ತೋರು ಬೆರಳು: ಬೆಳಕು ತೋರುವ ತಮಾಷೆ ಕಥೆಗಳು

By Kannadaprabha News  |  First Published Jan 5, 2025, 12:53 PM IST

ನಸ್ರುದ್ದೀನನ ಹಾಸ್ಯ ಪ್ರಸಂಗಗಳನ್ನು ಓದಿದರೆ ಮುಖದಲ್ಲಿ ಮಂದಹಾಸ ಮೂಡದೇ ಇರದು. ಅಲ್ಲೊಂದು ಬದುಕಿನ ಪಾಠವೂ ಇರುತ್ತದೆ. ಅಂಥ ಕೆಲವು ಕಥೆಗಳು ಇಲ್ಲಿವೆ.


1-

ದಾರೀಲಿ ಹೋಗ್ತಾ ನಸ್ರುದ್ದೀನನಿಗೆ ಒಬ್ಬ ಅಪರಿಚಿತ ಎದುರಾದ. ಅವನ ಜೊತೆ ನಸ್ರುದ್ದೀನ್ ಮಾತು ಶುರುಮಾಡಿದ.

Tap to resize

Latest Videos

ಮಾತಿನ ಮಧ್ಯೆ ಕೇಳಿದ:

ಹೇಗೆ ನಡೀತಿದೆ ವ್ಯಾಪಾರ?

ಅದ್ಭುತ ಅಂದ ಅಪರಿಚಿತ

ಹಂಗಿದ್ರೆ ನಂಗೊಂದು ಹತ್ತು ಸಾವಿರ ರೂಪಾಯಿ ಸಾಲ ಕೊಡ್ತೀರಾ?

ಸಾಲಾನಾ? ನಿಂಗಾ? ನೀನ್ಯಾರು ಅಂತಾನೇ ನಂಗೊತ್ತಿಲ್ಲವಲ್ಲ?

ಇದೊಳ್ಳೇ ಕತೆಯಾಯ್ತಲ್ಲ. ನನ್ನೂರಿನ ಜನಕ್ಕೆ ನಾನ್ಯಾರು ಅಂತ ಗೊತ್ತು. ಅದಕ್ಕೇ ಅವರು ನಂಗೆ ಸಾಲ ಕೊಡಲ್ಲ. ನಿಂಗೆ ನಾನ್ಯಾರು ಅಂತ ಗೊತ್ತಿಲ್ಲ. ಅದಕ್ಕೇ ನೀನು ಸಾಲ ಕೊಡಲ್ಲ. ಹಿಂಗಾದ್ರೆ ನಮ್ಮಂತೋರು ಬದ್ಕೋದು ಹೆಂಗೆ?

-2-

ನಸ್ರುದ್ದೀನ್ ಗೆಳೆಯನೊಬ್ಬ ಊರು ಬಿಟ್ಟು ಹೊರಟಿದ್ದ. ಹೊರಡೋ ಮುಂಚೆ ನಸ್ರುದ್ದೀನನ ಹತ್ರ ಬಂದ.

ನೋಡಯ್ಯಾ ಮಿತ್ರಾ, ನಾನು ಊರು ಬಿಟ್ಟು ಹೋಗ್ತಾ ಇದ್ದೀನಿ. ನೀನು ನಂಗೊಂದು ಬಂಗಾರದ ಉಂಗುರ ಕೊಡು. ಅದನ್ನು ನೋಡ್ತಿದ್ದಾಗೆಲ್ಲ ನಿನ್ನ ನೆನಪಾಗ್ತಿರುತ್ತೆ ನಂಗೆ.

ನಸ್ರುದ್ದೀನ್ ಹೇಳಿದ.

ನಾನು ನಿಂಗೊಂದು ಉಂಗುರ ಕೊಡ್ತೀನಿ ಅಂತಿಟ್ಕೋ. ನೀನು ಅದನ್ನು ಕಳ್ಕೋಬಹುದು. ಆಗ ನನ್ನನ್ನೂ ಮರೀತೀಯ ಅಲ್ವಾ. ಅದರ ಬದಲು ನಾನು ಉಂಗುರ ಕೊಡೋಲ್ಲ ಅಂತಿಟ್ಕೋ. ಆಗ ನಿಂಗೆ ನಿನ್ನ ಉಂಗುರವಿಲ್ಲದ ಬೆರಳು ನೋಡಿದಾಗೆಲ್ಲ ನನ್ನ ನೆನಪಾಗ್ತಾ ಇರುತ್ತೆ.

