ಐಜ್ವಾಲ್ ಎಫ್'ಸಿಗೆ ಚೊಚ್ಚಲ ಐ-ಲೀಗ್ ಕಿರೀಟ; ಬೆಂಗಳೂರಿಗೆ 4ನೇ ಸ್ಥಾನ

By Suvarna Web DeskFirst Published May 1, 2017, 5:19 AM IST
Highlights

ಕೊನೆ ಪಂದ್ಯದಲ್ಲಿ ಶಿಲ್ಲಾಂಗ್‌ ಲಜಾಂಗ್‌ ವಿರುದ್ಧ 1-1ರ ಡ್ರಾ | ಚಾಂಪಿಯನ್‌ ಪಟ್ಟಕ್ಕೇರಿದ ಈಶಾನ್ಯದ ಮೊದಲ ತಂಡ | ನುಚ್ಚು ನೂರಾಯ್ತು ಬಗಾನ್‌ ಕನಸು

ಮೇಘಾಲಯ: ಭಾರತೀಯ ಫುಟ್ಬಾಲ್‌'ನಲ್ಲಿ ನೂತನ ಚಾಂಪಿಯನ್‌'ನ ಉದುಯವಾಗಿದೆ. ಮಿಜೋರಾಮ್‌'ನ ಐಜ್ವಾಲ್‌ ಫುಟ್ಬಾಲ್‌ ಕ್ಲಬ್‌ 2016-17ನೇ ಸಾಲಿನ ಚಾಂಪಿಯನ್‌ ತಂಡವಾಗಿ ಹೊರಹೊಮ್ಮಿದೆ. ಈ ಮೂಲಕ ಈಶಾನ್ಯ ಭಾಗದಿಂದ ಐ-ಲೀಗ್‌ ಪ್ರಶಸ್ತಿ ಗೆದ್ದ ಮೊದಲ ತಂಡ ಎನ್ನುವ ದಾಖಲೆ ಬರೆದಿದೆ. 

ಮೇಘಾಲಯದ ಶಿಲ್ಲಾಂಗ್‌'ನಲ್ಲಿರುವ ಜವಾಹರ್‌'ಲಾಲ್‌ ನೆಹರೂ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ತವರಿನ ತಂಡ ಶಿಲ್ಲಾಂಗ್‌ ಲಜಾಂಗ್‌ ವಿರುದ್ಧ ಐಜ್ವಾಲ್‌ 1-1 ಗೋಲುಗಳಲ್ಲಿ ಡ್ರಾ ಸಾಧಿಸುವಲ್ಲಿ ಯಶಸ್ವಿಯಾಯಿತು. ಕೋಲ್ಕಾತದಲ್ಲಿ ನಡೆದ ಚೆನ್ನೈ ಸಿಟಿ ಫುಟ್ಬಾಲ್‌ ಕ್ಲಬ್‌ ವಿರುದ್ಧ 2-1 ಗೋಲುಗಳ ಅಂತರದಲ್ಲಿ ಗೆಲುವು ಸಾಧಿಸಿದರೂ, ಮೋಹನ್‌ ಬಗಾನ್‌'ಗೆ ಪ್ರಶಸ್ತಿ ಎತ್ತಿಹಿಡಿಯಲು ಸಾಧ್ಯವಾಗಲಿಲ್ಲ. ಈ ಪಂದ್ಯಕ್ಕೂ ಮುನ್ನ ಐಜ್ವಾಲ್‌ 17 ಪಂದ್ಯಗಳಿಂದ ಒಟ್ಟು 36 ಅಂಕ ಗಳಿಸಿತ್ತು. ಮೋಹನ್‌ ಬಗಾನ್‌ 33 ಅಂಕ ಗಳಿಸಿತ್ತು. ಐಜ್ವಾಲ್‌'ಗೆ ಪ್ರಶಸ್ತಿ ಗೆಲ್ಲಲು ಪಂದ್ಯ ಡ್ರಾ ಆಗಿದ್ದರೆ ಸಾಕಾಗಿತ್ತು. ಆದರೆ ಬಗಾನ್‌ ಗೆಲುವು ಸಾಧಿಸುವುದರ ಜತೆಗೆ ಐಜ್ವಾಲ್‌ ಸೋಲಬೇಕಿತ್ತು. ಐಜ್ವಾಲ್‌ ಒಟ್ಟು 37 ಅಂಕಗಳನ್ನು ಪಡೆದರೆ, ಬಗಾನ್‌ ಈ ಆವೃತ್ತಿಯ ಮುಕ್ತಾಯಕ್ಕೆ 36 ಅಂಕಗಳೊಂದಿಗೆ 2ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತು.

