‘ಕೋಕಾ’ ಸೇರಿಸದಿದ್ದರೆ ಈ ಬಿಲ್‌ ಹಲ್ಲಿಲ್ಲದ ಹಾವು: ಹೈಕೋರ್ಟ್‌ ವಕೀಲ ಎಸ್‌.ಬಾಲನ್‌ ಲೇಖನ

Published : Dec 27, 2025, 09:42 AM IST
s balan

ಸಾರಾಂಶ

ಉದಾಹರಣೆಗೆ ದೇವರು ಇಲ್ಲ ಎಂದು ಹೇಳಿದರೆ, ದ್ವೇಷ ಭಾಷಣವಾಗುತ್ತದೆಯೇ? ಹಿಂದು, ಇಸ್ಲಾಂ ಮತ್ತು ಕ್ರಿಶ್ಚಿಯನ್‌ ಧರ್ಮ ಗ್ರಂಥಗಳು 1500 ವರ್ಷಗಳ ಹಿಂದೆ ರಚನೆಯಾಗಿವೆ. ಮನುಸ್ಮೃತಿ ಪೂರ್ತಿ ದ್ವೇಷ ಅಪರಾಧವನ್ನೇ ಹೇಳುತ್ತದೆ.

ಲೇಖಕರು: ಎಸ್‌.ಬಾಲನ್‌, ಹೈಕೋರ್ಟ್‌ ವಕೀಲರು

ನಿಯಮ 6 ಅಡಿ ದ್ವೇಷ ಭಾಷಣದ ಅಂಶಗಳನ್ನು ಬ್ಲಾಕ್‌ ಮಾಡಲು ಅಥವಾ ತೆಗೆದುಹಾಕುವ ಅಧಿಕಾರವನ್ನು ಕಾರ್ಯಕಾರಿ ದಂಡಾಧಿಕಾರಿ ಅಥವಾ ವಿಶೇಷ ಕಾರ್ಯಕಾರಿ ದಂಡಾಧಿಕಾರಿ ಅಥವಾ ಪೊಲೀಸ್‌ ಅಧೀಕ್ಷಕ ದರ್ಜೆಗಿಂತ ಕಡಿಮೆಯಿಲ್ಲದ ಯಾವುದೇ ಪೊಲೀಸ್‌ ಅಧಿಕಾರಿಗೆ ನೀಡಲಾಗಿದೆ. ಹಾಗಾದರೆ, ಅವರನ್ನು ಯಾರು ನೇಮಿಸುತ್ತಾರೆ? ಯಾರು ದೂರುದಾರರು ಆಗುತ್ತಾರೆ ಎಂಬ ಬಗ್ಗೆ ಸ್ಪಷ್ಟತೆಯಿಲ್ಲ. ಸಂಘ-ಸಂಸ್ಥೆಯಿಂದ ನಡೆಯುವ ದ್ವೇಷ ಅಪರಾಧದ ಬಗ್ಗೆ ವಿಸ್ತೃತ ನಿಯಮಗಳು ಇಲ್ಲ. ಓರ್ವ ಮುಖ್ಯ ಪೇದೆ ಬರೆದ ಕಾನೂನಿನ ಮಾದರಿಯಲ್ಲಿ ಈ ವಿಧೇಯಕವಿದೆ.

