ನೀಡಲಾಯಿತು. ಆದರೆ ರಾಯುಡು ಒಂದೆರಡು ಪಂದ್ಯಗಳಲ್ಲಿ ರನ್ ಗಳಿಸಿದರೂ, ತಮ್ಮ ಮೇಲೆ ವಿಶ್ವಕಪ್‌ವರೆಗೂ ವಿಶ್ವಾಸವಿಡಬಹುದು ಎನ್ನುವ ಆಟ ಅವರಿಂದ ಮೂಡಿಬರಲಿಲ್ಲ.

ನವದೆಹಲಿ[ಅ.01]: 2019ರ ಐಸಿಸಿ ಏಕದಿನ ವಿಶ್ವಕಪ್‌ಗೆ ಇನ್ನು ಕೇವಲ 8 ತಿಂಗಳು ಮಾತ್ರ ಉಳಿದಿದೆ. 8 ತಿಂಗಳು ಇವತ್ತಿನ ಮಟ್ಟಿಗೆ ಇನ್ನೂ ದೂರದ ಮಾತು ಎನಿಸಬಹುದು. ಆದರೆ ಭಾರತ ತಂಡ ಎದುರಿಸುತ್ತಿರುವ ಸಮಸ್ಯೆಯನ್ನು ನೋಡಿದಾಗ, ಸಮಯದ ಕೊರತೆ ಎದ್ದು ಕಾಣುತ್ತಿದೆ. ಮೊನ್ನೆ ಮೊನ್ನೆಯಷ್ಟೇ ಮುಕ್ತಾಯಗೊಂಡ ಏಷ್ಯಾಕಪ್ ಫೈನಲ್‌ನಲ್ಲಿ ಬಾಂಗ್ಲಾದೇಶ ವಿರುದ್ಧ ಕೊನೆ ಎಸೆತದಲ್ಲಿ ಗೆದ್ದು, ದಾಖಲೆಯ 7ನೇ ಬಾರಿಗೆ ಭಾರತ ಚಾಂಪಿಯನ್ ಆಗಿರಬಹುದು. ಆದರೆ ಈ ಪಂದ್ಯ ತಂಡಕ್ಕೆ ಎಚ್ಚರಿಕೆ ಕರೆಗಂಟೆ ಬಾರಿಸಿದೆ.

2015ರ ಐಸಿಸಿ ಏಕದಿನ ವಿಶ್ವಕಪ್ ಬಳಿಕ ಇದೇ ಮೊದಲ ಬಾರಿ ಭಾರತ ತಂಡ, 150+ ರನ್ ಗುರಿಯನ್ನು ಅಗ್ರ 3 ಬ್ಯಾಟ್ಸ್’ಮನ್‌ಗಳಿಂದ ಏಕೈಕ ಅರ್ಧಶತಕದ ಕೊಡುಗೆ ಇಲ್ಲದೆ ಗೆದ್ದಿರುವುದು. ತಂಡದ ಮಧ್ಯಮ ಕ್ರಮಾಂಕ ಎಷ್ಟು ದುರ್ಬಲವಾಗಿದೆ ಎನ್ನುವುದಕ್ಕೆ ಇದಕ್ಕೆ ಉತ್ತಮ ಉದಾಹರಣೆ.

