ಒಂಬತ್ತು ಕಾದಂಬರಿಗಳು, ಹತ್ತೊಂಬತ್ತು ಕಥಾಸಂಕಲನಗಳು, ಆರು ಸಿನಿಮಾಗಳ ನಿರ್ದೇಶನ, ಐವತ್ತನಾಲ್ಕು ಸಿನಿಮಾಗಳಿಗೆ ಚಿತ್ರಕಥೆ, ಇಪ್ಪತ್ತೊಂದು ರಾಜ್ಯಮಟ್ಟದ ಸಿನಿಮಾ ಪ್ರಶಸ್ತಿಗಳಿಗೆ ಭಾಜನರಾದ ಎಂ.ಟಿ ವಾಸುದೇವನ್ ನಾಯರ್‌ಗೆ ಅಕ್ಷರ ನಮನವಿದು.
- ನರೇಂದ್ರ ಪೈ
ವೈಕಂ ಬಶೀರ್, ತಗಳಿ ಶಿವಶಂಕರ ಪಿಳ್ಳೆ ಸಾಲಿಗೆ ಸೇರುವ ಇನ್ನೊಬ್ಬ ಮಲಯಾಳಂ ಕತೆಗಾರ, ಕಾದಂಬರಿಕಾರ ಎಂ ಟಿ ವಾಸುದೇವನ್ ನಾಯರ್. ಅವರ ಸಣ್ಣಕತೆಗಳು, ಕಾದಂಬರಿಗಳು ಹಲವು ಭಾಷೆಗಳಿಗೆ ಅನುವಾದಗೊಂಡಿವೆ ಎನ್ನುವುದು ಸರಿಯೇ. ಆದರೆ ಕನ್ನಡದವರಾಗಿ ನಾವಂತೂ ನಿಜಕ್ಕೂ ಭಾಗ್ಯವಂತರು ಎನ್ನಬೇಕು. ಏಕೆಂದರೆ, ಕೆ ಕೆ ನಾಯರ್, ಸಿ ರಾಘವನ್, ಡಾ. ಅಶೋಕ್ ಕುಮಾರ್, ಬಿ ಕೆ ತಿಮ್ಮಪ್ಪ, ಮೋಹನ ಕುಂಟಾರ್, ಪಾರ್ವತಿ ಜಿ ಐತಾಳ್, ಕೆ ಕೆ ಗಂಗಾಧರನ್, ಕೆ ಎಸ್ ಕರುಣಾಕರನ್ ಮುಂತಾದವರಿಂದಾಗಿ ಸುಮಾರು ಹತ್ತು ಕೃತಿಗಳ ಮೂಲಕ ಎಂ ಟಿ ವಾಸುದೇವನ್ ನಾಯರ್ ಅವರ ಮಹತ್ವದ ಕೃತಿಗಳೆಲ್ಲವೂ ಕನ್ನಡಕ್ಕೆ ಬಂದಿವೆ. ಎಂಟಿ ಅವರನ್ನು ನಾವು ಕನ್ನಡದಲ್ಲಿಯೇ ಓದಬಹುದು. ಹಾಗಾಗಿ ನಮಗೆಲ್ಲ ಅವರು ಕನ್ನಡದವರಲ್ಲ ಅನಿಸುವುದು ಕಷ್ಟ.