ಕರ್ನಾಟಕ ದ್ವೇಷ ಭಾಷಣ ಮತ್ತು ದ್ವೇಷ ಅಪರಾಧಗಳ (ಪ್ರತಿಬಂಧಕ) ವಿಧೇಯಕ -2025 ಸಂಪೂರ್ಣವಾಗಿ ದೃಷ್ಟಿಕೋನ ಮತ್ತು ವಿವೇಚನಾ ರಹಿತವಾಗಿದೆ. ಕಾರಣಗಳನ್ನು ವಿವರಿಸುವುದಾದರೆ ಮೊದಲನೆಯದಾಗಿ ವಿಧೇಯಕದ ಸೆಕ್ಷನ್‌ 2.1ರಲ್ಲಿ ದ್ವೇಷ ಭಾಷಣವನ್ನು ವ್ಯಾಖ್ಯಾನಿಸಲಾಗಿದೆ. ಅಂದರೆ ವ್ಯಕ್ತಿ ಅಥವಾ ಸಮುದಾಯದ ವಿರುದ್ಧ ಹಾನಿ, ಅಸಾಮರಸ್ಯ ಅಥವಾ ದ್ವೇಷ ಮೂಡಿಸುವ ಉದ್ದೇಶದಿಂದ ರ್ಸಾಜನಿಕ ನೋಟದಲ್ಲಿ ಮೌಖಿಕ, ಲಿಖಿತ ಪದಗಳು ಅಥವಾ ಸಂಕೇತ, ದೃಶ್ಯರೂಪಕ, ವಿದ್ಯುನ್ಮಾನ ಸಂವಹನ ಮೂಲಕ, ಪ್ರಸರಣೆ ಮೂಲಕ ಅಭಿವ್ಯಕ್ತಿಸುವುದು ದ್ವೇಷ ಭಾಷಣ ಎಂಬುದಾಗಿ ಹೇಳಲಾಗಿದೆ. ಹಾಗೆಯೇ, ದ್ವೇಷ ಅಪರಾಧ, ದ್ವೇಷ ಸಂವಹನವನ್ನು ಪ್ರತ್ಯೇಕವಾಗಿ ಹೇಳಲಾಗಿದೆ. ಆದರೆ, ಹಾನಿ, ದ್ವೇಷ ಭಾಷಣ ಅಥವಾ ದ್ವೇಷ ಅಪರಾಧ ಎಂದರೆ ಏನು ಎಂಬ ಬಗ್ಗೆ ನಿಖರ ಹಾಗೂ ಸ್ಪಷ್ಟ ವ್ಯಾಖ್ಯಾನ ಮಾಡಿಲ್ಲ.

ಉದಾಹರಣೆಗೆ ದೇವರು ಇಲ್ಲ ಎಂದು ಹೇಳಿದರೆ, ದ್ವೇಷ ಭಾಷಣವಾಗುತ್ತದೆಯೇ? ಹಿಂದು, ಇಸ್ಲಾಂ ಮತ್ತು ಕ್ರಿಶ್ಚಿಯನ್‌ ಧರ್ಮ ಗ್ರಂಥಗಳು 1500 ವರ್ಷಗಳ ಹಿಂದೆ ರಚನೆಯಾಗಿವೆ. ಮನುಸ್ಮೃತಿ ಪೂರ್ತಿ ದ್ವೇಷ ಅಪರಾಧವನ್ನೇ ಹೇಳುತ್ತದೆ. ರಾಮಾಯಣದ ಉತ್ತರಖಾಂಡ ಅಸ್ಪೃಶ್ಯತೆ ಹರಡುತ್ತದೆ. ಭಗವದ್ಗೀತೆಯಲ್ಲಿ ಕೃಷ್ಣ, ಜಾತಿಗಳನ್ನು ಸೃಷ್ಟಿ ಮಾಡಿದ್ದು ನಾನೇ. ಆ ಜಾತಿಯ ಕೆಲಸಗಳನ್ನು ಆಯಾ ಜಾತಿಯವರೇ ಮಾಡಬೇಕು. ಬ್ರಾಹ್ಮಣರಿಗೆ ಪುರೋಹಿತ ಕೆಲಸ ಮಾಡಬೇಕು. ಪಂಚಮದವರು ಊರ ಹೊರಗಡೆ ಇರಬೇಕು ಎಂದು ಹೇಳಿದ್ದಾನೆ. ಈಗ ಭಗವದ್ಗೀತೆ, ರಾಮಾಯಣದಲ್ಲಿನ ಅಸ್ಪೃಶ್ಯತೆಯ ಅಂಶಗಳನ್ನು ಪುಸ್ತಕ ರೂಪದಲ್ಲಿ ಪ್ರಕಟಿಸಿದರೆ, ಅದು ದ್ವೇಷ ಅಪರಾಧವಾಗುತ್ತದೆಯೇ ಎಂಬುದು ಪ್ರಶ್ನೆ. ಇಂತಹ ಪ್ರಶ್ನೆಗಳಿಗೆ ಸ್ಪಷ್ಟ ಉತ್ತರ ವಿಧೇಯಕದಲ್ಲಿ ಇಲ್ಲ.