ಪಟಕ್ಕನೆ ಓದಿ ಮುಗಿಸಬಹುದಾದ ಕನ್ನಡದ 10 ಅತ್ಯಾಪ್ತ ಸಣ್ಣಕಥೆಗಳು!

-3-

ಓದೋದಕ್ಕೂ ಬರಿಯೋದಕ್ಕೂ ಗೊತ್ತಿಲ್ಲದ ಅನಕ್ಷರಸ್ಥನಿಗೆ ನಾನು ಒಂದೇ ಕ್ಷಣದಲ್ಲಿ ಓದುಬರಹ ಕಲಿಸಬಲ್ಲೆ.

ಹಾಗಂತ ಹೇಳ್ತಾ ಫಕೀರನೊಬ್ಬ ಊರು ತುಂಬ ಓಡಾಡ್ತಿದ್ದ. ನಸ್ರುದ್ದೀನ್ ಅವನ ಬಳಿಗೆ ಓಡಿದ. ನನಗೆ ಕಲಿಸು ಅಂದ.

ಫಕೀರ ನಸ್ರುದ್ದೀನನ ತಲೆಯ ಮೇಲೆ ಕೈಯಿಟ್ಟು ಧ್ಯಾನಿಸಿದ. ಈಗ ನಿಂಗೆ ಓದೋಕೆ ಬರುತ್ತೆ ಹೋಗು ಅಂದ.

ಅದಾಗಿ ಅರ್ಧಗಂಟೆಗೆ ವಾಪಸ್ಸು ಬಂದ ನಸ್ರುದ್ದೀನ್, ಆ ಫಕೀರನಿಗೋಸ್ಕರ ಊರಲ್ಲೆಲ್ಲ ಹುಡುಕತೊಡಗಿದ.

ಏನಾಯ್ತಪ್ಪ.. ಓದೋದು ಕಲಿಸ್ತೀನಿ ಅಂತ ಫಕೀರ ಚೆನ್ನಾಗಿ ನಾಮ ಹಾಕಿದ್ನಾ? ದಾರಿಹೋಕನೊಬ್ಬ ಕೇಳಿದ.

ಹಂಗೇನಿಲ್ಲ, ಚೆನ್ನಾಗೇ ಓದೋದಕ್ಕೆ ಬರುತ್ತೆ. ಓದೋಕ್ ಬಂದಿದ್ರಿಂದಲೇ ಆ ಫಕೀರನ್ನ ಹುಡುಕ್ತಿರೋದು ನಾನು. ಎಲ್ಹೋದ ಆ ಮೋಸಗಾರ.

ಇದೇನಪ್ಪ ಹೀಗ್ ಮಾತಾಡ್ತಿದ್ದೀಯ. ನಿಂಗೆ ಒಂದೇ ನಿಮಿಷದಲ್ಲಿ ಓದೋಕೆ ಕಲಿಸಿದೋನನ್ನ ಮೋಸಗಾರ ಅಂತಿದ್ದೀಯಲ್ಲ. ಸರೀನಾ ಇದು.

''''ಹೌದು ಮತ್ತೆ'''' ನಾನು ಓದೋಕೆ ಎತ್ತಿಕೊಂಡ ಪುಸ್ತಕದ ಮೊದಲನೇ ಸಾಲಲ್ಲೇ ''''ಎಲ್ಲಾ ಫಕೀರರೂ ಶುದ್ಧ ಮೋಸಗಾರರು'''' ಅಂತ ಬರೆದಿತ್ತು.

-4-

ನಸ್ರುದ್ದೀನ್ ನ್ಯಾಯಾಧೀಶನಾಗಿದ್ದಾಗ ಅವನ ಹತ್ತಿರ ಒಬ್ಬಾತ ಓಡೋಡಿ ಬಂದು ದೂರು ಹೇಳಿಕೊಂಡ.

