ಹರ್ಯಾಣದ ಬಿಜೆಪಿ ಸರ್ಕಾರದಲ್ಲಿ ಕ್ರೀಡಾ ಖಾತೆ ಸಚಿವರಾಗಿರುವ ಭಾರತ ಹಾಕಿ ತಂಡದ ಮಾಜಿ ನಾಯಕ ಸಂದೀಪ್ ಸಿಂಗ್ (36) ವಿರುದ್ಧ ಮಹಿಳಾ ಅಥ್ಲೆಟಿಕ್ಸ್ ತಂಡದ ತರಬೇತುದಾರರೊಬ್ಬರು ಲೈಂಗಿಕ ಕಿರುಕುಳ ಮತ್ತು ಬೆದರಿಕೆಯ ಗಂಭೀರ ಆರೋಪ ಹೊರಿಸಿದ್ದಾರೆ.
ಚಂಡೀಗಢ: ಹರ್ಯಾಣದ ಬಿಜೆಪಿ ಸರ್ಕಾರದಲ್ಲಿ ಕ್ರೀಡಾ ಖಾತೆ ಸಚಿವರಾಗಿರುವ ಭಾರತ ಹಾಕಿ ತಂಡದ ಮಾಜಿ ನಾಯಕ ಸಂದೀಪ್ ಸಿಂಗ್ (36) ವಿರುದ್ಧ ಮಹಿಳಾ ಅಥ್ಲೆಟಿಕ್ಸ್ ತಂಡದ ತರಬೇತುದಾರರೊಬ್ಬರು ಲೈಂಗಿಕ ಕಿರುಕುಳ ಮತ್ತು ಬೆದರಿಕೆಯ ಗಂಭೀರ ಆರೋಪ ಹೊರಿಸಿದ್ದಾರೆ. ಈ ಆರೋಪವನ್ನು ಸಂಪೂರ್ಣ ಆಧಾರರಹಿತ ಎಂದು ಸಂದೀಪ್ ತಳ್ಳಿಹಾಕಿದ್ದರೂ, ನೈತಿಕತೆಯ ಆಧಾರದಲ್ಲಿ ಕ್ರೀಡಾ ಖಾತೆಯಿಂದ ಹಿಂದೆ ಸರಿಯುತ್ತಿರುವುದಾಗಿ ಘೋಷಿಸಿದ್ದಾರೆ.
ಇದೇ ವೇಳೆ, ‘ಸುಳ್ಳು ಆರೋಪ ಮಾಡಿ ತಮ್ಮ ಘನತೆಗೆ ಧಕ್ಕೆ ತಂದಿದ್ದಾರೆ’ ಎಂದು ಆರೋಪಿಸಿ ಮಹಿಳಾ ಕೋಚ್ ವಿರುದ್ಧ ಸಿಂಗ್ ಕೇಸು ದಾಖಲಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಈ ಬಗ್ಗೆ ತನಿಖೆಗೆ ಪೊಲೀಸರು ಸಮಿತಿಯೊಂದನ್ನು ರಚಿಸಿದ್ದಾರೆ. ಇದಕ್ಕೆ ತಿರುಗೇಟು ನೀಡಿರುವ ಮಹಿಳಾ ಕೋಚ್, ‘ಎಷ್ಟು ದಿನ ಅಂತ ನಾನು ಸುಮ್ಮನಿರಬೇಕು? ಎಷ್ಟೇ ತಿಳಿ ಹೇಳಿದರೂ ಸಂದೀಪ್ ನನಗೆ ಕಿರುಕುಳ ನೀಡುತ್ತಿದ್ದರು ಹಾಗೂ ಬೆದರಿಸುತ್ತಿದ್ದರು. ಹೀಗಾಗಿ ಅನಿವಾರ್ಯವಾಗಿ ದೂರು ನೀಡಿದ್ದೇನೆ. ನ್ಯಾಯ ಸಿಗುವ ವಿಶ್ವಾಸವಿದೆ’ ಎಂದು ಸ್ಪಷ್ಟಪಡಿಸಿದ್ದಾರೆ. ಗೃಹ ಸಚಿವ ಅನಿಲ್ ವಿಜ್‌ಗೂ ಈ ಬಗ್ಗೆ ದೂರು ನೀಡಿದ್ದಾರೆ.
