ವಿರಾಟ್ ಕೊಹ್ಲಿ, ರೋಹಿತ್ ಶರ್ಮಾಗಿಲ್ಲ ಸ್ಥಾನ; ರಹಾನೆ ಘೋಷಿಸಿದ ಟಾಪ್-5 ಬ್ಯಾಟರ್‌ಗಳ ಪಟ್ಟಿ ಇಲ್ಲಿದೆ!

Published : Oct 16, 2026, 07:41 PM IST
ajinkya rahane team Virat and Rohit

ಸಾರಾಂಶ

ಭಾರತದ ಮಾಜಿ ಕ್ರಿಕೆಟಿಗ ಅಜಿಂಕ್ಯ ರಹಾನೆ ವಿಶ್ವದ ಟಾಪ್ 5 ಟಿ20 ಬ್ಯಾಟರ್‌ಗಳನ್ನು ಆಯ್ಕೆ ಮಾಡಿದ್ದು, ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾಗೆ ಸ್ಥಾನ ನೀಡಿಲ್ಲ. ಬದಲಾಗಿ ಭಾರತದ ಕೇವಲ ಒಬ್ಬ ಯುವ ಆಟಗಾರ ಸೇರಿದಂತೆ ವಿಶ್ವದ ಬೇರೆ ಬೇರೆ ದೇಶಗಳ ಐವರು ಸ್ಫೋಟಕ ಬ್ಯಾಟರ್‌ಗಳನ್ನು ಈ ಪಟ್ಟಿಯಲ್ಲಿ ಹೆಸರಿಸಿದ್ದಾರೆ.

ಭಾರತ ಕ್ರಿಕೆಟ್ ತಂಡದ ಮಾಜಿ ಆಟಗಾರ ಅಜಿಂಕ್ಯ ರಹಾನೆ ವಿಶ್ವ ಕ್ರಿಕೆಟ್‌ನ ಸಾರ್ವಕಾಲಿಕ ಶ್ರೇಷ್ಠ ಟಾಪ್ 5 ಟಿ20 ಬ್ಯಾಟರ್‌ಗಳನ್ನು ಆಯ್ಕೆ ಮಾಡಿದ್ದಾರೆ. ಅಚ್ಚರಿ ಎಂದರೆ, ಈ ಪಟ್ಟಿಯಲ್ಲಿ ದಿಗ್ಗಜರಾದ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾಗೆ ಜಾಗ ಸಿಕ್ಕಿಲ್ಲ. ಭಾರತದ ಕೇವಲ ಒಬ್ಬ ಯುವ ಆಟಗಾರನಿಗೆ ಮಾತ್ರ ರಹಾನೆ ಮಣೆ ಹಾಕಿದ್ದಾರೆ.

ರಹಾನೆ ಬಿಡುಗಡೆ ಮಾಡಿರುವ ಟಾಪ್-5 ಟಿ20 ಬ್ಯಾಟರ್‌ಗಳ ಪಟ್ಟಿಯಲ್ಲಿ ಯುವ ಓಪನರ್ ಅಭಿಷೇಕ್ ಶರ್ಮಾ ಮೊದಲ ಸ್ಥಾನದಲ್ಲಿದ್ದಾರೆ. ಟಿ20 ಮಾದರಿಯಲ್ಲಿ ಅತಿ ವೇಗವಾಗಿ 1000 ರನ್ ಪೂರೈಸಿದ ಹಾಗೂ 2026ರ ಟಿ20 ವಿಶ್ವಕಪ್ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ ಕೀರ್ತಿ ಇವರದ್ದು. ಕ್ರಿಕ್‌ಬಜ್‌ಗೆ ನೀಡಿದ ವಿಶೇಷ ಸಂದರ್ಶನದಲ್ಲಿ ರಹಾನೆ, ಅಭಿಷೇಕ್ ಆಟವನ್ನು ಹಾಡಿ ಹೊಗಳಿದ್ದಾರೆ. 'ಕಳೆದ ಒಂದೆರಡು ವರ್ಷಗಳಲ್ಲಿ ಅಭಿಷೇಕ್ ತೋರಿದ ಸ್ಥಿರತೆ, ಆಕ್ರಮಣಕಾರಿ ಶೈಲಿ ಮತ್ತು ಪ್ರಬುದ್ಧತೆ ನಿಜಕ್ಕೂ ಅದ್ಭುತ' ಎಂದು ರಹಾನೆ ಹೇಳಿದ್ದಾರೆ.

ಹೆನ್ರಿಕ್ ಕ್ಲಾಸೆನ್‌ಗೆ 2ನೇ ಸ್ಥಾನ

ದಕ್ಷಿಣ ಆಫ್ರಿಕಾದ ಹೆನ್ರಿಕ್ ಕ್ಲಾಸೆನ್ ಈ ಪಟ್ಟಿಯಲ್ಲಿ ಎರಡನೇ ಸ್ಥಾನ ಪಡೆದಿದ್ದಾರೆ. ಕಳೆದ ಕೆಲವು ಸೀಸನ್‌ಗಳಲ್ಲಿ ಕ್ಲಾಸೆನ್ ತಮ್ಮ ಬ್ಯಾಟಿಂಗ್ ಶೈಲಿಯನ್ನು ಬೆಳೆಸಿಕೊಂಡ ರೀತಿ ಹಾಗೂ ಕಠಿಣ ಪರಿಸ್ಥಿತಿಗಳಲ್ಲಿ ತಂಡವನ್ನು ಗೆಲುವಿನ ದಡ ಸೇರಿಸಿದ ಪರಿಯನ್ನು ರಹಾನೆ ಕೊಂಡಾಡಿದ್ದಾರೆ. ಕಳೆದ ಐಪಿಎಲ್ ಸೀಸನ್‌ನಲ್ಲಿ ಸನ್‌ರೈಸರ್ಸ್ ಹೈದರಾಬಾದ್ ಪರ 4ನೇ ಕ್ರಮಾಂಕ ಅಥವಾ ಅದಕ್ಕಿಂತ ಕೆಳಗೆ ಬ್ಯಾಟ್ ಮಾಡಿ 600ಕ್ಕೂ ಹೆಚ್ಚು ರನ್ ಗಳಿಸಿದ ಅಪರೂಪದ ದಾಖಲೆಯನ್ನೂ ಕ್ಲಾಸೆನ್ ಹೊಂದಿದ್ದಾರೆ.