ನಿಮ್ಮೂರಿನ ದಿಡ್ಡಿಬಾಗಿಲಿನ ಹತ್ತಿರ ಯಾರೋ ಒಂದಿಬ್ಬರು ನನ್ನನ್ನು ದರೋಡೆ ಮಾಡಿದರು. ನನ್ನಲ್ಲಿದ್ದ ಎಲ್ಲವನ್ನೂ ಕಿತ್ತುಕೊಂಡರು. ನನ್ನ ಚೀಲ, ಅಂಗಿ, ಸರ, ಗಡಿಯಾರ, ಪ್ಯಾಂಟು ಎಲ್ಲವನ್ನೂ ದೋಚಿಕೊಂಡು ಹೋದರು. ಚಪ್ಪಲಿಯನ್ನೂ ಬಿಡಲಿಲ್ಲ. ಅವರನ್ನು ಹಿಡಿದು ಶಿಕ್ಷಿಸಿ. ನಿಮ್ಮೂರಿನ ಬಾಗಿಲಲ್ಲಿ ಇಂಥ ಕೆಲಸ ಮಾಡಿದ್ದಾರೆ ಅಂತಾದರೆ ಅವರು ನಿಮ್ಮೂರಿನವರೇ ಇರಬೇಕು.

ನಸ್ರುದ್ದೀನ್ ಅವನನ್ನು ಮೇಲಿಂದ ಕೆಳಗಿನ ತನಕ ನೋಡಿದವನೇ, ಹೇಳಿದ.

ಅವರು ನಮ್ಮೂರಿನೋರಲ್ಲ ಬಿಡಪ್ಪ.

ನಿಮ್ಮೂರಿನವರಲ್ಲ ಅಂತ ಅದೆಂಗ್ ಹೇಳ್ತೀರಿ ಅಂತ ದೂರುದಾರ ಕೇಳಿದ.

ನಮ್ಮೂರಿನೋರು ಏನು ಮಾಡಿದ್ರೂ ಅಚ್ಚುಕಟ್ಟಾಗಿ ಮಾಡ್ತಾರೆ. ನಿನ್ನ ಚಡ್ಡಿ ಹಂಗೇ ಬಿಟ್ಟಿದ್ದಾರಲ್ಲ. ನಮ್ಮೂರಿನ ಕಳ್ಳರಾಗಿದ್ರೆ ಅದನ್ನೂ ಕಿತ್ಕೊಂಡಿರೋರು. ಯಾರೋ ಅಡ್ಡಕಸಬಿಗಳ ಕೆಲಸ ಇದು.

ಕಥೆಕೂಟ ಸಮಾವೇಶ: ಸಣ್ಣಕಥೆಗಳ ಗುಂಪಿನ ಐದನೇ ಸಮ್ಮಿಲನ, ಬರಹಗಾರಿಕೆಯ ಬಗ್ಗೆ ಚರ್ಚೆ

-5-

ಸನ್ಯಾಸಿಯೊಬ್ಬ ನಸ್ರುದ್ದೀನನಿಗೆ ತತ್ವೋಪದೇಶ ಮಾಡುತ್ತಿದ್ದ.

ನೋಡಯ್ಯ. ಮನುಷ್ಯ ಸ್ವಾರ್ಥಿಯಾಗಬಾರದು. ಯಾವಾಗ್ಲೂ ತನ್ನ ಬಗ್ಗೇನೇ ಯೋಚನೆ ಮಾಡ್ತಿರಬಾರದು. ಇನ್ನೊಬ್ಬರ ಬಗ್ಗೆ ಚಿಂತೆ ಮಾಡಬೇಕು. ನಾನು ಆ ಸಾಧನೆ ಮಾಡಿದ್ದೀನಿ. ಯಾವತ್ತೂ ನನ್ನ ಬಗ್ಗೆ ಯೋಚಿಸೋಲ್ಲ.

ನಸ್ರುದ್ದೀನ್ ಅಂದ: ಗುರುಗಳೇ, ನಾನು ಯಾವಾಗ್ಲೋ ಆ ಎತ್ತರಕ್ಕೆ ಏರಿಬಿಟ್ಟಿದ್ದೀನಿ.

ಗುರು ಅಚ್ಚರಿಯಿಂದ ಕೇಳಿದ: ಹೌದೇ.. ಹೇಗೆ.

ನಸ್ರುದ್ದೀನ್ ಗಂಭೀರವಾಗಿ ಹೇಳಿದ:

ನಾನು ಯಾರನ್ನು ನೋಡಿದ್ರೂ ಅವನನ್ನನ್ನು ನನ್ನ ಸ್ಥಾನದಲ್ಲಿಟ್ಟು ನೋಡ್ತೀನಿ. ಅವನೇ ನಾನು ಅಂದ್ಕೊಂಡು ಬಿಡ್ತೀನಿ. ಹೀಗಾಗಿ ನಾನು ನನ್ನ ಬಗ್ಗೆ ಯೋಚನೆ ಮಾಡಿದ್ದೆಲ್ಲ, ನಿಜವಾಗಿ, ಅವನ ಬಗ್ಗೇನೇ ಆಗಿರುತ್ತೆ.

