
ಬಸವರಾಜ ಬೊಮ್ಮಾಯಿ, ಸಂಸದ ಹಾಗೂ ಮಾಜಿ ಮುಖ್ಯಮಂತ್ರಿ
ಸರ್ಕಾರ ಯಾವಾಗ ವಿಫಲವಾಗುತ್ತದೆಯೋ ಮತ್ತು ಜನಪ್ರಿಯತೆ ಕಳೆದುಕೊಳ್ಳುತ್ತದೆಯೋ ಆಗೆಲ್ಲಾ ಕಠಿಣ ಕಾನೂನಿನ ಮೊರೆ ಹೋಗುವುದಕ್ಕೆ ಇತಿಹಾಸದಲ್ಲಿ ಸಾಕ್ಷಿಗಳಿವೆ. ಕಠಿಣ ಕಾನೂನುಗಳು ಪ್ರಜಾಪ್ರಭುತ್ವದ ಮೂಲ ಉದ್ದೇಶಕ್ಕೆ ಮಾರಕ. ಸರ್ಕಾರ ಟೀಕೆಗಳನ್ನು ಎದುರಿಸುವ ಸಾಮರ್ಥ್ಯ ಕಳೆದುಕೊಂಡಿರುವುದರ ಸಂಕೇತವೇ ಇಂತಹ ಕಾನೂನುಗಳು. ಅಭಿವ್ಯಕ್ತಿ ಸ್ವಾತಂತ್ರ್ಯ ಸಂವಿಧಾನದ ಮೂಲ ಉದ್ದೇಶಗಳಲ್ಲಿ ಬಹಳ ಪ್ರಮುಖವಾದದ್ದು. ಹಲವಾರು ಸಂದರ್ಭಗಳಲ್ಲಿ ಇದನ್ನು ಕೋರ್ಟ್‌ನಲ್ಲಿ ಪರೀಕ್ಷೆಗೆ ಒಳಪಡಿಸಿದಾಗ ಸುಪ್ರೀಂ ಕೋರ್ಟ್ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಎತ್ತಿ ಹಿಡಿದಿದೆ. ಇದರ ದುರುಪಯೋಗ ಆಗಬಾರದು ಎನ್ನುವಂತಹ ತೀರ್ಮಾನವನ್ನೂ ಸುಪ್ರೀಂಕೋರ್ಟ್ ಕೊಟ್ಟಿದೆ.
ಅದಕ್ಕಾಗಿ ಹಿಂದಿನ ಐಪಿಸಿ, ಈಗಿನ ಬಿಎನ್‌ಎಸ್ ಕಾಯ್ದೆಯಲ್ಲಿ ಸಮಾಜದಲ್ಲಿ ಅಶಾಂತಿ ಉಂಟು ಮಾಡುವ ದ್ವೇಷದ ಮಾತುಗಳಿಗೆ ಶಿಕ್ಷೆ ಕೊಡುವ ಅವಕಾಶವೂ ಇದೆ. ಐಪಿಸಿ ಸೆಕ್ಷನ್ 153, 153(2), 295, 295(2), 505ರಲ್ಲಿ ದ್ವೇಷ ಅಪರಾಧವನ್ನು ವ್ಯಾಖ್ಯಾನಿಸಲಾಗಿದೆ. ಅದರಂತೆ ಬಿಎನ್ಎಸ್ಎಸ್ ಸೆಕ್ಷನ್ 106ರಲ್ಲಿ ಈಗಾಗಲೇ ಶಿಕ್ಷೆ ಕೊಡುವ ಅವಕಾಶಗಳಿದ್ದು, ಈಗ ಇಂತಹ ಒಂದು ವಿಶೇಷ ಕಾನೂನಿನ ಅವಶ್ಯಕತೆ ಇದೆಯೇ ಎನ್ನುವುದನ್ನು ರಾಜ್ಯ ಸರ್ಕಾರ ಜನರಿಗೆ ತಿಳಿಸಬೇಕಿರುವುದು ಕರ್ತವ್ಯ. ಯಾವ ಕಾರಣಕ್ಕಾಗಿ ಕಾನೂನು ತಂದರು? ಯಾವ ಘಟನೆಗಾಗಿ ಕಾನೂನು ತಂದರು? ಈ ಕಾನೂನು ತರಲು ರಾಜ್ಯದಲ್ಲಿ ಯಾವ ಸಾಮಾಜಿಕ, ರಾಜಕೀಯ ವಾತಾವರಣ ನಿರ್ಮಾಣವಾಗಿದೆ ಎಂಬ ಸ್ಪಷ್ಟೀಕರಣವನ್ನು ರಾಜ್ಯ ಸರ್ಕಾರ ಕೊಡಬೇಕು.
