2025ರ 25 ಪ್ರಮುಖ ಕ್ರೀಡೆಗಳ ಮುನ್ನೋಟ; ಹೊಸ ವರ್ಷದಲ್ಲೂ ಕ್ರೀಡಾಪ್ರೇಮಿಗಳಿಗೆ ಭರ್ಜರಿ ಮನರಂಜನೆ

By Kannadaprabha News  |  First Published Jan 1, 2025, 10:55 AM IST

2025ರಲ್ಲಿ ನಡೆಯಲಿರುವ 25 ಪ್ರಮುಖ ಕ್ರೀಡಾಕೂಟಗಳ ವಿವರ ಇಲ್ಲಿದೆ. ಒಲಿಂಪಿಕ್ಸ್, ಟಿ20 ವಿಶ್ವಕಪ್, ವಿಶ್ವ ಚೆಸ್ ಚಾಂಪಿಯನ್‌ಶಿಪ್ ಸೇರಿದಂತೆ ಹಲವು ಜಾಗತಿಕ ಕ್ರೀಡಾಕೂಟಗಳು ಕ್ರೀಡಾಭಿಮಾನಿಗಳನ್ನು ರಂಜಿಸಲಿವೆ.


ನವದೆಹಲಿ: ಒಲಿಂಪಿಕ್ಸ್‌, ಟಿ20 ವಿಶ್ವಕಪ್‌, ವಿಶ್ವ ಚೆಸ್‌ ಚಾಂಪಿಯನ್‌ಶಿಪ್‌ ಸೇರಿದಂತೆ ಹಲವು ಜಾಗತಿಕ ಕ್ರೀಡಾಕೂಟಗಳ ಮೂಲಕ ಕ್ರೀಡಾಭಿಮಾನಿಗಳನ್ನು ಮನರಂಜಿಸಿ 2024 ವಿದಾಯ ಕೋರಿದೆ. ಆದರೆ ಕಳೆದ ವರ್ಷಕ್ಕಿಂತ ತುಸು ಹೆಚ್ಚೇ ಎಂಬಂತೆ 2025ರಲ್ಲೂ ಜಾಗತಿಕ ಮಟ್ಟದ ಕ್ರೀಡಾಕೂಟ, ಪಂದ್ಯಾವಳಿಗಳು ನಡೆಯಲಿವೆ. ಕುತೂಹಲಗಳನ್ನು ಹೊತ್ತುತರುವ, ಕ್ರೀಡಾಪ್ರೇಮಿಗಳನ್ನು ತುದಿಗಾಲಲ್ಲಿ ನಿಲ್ಲಿಸುವ 2025ರ 25 ಪ್ರಮುಖ ಕ್ರೀಡಾಕೂಟಗಳ ವಿವರ ‘ಕನ್ನಡಪ್ರಭ’ ನಿಮ್ಮ ಮುಂದಿಡುತ್ತಿದೆ.

1. ಐಎಸ್‌ಎಲ್‌ ಫುಟ್ಬಾಲ್‌
2024ರ ಸೆಪ್ಟೆಂಬರ್‌ನಲ್ಲೇ ಆರಂಭಗೊಂಡಿರುವ ಇಂಡಿಯನ್‌ ಸೂಪರ್‌ ಲೀಗ್‌ ಫುಟ್ಬಾಲ್‌. 2025ರ ಏಪ್ರಿಲ್‌ ವರೆಗೂ ನಡೆಯಲಿರುವ ಟೂರ್ನಿ. ಬೆಂಗಳೂರು ಎಫ್‌ಸಿ, ಕೇರಳ, ಮುಂಬೈ ಸೇರಿ 13 ತಂಡಗಳು ಕಣದಲ್ಲಿ.

