ಎವರೆಸ್ಟ್‌ನಲ್ಲಿ ಕನ್ನಡತಿ ಅಶ್ವಿನಿ ಭಟ್ 60 ಕಿ.ಮೀ. ಮ್ಯಾರಥಾನ್...!

By Kannadaprabha News  |  First Published Jun 17, 2022, 12:59 PM IST

* ಎಕ್ಸ್‌ಟ್ರೀಮ್‌ ಅಲ್ಟ್ರಾ ಮ್ಯಾರಥಾನ್‌ 60 ಕಿ.ಮೀ. ಓಟ ಪೂರ್ತಿಗೊಳಿಸಿದ ಅಶ್ವಿನ್ ಭಟ್

* ಈ ವರ್ಷ ಈ ಸ್ಪರ್ಧೆಯಲ್ಲಿ ಪಾಲ್ಗೊಂಡ ಏಕೈಕ ಮಹಿಳೆ ಅಶ್ವಿನ್ ಭಟ್

* ಸ್ಪರ್ಧೆಯಲ್ಲಿ ಒಟ್ಟು 15 ಮಂದಿ ಪಾಲ್ಗೊಂಡಿದ್ದು, ಈ ಪೈಕಿ 15 ಗಂಟೆ 40:10 ನಿಮಿಷದಲ್ಲಿ ಓಟ ಪೂರ್ತಿಗೊಳಿಸಿದ ಅಶ್ವಿನಿ


- ನಾಸಿರ್ ಸಜಿಪ, ಕನ್ನಡಪ್ರಭ

ಬೆಂಗಳೂರು(ಜೂ.17): ಒಂದು ಕಾಲದಲ್ಲಿ ಬಹುರಾಷ್ಟ್ರೀಯ ಕಂಪೆನಿಯೊಂದರಲ್ಲಿ ಕೆಲಸ ಮಾಡಿಕೊಂಡಿದ್ದ ಮಲೆನಾಡು ಮೂಲದ ಸದ್ಯ ಬೆಂಗಳೂರಿನಲ್ಲಿ ನೆಲೆಸಿರುವ ಗೃಹಿಣಿಯೊಬ್ಬರು ವಿಶ್ವದ ಅತಿ ಎತ್ತರದ ಪರ್ವತ ಎನಿಸಿಕೊಂಡಿರುವ ಮೌಂಟ್‌ ಎವರೆಸ್ಟ್‌ನ ತಪ್ಪಲಿನಲ್ಲಿ ಎಕ್ಸ್‌ಟ್ರೀಮ್‌ ಅಲ್ಟ್ರಾ ಮ್ಯಾರಥಾನ್‌ ಪೂರ್ಣಗೊಳಿಸುವ ಮೂಲಕ ಎಲ್ಲರ ಹುಬ್ಬೇರಿಸಿದ್ದಾರೆ. ಹೆಸರು ಅಶ್ವಿನಿ ಗಣಪತಿ ಭಟ್‌. 36 ವರ್ಷ. ಮೂಲತಃ ಮಲೆನಾಡಿನ ಗೃಹಿಣಿ. ಸಾಗರದ ತಾಳಗುಪ್ಪದ ಬಿ.ಕೆ.ಗಣಪತಿ ಎಂಬವರ ಪುತ್ರಿಯಾಗಿರುವ ಅಶ್ವಿನಿ ಮೇ 29ರಂದು ನಡೆದ ಎಕ್ಸ್‌ಟ್ರೀಮ್‌ ಅಲ್ಟ್ರಾ ಮ್ಯಾರಥಾನ್‌ 60 ಕಿ.ಮೀ. ಓಟ ಪೂರ್ತಿಗೊಳಿಸಿದ್ದು, ಈ ವರ್ಷ ಈ ಸ್ಪರ್ಧೆಯಲ್ಲಿ ಪಾಲ್ಗೊಂಡ ಏಕೈಕ ಮಹಿಳೆ ಎನಿಸಿಕೊಂಡಿದ್ದಾರೆ. ಸ್ಪರ್ಧೆಯಲ್ಲಿ ಒಟ್ಟು 15 ಮಂದಿ ಪಾಲ್ಗೊಂಡಿದ್ದು, ಈ ಪೈಕಿ 15 ಗಂಟೆ 40:10 ನಿಮಿಷದಲ್ಲಿ ಓಟ ಪೂರ್ತಿಗೊಳಿಸಿದ ಅಶ್ವಿನಿ 9ನೇ ಸ್ಥಾನ ಪಡೆದುಕೊಂಡಿದ್ದಾರೆ. ಅಲ್ಲದೇ ವಿಶ್ವದಲ್ಲೇ ಮಹಿಳೆಯರ ಪೈಕಿ 4ನೇ ಶ್ರೇಷ್ಠ ಸಮಯದ ದಾಖಲೆಯನ್ನು ಬರೆದಿದ್ದಾರೆ.