ಆಕ್ಸ್‌ಫರ್ಡ್ ಯುನಿವರ್ಸಿಟಿ ಪ್ರೆಸ್ 2017ರಲ್ಲಿ ಮಲಯಾಳಂ ಭಾಷೆಯ ಕಾವ್ಯ, ನಾಟಕ, ಗದ್ಯ ಮತ್ತು ಕತೆ ಕಾದಂಬರಿಗಳ ಅಧ್ಯಯನ ಪೂರ್ಣ ಪರಿಚಯವುಳ್ಳ ಎರಡು ಬೃಹತ್ ಸಂಪುಟಗಳನ್ನು ಕೂಡ ಪ್ರಕಟಿಸಿದೆ. ಕನ್ನಡ ಅನುವಾದಗಳಲ್ಲೂ ನಮಗೆ ಫಕೀರ್ ಮಹಮ್ಮದ್ ಕಟ್ಪಾಡಿ, ಮೋಹನ್ ಕುಂಟಾರ್, ಕೃಷ್ಣ ಚೈತನ್ಯರಂಥವರು ಮುನ್ನುಡಿಗಳ ನೆಪದಲ್ಲಿ ಮಲಯಾಳಂ ಸಾಹಿತ್ಯದ ಸಂಕ್ಷಿಪ್ತ ಪರಿಚಯವನ್ನೂ, ಎಂಟಿ ಅವರ ಸಾಹಿತ್ಯದ ಪರಿಚಯವನ್ನೂ ಸಾಕಷ್ಟು ವಿಸ್ತಾರವಾಗಿಯೇ ಒದಗಿಸಿದ್ದಾರೆ. ಹಾಗಿದ್ದೂ, ನಮ್ಮ ಯು ಆರ್ ಅನಂತಮೂರ್ತಿ, ಲಂಕೇಶ್ ಅವರ ಸಮಕಾಲೀನ ತಲೆಮಾರಿನವರಾದ, ನವ್ಯ ಎಂದು ನಾವು ಗುರುತಿಸಿಕೊಂಡ, ಹೆಚ್ಚು ಪಾಶ್ಚಾತ್ಯ ಸಾಹಿತ್ಯದ ಪ್ರಭಾವ ಹೊಂದಿದ್ದ ಒಂದು ಕಾಲಘಟ್ಟದಲ್ಲಿಯೇ ಬರೆಯತೊಡಗಿದ್ದ ಎಂಟಿ ಅವರು ಅಂಥದ್ದನ್ನೆಲ್ಲ ಅಷ್ಟಾಗಿ ತಮ್ಮ ಸಾಹಿತ್ಯದಲ್ಲಿ ತೋರದೆ, ತೀರ ಸರಳವಾಗಿ ಬರೆಯುತ್ತಿದ್ದರು ಎನ್ನುವುದು ಒಂದು ಕೌತುಕವಾದರೆ, ಅಂಥ ಎಂಟಿ ಅವರ ಸಾಹಿತ್ಯದ ಆಕರ್ಷಣೆ ಏನು ಎನ್ನುವುದು ಇನ್ನೊಂದು ಕುತೂಹಲಕರ ಪ್ರಶ್ನೆ.
ಎಂಟಿ ಅವರ ಕಥಾ ಸಾಹಿತ್ಯದ ರಂಗಭೂಮಿ ಹಳ್ಳಿಯ ಬದುಕು. ಬಡತನದಲ್ಲಿ ಏಗುತ್ತಿರುವ ಅಳಿಯಕಟ್ಟಿನ ಸಂಸಾರ, ಅವಿಭಕ್ತ ಕುಟುಂಬಗಳು, ಗತಕಾಲದ ವೈಭವ ಕಳೆದುಕೊಂಡು ಕುಸಿಯುತ್ತಿರುವ ಮನೆತನಗಳು, ಸ್ತ್ರೀಪ್ರಧಾನ ಪಾತ್ರಭೂಮಿಕೆ. ತೀವ್ರವಾದ ಯಾವುದೇ ಪ್ರತಿರೋಧ ತೋರದ ನಮ್ರ ಬದುಕಿಗೆ ಪಕ್ಕಾದವರ ಚಿತ್ರಣ. ನಾಯಕನ ಮೌನ, ಒಂಟಿತನ, ಕೊಂಚ ಅರ್ಥವಾಗದ ನಡವಳಿಕೆ. ಸುಲಭವಾದ ಯಶಸ್ಸು ಅವನ ಬಾಳಲ್ಲಿ ಎದುರಾಗುವುದು ಕಡಿಮೆ. ಹಾಗೆ ಎದುರಾದರೂ ಅವನಲ್ಲಿ ಏನೋ ಕೊರತೆ, ಯಾವುದೋ, ಯಾರೋ ಕೈತಪ್ಪಿ ಹೋದ ವಿಷಾದ, ಸಂತ್ರಸ್ತ ಭಾವ. ಇಷ್ಟಾದ ಬಳಿಕ ಬದುಕಿನ ಸಂಕೀರ್ಣ ಮುಖಗಳು ತೆರೆದುಕೊಳ್ಳುತ್ತ ಹೋಗುವುದು ಕಥನದ ಮುಂದಿನ ಹೆಜ್ಜೆ. ಅವರು ಪುರಾಣದ ಪಾತ್ರಗಳತ್ತ ಹೊರಳಲಿ, ಜನ್ಮ ಮೃತ್ಯು ಅಪರಲೋಕದ ಜಿಜ್ಞಾಸೆಯತ್ತ ಹೊರಳಲಿ, ಕಥನದ ಸ್ಥಾಯೀ ಬಿಂದುಗಳು ಬದಲಾಗುವುದಿಲ್ಲ.