Tap to resize

Latest Videos

2. ಆಸ್ಟ್ರೇಲಿಯನ್‌ ಓಪನ್‌ ಟೆನಿಸ್‌
ವರ್ಷದ ಮೊದಲ ಗ್ರ್ಯಾನ್‌ಸ್ಲಾಂ ಟೆನಿಸ್‌ ಟೂರ್ನಿ. ಜೋಕೋವಿಚ್‌, ಆಲ್ಕರಜ್‌, ಸಿನ್ನರ್‌, ಇಗಾ ಸ್ವಿಯಾಟೆಕ್ ಸೇರಿ ವಿಶ್ವದ ಅಗ್ರ ಟೆನಿಸಿಗರ ಸಮಾಗಮ. ಭಾರತದ ಬೋಪಣ್ಣ, ಸುಮಿತ್‌ ನಗಾಲ್‌ ಸೇರಿ ಪ್ರಮುಖರು ಭಾಗಿ ನಿರೀಕ್ಷೆ.
- ಜ.12ರಿಂದ 26.

3. ಖೋ ಖೋ ವಿಶ್ವಕಪ್‌
ಭಾರತದ ಅತ್ಯಂತ ಜನಪ್ರಿಯ ಕ್ರೀಡೆ. ಈ ಬಾರಿ ಚೊಚ್ಚಲ ವಿಶ್ವಕಪ್‌ ಭಾರತದಲ್ಲೇ ನಡೆಯುತ್ತದೆ. ಭಾರತ, ಪಾಕ್‌, ಇಂಗ್ಲೆಂಡ್‌, ಅಮೆರಿಕ ಸೇರಿ 21 ಪುರುಷ, 20 ಮಹಿಳಾ ತಂಡಗಳು ಭಾಗಿ. ನವದೆಹಲಿಯಲ್ಲಿ ಪಂದ್ಯಗಳು ಆಯೋಜನೆ.
- ಜ.13ರಿಂದ ಜ.19

4. ಕರ್ನಾಟಕ ಒಲಿಂಪಿಕ್ಸ್‌
ಮಂಗಳೂರು ಹಾಗೂ ಉಡುಪಿಯಲ್ಲಿ ಚೊಚ್ಚಲ ಆವೃತ್ತಿಯ ಕರ್ನಾಟಕ ಹಿರಿಯರ ಒಲಿಂಪಿಕ್ಸ್‌. 7 ದಿನಗಳ ಕ್ರೀಡಾಕೂಟ. 25 ಕ್ರೀಡೆ. 3,750ಕ್ಕೂ ಹೆಚ್ಚು ಅಥ್ಲೀಟ್‌ಗಳು ಭಾಗಿ. ಬೆಂಗಳೂರಿನಲ್ಲೂ ಎರಡು(ಶೂಟಿಂಗ್‌, ಜಿಮ್ನಾಸ್ಟಿಕ್) ಕ್ರೀಡೆಗಳು.
- ಜ.17ರಿಂದ ಜ.23

5. ಅಂ-19 ಮಹಿಳಾ ವಿಶ್ವಕಪ್‌
2ನೇ ಆವೃತ್ತಿಯ ಅಂಡರ್‌-19 ಮಹಿಳಾ ಟಿ20 ವಿಶ್ವಕಪ್‌ ಕ್ರಿಕೆಟ್‌. ಈ ಬಾರಿ ಮಲೇಷ್ಯಾ ಆತಿಥ್ಯ. ಹಾಲಿ ಚಾಂಪಿಯನ್‌ ಭಾರತದ ಜೊತೆ ಪಾಕಿಸ್ತಾನ, ಇಂಗ್ಲೆಂಡ್‌, ಆಸ್ಟ್ರೇಲಿಯಾ, ದ.ಆಫ್ರಿಕಾ ಸೇರಿ ಒಟ್ಟು 16 ತಂಡಗಳು ಭಾಗಿ.
- ಜ.18ರಿಂದ ಫೆ.2ರ ವರೆಗೆ

6. ಪ್ರೊ ಲೀಗ್‌ ಹಾಕಿ ಟೂರ್ನಿ
ಈ ಬಾರಿ ಎಫ್‌ಐಎಚ್‌ ಪ್ರೊ ಲೀಗ್‌ ಹಾಕಿ ಟೂರ್ನಿ ಫೆಬ್ರವರಿಯಲ್ಲಿ ಆರಂಭಗೊಳ್ಳಲಿವೆ. ಭಾರತ ಪುರುಷ, ಮಹಿಳಾ ತಂಡಗಳು ಚೊಚ್ಚಲ ಪ್ರಶಸ್ತಿ ನಿರೀಕ್ಷೆಯೊಂದಿಗೆ ಕಣಕ್ಕಿಳಿಯಲಿವೆ. ಭಾರತ ಸೇರಿದಂತೆ ಹಲವು ದೇಶಗಳಲ್ಲಿ ಪಂದ್ಯಗಳು.
- ಫೆ.15ರಿಂದ ಜೂ.29