ಐಪಿಸಿ/ಬಿಎನ್ಎಸ್‌ ಪ್ರತಿರೂಪ: ದ್ವೇಷ ಭಾಷಣ, ದ್ವೇಷ ಅಪರಾಧ ತಡೆಯಲು ಕೇಂದ್ರ ಸರ್ಕಾರ ಈಗಾಗಲೇ ಕಾನೂನು ರೂಪಿಸಿರುವಾಗ, ಪ್ರತ್ಯೇಕ ವಿಧೇಯಕ ಜಾರಿಗೆ ತರುವ ಅಗತ್ಯವೇನಿದೆ ಎಂಬುದನ್ನು ರಾಜ್ಯ ಸರ್ಕಾರ ಹೇಳಿಲ್ಲ. ಭಾರತೀಯ ದಂಡ ಸಂಹಿತೆ (ಐಪಿಸಿ) ಸೆಕ್ಷನ್‌ 153(ಎ), 153(ಬಿ), 295, 295(ಬಿ) 505ರಲ್ಲಿ ದ್ವೇಷ ಅಪರಾಧವನ್ನು ವ್ಯಾಖ್ಯಾನಿಸಲಾಗಿತ್ತು. ಅದನ್ನೇ ಮೋದಿ ಸರ್ಕಾರ ಭಾರತೀಯ ನ್ಯಾಯ ಸಂಹಿತೆ (ಬಿಎನ್‌ಎಸ್‌) ಸೆಕ್ಷನ್‌ 106ರಲ್ಲಿ ತಂದಿದೆ. ರಾಜ್ಯ ಸರ್ಕಾರದ ವಿಧೇಯಕದ ನಿಯಮ 3ರ ಉಪ ನಿಯಮ (1)(1)ರಲ್ಲಿ ದ್ವೇಷ ಅಪರಾಧಕ್ಕೆ ಕನಿಷ್ಠ ಒಂದು ವರ್ಷದಿಂದ 7 ವರ್ಷದವರೆಗೆ ಜೈಲು ಮತ್ತು 50 ಸಾವಿರ ರು. ದಂಡ ನಿಗದಿಪಡಿಸಲಾಗಿದೆ. ನಿಯಮ 3ರ ಉಪ ನಿಯಮ (1)(2) ಪುನರಾವರ್ತಿತ ಅಪರಾಧಕ್ಕೆ ಕನಿಷ್ಠ 2 ವರ್ಷದಿಂದ 10 ವರ್ಷದವರೆಗೆ ಶಿಕ್ಷೆ ಮತ್ತು ಒಂದು ಲಕ್ಷ ರು. ದಂಡ ವಿಧಿಸಲಾಗಿದೆ. ಐಪಿಸಿ ಮತ್ತು ಬಿಎನ್‌ಎಸ್‌ ಅಲ್ಲಿದ್ದಂತೆಯೇ ಈ ವಿಧೇಯಕದಲ್ಲೂ ದ್ವೇಷ ಭಾಷಣ, ದ್ವೇಷ ಅಪರಾಧ ಜಾಮೀನು ರಹಿತ ಅಪರಾಧವಾಗಿದೆ. ಹಾಗಾದರೆ, ಈ ವಿಧೇಯಕ ಹಳೆಯ ಐಪಿಸಿಯ ಪ್ರತಿರೂಪ. ಬಿಎನ್‌ಎಸ್‌ನಲ್ಲಿರುವ ಸೆಕ್ಷನ್‌ಗಳಿಗೂ ಹೊಸ ವಿಧೇಯಕಕ್ಕೂ ಏನು ವ್ಯತ್ಯಾಸ, ಇದರಲ್ಲಿ ಹೊಸತೇನಿದೆ ಎಂಬುದನ್ನು ರಾಜ್ಯ ಸರ್ಕಾರ ಸ್ಪಷ್ಟಪಡಿಸಿಲ್ಲ.