ಮಂಡ್ಯ ಕನ್ನಡ ಸಾಹಿತ್ಯ ಸಮ್ಮೇಳನ: 6 ಕವನಗಳು ಬೇಗ ಮುಗಿದವು, ಮತ್ತಾರು ಕವನಕ್ಕೆ ಶಿಳ್ಳೆ, ಚಪ್ಪಾಳೆ ಬಿದ್ದವು!
ಎಂಟಿ ಅವರ ಕಥನದ ನಿಜವಾದ ಆಕರ್ಷಣೆ ಅವರ ಸಂಭಾಷಣೆಗಳು. ಎಂಟಿ ಈ ಸಂಭಾಷಣೆಗಳನ್ನು ಹೇಗೆ ಹೆಣೆಯುತ್ತಾರೆಂದರೆ ಅವು ಪ್ರತಿ ಬಾರಿ ಹೇಳುತ್ತಿರುವುದಕ್ಕಿಂತ ಹೆಚ್ಚಿನದ್ದೇನೋ ಅಡಗಿಸಿಟ್ಟುಕೊಂಡಿರುತ್ತವೆ ಮತ್ತು ಓದುಗನನ್ನು ಆ ಹೇಳದೇ ಬಿಟ್ಟ ಮಾತು ಸದಾ ಕಾಡುತ್ತಲೇ ಇರುವಂತೆ ಅವುಗಳ ನೇಯ್ಗೆ ಇರುತ್ತದೆ. ಅದು ಕೆಲವೊಮ್ಮೆ ಮುಗ್ಧ ಮಕ್ಕಳ ಮಾತುಕತೆಯಾಗಿರುತ್ತದೆ, ಕೆಲವೊಮ್ಮೆ ಬಾಯ್ಬಿಟ್ಟು ಮಾತನಾಡಲು ಹೆದರುವ ಹೆಂಗಸರದ್ದೋ, ಕೂಲಿಯವರದ್ದೋ ಮಾತಾಗಿರುತ್ತದೆ. ಇನ್ನು ಕೆಲವೊಮ್ಮೆ ಪ್ರೇಮಿಗಳದ್ದು, ನೊಂದವರದ್ದು, ಮಾತು ಬೇಡವಾಗಿ ಬಿಟ್ಟವರದ್ದು. ಅದೇನಿದ್ದರೂ ಎಂಟಿ ಅವರ ಸಂಭಾಷಣೆಗಳು ಸದಾ ಓದುಗನನ್ನು ಕಾಡುತ್ತಲೇ ಉಳಿಯುವ , ಹೇಳದೇ ಬಿಟ್ಟ ಯಾವುದೋ ಹೊಳಹುಗಳೊಂದಿಗೆ ನಿಲ್ಲುತ್ತವೆ, ಗೊಂಡೆ ಕಟ್ಟದ ರೇಶ್ಮೆ ಸೀರೆಯ ಕುಚ್ಚುಗಳಂತೆ.