7. ಐಸಿಸಿ ಚಾಂಪಿಯನ್ಸ್‌ ಟ್ರೋಫಿ
2017ರ ಬಳಿಕ ನಡೆಯಲಿರುವ ಐಸಿಸಿ ಚಾಂಪಿಯನ್ಸ್‌ ಟ್ರೋಫಿ ಕ್ರಿಕೆಟ್‌. ಬಿಸಿಸಿಐ-ಪಾಕ್‌ ನಡುವೆ ತಿಕ್ಕಾಟಕ್ಕೆ ಕಾರಣವಾಗಿದ್ದ ಟೂರ್ನಿ. ಪಾಕಿಸ್ತಾನ ಆತಿಥ್ಯ. ಆದರೆ ಭಾರತದ ಪಂದ್ಯಗಳು ಯುಎಇಯಲ್ಲಿ ನಡೆಯಲಿದೆ. ಒಟ್ಟು 8 ತಂಡಗಳು ಭಾಗಿ.
- ಫೆ.19ರಿಂದ ಮಾ.9ರ ವರೆಗೆ

8. 3ನೇ ಮಹಿಳಾ ಐಪಿಎಲ್‌
ಬಹುನಿರೀಕ್ಷಿತ 3ನೇ ಆವೃತ್ತಿಯ ವುಮೆನ್ಸ್‌ ಪ್ರೀಮಿಯರ್‌ ಲೀಗ್‌. ಹಾಲಿ ಚಾಂಪಿಯನ್‌ ಆರ್‌ಸಿಬಿ, ಮಾಜಿ ಚಾಂಪಿಯನ್‌ ಮುಂಬೈ ಇಂಡಿಯನ್ಸ್‌ ಸೇರಿ 5 ತಂಡಗಳು ಭಾಗಿ. ಈ ಬಾರಿಯೂ ಬೆಂಗಳೂರಿನಲ್ಲಿ ಪಂದ್ಯಗಳು ನಡೆಯುವ ನಿರೀಕ್ಷೆ.
- ಫೆ.21ರಿಂದ ಮಾ.16

9. 18ನೇ ಆವೃತ್ತಿ ಐಪಿಎಲ್‌
ಕ್ರಿಕೆಟ್‌ ಪ್ರೇಮಿಗಳ ಬಹುನಿರೀಕ್ಷಿತ 18ನೇ ಆವೃತ್ತಿ ಐಪಿಎಲ್. ಈ ಬಾರಿಯೂ 10 ತಂಡಗಳು ಕಣಕ್ಕೆ. ಈ ಸಲವಾದರೂ ಕಪ್‌ ಗೆಲ್ಲಲು ಆರ್‌ಸಿಬಿ ಕಾತರ. ಬೆಂಗಳೂರು ಸೇರಿ ವಿವಿಧ ಕ್ರೀಡಾಂಗಣ ಆತಿಥ್ಯ. ಒಟ್ಟು 74 ಪಂದ್ಯಗಳು
- ಮಾ.14ರಿಂದ ಮೇ 25

10. ಕಬಡ್ಡಿ ವಿಶ್ವಕಪ್‌
ಅಪ್ಪಟ ಮಣ್ಣಿನ ಕ್ರೀಡೆ ಕಬಡ್ಡಿಯ ವಿಶ್ವಕಪ್‌ಗೆ ಈ ಬಾರಿ ಇಂಗ್ಲೆಂಡ್‌ ಆತಿಥ್ಯ. ಭಾರತ, ಇರಾನ್‌, ಚೀನಾ, ಪಾಕಿಸ್ತಾನ ಸೇರಿದಂತೆ ಪುರುಷ, ಮಹಿಳಾ ವಿಭಾಗಗಳಲ್ಲಿ ಹಲವು ತಂಡಗಳು ಕಣಕ್ಕೆ. ಮೊದಲ ಬಾರಿ ಏಷ್ಯಾದ ಹೊರಗಡೆ ಟೂರ್ನಿ.
- ಮಾ.17ರಿಂದ ಮಾ.23