ಸಂತ್ರಸ್ತರು ಯಾರು? ಯಾರಿಗೆ ಎಷ್ಟು ಪರಿಹಾರ?: ಬಹುಮುಖ್ಯ ಅಂಶವೆಂದರೆ, ನಿಯಮ 3ರ ಉಪ ನಿಯಮ 2ರಲ್ಲಿ ದ್ವೇಷ ಅಪರಾಧದ ಸಂತ್ರಸ್ತರಿಗೆ ಉಂಟಾದ ಹಾನಿ ಲೆಕ್ಕಹಾಕಿ ಪರಿಹಾರ ಕಲ್ಪಿಸುವ ಅಧಿಕಾರ ನ್ಯಾಯಾಲಯಕ್ಕೆ ನೀಡಲಾಗಿದೆ. ಅಂದರೆ ಸಂತ್ರಸ್ತರನ್ನು ಹೇಗೆ ಗುರುತಿಸಲಾಗುತ್ತದೆ ಎಂಬ ಪ್ರಶ್ನೆ ಕಾಡುತ್ತಿದೆ. ದ್ವೇಷ ಅಪರಾಧ ಎಂದಾದರೆ, ಅದರ ಗಂಭೀರತೆ ಆಧರಿಸಿ ಪರಿಹಾರ ನಿಗದಿಪಡಿಸಬೇಕಾಗುತ್ತದೆ. ದ್ವೇಷ ಭಾಷಣವನ್ನು ಒಂದು ಸಮುದಾಯದ ಮೇಲೆ ಮಾಡಿದರೆ ಆ ಸಮುದಾಯದವರು ಸಂತ್ರಸ್ತರಾಗುತ್ತಾರೆ. ಉದಾಹರಣೆಗೆ ಪ್ರವಾದಿ ಮೊಹಮ್ಮದ್‌ ಬಗ್ಗೆ ದ್ವೇಷ ಭಾಷಣೆ ಮಾಡಿದರೆ, ಪ್ರವಾದಿ ಮೊಹಮ್ಮದ್‌ ಅವರಲ್ಲಿ ನಂಬಿಕೆ ಉಳ್ಳವರೆಲ್ಲರೂ ಸಂತ್ರಸ್ತರಾಗುತ್ತಾರೆ. ಕಲ್ಲಡ್ಕ ಪ್ರಭಾಕರ್‌ ಅವರು, ‘ಮುಸ್ಲಿಂ ಮಹಿಳೆಗೆ ಶಾಶ್ವತ ಗಂಡನೇ ಇಲ್ಲ. ಒಂದೊಂದು ದಿನಕ್ಕೆ ಒಬೊಬ್ಬ ಗಂಡ. ಶಾಶ್ವತ ಗಂಡನನ್ನು ಕೊಟ್ಟಿದ್ದೇ ಮೋದಿ ಸರ್ಕಾರ’ ಎಂದು ಹೇಳಿಕೆ ನೀಡಿದ್ದರು. ಇದು ದ್ವೇಷ ಅಪರಾಧವಾಗುತ್ತದೆ. ಆಗ ಮುಸ್ಲಿಂ ಮಹಿಳೆಯರೆಲ್ಲರೂ ಸಂತ್ರಸ್ತರಾಗುತ್ತಾರೆ. ಆ ಎಲ್ಲ ಸಂತ್ರಸ್ತರಿಗೆ ಹೇಗೆ ಪರಿಹಾರ ಪ್ರಮಾಣ ಲೆಕ್ಕಹಾಕಲಾಗುತ್ತದೆ? ಅಸಂಖ್ಯ ಸಂತ್ರಸ್ತರಲ್ಲಿ ಯಾರಿಗೆ ಪರಿಹಾರ ಸಿಗುತ್ತದೆ ಎಂಬ ಬಗ್ಗೆ ಸ್ಪಷ್ಟತೆ ವಿಧೇಯಕದಲ್ಲಿ ಇಲ್ಲ.

ಬಿಎನ್‌ಎಸ್‌ಎಸ್‌ 173 ಅನ್ನು ಸರಿಪಡಿಸುವುದು ಹೇಗೆ?: ವಿಧೇಯಕದ ನಿಯಮ 3ರಲ್ಲಿ ದ್ವೇಷ ಅಪರಾಧವನ್ನು ಗಂಭೀರ ಸ್ವರೂಪದ (ಸಂಜ್ಞೆಯ-ಕಾಗ್ನಿಜಬಲ್‌) ಹಾಗೂ ಜಾಮೀನು ರಹಿತ ಅಪರಾಧ. ಪ್ರಕರಣವನ್ನು ಜೆಎಂಎಫ್‌ಸಿ ಕೋರ್ಟ್‌ ವಿಚಾರಣೆ ನಡೆಸಲಿದೆ ಎಂದು ಹೇಳಿದೆ. ಆದರೆ, ಬಿಎನ್‌ಎಸ್‌ಎಸ್‌ ಸೆಕ್ಷನ್‌ 173 ಅಡಿ ಇಂತಹ ಪ್ರಕರಣಗಳಲ್ಲಿ ಪೊಲೀಸರಿಗೆ ಇದ್ದ ಅಧಿಕಾರಗಳನ್ನು ಕೇಂದ್ರ ಸರ್ಕಾರ ಸಂಪೂರ್ಣವಾಗಿ ತೆಗೆದುಹಾಕಿದೆ. ಅಪರಾಧ ಎಸಗಿರುವುದು ಕಂಡು ಬಂದರೆ ಕೂಡಲೇ ಆರೋಪಿಯನ್ನು ಬಂಧಿಸುವಂತಿಲ್ಲ. ಮೊದಲಿಗೆ ಆರೋಪಿಗೆ ನೋಟಿಸ್‌ ವಿವರಣೆ ಪಡೆಯಬೇಕಿದೆ. ಗಂಭೀರ ಸ್ವರೂಪದ ಅಪರಾಧ ಕೃತ್ಯ ಎಸಗಿದ್ದರೂ ನೋಟಿಸ್‌ ನೀಡಿ, ವಿವರಣೆ ಪಡೆದ ನಂತರ ಬಂಧನ ಮಾಡುವುದಾದರೆ, ಕಠಿಣ ಕ್ರಮದಿಂದ ತಪ್ಪಿಸಿಕೊಳ್ಳಲು ಆರೋಪಿಗೆ ಸಾಕಷ್ಟು ಸಮಯ ನೀಡಿದಂತಾಗುತ್ತದೆ. ದ್ವೇಷ ಅಪರಾಧ ಜಾಮೀನು ರಹಿತ ಮತ್ತು ಸಂಜ್ಞೆಯ ಅಪರಾಧ ಎಂದಾದರೆ, ಬಿಎನ್‌ಎಸ್‌ಎಸ್‌ ಸೆಕ್ಷನ್‌ 173 ಅಡಿಯಲ್ಲಿರುವ ಆರೋಪಿಗೆ ಇರುವ ರಕ್ಷಣೆಯನ್ನು ಈ ವಿಧೇಯಕ ಹೇಗೆ ಸರಿಪಡಿಸುತ್ತದೆ ಎಂಬುದನ್ನು ಸರ್ಕಾರ ಹೇಳಿಲ್ಲ.