ಜನರು ಜೈಲಿನಲ್ಲಿ ಕೊಳೆವ ಸ್ಥಿತಿ: ಯಾವುದೇ ಕಾನೂನು ಸದ್ಬಳಕೆ ಜತೆಗೆ ದುರ್ಬಳಕೆಯೂ ಆಗುತ್ತದೆ. ಹೀಗಾಗಿ ಕಾನೂನಿನಲ್ಲಿ ಇರುವಂತಹ ಅಂಶಗಳಿಗಿಂತ ಅದನ್ನು ತಿರುಚಿ ಅರ್ಥೈಸುವ ಸಾಧ್ಯತೆಯ ಬಗ್ಗೆಯೂ ಕಾನೂನು ರಚನೆಯ ಸಂದರ್ಭದಲ್ಲಿ ಎಚ್ಚರಿಕೆ ವಹಿಸಬೇಕಾಗುತ್ತದೆ. ಅಂತಹ ಎಚ್ಚರಿಕೆಯನ್ನು ಈ ಕಾನೂನಿನಲ್ಲಿ ವಹಿಸದೇ ಇರುವುದು ಎದ್ದು ಕಾಣುತ್ತದೆ. ದ್ವೇಷ ಭಾಷಣದ ವ್ಯಾಖ್ಯಾನದಿಂದ ಹಿಡಿದು ದ್ವೇಷ ಭಾಷಣಕ್ಕೆ ಈಗಿರುವ ಕಾನೂನಿನಲ್ಲಿ ಶಿಕ್ಷೆಯ ಅವಧಿ ಗಮನಿಸಿದರೆ ಅಭಿವ್ಯಕ್ತಿ ಸ್ವಾತಂತ್ರ್ಯದಹರಣ ಖಚಿತ. ಸಾಮಾನ್ಯ ಜನರನ್ನು ಜೈಲುಗಳಲ್ಲಿ ತುಂಬಿಸುವ ಹುನ್ನಾರ ಇದರಲ್ಲಿ ಅಡಗಿದೆ. ಯಾಕೆಂದರೆ ಇದರಲ್ಲಿ ಅಪರಾಧಿಗಳಿಗೆ ಏಳರಿಂದ ಹತ್ತು ವರ್ಷ ಶಿಕ್ಷೆ ಇದೆ ಅನ್ನುವುದನ್ನು ನೋಡಿದಾಗ, ಬೇಲ್ ಸಿಗದೇ ಹಲವಾರು ಜನ ಜೈಲಿನಲ್ಲಿ ಕೊಳೆಯುವ ಸ್ಥಿತಿ ಬರುತ್ತದೆ.
ಪ್ರಜೆಗಳ ಧ್ವನಿಯನ್ನೇ ದಮನ ಮಾಡುವ ಗಂಭೀರ ಅಂಶ ಈ ಕಾನೂನಿನಲ್ಲಿದೆ. ಹಲವಾರು ಗಂಭೀರ ಪ್ರಕರಣಗಳಲ್ಲಿ ರಾಜ್ಯದ ಪೊಲೀಸರು ಸರಿಯಾಗಿ ತನಿಖೆ ಮಾಡದೇ ಅಪರಾಧಿಗಳು ನುಣುಚಿಕೊಳ್ಳುಂತಾಗಿದೆ. ಉದಾಹರಣೆಗೆ ಪವಿತ್ರ ಕ್ಷೇತ್ರ ಧರ್ಮಸ್ಥಳ ಮತ್ತು ಧರ್ಮಾಧಿಕಾರಿಗಳ ವಿರುದ್ಧ ದ್ವೇಷ ಮೂಡಿಸುವ ದೊಡ್ಡ ಹುನ್ನಾರವೇ ನಡೆದು ಹೋಯಿತು. ಮತ್ತು ಕೆಲವರು ಮಾಡಿರುವ ಆರೋಪ ಸುಳ್ಳೆಂದು ಸಾಬೀತಾಗಿದೆ. ಆದರೂ ಸುಳ್ಳು ಆರೋಪ ಮಾಡಿದವರ ಮೇಲೆ ಕನಿಷ್ಠ ಎಫ್‌ಐಆರ್ ಆಗಿ ತನಿಖೆ ಆಗದಿರುವುದು ರಾಜ್ಯ ಸರ್ಕಾರ ತನಗೆ ಬೇಕಾದ ಪ್ರಕರಣಗಳಲ್ಲಿ ಹಸ್ತಕ್ಷೇಪ ಮಾಡುತ್ತಿರುವುದು ಬಹಳ ಸ್ಪಷ್ಟವಾಗಿದೆ.