11. ಫ್ರೆಂಚ್‌ ಓಪನ್‌ ಗ್ರ್ಯಾನ್‌ಸ್ಲಾಂ
ಕ್ಯಾಲೆಂಡರ್‌ ವರ್ಷದ 2ನೇ ಗ್ರ್ಯಾನ್‌ಸ್ಲಾಂ ಟೆನಿಸ್‌ ಟೂರ್ನಿ. ದಾಖಲೆಯ 14 ಬಾರಿ ಚಾಂಪಿಯನ್‌ ರಾಫೆಲ್‌ ನಡಾಲ್‌ ಇಲ್ಲ. ಜೋಕೋವಿಚ್‌, ಆಲ್ಕರಜ್‌ ಸೇರಿ ಪ್ರಮುಖರು ಭಾಗಿ. ಭಾರತದಿಂದಲೂ ಕೆಲ ಟೆನಿಸಿಗರು ಪಾಲ್ಗೊಳ್ಳುವ ನಿರೀಕ್ಷೆ.
- ಮೇ 25ರಿಂದ ಜೂ.7

12. ಟೆಸ್ಟ್‌ ಚಾಂಪಿಯನ್‌ಶಿಪ್‌ ಫೈನಲ್‌
2023-25ರ ಐಸಿಸಿ ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌ ಫೈನಲ್‌. ಈ ಬಾರಿಯೂ ಇಂಗ್ಲೆಂಡ್‌ನಲ್ಲಿ ಪಂದ್ಯ. ದಕ್ಷಿಣ ಆಫ್ರಿಕಾ ಫೈನಲ್‌ಗೇರಿದೆ. ಮತ್ತೊಂದು ಸ್ಥಾನಕ್ಕೆ ಭಾರತ-ಆಸ್ಟ್ರೇಲಿಯಾ ಪೈಪೋಟಿ. ಲಾರ್ಡ್ಸ್‌ ಕ್ರೀಡಾಂಗಣದಲ್ಲಿ ಪಂದ್ಯ.
- ಜೂ.11ರಿಂದ ಜೂ.15

13. ಏಷ್ಯನ್‌ ಅಥ್ಲೆಟಿಕ್ಸ್‌ ಕೂಟ
2 ವರ್ಷಗಳಿಗೊಮ್ಮೆ ನಡೆಯಲಿರುವ ಕೂಟ. ಈ ಬಾರಿ ಚಾಂಪಿಯನ್‌ಶಿಪ್‌ಗೆ ದಕ್ಷಿಣ ಕೊರಿಯಾ ಆತಿಥ್ಯ. ಭಾರತ ಸೇರಿದಂತೆ ಹಲವು ದೇಶಗಳು ಭಾಗಿ. ಭಾರತ ಈ ವರೆಗೂ 354 ಪದಕ ಗೆದ್ದಿದೆ. ಈ ಬಾರಿ ಮತ್ತಷ್ಟು ಪದಕ ಗೆಲ್ಲುವ ನಿರೀಕ್ಷೆ.
- ಮೇ 27ರಿಂದ ಮೇ 31

14. ಫಿಫಾ ಕ್ಲಬ್‌ ವಿಶ್ವಕಪ್‌
ವಿಶ್ವದ ಪ್ರಮುಖ ಫುಟ್ಬಾಲ್‌ ಕ್ಲಬ್‌ಗಳ ನಡುವಿನ ಟೂರ್ನಿ. ಈ ಬಾರಿಯೂ ಭಾರತದ ತಂಡಗಳಿಲ್ಲ. ಟೂರ್ನಿಗೆ ಅಮೆರಿಕ ಆತಿಥ್ಯ. ರಿಯಲ್‌ ಮ್ಯಾಡ್ರಿಡ್‌, ಮೆಸ್ಸಿಯ ಇಂಟರ್‌ ಮಿಯಾಮಿ ಸೇರಿ ಒಟ್ಟು 32 ತಂಡಗಳ ನಡುವಿನ ಸ್ಪರ್ಧೆ.
- ಜೂ.14ರಿಂದ ಜು.13

