ಕೋಚ್ ಸ್ಥಾನಕ್ಕೆ ಅನಿಲ್ ಕುಂಬ್ಳೆ ರಾಜೀನಾಮೆ

By Suvarna Web DeskFirst Published Jun 20, 2017, 7:49 PM IST
Highlights

ಭಾರತದ ತಂಡದ ವಿಂಡೀಸ್ ಪ್ರವಾಸಕ್ಕೆ ಅನಿಲ್ ಕುಂಬ್ಳೆ ಹೋಗುತ್ತಿಲ್ಲ ಎಂಬ ಸುದ್ದಿ ನಿನ್ನೆಯೇ ಕೇಳಿಬಂದಿತ್ತು. ಆಗಲೇ ಟೀಮ್ ಇಂಡಿಯಾದಲ್ಲಿ ಎಲ್ಲವೂ ಸರಿ ಇಲ್ಲ ಎಂಬ ಅನುಮಾನ ಗಟ್ಟಿಗೊಂಡಿತ್ತು.

ನವದೆಹಲಿ(ಜೂನ್ 20): ಮಾಜಿ ಕ್ರಿಕೆಟಿಗ ಅನಿಲ್ ಕುಂಬ್ಳೆ ಟೀಮ್ ಇಂಡಿಯಾದ ಕೋಚ್ ಸ್ಥಾನದಿಂದ ಹಿಂದೆ ಸರಿಯುತ್ತಿದ್ದಾರೆ. ರಾಜೀನಾಮೆ ನೀಡಲು ಕುಂಬ್ಳೆ ನಿರ್ಧರಿಸಿದ್ದಾರೆ. ವಿರಾಟ್ ಕೊಹ್ಲಿ ಸೇರಿದಂತೆ ತಂಡದ ಕೆಲ ಆಟಗಾರರಿಂದ ತಮ್ಮ ಬಗ್ಗೆ ಅಸಮಾಧಾನಗಳು ವ್ಯಕ್ತವಾಗುತ್ತಿದ್ದ ಹಿನ್ನೆಲೆಯಲ್ಲಿ ಅನಿಲ್ ಕುಂಬ್ಳೆ ಕೋಚ್ ಸ್ಥಾನಕ್ಕೆ ರಾಜೀನಾಮೆ ನೀಡಲು ನಿರ್ಧರಿಸಿದ್ದಾರೆನ್ನಲಾಗಿದೆ.

ಅನಿಲ್ ಕುಂಬ್ಳೆ ಅವರ ಕೋಚ್ ಅವಧಿ ಮುಕ್ತಾಯವಾಗಿತ್ತಾದರೂ ವೆಸ್ಟ್ ಇಂಡೀಸ್ ವಿರುದ್ಧದ ಕ್ರಿಕೆಟ್ ಸರಣಿವರೆಗೂ ಅವರನ್ನು ಕೋಚ್ ಸ್ಥಾನದಲ್ಲಿ ಮುಂದುವರಿಸಲು ಬಿಸಿಸಿಐ ನಿರ್ಧರಿಸಿತ್ತು. ಆದರೆ, ಭಾರತದ ತಂಡದ ವಿಂಡೀಸ್ ಪ್ರವಾಸಕ್ಕೆ ಅನಿಲ್ ಕುಂಬ್ಳೆ ಹೋಗುತ್ತಿಲ್ಲ ಎಂಬ ಸುದ್ದಿ ನಿನ್ನೆಯೇ ಕೇಳಿಬಂದಿತ್ತು. ಆಗಲೇ ಟೀಮ್ ಇಂಡಿಯಾದಲ್ಲಿ ಎಲ್ಲವೂ ಸರಿ ಇಲ್ಲ ಎಂಬ ಅನುಮಾನ ಗಟ್ಟಿಗೊಂಡಿತ್ತು. ಐಸಿಸಿಯ ವಾರ್ಷಿಕ ಸಭೆಯಲ್ಲಿ ಭಾಗವಹಿಸುವ ಸಲುವಾಗಿ ಕುಂಬ್ಳೆ ಕೆರಿಬಿಯನ್ ಪ್ರವಾಸಕ್ಕೆ ಹೋಗಿಲ್ಲ ಎಂಬ ಅಧಿಕೃತ ಕಾರಣವನ್ನು ನೀಡಲಾಗಿದೆ. ಅನಿಲ್ ಕುಂಬ್ಳೆ ಅವರು ಕ್ರಿಕೆಟ್ ಸಮಿತಿಯ ಅಧ್ಯಕ್ಷರಾಗಿರುವುದರಿಂದ ವಾರ್ಷಿಕ ಸಭೆಯಲ್ಲಿ ಅವರು ಭಾಗವಹಿಸುವುದು ಮುಖ್ಯ ಎಂದು ಹೇಳಲಾಗಿದೆ.

ಅನಿಲ್ ಕುಂಬ್ಳೆ ಮತ್ತು ನಾಯಕ ವಿರಾಟ್ ಕೊಹ್ಲಿ ಮಧ್ಯೆ ಸಂಬಂಧ ಕೆಟ್ಟಿರುವುದು ಈಗ್ಗೆ ಕೆಲವಾರು ದಿನಗಳಿಂದ ಮಾತು ಕೇಳಿಬರುತ್ತಿತ್ತು. ನಿನ್ನೆ ಕೂಡ ಕೊಹ್ಲಿ ತಮ್ಮ ತಂಡದ ಕೋಚ್ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದು ಮಾಧ್ಯಮಗಳಲ್ಲಿ ದೊಡ್ಡ ಸುದ್ದಿಯಾಗಿ ಪ್ರಕಟವಾಗಿದೆ. ಕೊಹ್ಲಿ ಜೊತೆಗೆ ತಂಡದ ಇನ್ನೂ ಕೆಲವರು ಕುಂಬ್ಳೆಯವರ ವಿಚಾರದಲ್ಲಿ ಬೇಸರಗೊಂಡಿದ್ದಾರೆನ್ನಲಾಗಿದೆ. ಕುಂಬ್ಳೆ ಮತ್ತು ತಂಡದ ಆಟಗಾರರ ನಡುವೆ ಭಿನ್ನಾಭಿಪ್ರಾಯ ಹೋಗಲಾಡಿಸಲು ಸಚಿನ್, ಲಕ್ಷ್ಮಣ್ ಮೊದಲಾದವರು ಪ್ರಯತ್ನಿಸಿಯೂ ನೋಡಿದ್ದರು. ಆದರೆ ಯಾವುದೂ ಪ್ರಯೋಜನವಾದಂತಿಲ್ಲ.

click me!