ಎಸ್‌ಐಟಿ ಮೂಲಕ ಈಗಾಗಲೇ ಹಗೆತನ: ಇತ್ತೀಚಿನ ದಿನಗಳಲ್ಲಿ ವಿರೋಧ ಪಕ್ಷಗಳನ್ನು ದಮನ ಮಾಡಲು ಹಲವಾರು ಎಸ್‌ಐಟಿಗಳನ್ನು ರಚನೆ ಮಾಡಿ ಆ ಪ್ರಕರಣಗಳ ತನಿಖೆಯನ್ನು ನೇರವಾಗಿ ಕೈಯಲ್ಲಿ ಇಟ್ಟುಕೊಂಡು ಸರ್ಕಾರ ರಾಜಕೀಯ ಹಗೆತನವನ್ನು ಸಾಧಿಸುತ್ತಿರುವುದನ್ನು ನೋಡಿದ್ದೇವೆ. ಈ ಸರ್ಕಾರ ಬಂದ ಮೇಲೆ ಹತ್ತು ಹಲವಾರು ಎಸ್‌ಐಟಿಗಳಾಗಿವೆ. ಸಾಮಾನ್ಯ ಪೊಲೀಸರು ಮಾಡಬೇಕಾದ ತನಿಖೆಯನ್ನು ಎಸ್‌ಐಟಿ ಮೂಲಕ ಮಾಡಿಸಿ ಸರ್ಕಾರದ ಲೋಪವನ್ನು ಸಂಪೂರ್ಣವಾಗಿ ಮುಚ್ಚಿ ಹಾಕಲಾಗುತ್ತಿದೆ. ಉದಾಹರಣೆಗೆ ಆರ್‌ಸಿಬಿ ಕೇಸಿನಲ್ಲಿ ಸರ್ಕಾರದ ಲೋಪ, ರಾಜಕಾರಣಿಗಳು, ಅಧಿಕಾರಿಗಳ ಲೋಪವನ್ನು ಮುಚ್ಚಿಹಾಕಿ ಕೇವಲ ಆರ್‌ಸಿಬಿ ಮ್ಯಾನೇಜ್‌ಮೆಂಟ್ ಮೇಲೆ ಆರೋಪ ಹೊರಿಸಿರುವುದು ಸಾಮಾನ್ಯ ಜ್ಞಾನ ಇರುವವರಿಗೆ ಗೊತ್ತಾಗುತ್ತದೆ.
ಪ್ರಧಾನಿ ಬಗ್ಗೆ ನಿಂದನೆ ದ್ವೇಷವಲ್ಲವೇ?: ಕಾಂಗ್ರೆಸ್ ಪಕ್ಷ ವಾಕ್ ಸ್ವಾತಂತ್ರ್ಯ, ವ್ಯಕ್ತಿ ಸ್ವಾತಂತ್ರ್ಯಹರಣ ಮಾಡುತ್ತಿರುವುದು ಇದು ಮೊದಲಲ್ಲಾ. ಸ್ವಾತಂತ್ರ್ಯದ ನಂತರ ಪ್ರಜಾಪ್ರಭುತ್ವಕ್ಕೆ ಅತ್ಯಂತ ಕರಾಳವಾಗಿರುವ ತುರ್ತು ಪರಿಸ್ಥಿತಿಯ ವೇಳೆ ನಾಗರಿಕರ ಎಲ್ಲ ಹಕ್ಕುಗಳನ್ನು ಮೊಟಕುಗೊಳಿಸಿ ನ್ಯಾಯಾಂಗ ಮತ್ತು ಪತ್ರಿಕಾ ರಂಗದ ಮೇಲೆ ತನ್ನ ಗದಾ ಪ್ರಹಾರ ಮಾಡಿರುವಂಥದ್ದನ್ನು ಎಂದೂ ಮರೆಯುವಂತಿಲ್ಲ. ತುರ್ತು ಪರಿಸ್ಥಿತಿ ಹೇರಿರುವುದೇ ಅಧಿಕಾರ ದುರುಪಯೋಗದ ಪರಾಕಾಷ್ಠೆ. ಇತ್ತೀಚಿನ ದಿನಗಳಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರಿಗೆ ಏನೆಲ್ಲಾ ಶಬ್ದಗಳಿಂದ ನಿಂದನೆ ಮಾಡಲಾಗಿದೆ. ಅದು ದ್ವೇಷ ಭಾಷಣ ಆಗುವುದಿಲ್ಲವೇ? ಕಾಂಗ್ರೆಸ್ ಪಕ್ಷದ ಈ ನಾಯಕರ ದ್ವೇಷ ಭಾಷಣಕ್ಕೆ ನಮ್ಮ ರಾಜ್ಯದಲ್ಲಿ ಏನು ಕ್ರಮ ಕೈಗೊಂಡಿದ್ದಾರೆ? ಅತ್ಯಂತ ಕೆಟ್ಟ ಪದಗಳನ್ನು ಬಳಸಿರುವ ಕಾಂಗ್ರೆಸ್ ನಾಯಕರ ಮೇಲೆ ಏನೂ ಕ್ರಮ ತೆಗೆದುಕೊಳ್ಳದಿರುವ ಸರ್ಕಾರ ಈಗ ದ್ವೇಷ ಭಾಷಣದ ವಿರುದ್ಧದ ಕಾನೂನು ತಂದಿರುವುದು ವಿಪರ್ಯಾಸ ಮತ್ತು ಪಕ್ಷಪಾತದಿಂದ ಈ ಕಾನೂನು ಜಾರಿಯಾಗುವ ಎಲ್ಲ ರೀತಿಯ ಸಂಕೇತಗಳಿವೆ.
ದ್ವೇಷ ಭಾಷಣದ ವ್ಯಾಖ್ಯಾನವನ್ನು ಸಮರ್ಪಕವಾಗಿ ಮಾಡದೆ ಎಲ್ಲ ಅಧಿಕಾರವನ್ನು ಪೊಲೀಸರಿಗೆ ಕೊಟ್ಟಿರುವುದರ ಹಿಂದೆ ರಾಜ್ಯ ಸರ್ಕಾರದ ದುರುದ್ದೇಶ ಎದ್ದು ಕಾಣಿಸುತ್ತದೆ. ಯಾವುದಾದರೂ ಒಂದು ಕಾನೂನಿನಲ್ಲಿ ಬಹಳ ಸ್ಪಷ್ಟವಾಗಿರುವಂಥ ಕಾನೂನಿನ ವಿಧಿ- ವಿಧಾನಗಳು ಮತ್ತು ಅದರ ಅನುಷ್ಠಾನದ ರೀತಿ ನೀತಿಗಳು ಇರಬೇಕು. ಅಸ್ಪಷ್ಟವಾಗಿರುವ ಕಾನೂನು ವಿವಾದಕ್ಕೆ ಎಡೆ ಮಾಡಿಕೊಡುತ್ತದೆ. ಇಂತಹ ಪ್ರಾಥಮಿಕ ಜ್ಞಾನವಿಲ್ಲದೇ ಈ ಕಾನೂನು ಮಾಡಲಾಗಿದೆ.
ಸರ್ಕಾರ ಯಾವುದಾದರೂ ಜನ ವಿರೋಧಿ ನೀತಿಯನ್ನು ತಂದರೆ ಅದರ ವಿರುದ್ಧ ಮಾತನಾಡುವುದು ದ್ವೇಷ ಭಾಷಣವಾಗುತ್ತದೆಯೇ? ಸರ್ಕಾರ ಯಾವುದಾದರೂ ಕಾನೂನು ದುರ್ಬಳಕೆ ಮಾಡಿ ಪಕ್ಷಪಾತ ಮಾಡಿದರೆ ಅದರ ವಿರುದ್ಧ ಧ್ವನಿ ಎತ್ತಿದರೆ ದ್ವೇಷ ಭಾಷಣ ಆಗುತ್ತದೆಯೇ? ಆಡಳಿತದಲ್ಲಿ ಇರುವ ನಾಯಕರು, ಮಂತ್ರಿಗಳ ಹೇಳಿಕೆಗಳ ಮೇಲೆ ಯಾರಾದರೂ ಪ್ರತಿಕ್ರಿಯೆ ಕೊಟ್ಟರೆ ದ್ದೇಷ ಭಾಷಣ ಆಗುತ್ತದೆಯೇ? ರಾಜ್ಯ ಸರ್ಕಾರದಿಂದ ಯಾವುದಾದರೂ ಸಂಘಟನೆ, ಜನಾಂಗ, ಧರ್ಮಕ್ಕೆ ಅಪಮಾನ, ಅವಮಾನ ಆದರೆ, ಅದರ ವಿರುದ್ಧ ಮಾತನಾಡಿದರೆ ಅದು ದ್ವೇಷ ಭಾಷಣವಾಗುತ್ತದೆಯೇ? ಈ ರೀತಿಯ ಹಲವಾರು ಪ್ರಶ್ನೆಗಳು ಜನರ ಮನಸ್ಸಿನಲ್ಲಿವೆ.