15. ವಿಂಬಲ್ಡನ್‌ ಗ್ರ್ಯಾನ್‌ಸ್ಲಾಂ
ಅತ್ಯಂತ ಪ್ರತಿಷ್ಠಿತ, ಕ್ಯಾಲೆಂಡರ್‌ ವರ್ಷದ 3ನೇ ಗ್ರ್ಯಾನ್‌ಸ್ಲಾಂ ಟೆನಿಸ್‌ ಟೂರ್ನಿ. ಇಂಗ್ಲೆಂಡ್‌ನಲ್ಲಿ ನಡೆಯಲಿರುವ ಟೂರ್ನಿ. ಆತಿಥ್ಯ. ಆಲ್ಕರಜ್‌, ಕ್ರೆಜಿಕೋವಾಗೆ ಪ್ರಶಸ್ತಿ ಉಳಿಸಿಕೊಳ್ಳುವ ಗುರಿ. ಜೋಕೋ ಸೇರಿ ಹಲವು ತಾರೆಗಳು ಕಣಕ್ಕೆ ನಿರೀಕ್ಷೆ.
- ಜೂ.30ರಿಂದ ಜು.13

16. ಮಹಿಳಾ ಚೆಸ್‌ ವಿಶ್ವಕಪ್‌
3ನೇ ಆವೃತ್ತಿಯ ಫಿಡೆ ಮಹಿಳಾ ಚೆಸ್‌ ವಿಶ್ವಕಪ್‌. ಕೂಟಕ್ಕೆ ಜಾರ್ಜಿಯಾ ಆತಿಥ್ಯ. ಭಾರತದ ಕೊನೆರು ಹಂಪಿ, ಆರ್‌.ವೈಶಾಲಿ ಸೇರಿದಂತೆ ಹಲವು ತಾರಾ ಚೆಸ್‌ ಪಟುಗಳು ಭಾಗಿ ನಿರೀಕ್ಷೆ. ಮೊದಲ ವಿಶ್ವಕಪ್‌ ಗೆಲ್ಲಲು ಭಾರತೀಯರ ಕಾತರ.
- ಜು.5ರಿಂದ ಜು.29

17. 12ನೇ ವಿಶ್ವ ಗೇಮ್ಸ್‌
ಆರ್ಚರಿ, ಕರಾಟೆ ಸೇರಿದಂತೆ 35 ಕ್ರೀಡೆಗಳಿರುವ ಜಾಗತಿಕ ಮಟ್ಟದ ಕ್ರೀಡಾಕೂಟ. ಈ ಬಾರಿಯದ್ದು 12ನೇ ಆವೃತ್ತಿ. ಚೀನಾದಲ್ಲಿ ನಡೆಯಲಿರುವ ಕ್ರೀಡಾಕೂಟ. ಭಾರತ ಸೇರಿದಂತೆ 70ಕ್ಕೂ ಹೆಚ್ಚು ದೇಶಗಳು ಭಾಗಿ. 5000 ಮಂದಿ ಭಾಗಿ.
- ಆ.7ರಿಂದ ಆ.17

18. ಐಸಿಸಿ ಮಹಿಳಾ ವಿಶ್ವಕಪ್‌
ಬಹುನಿರೀಕ್ಷಿತ 13ನೇ ಆವೃತ್ತಿಯ ಐಸಿಸಿ ಮಹಿಳಾ ಏಕದಿನ ವಿಶ್ವಕಪ್‌. ಟೂರ್ನಿಗೆ ಭಾರತ ಆತಿಥ್ಯ. ಆಸ್ಟ್ರೇಲಿಯಾ, ಇಂಗ್ಲೆಂಡ್‌ ಸೇರಿ 8 ತಂಡಗಳು ಭಾಗಿ. ಚೊಚ್ಚಲ ಕಪ್‌ ಗೆಲ್ಲುವ ನಿರೀಕ್ಷೆಯೊಂದಿಗೆ ಕಣಕ್ಕಿಳಿಯಲಿರುವ ಟೀಂ ಇಂಡಿಯಾ.
- ಆಗಸ್ಟ್-ಸೆಪ್ಟೆಂಬರ್‌