ಬೆಂಗಳೂರಿಗೆ ಬಂದ ಹಾಕಿ ವಿಶ್ವಕಪ್; ದಿಗ್ಗಜರಿಂದ ಟ್ರೋಫಿ ಅನಾವರಣ
ಏನಿದು ಪ್ರಕರಣ?:
ಕಳೆದ ಗುರುವಾರ ಪತ್ರಿಕಾಗೋಷ್ಠಿ ನಡೆಸಿದ್ದ ಹರ್ಯಾಣ ಜೂನಿಯರ್ ಅಥ್ಲೆಟಿಕ್ಸ್ ತಂಡದ (Haryana junior athletics team) ಮಹಿಳಾ ಕೋಚ್ (female coach), ‘ಕ್ರೀಡಾ ಸಚಿವರಾದ (Sports Minister) ಸಂದೀಪ್ ಸಿಂಗ್ (Sandeep Singh)ನನಗೆ ಲೈಂಗಿಕವಾಗಿ ಕಿರುಕುಳ ನೀಡಿದ್ದಲ್ಲದೇ ಬೆದರಿಕೆಯನ್ನೂ ಹಾಕಿದ್ದಾರೆ’ ಎಂದು ಆರೋಪಿಸಿದ್ದರು. ಜೊತೆಗೆ ಶುಕ್ರವಾರ ಈ ಬಗ್ಗೆ ದೂರನ್ನೂ ದಾಖಲಿಸಿದ್ದರು.
‘ಕೆಲ ತಿಂಗಳ ಹಿಂದೆ ನನ್ನನ್ನು ಜಿಮ್‌ನಲ್ಲಿ ನೋಡಿದ ಬಳಿಕ ಸಚಿವರು ಪದೇ ಪದೇ ತಮ್ಮನ್ನು ಭೇಟಿಯಾಗುವಂತೆ ಒತ್ತಾಯಿಸುತ್ತಿದ್ದರು. ಕೊನೆಗೆ ಅನಿವಾರ್ಯವಾಗಿ ದಾಖಲಾತಿಯೊಂದರ ಸಂಬಂಧ ಅವರ ಗೃಹ ಕಚೇರಿಗೆ ತೆರಳಿದ್ದೆ. ಅಲ್ಲಿ ಅವರು ನನಗೆ ಲೈಂಗಿಕವಾಗಿ ಕಿರುಕುಳ ನೀಡಿದರು. ನಾನು ಆಕ್ಷೇಪ ವ್ಯಕ್ತಪಡಿಸಿದ್ದಕ್ಕೆ ನನ್ನ ಬಟ್ಟೆಯನ್ನೂ ಹರಿದು ಹಾಕಿದರು. ಈ ವೇಳೆ ನಾನು ನೆರವಿಗಾಗಿ ಕಿರುಚಿಕೊಂಡರೂ ಅಲ್ಲೇ ಇದ್ದ ಸಚಿವರ ಯಾವ ಸಿಬ್ಬಂದಿ ನನ್ನ ನೆರವಿಗೆ ಬರಲಿಲ್ಲ. ಕಳೆದ ಫೆಬ್ರವರಿಯಿಂದ ನವೆಂಬರ್‌ವರೆಗೂ ಅವರು ನನಗೆ ನಾನಾ ರೀತಿಯಲ್ಲಿ ಲೈಂಗಿಕವಾಗಿ ಕಿರುಕುಳ ನೀಡುವ, ಜಾಲತಾಣ, ವಾಟ್ಸಾಪ್ (WhatsApp)ಮೆಸೇಜ್‌ಗಳಲ್ಲಿ ಬೆದರಿಕೆ ಹಾಕುವ ಯತ್ನ ಮಾಡಿದರು’ ಎಂದು ಮಹಿಳಾ ಕೋಚ್ ತಮ್ಮ ದೂರಿನಲ್ಲಿ ಆರೋಪಿಸಿದ್ದಾರೆ. ಈ ದೂರಿನ ಬೆನ್ನಲ್ಲೇ ಚಂಡೀಗಢ ಪೊಲೀಸರು ಕುರುಕ್ಷೇತ್ರದ ಪೆಹೋವಾ ಕ್ಷೇತ್ರದ ಬಿಜೆಪಿ ಶಾಸಕರೂ ಆಗಿರುವ ಸಂದೀಪ್ ಸಿಂಗ್ ವಿರುದ್ಧ ಹಲ್ಲೆ ಅಥವಾ ಮಾನಭಂಗಕ್ಕೆ ಯತ್ನ, ಲೈಂಗಿಕ ಕಿರುಕುಳ, ನಗ್ನವಾಗುವಂತೆ ಪ್ರಚೋದಿಸಿದ, ಬೆದರಿಕೆಯ ಪ್ರಕರಣ ದಾಖಲಿಸಿದ್ದಾರೆ.