Tap to resize

Latest Videos

‘ಮೇ 29ಕ್ಕೆ ನೇಪಾಳದಲ್ಲಿ ನಡೆದ ಮ್ಯಾರಥಾನ್‌ನಲ್ಲಿ ಪಾಲ್ಗೊಂಡ ಏಕೈಕ ಮಹಿಳೆ ನಾನು. ಎವರೆಸ್ಟ್‌ ಬೇಸ್‌ ಕ್ಯಾಂಪ್‌ನಿಂದ ಪ್ರಾರಂಭವಾಗಿ ನಾಮ್ಚೆ ಬಜಾರ್‌ ಎಂಬಲ್ಲಿವರೆಗಿನ ಈ ಓಟಕ್ಕೆ 2 ದಿನ ಅಲ್ಲೇ ಟೆಂಟ್‌ನಲ್ಲಿ ಉಳಿಯಬೇಕಾಗಿತ್ತು. ಗೈಡ್‌ ಅಥವಾ ಪೋರ್ಟರ್‌ ಬೆಂಬಲವಿಲ್ಲದೆ ಓಟ ಪೂರ್ತಿಗೊಳಿಸಿದ್ದೇನೆ’ ಎಂದು ಅಶ್ವಿನಿ ತಮ್ಮ ಮ್ಯಾರಥಾನ್‌ ನೆನಪುಗಳನ್ನು ಕನ್ನಡಪ್ರಭದೊಂದಿಗೆ ಹಂಚಿಕೊಂಡಿದ್ದಾರೆ.

‘ಮದುವೆಯಾಗಿ ಎಂಎನ್‌ಸಿ ಕಂಪೆನಿಯಲ್ಲಿ ಒಳ್ಳೆಯ ಹುದ್ದೆಯಲ್ಲಿದ್ದ ನನಗೆ ಬೇರೇನಾದರೂ ಮಾಡಬೇಕು ಎಂಬ ಹಂಬಲ ಮೂಡಿತು. ಹೀಗಾಗಿ 9 ವರುಷದ ಐಟಿ ಬದುಕಿಗೆ ಗುಡ್‌ ಬೈ ಹೇಳಿದೆ. 2014ರಲ್ಲಿ 10 ಕಿ.ಮೀ.ಓಟದಿಂದ ಪ್ರಾರಂಭವಾದ ನನ್ನ ಅಥ್ಲೆಟಿಕ್ಸ್‌ ಜೀವನ ಬಳಿಕ ಅಲ್ಟ್ರಾ ಮ್ಯಾರಥಾನ್‌(50ಕಿ.ಮೀ. ಅಥವಾ ಮೇಲ್ಪಟ್ಟ ದೂರ) ವಿಭಾಗಕ್ಕೆ ಭಡ್ತಿ ಪಡೆದೆ. ಕಳೆದ 7.5 ವರ್ಷಗಳಲ್ಲಿ ಸುಮಾರು 100 ಓಟದ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದೇನೆ. ಜುಲೈ 2ಕ್ಕೆ ಕಂಠೀರವ ಕ್ರೀಡಾಂಗಣದಲ್ಲಿ ನಡೆಯಲಿರುವ 24 ಗಂಟೆ ಏಷ್ಯಾ ಓಷಿಯಾನಿಯಾ ಚಾಂಪಿಯನ್‌ಶಿಪ್‌ನಲ್ಲಿ ಭಾರತ ತಂಡ ಪ್ರತಿನಿಧಿಸಲಿದ್ದೇನೆ. ಕೂಟಕ್ಕೆ ಕರ್ನಾಟಕದಿಂದ ನಾನೊಬ್ಬಳೇ ಆಯ್ಕೆಯಾಗಿದ್ದು ಹೆಮ್ಮೆಯ ವಿಚಾರ’ ಎಂದು ಅಶ್ವಿನಿ ಹೇಳುತ್ತಾರೆ.