ಎಂಟಿ ಅವರ ಚೊಚ್ಚಲ ಕಾದಂಬರಿ ‘ಚೌಕಟ್ಟಿನ ಮನೆ’ (1958) ಅವರಿಗೆ ಅಪಾರ ಜನಪ್ರಿಯತೆ ತಂದುಕೊಟ್ಟಿತು. ಅಳಿಯಕಟ್ಟಿನ ಸಂಸಾರವೊಂದರ ಹೆಣ್ಣು ತನ್ನಿಷ್ಟದ ಗಂಡಿನ ಜೊತೆ ಓಡಿ ಹೋಗಿದ್ದರಿಂದ ವಾರಸುದಾರನಾಗುವ ಹಕ್ಕಿಗೆ ಎರವಾದ ಮಗ ಅಪ್ಪುಣ್ಣಿ ಈ ಕಾದಂಬರಿಯ ಕೇಂದ್ರ. ಇದು ಅವಿಭಕ್ತ ಕೌಟುಂಬಿಕತೆ ಶಿಥಿಲವಾಗುತ್ತಿರುವುದರ ಕಥನ ಕೂಡ ಹೌದು. ಇಂಥದೇ ಚೌಕಟ್ಟು ಹೊಂದಿದ, ಆದರೆ ಹೆಚ್ಚು ಸಂಕೀರ್ಣವಾದ ಕಾದಂಬರಿ ‘ಕಾಲ’ (1969)ದಲ್ಲಿ ಸೇತು ಮಾಧವನ್ ಅಪ್ಪುಣ್ಣಿಯ ಪಾತ್ರವನ್ನೇ ಮುಂದುವರಿಸಿದಂತಿದೆ. ಹಾಗೆ ನೋಡಿದರೆ ಎಂಟಿ ಅವರ ಎರಡನೆಯ ಕಾದಂಬರಿ ‘ದುರ್ಬೀಜ’ (1962) ಕೂಡ ತರವಾಡಿನ ಆರ್ಥಿಕ ಕುಸಿತ ಮತ್ತು ಅದರ ಬಲಿಪಶುವಾದ ಗೋವಿಂದನ್ ಕುಟ್ಟಿಯನ್ನು ಅವನ ಭಾವನೇ ಶೋಷಿಸುವ ಕತೆ, ನಿರರ್ಥಕ ಸೇಡಿನ ಕತೆ. ನಡುವಿನ ‘ಮಂಜು’ (1965) ನೈನಿತಾಲಿಗೆ ಬಂದ ಯುವಕನ ಪ್ರೇಮದ ಮಾತುಗಳನ್ನು ನಂಬಿ ವ್ಯರ್ಥ ಕಾಯುವಿಕೆಯಲ್ಲಿ ಕಲ್ಲಾಗುವ ಕತೆ. ಇಂಥ ವ್ಯರ್ಥ ನಿರೀಕ್ಷೆಯೊಂದು ಎಂಟಿ ಅವರ ಹೆಚ್ಚಿನ ಎಲ್ಲ ಕತೆ ಕಾದಂಬರಿಗಳಲ್ಲೂ ಸ್ಥಾಯಿಯಾಗಿ ಇದ್ದೇ ಇರುತ್ತದೇನೋ ಅನಿಸುವಂತೆ ಅವರ ಒಟ್ಟು ಕೃತಿಗಳನ್ನು ಮನಸ್ಸಿಗೆ ತಂದುಕೊಂಡಾಗೆಲ್ಲ ಅನಿಸಿಯೇ ಅನಿಸುತ್ತದೆ. ‘ಭೀಮಾಯಣ’ (1984)ದ ಭೀಮನನ್ನು ಕೂಡ ಸದಾ ಎರಡನೆಯವನಾಗಿ ಅನುಭವಿಸಿದ ಅಪಮಾನದ ನೆರಳಿನಲ್ಲಿಯೇ ಅವರು ಕಾಣಿಸಿದ್ದಾರೆ. 2002ರಲ್ಲಿ ಬಂದ ‘ವಾರಾಣಸಿ’ ಮಾತ್ರ ಈ ಎಲ್ಲ ಮೆಲಂಕಲಿಯೂ ಇನ್ನೊಂದೇ ಸ್ತರಕ್ಕೇರಿದ, ಜಿಜ್ಞಾಸೆಯ ಸಂಕೀರ್ಣತೆಯಲ್ಲಿ ಮೂಡಿಬಂದ ಬಹಳ ಅಪರೂಪದ ಕಾದಂಬರಿ.