ಇದನ್ನು ಓದಿ: ಬಾಂಗ್ಲಾ ವಿರುದ್ಧ ರೋಚಕ ಗೆಲುವು-ಭಾರತಕ್ಕೆ 7ನೇ ಏಷ್ಯಾಕಪ್ ಕಿರೀಟ

ಸಿಗದ ಉತ್ತರ: ಮಧ್ಯಮ ಕ್ರಮಾಂಕದ ಸಮಸ್ಯೆಗೆ ಏಷ್ಯಾಕಪ್‌ನಲ್ಲಿ ಉತ್ತರ ಸಿಗಲಿದೆ ಎನ್ನುವ ವಿಶ್ವಾಸ ಭಾರತ ತಂಡದ್ದಾಗಿತ್ತು. ಆದರೆ ಉತ್ತರ ಮಾತ್ರ ಸಿಗಲಿಲ್ಲ. ಕೊಹ್ಲಿ ಇಲ್ಲದ ಮಧ್ಯಮ ಕ್ರಮಾಂಕ ಎಷ್ಟು ದುರ್ಬಲವಾಗಿದೆ ಎನ್ನುವುದು ಈ ಟೂರ್ನಿಯಲ್ಲಿ ಕಾಣಿಸಿತು. ಅಂಬಟಿ ರಾಯುಡುಗೆ 3ನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡಲು ಅವಕಾಶ ನೀಡಲಾಯಿತು. ಆದರೆ ರಾಯು
ಡು ಒಂದೆರಡು ಪಂದ್ಯಗಳಲ್ಲಿ ರನ್ ಗಳಿಸಿದರೂ, ತಮ್ಮ ಮೇಲೆ ವಿಶ್ವಕಪ್‌ವರೆಗೂ ವಿಶ್ವಾಸವಿಡಬಹುದು ಎನ್ನುವ ಆಟ ಅವರಿಂದ ಮೂಡಿಬರಲಿಲ್ಲ. ಫೈನಲ್‌ನಂತಹ ನಿರ್ಣಾಯಕ ಪಂದ್ಯದಲ್ಲಿ, ಒತ್ತಡ ನಿಭಾಯಿಸಲು ಸಾಧ್ಯವಾಗದ ರಾಯುಡು ಕೇವಲ 2 ರನ್‌ಗೆ ಔಟಾದರು. ಇನ್ನು ಟೂರ್ನಿಯಲ್ಲಿ ದಿನೇಶ್ ಕಾರ್ತಿಕ್‌ಗೆ 4 ಹಾಗೂ 5ನೇ ಕ್ರಮಾಂಕವನ್ನು ನೀಡಲಾಯಿತು. ಕಾರ್ತಿಕ್ ಆಟ ಸಹ
ನಂಬಿಕೆ ಮೂಡಿಸುವಂತದ್ದಾಗಿರಲಿಲ್ಲ. ಫೈನಲ್‌ನಲ್ಲಿ ಕಾರ್ತಿಕ್ ಕ್ರೀಸ್‌ನಲ್ಲಿ ನಿಂತರೂ ಎಸೆತಗಳನ್ನು ವ್ಯರ್ಥಗೊಳಿಸಿದರು.

ಇದನ್ನು ಓದಿ: ನನಗೆ ವಾಂತಿ ಬರುತ್ತಿದೆ ಎಂದ ರವಿಶಾಸ್ತ್ರಿ..! ಟೀಂ ಇಂಡಿಯಾ ಕೋಚ್ ಫುಲ್ ಟ್ರೋಲ್

ಧೋನಿ ಆಯ್ಕೆಗೆ ಗೊಂದಲ: ಧೋನಿ ಕೀಪಿಂಗ್‌ನಲ್ಲಿ ಚುರುಕಾಗಿರುವಷ್ಟು ಬ್ಯಾಟಿಂಗ್‌ನಲ್ಲಿಲ್ಲ. ಸ್ಪಿನ್ನರ್‌ಗಳನ್ನು ಎದುರಿಸಲು ಪರದಾಡುತ್ತಿದ್ದಾರೆ. ಪಿಚ್‌ಗೆ ಹೊಂದಿಕೊಳ್ಳಲು 4ನೇ ಕ್ರಮಾಂಕದಲ್ಲೇ ಬ್ಯಾಟ್ ಮಾಡುವ ಅವಕಾಶ ಕೊಟ್ಟರೂ, ಧೋನಿ ಅದರ ಸದುಪಯೋಗ ಪಡೆಯಲಿಲ್ಲ. ಕೆಲ ಪಂದ್ಯಗಳಲ್ಲಿ 30-40 ರನ್ ಗಳಿಸಿದರೂ, ಅವರ ಸ್ಟ್ರೈಕ್‌ರೇಟ್ ಕಳಪೆಯಾಗಿತ್ತು. ಧೋನಿಯ ಅನುಭವ ಹಾಗೂ ಕೀಪಿಂಗ್ ಕಲೆಯ ಅಗತ್ಯ ತಂಡಕ್ಕಿದೆಯಾದರೂ, ಅವರ ಬ್ಯಾಟಿಂಗ್ ಲಯ ತಂಡವನ್ನು ಸಂಕಷ್ಟಕ್ಕೆ ದೂಡುತ್ತಿದೆ. ಧೋನಿ ಇಲ್ಲದೆ ಆಡಲು ಸಾಧ್ಯವಿಲ್ಲ, ಅವರನ್ನು ತಜ್ಞ ಬ್ಯಾಟ್ಸ್‌ಮನ್ ಎಂದು ಪರಿಗಣಿಸಲು ಸಹ ಸಾಧ್ಯವಿಲ್ಲದಂತಹ ಪರಿಸ್ಥಿತಿ ಸೃಷ್ಟಿಯಾಗಿದೆ.