19. ಯುಎಸ್‌ ಓಪನ್‌ ಗ್ರ್ಯಾನ್‌ಸ್ಲಾಂ
ಕ್ಯಾಲೆಂಡರ್‌ ವರ್ಷದ ಕೊನೆಯ ಗ್ರ್ಯಾನ್‌ಸ್ಲಾಂ ಟೆನಿಸ್‌ ಟೂರ್ನಿ. ವಿಶ್ವದೆಲ್ಲೆಡೆಯ ತಾರಾ ಟೆನಿಸಿಗರ ಸಮಾಗಮ. ನ್ಯೂಯಾರ್ಕ್‌ನಲ್ಲಿ ನಡೆಯಲಿರುವ ಟೂರ್ನಿ. ವಿಶ್ವ ನಂ.1 ಯಾನಿಕ್‌ ಸಿನ್ನರ್‌, ಸಬಲೆಂಕಾಗೆ ಪ್ರಶಸ್ತಿ ಉಳಿಸಿಕೊಳ್ಳುವ ಗುರಿ.
- ಆ.25ರಿಂದ ಸೆ.7

20. ವಿಶ್ವ ಬ್ಯಾಡ್ಮಿಂಟನ್‌ ಕೂಟ
ಬಿಡಬ್ಲ್ಯುಎಫ್‌ ವಿಶ್ವ ಬ್ಯಾಡ್ಮಿಂಟನ್‌ ಕೂಟಕ್ಕೆ ಈ ಬಾರಿ ಪ್ಯಾರಿಸ್‌ ಆತಿಥ್ಯ. ಇದು 29ನೇ ಆವೃತ್ತಿ. ಪಿ.ವಿ.ಸಿಂಧು, ಲಕ್ಷ್ಯ ಸೇನ್‌, ಸಾತ್ವಿಕ್‌-ಚಿರಾಗ್‌ ಸೇರಿದಂತೆ ಭಾರತ ಹಾಗೂ ವಿಶ್ವದೆಲ್ಲೆಡೆಯ ತಾರಾ ಶಟ್ಲರ್‌ಗಳು ಪಾಲ್ಗೊಳ್ಳುವ ನಿರೀಕ್ಷೆ.
ಆ.25ರಿಂದ ಆ.31

21. ಡೈಮಂಡ್‌ ಲೀಗ್‌ ಫೈನಲ್
ಅಥ್ಲೆಟಿಕ್ಸ್‌ನ ವಾರ್ಷಿಕ ಕ್ರೀಡಾಕೂಟ. ಈ ಬಾರಿಯದ್ದು 16ನೇ ಆವೃತ್ತಿ. ಏಪ್ರಿಲ್‌ನಿಂದ ಆಗಸ್ಟ್‌ವರೆಗೆ ವಿಶ್ವದೆಲ್ಲೆಡೆ 14 ಕ್ರೀಡಾಕೂಟಗಳ ಸರಣಿ. ಬಳಿಕ ಸ್ವಿಜರ್‌ಲೆಂಡ್‌ನಲ್ಲಿ ಫೈನಲ್‌. ಭಾರತದ ನೀರಜ್ ಚೋಪ್ರಾ ಮೇಲೆ ಎಲ್ಲರ ನಿರೀಕ್ಷೆ.
- ಆ.27ರಿಂದ ಆ.28

ಇದನ್ನೂ ಓದಿ: ಐಸಿಸಿ ವರ್ಷದ ಟಿ20 ಕ್ರಿಕೆಟಿಗ ಪ್ರಶಸ್ತಿ ರೇಸ್‌ನಲ್ಲಿದ್ದಾರೆ ನಾಲ್ವರು ಕ್ರಿಕೆಟರ್ಸ್‌! ಈ ಭಾರತೀಯನಿಗೆ ಸಿಗುತ್ತಾ ಅವಾರ್ಡ್?