ಹಾಕಿ ಟೆಸ್ಟ್: ಆಸೀಸ್ ವಿರುದ್ಧ ಭಾರತಕ್ಕೆ 4-5ರ ಸೋಲು
ಸಂದೀಪ್ ವಜಾಗೆ ವಿಪಕ್ಷ ಪಟ್ಟು:
ಮತ್ತೊಂದೆಡೆ ಘಟನೆ ಕುರಿತು ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ವಿಪಕ್ಷ ರಾಷ್ಟ್ರೀಯ ಲೋಕದಳ (Rashtriya Lok Dal) ಮತ್ತು ಮಾಜಿ ಮುಖ್ಯಮಂತ್ರಿ ಭೂಪಿಂದರ್ ಸಿಂಗ್ ಹೂಡಾ (Bhupinder Singh Hooda), ಸಚಿವ ಹುದ್ದೆಯಿಂದ ಸಂದೀಪ್ ಸಿಂಗ್ ಅವರನ್ನು ಕಿತ್ತುಹಾಕಬೇಕು ಎಂದು ಆಗ್ರಹಿಸಿದ್ದಾರೆ. ಅದರ ಬೆನ್ನಲ್ಲೇ ಸಂದೀಪ್ ಸಿಂಗ್ ಭಾನುವಾರ ಕ್ರೀಡಾ ಸಚಿವ ಸ್ಥಾನವನ್ನು ತ್ಯಜಿಸಿದ್ದಾರೆ. ಆದರೆ ತಮ್ಮ ಸಚಿವ ಸ್ಥಾನ ಬಿಟ್ಟುಕೊಟ್ಟಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಪೆನಾಲ್ಟಿಕಾರ್ನರ್ ಸ್ಪೆಷಲಿಸ್ಟ್ ಸಂದೀಪ್ ಸಿಂಗ್
2004-2012ರವರೆಗೆ ಭಾರತ ಹಾಕಿ ತಂಡದ ಪರವಾಗಿ ಆಡಿದ್ದ ಸಂದೀಪ್, ಪೆನಾಲ್ಟಿ ಕಾರ್ನರ್ ಸ್ಪೆಷ್ಟಲಿಸ್ಟ್ (penalty corner specialist) ಎಂಬ ಹೆಗ್ಗಳಿಕೆಯನ್ನೂ ಹೊಂದಿದ್ದರು. 2008ರಲ್ಲಿ ಭಾರತ ತಂಡದ ನಾಯಕನಾಗಿಯೂ ಆಯ್ಕೆಯಾಗಿದ್ದರು. ಇವರ ಜೀವನ ಕುರಿತು ಸೂರ್ಮ ಎಂಬ ಚಲನಚಿತ್ರ ಕೂಡಾ ತಯಾರಾಗಿತ್ತು. ತಮ್ಮ 20ನೇ ವಯಸ್ಸಿನಲ್ಲಿ ಆಕಸ್ಮಿಕವಾಗಿ ಹಾರಿದ ಗುಂಡೇಟಿನಿಂದ ಇನ್ನೇನು ಹಾಕಿ ಭವಿಷ್ಯ ಮುಗಿದೇ ಹೋಯಿತು ಎನ್ನುವ ಹಂತಕ್ಕೆ ತಲುಪಿದ್ದ ಸಂದೀಪ್ ಬಳಿಕ ಅಚ್ಚರಿಯ ರೀತಿಯಲ್ಲಿ ಚೇತರಿಸಿಕೊಂಡು ಭಾರತ ತಂಡಕ್ಕೆ ಮರಳಿದ್ದರು. ನಿವೃತ್ತಿ ಬಳಿಕ ಬಿಜೆಪಿ ಸೇರಿ ಶಾಸಕರಾಗಿದ್ದು ಹಾಗೂ ಹರಾರಯಣ ಸಂಪುಟದಲ್ಲಿ ಕ್ರೀಡಾ ಸಚಿವರಾಗಿ ಅಧಿಕಾರ ವಹಿಸಿಕೊಂಡಿದ್ದರು.