ಪಂದ್ಯದ ಆರಂಭದಲ್ಲೇ ಶಿಲ್ಲಾಂಗ್‌ ತಂಡ ಗೋಲಿನ ಖಾತೆ ತೆರೆಯಿತು. ಪಿಯರಿಕ್‌ ದಿಪಾಂಡ 9ನೇ ನಿಮಿಷದಲ್ಲೇ ಗೋಲು ಬಾರಿಸಿ ಆತಿಥೇಯ ತಂಡಕ್ಕೆ ಮುನ್ನಡೆ ಒದಗಿಸಿದರು. ಎಷ್ಟೇ ಪ್ರಯತ್ನಿಸಿದರು ಮೊದಲಾರ್ಧದ ಮುಕ್ತಾಯದ ವೇಳೆಗೆ ಐಜ್ವಾಲ್‌ಗೆ ಸಮಬಲ ಸಾಧಿಸಲು ಸಾಧ್ಯವಾಗಲಿಲ್ಲ. ಇದು ತಂಡದಲ್ಲಿ ಆತಂಕ ಮೂಡಿಸಿತು.

ಆದರೆ ದ್ವಿತೀಯಾರ್ಧದಲ್ಲಿ ಐಜ್ವಾಲ್‌ ಮೊದಲ ಗೋಲಿನ ನಗೆ ಬೀರಿತು. 67ನೇ ನಿಮಿಷದಲ್ಲಿ ವಿಲಿಯಮ್‌ ಲಾಲ್‌ನುನ್‌ಫೆಲಾ ಚೆಂಡನ್ನು ಗೋಲು ಪೆಟ್ಟಿಗೆಗೆ ಸೇರಿಸಿದರು. ಆನಂತರ ಉಭಯ ತಂಡಗಳು ಚೆಂಡಿನ ಮೇಲೆ ನಿಯಂತ್ರಣ ಸಾಧಿಸಲು ಭಾರೀ ಪೈಪೋಟಿ ನಡೆಸಿದೆವು. ಅದಾಗ್ಯೂ ಮತ್ತೊಂದು ಗೋಲು ಬಾರಿಸಲು ಎರಡೂ ತಂಡಗಳಿಗೆ ಸಾಧ್ಯವಾಗಲಿಲ್ಲ. ನಿಗದಿತ 90 ನಿಮಿಷಗಳ ಬಳಿಕ 4 ನಿಮಿಷಗಳ ಹೆಚ್ಚುವರಿ ಸಮಯ ನೀಡಲಾಯಿತು. ಈ ಹೊತ್ತಿಗಾಗಲೇ ಐಜ್ವಾಲ್‌ ಅಭಿಮಾನಿಗಳು ಸಂಭ್ರಮಿಸಲು ಆರಂಭಿಸಿದ್ದರು. 94 ನಿಮಿಷ ಪೂರ್ಣಗೊಳ್ಳುತ್ತಿದ್ದಂತೆ ರೆಫ್ರಿ ಸೀಟಿ ಊದಿ ಪಂದ್ಯ ಮುಕ್ತಾಯವೆಂದು ಘೋಷಿಸಿದರು. ಐಜ್ವಾಲ್‌ ಆಟಗಾರರ ಸಂಭ್ರಮ ಮುಗಿಲುಮುಟ್ಟಿತು.

ಕೇವಲ 2ನೇ ಆವೃತ್ತಿಯಲ್ಲೇ ಪ್ರಶಸ್ತಿ!: ಐಜ್ವಾಲ್‌-ಎಫ್‌ ಸಿ ತಂಡ ಐ-ಲೀಗ್‌ಗೆ ಬಡ್ತಿ ಪಡೆದು ಕೇವಲ 2ನೇ ಆವೃತ್ತಿಯಲ್ಲೇ ಪ್ರಶಸ್ತಿಗೆ ಮುತ್ತಿಟ್ಟಿದೆ. ಮಿಜಾರೋಮ್‌ ಮೂಲದ ತಂಡಕ್ಕೆ ಕೊನೆಯ ಪಂದ್ಯದಲ್ಲಿ ಪ್ರಮುಖ ಆಟಗಾರರಾದ ಎಂಜೀನ್‌ ಜರ್ಯಾನ್‌ ಹಾಗೂ ಮೆಹ್ತಾ ಅವರ ಸೇವೆ ಲಭ್ಯವಾಗಿರಲಿಲ್ಲ. ಇದರ ನಡುವೆಯೂ ತಂಡ, ಪಂದ್ಯವನ್ನು ಡ್ರಾ ಮಾಡಿಕೊಂಡು ಪ್ರಶಸ್ತಿ ಎತ್ತಿಹಿಡಿಯಿತು.