22. ವಿಶ್ವ ಅಥ್ಲೆಟಿಕ್ಸ್‌ ಚಾಂಪಿಯನ್‌ಶಿಪ್
ಪ್ರತಿಷ್ಠಿತ ವಿಶ್ವ ಅಥ್ಲೆಟಿಕ್ಸ್‌ ಕೂಟಕ್ಕೆ ಈ ಬಾರಿ ಜಪಾನ್ ಆತಿಥ್ಯ. ಒಟ್ಟು 49 ವಿಭಾಗಗಳ ಸ್ಪರ್ಧೆ. ನೀರಜ್‌ ಚೋಪ್ರಾ ಸೇರಿದಂತೆ ಭಾರತದ ಹಲವು ಅಥ್ಲೀಟ್‌ಗಳು ಅರ್ಹತೆ ಗಿಟ್ಟಿಸಿಕೊಳ್ಳುವ ನಿರೀಕ್ಷೆ.
- ಸೆ.13ರಿಂದ ಸೆ.21

23. 12ನೇ ಪ್ರೊ ಕಬಡ್ಡಿ
12ನೇ ಆವೃತ್ತಿಯ ಪ್ರೊ ಕಬಡ್ಡಿ ಲೀಗ್‌. 2025ರಲ್ಲೂ ಟೂರ್ನಿ ಅಕ್ಟೋಬರ್‌-ಡಿಸೆಂಬರ್‌ನಲ್ಲಿ ನಡೆಯುವ ನಿರೀಕ್ಷೆ. ಬೆಂಗಳೂರು ಬುಲ್ಸ್‌ ಸೇರಿ 12 ತಂಡಗಳು. ಕ್ಯಾರವಾನ್‌ ಮಾದರಿಯಲ್ಲಿ ಬೆಂಗಳೂರು ಸೇರಿ ವಿವಿಧ ನಗರಗಳ ಆತಿಥ್ಯ ಸಾಧ್ಯತೆ.
- ವೇಳಾಪಟ್ಟಿ ಪ್ರಕಟಗೊಂಡಿಲ್ಲ.

24. ಜೂ. ಹಾಕಿ ವಿಶ್ವಕಪ್‌
14ನೇ ಆವೃತ್ತಿಯ ಜೂನಿಯರ್‌ ಹಾಕಿ ವಿಶ್ವಕಪ್‌ಗೆ ಭಾರತ ಆತಿಥ್ಯ. ಭಾರತ, ಪಾಕಿಸ್ತಾನ ಸೇರಿ ಒಟ್ಟು 24 ತಂಡಗಳು ಭಾಗಿ. 2016ರ ಬಳಿಕ ಮತ್ತೆ ಟ್ರೋಫಿ ಗೆಲ್ಲುವ ಕಾತರದಲ್ಲಿ ಭಾರತ ತಂಡ. ದೇಶದಲ್ಲಿ 4ನೇ ಬಾರಿ ಟೂರ್ನಿ.
- ವೇಳಾಪಟ್ಟಿ ಪ್ರಕಟಗೊಂಡಿಲ್ಲ.

25. ಏಷ್ಯಾಕಪ್‌ ಕ್ರಿಕೆಟ್‌
17ನೇ ಆವೃತ್ತಿಯ ಏಷ್ಯಾಕಪ್‌ ಕ್ರಿಕೆಟ್‌ ಟೂರ್ನಿ ಭಾರತದಲ್ಲಿ ನಡೆಯಲಿದೆ. ಈ ಬಾರಿ ಟಿ20 ಮಾದರಿ ಟೂರ್ನಿ. ಒಟ್ಟು 6 ತಂಡಗಳು ಭಾಗಿ. 8 ಬಾರಿ ಚಾಂಪಿಯನ್ ಭಾರತಕ್ಕೆ ತವರಿನಲ್ಲಿ ಮತ್ತೊಂದು ಟ್ರೋಫಿ ಗೆಲ್ಲುವ ನಿರೀಕ್ಷೆ.
- ವೇಳಾಪಟ್ಟಿ ಪ್ರಕಟಗೊಂಡಿಲ್ಲ.

ಇದನ್ನೂ ಓದಿ: ವಿರಾಟ್ ಕೊಹ್ಲಿ to ರೋಹಿತ್ ಶರ್ಮ 2024ರಲ್ಲಿ ತಂದೆಯಾದ 7 ಕ್ರಿಕೆಟಿಗರು

click me!