ಅಶ್ವಿನಿ ಸಾಧನೆಗಳು

2019ರಲ್ಲಿ ಲೇಹ್‌ನಲ್ಲಿ ನಡೆದ ಕಾರ್ದುಂಗ್‌ ಲಾ 72 ಕಿ.ಮೀ. ರೇಸ್‌ ಹಾಗೂ ಲಡಾಖ್‌ ಮ್ಯಾರಥಾನ್‌ನಲ್ಲಿ ಪದಕ ಗೆದ್ದಿರುವ ಅಶ್ವಿನಿ, ಅದೇ ವರ್ಷ ಮಲ್ನಾಡ್‌ ಅಲ್ಟಾ್ರ 110 ಕಿ.ಮೀ. ರೇಸ್‌ನಲ್ಲಿ ಕೂಟ ದಾಖಲೆ ಬರೆದರು. 2019ರಲ್ಲಿ ಟೈಗರ್‌ ಪಾಯಿಂಟ್‌ ಹಿಲ್‌ ಚಾಲೆಂಜ್‌ ಪ್ಲಾಟಿನಂ ಜುಬಿಲಿಯಲ್ಲಿ 72 ಕಿ.ಮೀ. ಓಟ. ಪೂರ್ತಿಗೊಳಿಸಿದ ಅವರು, 2020ರಲ್ಲಿ ನಡೆದ 12 ಗಂಟೆಗಳ ಓಟದ ಸ್ಪರ್ಧೆಯಲ್ಲಿ 112 ಕಿ.ಮೀ. ಓಡಿ ಭಾರತೀಯ ಶ್ರೇಷ್ಠ ದಾಖಲೆ ಬರೆದಿದ್ದಾರೆ.

ಅಶ್ವತ್ಥ ಎಲೆಯಲ್ಲಿ ಸಚಿನ್ ತೆಂಡುಲ್ಕರ್ ಚಿತ್ರ, ಮೆಚ್ಚುಗೆಯ ಪತ್ರ ಕಳುಹಿಸಿದ ಕ್ರಿಕೆಟ್ ದಿಗ್ಗಜ!

ಶ್ರಮಜೀವಿ ತಂದೆಯೇ ಮಾದರಿ

ಎಸೆಸೆಲ್ಸಿ ಮಾತ್ರ ಓದಿರುವ ತಂದೆ ಶ್ರಮಜೀವಿ. ಆಟೋ ರಿಕ್ಷಾ ಚಾಲನೆ, ಎಸ್ಟೇಟ್‌ ಏಜನ್ಸಿ, ಇನ್ಷುರೆನ್ಸ್‌ ಕಂಪೆನಿ ಹೀಗೆ ವಿವಿಧ ಕೆಲಸಗಳನ್ನು ಮಾಡಿ ಯಾವುದರಲ್ಲೂ ನನಗೆ ಕೊರತೆಯಾಗದಂತೆ ನೋಡಿಕೊಂಡರು. ಎಂಜಿನಿಯರ್‌ ಆಗಬೇಕೆಂಬ ಕನಸನ್ನೂ ನೆರವೇರಿಸಿದರು. ಈಗ ನಾನು ಸಾಧಿಸಿದ ಮ್ಯಾರಥಾನ್‌ಗೂ ಅವರೇ ಮಾದರಿ. ಪತಿ ಸಂದೀಪ್‌ ಸತ್ಯನಾರಾಯಣ, ಕುಟುಂಬಸ್ಥರ ಸಹಕಾರವೂ ನೆರವಾಯಿತು

- ಅಶ್ವಿನಿ ಭಟ್‌, ಮ್ಯಾರಥಾನ್‌ ಓಟಗಾರ್ತಿ

click me!