ವಿವಾದಕ್ಕೆ ಕಾರಣವಾದ ಬಂಗಾಳ ರೆಫ್ರಿಗಳು!
ಪಂದ್ಯಕ್ಕೆ ಎಲ್ಲಾ ರೆಫ್ರಿಗಳು ಬಂಗಾಳದವರೇ ಆಗಿದ್ದ ಕಾರಣ ಐಜ್ವಾಲ್‌-ಎಫ್‌'ಸಿ ತಂಡ ಭಾರತೀಯ ಫುಟ್ಬಾಲ್‌ ಸಂಸ್ಥೆಗೆ ಲಿಖಿತ ದೂರು ದಾಖಲಿಸಿತು. ಬಂಗಾಳದ ಮೋಹನ್‌ ಬಗಾನ್‌ ತಂಡ ಪ್ರಶಸ್ತಿಗಾಗಿ ಐಜ್ವಾಲ್‌ ಜತೆ ಪೈಪೋಟಿ ನಡೆಸುತ್ತಿದ್ದ ಕಾರಣ, ರೆಫ್ರಿಗಳ ನೇಮಕ ವಿವಾದಕ್ಕೆ ಕಾರಣವಾಗಿತ್ತು.

ಬೆಂಗಳೂರು ಎಫ್'ಸಿ 4ನೇ ಸ್ಥಾನ:
ಕಳೆದ ಬಾರಿಯ ಚಾಂಪಿಯನ್ಸ್ ಬೆಂಗಳೂರು ಎಫ್'ಸಿ ತಂಡವು ಈ ಬಾರಿ ನಾಲ್ಕನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತು. ಈ ಋತುವಿನಲ್ಲಿ ಹ್ಯಾಟ್ರಿಕ್ ಗೆಲುವಿನೊಂದಿಗೆ ಭರ್ಜರಿ ಆರಂಭ ಪಡೆದಿದ್ದ ಬಿಎಫ್'ಸಿ, ನಂತರದ ಪಂದ್ಯಗಳಲ್ಲಿ ನಿರಾಶೆ ಅನುಭವಿಸಿತು. ಸಾಲು ಸಾಲು ಪಂದ್ಯಗಳು ಡ್ರಾ ಮತ್ತು ಸೋಲುಗಳು ಬೆಂಗಳೂರಿಗರ ಹತಾಶೆ ಹೆಚ್ಚಿಸಿತು. ಕೊನೆಕೊನೆಯಲ್ಲಿ ಒಂದಷ್ಟು ಪಂದ್ಯಗಳನ್ನು ಗೆದ್ದರೂ ಪ್ರಶಸ್ತಿ ಗೆಲ್ಲುವ ಕನಸು ಹಲವು ಸುತ್ತುಗಳ ಹಿಂದೆಯೇ ಕಮರಿ ಹೋಗಿತ್ತು. ಈ ತಂಡ 4ನೇ ಸ್ಥಾನ ಗಳಿಸಿದ್ದೇ ದೊಡ್ಡ ಸಮಾಧಾನದ ವಿಷಯ.

ಐ-ಲೀಗ್ ಕೈತಪ್ಪಿದರೂ ಬೆಂಗಳೂರು ಎಫ್'ಸಿಗೆ ಎಎಫ್'ಸಿ ಕಪ್ ಟೂರ್ನಿಯ ಸವಾಲು ಬಾಕಿ ಇದೆ. ಏಷ್ಯಾ ಮಟ್ಟದ ಟೂರ್ನಿಯ ತನ್ನ ಗುಂಪಿನಲ್ಲಿ ಅಗ್ರಸ್ಥಾನದಲ್ಲಿರುವ ಬಿಎಫ್'ಸಿ ನಾಕೌಟ್ ಹಂತ ಪ್ರವೇಶಿಸುವ ಸಾಧ್ಯತೆ ದಟ್ಟವಾಗಿದೆ.

click me!