ಅಪಾಯಕಾರಿ ಆಟಗಾರ ಬಟ್ಲರ್‌ಗೂ ಸ್ಥಾನ

ವೆಸ್ಟ್ ಇಂಡೀಸ್‌ನ ಎಡಗೈ ಸ್ಫೋಟಕ ಬ್ಯಾಟರ್ ನಿಕೋಲಸ್ ಪೂರನ್ ಮೂರನೇ ಸ್ಥಾನದಲ್ಲಿದ್ದಾರೆ. ಸ್ಪಿನ್ನರ್‌ಗಳು ಮತ್ತು ಫಾಸ್ಟ್ ಬೌಲರ್‌ಗಳನ್ನು ಸಮಾನವಾಗಿ ಎದುರಿಸಿ, ಯಾವುದೇ ಕ್ಷಣದಲ್ಲೂ ಪಂದ್ಯದ ಗತಿ ಬದಲಾಯಿಸುವ ಸಾಮರ್ಥ್ಯ ಪೂರನ್‌ಗಿದೆ ಎಂದು ರಹಾನೆ ವಿವರಿಸಿದ್ದಾರೆ. ನ್ಯೂಜಿಲೆಂಡ್ ಓಪನರ್ ಫಿನ್ ಅಲೆನ್ ನಾಲ್ಕನೇ ಸ್ಥಾನದಲ್ಲಿದ್ದಾರೆ. ಟಿ20ಯಲ್ಲಿ ಅತಿ ಹೆಚ್ಚು ಸ್ಟ್ರೈಕ್ ರೇಟ್ ಹೊಂದಿರುವ ಎರಡನೇ ಆಟಗಾರನಾಗಿರುವ ಅಲೆನ್, 2026ರ ವಿಶ್ವಕಪ್‌ನಲ್ಲಿ ಕಿವೀಸ್ ತಂಡವನ್ನು ಫೈನಲ್‌ಗೇರಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಇನ್ನು, ಇಂಗ್ಲೆಂಡ್‌ಗೆ ವಿಶ್ವಕಪ್ ಗೆದ್ದುಕೊಟ್ಟ ಕ್ಯಾಪ್ಟನ್ ಹಾಗೂ ಓಪನರ್ ಜೋಸ್ ಬಟ್ಲರ್ ಐದನೇ ಸ್ಥಾನದಲ್ಲಿದ್ದಾರೆ. ಇಂಗ್ಲೆಂಡ್ ಕ್ರಿಕೆಟ್‌ನ ಅತ್ಯಂತ ಅಪಾಯಕಾರಿ ವೈಟ್-ಬಾಲ್ ಆಟಗಾರರಲ್ಲಿ ಬಟ್ಲರ್ ಕೂಡ ಒಬ್ಬರು ಎಂದು ರಹಾನೆ ಬಣ್ಣಿಸಿದ್ದಾರೆ.

ರೋಹಿತ್-ಕೊಹ್ಲಿಗೇಕಿಲ್ಲ ಸ್ಥಾನ? ಅಭಿಮಾನಿಗಳಲ್ಲಿ ಭಾರಿ ಚರ್ಚೆ!

ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಗರಿಷ್ಠ ರನ್ ಕಲೆಹಾಕಿರುವ, ಭಾರತಕ್ಕೆ 2024ರ ಟಿ20 ವಿಶ್ವಕಪ್ ಗೆದ್ದುಕೊಟ್ಟ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಅವರನ್ನು ರಹಾನೆ ಸಂಪೂರ್ಣವಾಗಿ ಕಡೆಗಣಿಸಿರುವುದು ಕ್ರೀಡಾ ವಲಯದಲ್ಲಿ ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ. ಪ್ರಸ್ತುತ ಟಿ20 ಕ್ರಿಕೆಟ್‌ಗೆ ಅಗತ್ಯವಿರುವ ಅಲ್ಟ್ರಾ-ಅಟ್ಯಾಕಿಂಗ್ (Ultra-attacking) ಶೈಲಿಯನ್ನು ಗಮನದಲ್ಲಿಟ್ಟುಕೊಂಡು ರಹಾನೆ ಈ ಪಟ್ಟಿಯನ್ನು ಸಿದ್ಧಪಡಿಸಿರಬಹುದು ಎಂದು ವಿಶ್ಲೇಷಿಸಲಾಗುತ್ತಿದೆ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

19 ಬೌಂಡರಿ, 8 ಸಿಕ್ಸರ್, 143 ಎಸೆತಗಳಲ್ಲಿ 173 ರನ್..! ತಂದೆ ಸೆಹ್ವಾಗ್‌ ರೀತಿ ಮೈದಾನದಲ್ಲಿ ಘರ್ಜಿಸಿದ ಆರ್ಯವೀರ್..!
ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಪ್ರತಿ ಏಕದಿನ ಪಂದ್ಯ ಆಡಿದ ಬಳಿಕ ಬಿಸಿಸಿಐನಿಂದ ಗಳಿಸುವ ಸಂಬಳ ಎಷ್ಟು?