ಇದನ್ನು ಓದಿ: ಐಸಿಸಿ ರ‍್ಯಾಂಕಿಂಗ್‌ ಪ್ರಕಟ: ರೋಹಿತ್ ಶರ್ಮಾಗೆ ಬಡ್ತಿ!

ಜಾಧವ್‌ಗೆ ಪದೇ ಪದೇ ಗಾಯ: ಭಾರತ, ಕೇದಾರ್ ಜಾಧವ್‌ಗೆ ಫಿನಿಶರ್ ಪಾತ್ರ ನೀಡಲು ಯೋಚಿಸುತ್ತಿದೆ. ಆದರೆ ಜಾಧವ್ ಪದೇ ಪದೇ ಗಾಯಾಳುವಾಗುತ್ತಿದ್ದಾರೆ. ವಿಶ್ವಕಪ್‌ಗೆ ಜಾಧವ್‌ರನ್ನು ನೆಚ್ಚಿಕೊಳ್ಳುವುದು ಅಪಾಯ. ತಂಡದ ಆಡಳಿತ ಮತ್ತೊಂದು ಭಾರೀ ಎಡವಟ್ಟು ಮಾಡುತ್ತಿದೆ. ಮನೀಶ್ ಪಾಂಡೆ, ಕೆ.ಎಲ್.ರಾಹುಲ್‌ರಂತಹ ಆಟಗಾರರು ಸತತವಾಗಿ ಬೆಂಚ್ ಕಾಯುತ್ತಿದ್ದಾರೆ. ಏಕದಿನ ಕ್ರಿಕೆಟ್‌ಗೆ ಹೇಳಿ ಮಾಡಿಸಿದ ಶ್ರೇಯಸ್ ಅಯ್ಯರ್‌ರಂತಹವರಿಗೆ ಅವಕಾಶವೇ ಸಿಗುತ್ತಿಲ್ಲ. ನೂತನ ಪ್ರತಿಭೆಗಳನ್ನು ಹುಡುಕಿ, ವಿಶ್ವಕಪ್ ವೇಳೆಗೆ ಸಿದ್ಧಗೊಳಿಸಲು ಬಿಸಿಸಿಐ ಬಳಿ ಸಮಯವಿಲ್ಲ. ಬಹುಶಃ ಮಧ್ಯಮ ಕ್ರಮಾಂಕದ ಸಮಸ್ಯೆಗೆ ಪರಿಹಾರ ಹುಡಕದೇ ಇಂಗ್ಲೆಂಡ್‌ನಲ್ಲಿ ನಡೆಯಲಿರುವ 2019ರ ಏಕದಿನ ವಿಶ್ವಕಪ್‌ಗೆ ಭಾರತ ಪ್ರಯಾಣ ಬೆಳೆಸಿದರೆ ಅಚ್ಚರಿಯಿಲ್ಲ.

click me!