ಇವಲ್ಲದೆ, ‘ಕುಟ್ಯಕ್ಕ ಮತ್ತು ಇತರ ಕಥೆಗಳು’ ಹಾಗೂ ‘ಶ್ರೀಖಡ್ಗ ಮತ್ತು ಕಾಲಗಗ್ಗರ’ ಎಂಬ ಎರಡು ಕಥಾ ಸಂಕಲನಗಳನ್ನು, ಎಂ ಟಿ ವಾಸುದೇವನ್ ನಾಯರ್ ಅವರ ಕತೆಗಳನ್ನು ಮೊತ್ತ ಮೊದಲ ಬಾರಿಗೆ ಕನ್ನಡಕ್ಕೆ ಪರಿಚಯಿಸಿದ ಕೆ ಕೆ ನಾಯರ್ ಅವರೇ ಅನುವಾದಿಸಿದ್ದಾರೆ. ಇವಲ್ಲದೆಯೂ ಕನ್ನಡದಲ್ಲಿ ಪ್ರಕಟವಾಗಿರುವ ಕೆಲವು ಮಲಯಾಳಂ ಕಥೆಗಳ ಸಂಕಲನಗಳಲ್ಲಿ ಒಂದೆರಡಾದರೂ ಎಂಟಿ ಕತೆಗಳು ಇದ್ದೇ ಇರುತ್ತವೆ. ಬಹುಶಃ ಎಂಟಿ ಅವರ ಒಂದು ಆತ್ಮಕಥಾನಕ ಮಾತ್ರ ಕನ್ನಡಕ್ಕೆ ಬರಬೇಕಾಗಿತ್ತು ಬಂದಿಲ್ಲ ಎಂಬ ಕೊರತೆಯನ್ನು ಬಿಟ್ಟರೆ ಅವರ ಬಹುತೇಕ ಎಲ್ಲ ಮಹತ್ವದ ಕೃತಿಗಳೂ ಕನ್ನಡದಲ್ಲಿವೆ.
ಮಂಡ್ಯ ಸಾಹಿತ್ಯ ಸಮ್ಮೇಳನ: ನೀರು ಹಂಚಿಕೆ ಸಮಸ್ಯೆ ಶೀಘ್ರ ಇತ್ಯರ್ಥ ಆಗಲಿ, ನೀರಾವರಿ ತಜ್ಞ ಕ್ಯಾ.ರಾಜಾರಾವ್
ಒಂಬತ್ತು ಕಾದಂಬರಿಗಳು, ಹತ್ತೊಂಬತ್ತು ಕಥಾಸಂಕಲನಗಳು, ಆರು ಸಿನಿಮಾಗಳ ನಿರ್ದೇಶನ, ಐವತ್ತನಾಲ್ಕು ಸಿನಿಮಾಗಳಿಗೆ ಚಿತ್ರಕಥೆ, ಇಪ್ಪತ್ತೊಂದು ರಾಜ್ಯಮಟ್ಟದ ಸಿನಿಮಾ ಪ್ರಶಸ್ತಿಗಳು, ಏಳು ರಾಷ್ಟ್ರೀಯ ಮಟ್ಟದ ಚಲಚಿತ್ರ ಪ್ರಶಸ್ತಿಗಳು, ಹಲವಾರು ಲೇಖನಗಳ ಸಂಕಲನಗಳು ಎಂಟಿ ಅವರ ಸಾಧನೆ. ಪದ್ಮಭೂಷಣ, ಜ್ಞಾನಪೀಠ, ಜೆ ಸಿ ಡೇನಿಯಲ್ ಅವಾರ್ಡ್, ಕೇರಳ ಜ್ಯೋತಿ ಅವಾರ್ಡ್, ಕೇಂದ್ರ ಮತ್ತು ರಾಜ್ಯ ಸಾಹಿತ್ಯ ಅಕಾಡಮಿಯ ಬಹುಮಾನಗಳು...ಆ ಸಾಧನೆಗೆ ದೊರೆತ ಕೆಲವು ಗೌರವಗಳಷ್ಟೇ.
ಮೋಹನ್ ಕುಂಟಾರ್ ಅನುವಾದದ ‘ವಾಸುದೇವನ್ ನಾಯರ್ ಕತೆಗಳು’ ಎಂಬ ಕೃತಿಯಲ್ಲಿ ಎಂಟಿಯವರೇ ಹೇಳಿಕೊಂಡ ಆತ್ಮಕಥನದ ಭಾಗವಿದೆ. ಅಲ್ಲಿ ಅವರ ಬಾಲ್ಯ, ಬರವಣಿಗೆಯ ಆರಂಭದ ಅವಮಾನಗಳು, ನಿರೀಕ್ಷೆ, ಕನಸು, ಮನೆಯ ಪರಿಸ್ಥಿತಿಯ ವಿಪರ್ಯಾಸ, ಮನಸ್ಸಿನಲ್ಲಿ ಉಳಿದು ಹೋದ ಆಪ್ತ ಚಿತ್ರಗಳು, ವ್ಯಕ್ತಿಗಳ ಕುರಿತೆಲ್ಲ ಅವರಾಡಿದ ಮಾತುಗಳಿವೆ. ಅದನ್ನು ಈಗ, ಅವರಿಲ್ಲದ ಹೊತ್ತಲ್ಲಿ ಓದುತ್ತಿದ್ದರೆ ಅವರು ಅದೆಷ್ಟು ಸರಳವಾಗಿ ಸಾಹಿತ್ಯದ ಜೀವಧಾತುವಿನ ಬಗ್ಗೆ ಹೇಳಿಬಿಟ್ಟಿದ್ದಾರಲ್ಲ ಅನಿಸಿ ಅಚ್ಚರಿಯಾಗುತ್ತದೆ.