-6-

ನಸ್ರುದ್ದೀನ್ ಯಾರದೋ ಹೊಲಕ್ಕೆ ಹೋಗಿ ಕಲ್ಲಂಗಡಿ ಹಣ್ಣುಗಳನ್ನು ಕೊಯ್ದು ಗೋಣಿ ಚೀಲಕ್ಕೆ ತುಂಬಿಕೊಳ್ಳುತ್ತಿದ್ದ. ಅಷ್ಟು ಹೊತ್ತಿಗೆ ಕಲ್ಲಂಗಡಿ ಹೊಲದ ಮಾಲಿಕ ಬಂದು, ನಸ್ರುದ್ದೀನನನ್ನು ತರಾಟೆಗೆ ತೆಗೆದುಕೊಂಡ.

ನನ್ನ ಹೊಲದಲ್ಲಿ ನೀನೇನು ಮಾಡ್ತಿದ್ದೀಯಾ?

ಏನ್ ಗಾಳಿ ಅಂತೀರಿ. ಅದೇ ನನ್ನ ತಳ್ಕೊಂಡು ಬಂದುಬಿಡ್ತು.

ಸರೀ, ಒಪ್ಕೋತೀನಿ. ಆದ್ರೆ ಕಲ್ಲಂಗಡಿ ಹಣ್ಣನ್ನ ಯಾಕೆ ಹಿಡ್ಕೊಂಡಿದ್ದೀಯಾ

ದೇವರೇ, ಈ ಕಲ್ಲಂಗಡಿ ಹಣ್ಣನ್ನೇನಾದರೂ ಹಿಡ್ಕೊಳ್ಳದೇ ಹೋಗಿದ್ರೆ ಗಾಳಿ ನನ್ನನ್ನು ಇನ್ನೂ ದೂರ ತಳ್ಕೊಂಡು ಹೋಗ್ತಾ ಇತ್ತು.

ಆಯ್ತು, ಅದನ್ನೂ ಒಪ್ಕೋತೀನಿ. ಆದ್ರೆ ಆ ಕಲ್ಲಂಗಡಿ ಹಣ್ಣು ನಿನ್ನ ಗೋಣಿ ಚೀಲದೊಳಗೆ ಹೇಗ್ ಹೋಯ್ತು.

ಇದೊಂದು ಪ್ರಶ್ನೆಗೆ ಉತ್ತರ ಹೊಳೀತಿಲ್ಲ ನೋಡಪ್ಪ. ಏನು ಹೇಳೋದು ಅಂತ ನಾನೂ ಯೋಚಿಸ್ತಿದ್ದೀನಿ, ತಡಿ.

ಹೇಗಿದ್ರು, ಹೇಗಾದ್ರು? ನಾಲ್ಕೇ ಪೋಟೋದಲ್ಲಿ ಯುಪಿ, ಬಿಹಾರದ ಕತೆ!

-7-

ಚಳಿಗಾಲದ ಒಂದು ಬೆಳಗ್ಗೆ, ಅರೆಬರೆ ಬಟ್ಟೆ ಹಾಕ್ಕೊಂಡು ರಸ್ತೇಲಿ ಹೋಗ್ತಿದ್ದ ನಸ್ರುದ್ದೀನನನ್ನು ಶ್ರೀಮಂತನೊಬ್ಬ ತಡೆದು ನಿಲ್ಲಿಸಿದ.

ಅಲ್ಲಯ್ಯಾ, ಮೈ ಕೊರೆಯೋ ಚಳೀಲಿ ಮೈ ತುಂಬ ಬಟ್ಟೆ ಹಾಕ್ಕೊಳ್ಳದೇ ಹೋಗ್ತಿದ್ದೀಯಲ್ಲ, ನಿಂಗೇನು ಚಳಿಗಿಳಿ ನಾಟೋದಿಲ್ವಾ?

ನಿನ್ನ ಹತ್ರ ಬೇಕಾದಷ್ಟು ಬಟ್ಟೆ ಇದೆ. ಹಿಂಗಾಗಿ ನಿಂಗೆ ಚಳಿ ಆಗ್ತಿದೆ. ನನ್ನ ಹತ್ರ ಇರೋದೇ ಈ ಹರಕು ಅಂಗಿ, ತುಂಡು ಚಡ್ಡಿ, ನನ್ನಂತೋರಿಗೆ ಚಳಿ ಅಂತ ಹೇಳೋ ಸ್ವಾತಂತ್ರ್ಯ ಇರಲ್ಲ. ಚಳಿಯಾಗೋದು ಸೆಕೆಯಾಗೋದು ಅದಕ್ಕೆ ಉಪಾಯ ಕಂಡುಕೊಳ್ಳಬಲ್ಲಂಥ ಶ್ರೀಮಂತರಿಗೆ ಮಾತ್ರ.