ತರಬೇಕಾದ ಕಾನೂನು ಬೇಕಾದಷ್ಟಿವೆ. ರೈತರ ಬೀಜ, ಗೊಬ್ಬರವನ್ನು ಕಾಳ ಸಂತೆಯಲ್ಲಿ ಮಾರಾಟ ಮಾಡಿದರೆ ಅಂತಹ ವ್ಯಾಪಾರಿಗಳಿಗೆ ದಂಡಿಸಲು ಯಾವುದೇ ಕಠಿಣ ಕಾನೂನು ಇಲ್ಲ. ಅದನ್ನು ತಾವು ತರುವ ಚಿಂತನೆ ಮಾಡಬೇಕು. ರಾಜ್ಯದಲ್ಲಿ ವ್ಯಾಪಕವಾಗಿರುವ ಇಸ್ಪೀಟ್, ಓಸಿ ಅಡ್ಡೆಗಳ ಮೇಲೆ ನಿಯಂತ್ರಣ ಮಾಡಲು ಯಾವುದೇ ಕಠಿಣ ಕಾನೂನಿಲ್ಲ. ಅದನ್ನು ನಿಯಂತ್ರಿಸಲು ಕಾನೂನು ತರಬೇಕು. ವ್ಯಾಪಕವಾಗಿ ಬೆಳೆಯುತ್ತಿರುವ ಡ್ರಗ್ ಮಾರಾಟ ನಿಯಂತ್ರಿಸಲು ಕಾನೂನು ತರಬೇಕು. ರಾಜ್ಯದಲ್ಲಿ ಕಳ್ಳ ಸಾರಾಯಿ ಬೇರೆ ರಾಜ್ಯದಿಂದ ಮಾರಾಟವಾಗುತ್ತಿದೆ. ಅದರ ವಿರುದ್ಧ ಕಠಿಣ ಕಾನೂನು ತರುವ ಅವಶ್ಯವಿದೆ.
ಈ ಎಲ್ಲ ಬಿಟ್ಟು ಸರಕಾರದ ವಿರುದ್ಧ ಟೀಕೆ, ಟಿಪ್ಪಣೆ ಮಾಡುವುದನ್ನು ದಮನ ಮಾಡುವ ಈ ಕಾನೂನು ಜನವಿರೋಧಿ, ಪ್ರಜಾಪ್ರಭುತ್ವ ವಿರೋಧಿ, ಸಂವಿಧಾನ ವಿರೋಧಿ. ಇದು ನ್ಯಾಯಾಂಗದಲ್ಲಿ ಖಂಡಿತವಾಗಿಯೂ ಊರ್ಜಿತವಾಗುವುದಿಲ್ಲ. ಇದೊಂದು ವ್ಯರ್ಥ ಪ್ರಯತ್ನ. ಭಿನ್ನಾಭಿಪ್ರಾಯವೇ ಪ್ರಜಾಪಭುತ್ವದ ಮುಖ್ಯ ಅವಶ್ಯಕತೆ ಮತ್ತು ಲಕ್ಷಣ. ಇದನ್ನೇ ಮೊಟಕುಗೊಳಿಸುವ ಪ್ರಯತ್ನವನ್ನು ರಾಜ್ಯ ಸರ್ಕಾರ ಮಾಡುತ್ತಿದೆ. ವರ್ಗಾವಣೆ ಮುಲಾಜಿನಲ್ಲಿರುವ ಪೊಲೀಸ್ ಅಧಿಕಾರಿಗಳು ಆಡಳಿತ ಪಕ್ಷದ ರಾಜಕಾರಣಿಗಳ ಅಣತಿಯಂತೆ ನಡೆದುಕೊಳ್ಳುವ ಈ ದಿನ ವಿರೋಧಿಗಳನ್ನು ಹತ್ತಿಕ್ಕಲು ಇದೊಂದು ಅಸ್ತ್ರವಾಗುವುದು ಖಂಡಿತ.