ಒಂದು ಕತೆಯೋ ಕಾದಂಬರಿಯೋ ಕವಿತೆಯೋ ನಮಗೇಕೆ ಇಷ್ಟವಾಗುತ್ತದೆ, ಅದೇಕೆ ನಮ್ಮ ಮನಸ್ಸಿನಲ್ಲಿ ಅಚ್ಚಳಿಯದ ಒಂದು ಸ್ಮೃತಿಯಾಗಿ ಅಷ್ಟಿಷ್ಟಾದರೂ ಉಳಿದುಕೊಂಡು ಬಿಡುತ್ತದೆ ಎನ್ನುವುದಕ್ಕೆ ಉತ್ತರವಿದೆಯೆ? ಅದರಲ್ಲಿ ಒಳ್ಳೆಯ ಕತೆಯಿತ್ತು ಎಂಬ ಕಾರಣಕ್ಕಾಗಿಯಲ್ಲ. ಎಷ್ಟೋ ಬಾರಿ ನಮಗೆ ತುಂಬ ಇಷ್ಟವಾದ ಪುಸ್ತಕ, ಕಾದಂಬರಿಯ ಕಥಾನಕ ನಮಗೆ ನೆನಪೇ ಇರುವುದಿಲ್ಲ! ಅದರ ಥೀಮ್ ಚೆನ್ನಾಗಿತ್ತು ಎಂಬ ಕಾರಣಕ್ಕೂ ಅಲ್ಲ. ತಾತ್ವಿಕ ಆಯಾಮವನ್ನು ಒಬ್ಬ ಕತೆಗಾರ ತೊಡಿಸಿರುತ್ತಾನೆ, ಅಂಗಿ ತೊಡಿಸಿದ ಹಾಗೆ; ನೀವು ಎಲ್ಲಿ ನಿಂತು ನೋಡುತ್ತಿದ್ದೀರಿ ಎನ್ನುವುದರ ಮೇಲೆ ನೋಡುತ್ತಿರುವುದರ ತಾತ್ವಿಕತೆ ಬದಲಾಗುತ್ತದೆ ಎನ್ನುವುದೂ ಕ್ರಮೇಣ ನಮಗೆ ಗೊತ್ತಾಗಿ ಬಿಡುತ್ತದೆ. ಇದ್ಯಾವುದೂ ನಮಗೆ ಕರ್ವಾಲೋ ಇಷ್ಟವಾಗಲು, ಮಲೆಗಳಲ್ಲಿ ಮದುಮಗಳು ಇಷ್ಟವಾಗಲು, ಬೆಟ್ಟದ ಜೀವ ಇಷ್ಟವಾಗಲು ಕಾರಣವಾಗಿರುವುದಿಲ್ಲ. ಯಾವುದೋ ಒಂದು ಪುಟ್ಟ ವಿವರ, ನಮ್ಮ ನೆನಪುಗಳಲ್ಲಿ ಹುದುಗಿದ್ದ ಯಾವುದೋ ಇನ್ನೊಂದು ಚಿತ್ರದೊಂದಿಗೆ ಇದ್ದಕ್ಕಿದ್ದಂತೆ ಸ್ಥಾಪಿಸಿಕೊಂಡು ಬಿಡುವ ಒಂದು ನಂಟಿದೆಯಲ್ಲ, ಅದು ನಮಗೂ ಆ ಲೇಖಕನಿಗೂ ಒಂದು ನಂಟನ್ನು ನಿಗದಿಪಡಿಸುತ್ತಿರುತ್ತದೆ. ಪುಟ್ಟ ಹುಡುಗನೊಬ್ಬ ಹೆದರುತ್ತಲೇ ನಿರ್ಜನ ಪ್ರದೇಶದಲ್ಲಿರುವ ಪಾಳುಬಿದ್ದ ಬಂಗಲೆಯೊಳಗೆ ಹೊಕ್ಕು, ಅಲ್ಲಿ ಆಳೆತ್ತರ ಬೆಳೆದು ನಿಂತ ಹುಲ್ಲು, ಪೊದೆಗಳ ನಡುವೆ ಕಂಗಾಲಾದ ಕ್ಷಣ ಕತೆಯ, ಕಾದಂಬರಿಯ ಅಥವಾ ಕವಿತೆಯ ಮೂಲ ಎಳೆಯೊಂದಿಗೆ ಯಾವುದೇ ಸಂಬಂಧ ಹೊಂದಿಲ್ಲದೇ ಇರಬಹುದು, ಆದರೆ ಆ ಕ್ಷಣ ನಿಮ್ಮ ಮನಸ್ಸಿನಲ್ಲಿ ಎಂದೋ ದಾಖಲಾಗಿದ್ದ ಇನ್ಯಾವುದೋ ನೆನಪಿನ ಜೊತೆ ಸಂಬಂಧ ಕಟ್ಟಿಕೊಂಡು ಬಿಡಬಹುದು. ಅಷ್ಟು ಸಾಕು, ಕೆಲವೊಮ್ಮೆ ನಮಗೆ ಒಬ್ಬ ಲೇಖಕ ನಮ್ಮವನಾಗಿ ಬಿಡುವುದಕ್ಕೆ. ಏಕೆಂದರೆ, ನಿಮ್ಮ ನೆನಪಿನ ಚಿತ್ರದೊಂದಿಗೆ ಆವತ್ತು ನಿಮಗೆ ಅರ್ಥವಾಗಿದ್ದು ಆ ಲೇಖಕನಿಗೂ ಅರ್ಥವಾಗಿತ್ತು ಎಂಬ ಸಣ್ಣ ಸಂಗತಿ ಸಾಕಾಗುತ್ತದೆ ಅದಕ್ಕೆ. ಏಕೆಂದರೆ, ಆ ಹುಡುಗನಿಗೆ ಆ ಕ್ಷಣಕ್ಕೆ ಸಂಭವಿಸಿದ್ದು ಏನೆಂಬುದು ನಿಮಗೆ ಗೊತ್ತಾಗಿ ಬಿಟ್ಟಿದೆ! ಆದರೂ ಬರೆದಾತ ಅದನ್ನು ಹೇಳಿಯೇ ಇಲ್ಲ!!
ಮಂಡ್ಯ ಸಾಹಿತ್ಯ ಸಮ್ಮೇಳನಕ್ಕೆ ಶಕ್ತಿ ಯೋಜನೆ ಸಾಥ್!
ಎಂಟಿ ಹೊಂದಿದ್ದ ಅಪಾರ ಜನಪ್ರಿಯತೆಗೆ ಅದು ಕಾರಣ. ಹಾಗಾಗಿಯೇ ಅವರು ಸದಾ ನನ್ನ ಕತೆಗಳು ನನ್ನೂರಿಗೆ ಋಣಿ ಎನ್ನುತ್ತಿದ್ದರು. ಊರಿನಲ್ಲಿ ಕಳೆದ ಕೆಲವು ಗಳಿಗೆಗಳನ್ನು, ನೆನಪಿನಲ್ಲಿ ನಿಂತ ಚಿತ್ರಗಳನ್ನು ನೆನೆಯುತ್ತಲೇ ಇರುತ್ತಿದ್ದರು. ಊರಿನಲ್ಲಿ ಯಾವೆಲ್ಲ ಗೆಳೆಯರೊಂದಿಗೆ, ಹಿರಿಯರೊಂದಿಗೆ ಕಾಲ ಕಳೆದಿದ್ದರೋ ಅವರನ್ನೆಲ್ಲ ನೆನಪಿಸಿಕೊಂಡು ನೆಮ್ಮದಿ ಕಾಣುತ್ತಿದ್ದರು, ತೀರ ನಿನ್ನೆ ಮೊನ್ನೆಯ ವರೆಗೂ.