-8-

ಒಂದು ದಿನ ಊರಿನ ಧರ್ಮಗುರುವೊಬ್ಬ ನಸ್ರುದ್ದೀನನನ್ನು ಊಟಕ್ಕೆ ಆಹ್ವಾನಿಸಿದ.

ಆವತ್ತಿಡೀ ನಸ್ರುದ್ದೀನ್ ಉಪವಾಸವಿದ್ದ. ಸಂಜೆಯಾಗುತ್ತಿದ್ದಂತೆ ಆತುರದಿಂದ ಧರ್ಮಗುರುವಿನ ಮನೆಗೆ ಹೋದ. ಹೋದ ತಕ್ಷಣ ಏನಾದರೂ ತಿಂದುಬಿಡಬೇಕು ಅಂದುಕೊಂಡಿದ್ದ.

ಧರ್ಮಗುರು ನಿರಾಳವಾಗಿದ್ದ. ಆತ ಅತ್ಯುತ್ಸಾಹದಿಂದ ನಸ್ರುದ್ದೀನನಿಗೆ ಹಲವಾರು ಧರ್ಮಸೂಕ್ಷ್ಮದ ಕತೆಗಳನ್ನು ಹೇಳತೊಡಗಿದ. ಸುಮಾರು ಎರಡು ಗಂಟೆಗಳ ಕಾಲ ಈ ಕಥಾಕಾಲಕ್ಷೇಪ ನಡೆಯಿತು. ನಸ್ರುದ್ದೀನನ ಹಸಿವು ಏರುತ್ತಲೇ ಇತ್ತು. ಮಾತು ಮುಗಿಯದೇ ಇದ್ದಾಗ, ತಡೆಯಲಾರದೆ ನಸ್ರುದ್ದೀನ್ ಕೇಳಿದ.

ನಾನು ನಿಮ್ಮನ್ನೇನೋ ಕೇಳಲೇ?

ಧಾರಾಳವಾಗಿ ಕೇಳಪ್ಪ. ನಮಗೀಗ ಪ್ರಶ್ನೆ ಕೇಳುವವರು ಬೇಕಾಗಿದ್ದಾರೆ. ಯಾವ ಪ್ರಶ್ನೆಗೆ ಬೇಕಿದ್ದರೂ ಉತ್ತರಿಸುತ್ತೇನೆ ತಗೋ.

ಅಂಥದ್ದೇನಿಲ್ಲ ಗುರುಗಳೇ. ನಿಮ್ಮ ಕತೆಗಳಲ್ಲಿ ಬರುವ ಪಾತ್ರಗಳು ಊಟ ಗೀಟ ಮಾಡುತ್ತವೋ ಇಲ್ಲವೋ?

-9-

ನಸ್ರುದ್ದೀನ್ ಕಣ್ಮುಚ್ಚಿ ಮಲಗಿದ್ದ.

ಅಲ್ಲಿಗೆ ಬಂದ ಅವನ ಭಾವ ಮೆತ್ತಗೆ ಕೇಳಿದ.

ಭಾವಾ, ನಿದ್ದೆ ಮಾಡಿದ್ದೀರೇನು?

ಏನು ಬೇಕಾಗಿತ್ತು?

ಒಂದೈದು ಸಾವಿರ ರುಪಾಯಿ ಬೇಕಾಗಿತ್ತು. ಸಾಲ ಕೊಡ್ತೀರಾ?

ಒಂದ್ ಕೆಲಸ ಮಾಡೋಣಂತೆ. ನಾನೀಗ ನಿನ್ನ ಮೊದಲನೇ ಪ್ರಶ್ನೆಗೆ ಉತ್ತರ ಕೊಡ್ತೀನಿ.

ನಾನು ನಿದ್ದೆ ಮಾಡ್ತಿದ್ದೀನಿ, ತೊಂದ್ರೆ ಮಾಡಬೇಡ.

ಕಥಾ ಕಮ್ಮಟಕ್ಕೆ ಮೋದಿಗೆ ಪತ್ರ ಬರೆದಿದ್ದ ಬಾಲಕಿಯ ಮುಗ್ಧ ಆಹ್ವಾನ

-10-

ನಸ್ರುದ್ದೀನನ ಮಗನಿಗೆ ಮದುವೆ ಆಗೋ ಆಸೆಯಾಯಿತು. ಅಪ್ಪನ ಹತ್ತಿರ ಬಂದು ಹೆಣ್ಣು ಹುಡುಕೋದಕ್ಕೆ ಹೇಳಿದ.

ಎಂಥಾ ಹೆಣ್ಣು ಬೇಕೋ ಮಗನೇ ನಿಂಗೆ.

ಬುದ್ಧಿವಂತಳಾಗಿರಬೇಕು. ಅನ್ನಿಸಿದ್ದನ್ನು ಹೇಳೋಳೂ ಆಗಿರಬೇಕು.

ಸರಿ, ನಡಿ ನನ್ನ ಜೊತೆ ಅಂತ ಹೇಳಿ ನಸ್ರುದ್ದೀನ್ ಮಗನನ್ನು ಕರೆದುಕೊಂಡು ಸಂತೆಗೆ ಹೋದ. ಅಲ್ಲೊಂದಷ್ಟು ಜನ ಸೇರಿದ ಮೇಲೆ ಮಗನ ಕಪಾಳಕ್ಕೊಂದು ಬಾರಿಸಿದ.

ಯೇಯ್ ದಡ್ಡಾ. ನಾನು ಏನು ಹೇಳಿದ್ದೀನೋ ಅದನ್ನೇ ಮಾಡಿದ್ದೀಯಲ್ಲೋ ಮುಠ್ಠಾಳ... ಏನು ತುಂಬಿದೆ ನಿನ್ನ ತಲೇಲಿ ಎಂದು ಬೈದ.

ಅಲ್ಲಿದ್ದ ಹೆಣ್ಣೊಬ್ಬಳು ಸಿಟ್ಟಿನಿಂದ ಯಾಕಪ್ಪಾ ಹೊಡೀತೀಯ ಅವನನ್ನ. ನೀನೇನು ಹೇಳಿದ್ದಾನೋ ಅದನ್ನೇ ಮಾಡಿದ್ದಾನಲ್ಲ ಅವನು. ಅದು ತಪ್ಪಾ ಅಂತ ಜೋರಾಗಿ ಕೇಳಿದಳು.

ಮಗನಿಗೆ ಸಂತೋಷವಾಯಿತು. ಇಂಥದ್ದೇ ಹುಡುಗಿ ಬೇಕು ಅಂದಿದ್ದು ನಾನು ಅಂದ. ನಸ್ರುದ್ದೀನ್ ಯಾವುದಕ್ಕೂ ಇನ್ನೊಂದು ಹೆಣ್ಣು ತೋರಿಸ್ತೀನಿ ಬಾ ಅಂತ ಹೇಳಿ, ಮಗನನ್ನು ಪಕ್ಕದೂರಿನ ಸಂತೆಗೆ ಕರೆದೊಯ್ದ. ಅಲ್ಲಿ ಎಲ್ಲರ ಮುಂದೆ ಅದೇ ಮಾತುಗಳನ್ನು ಹೇಳುತ್ತಾ ಕಪಾಳಕ್ಕೆ ಹೊಡೆದ.

ಅದನ್ನು ನೋಡುತ್ತಿದ್ದ ಹುಡುಗಿಯೊಬ್ಬಳು ಇನ್ನೂ ಎರಡೇಟು ಹಾಕು. ಹೇಳಿದಷ್ಟೇ ಮಾಡೋರಷ್ಟು ದಡ್ಡರಿಗೆ ಅದೇ ಸರಿಯಾದ ಶಿಕ್ಷೆ ಅಂದಳು.

ನಸ್ರುದ್ದೀನ್ ಮಗನಿಗೆ ಹೇಳಿದ.

ಮೊದಲನೇ ಹುಡುಗಿ ಬುದ್ಧಿವಂತೆ, ಅನ್ನಿಸಿದ್ದನ್ನು ಹಂಗಂಗೇ ಹೇಳೋಳು. ಆದರೆ ಈ ಹುಡುಗಿ ಇನ್ನೂ ಬುದ್ಧಿವಂತೆ. ಇವಳನ್ನೇ ಕಟ್ಕೋ, ಉದ್ಧಾರ ಆಗ್ತೀಯ.

click me!