ಪ್ರಗತಿಪರರು ಜೈಲಿಗೆ: ನಿಯಮ 6 ಅಡಿ ದ್ವೇಷ ಭಾಷಣದ ಅಂಶಗಳನ್ನು ಬ್ಲಾಕ್‌ ಮಾಡಲು ಅಥವಾ ತೆಗೆದುಹಾಕುವ ಅಧಿಕಾರವನ್ನು ಕಾರ್ಯಕಾರಿ ದಂಡಾಧಿಕಾರಿ ಅಥವಾ ವಿಶೇಷ ಕಾರ್ಯಕಾರಿ ದಂಡಾಧಿಕಾರಿ ಅಥವಾ ಪೊಲೀಸ್‌ ಅಧೀಕ್ಷಕ ದರ್ಜೆಗಿಂತ ಕಡಿಮೆಯಿಲ್ಲದ ಯಾವುದೇ ಪೊಲೀಸ್‌ ಅಧಿಕಾರಿಗೆ ನೀಡಲಾಗಿದೆ. ಹಾಗಾದರೆ, ಅವರನ್ನು ಯಾರು ನೇಮಿಸುತ್ತಾರೆ? ಯಾರು ದೂರುದಾರರು ಆಗುತ್ತಾರೆ ಎಂಬ ಬಗ್ಗೆ ಸ್ಪಷ್ಟತೆಯಿಲ್ಲ. ಸಂಘ-ಸಂಸ್ಥೆಯಿಂದ ನಡೆಯುವ ದ್ವೇಷ ಅಪರಾಧದ ಬಗ್ಗೆ ವಿಸ್ತೃತ ನಿಯಮಗಳು ಇಲ್ಲ. ಓರ್ವ ಮುಖ್ಯ ಪೇದೆ ಬರೆದ ಕಾನೂನಿನ ಮಾದರಿಯಲ್ಲಿ ಈ ವಿಧೇಯಕವಿದೆ. ಸ್ಪಷ್ಟತೆಯಿಲ್ಲದ ಇಂಥ ವಿಧೇಯಕ ಜಾರಿಗೆ ತರುವುದರಿಂದ ಅಸಮಾನತೆ ಹೋಗಲಾಡಿಸಿ, ಸಮ ಸಮಾಜದ ಸ್ಥಾಪನೆಗೆ ಹೋರಾಡುವ ವೈಜ್ಞಾನಿಕ ಮನೋಭಾವದ ಜನ ಹಾಗೂ ಗುಂಪುಗಳು ಮಾತ್ರ ಜೈಲಿಗೆ ಹೋಗುತ್ತಾರೆ. ಬಿಜೆಪಿ ಸರ್ಕಾರ ಬಂದರೆ ಪ್ರಗತಿಪರ ಚಿಂತಕರನ್ನು ಜೈಲಿಗೆ ಕಳುಹಿಸುತ್ತದೆ. ಆಗ ಮೂಲಭೂತವಾದಿಗಳು ಹೊರಗೆ ಇರುತ್ತಾರೆ.

ಕೋಕಾ ನಿಯಮ ಸೇರಿಸಿದರಷ್ಟೇ ಕಠಿಣ ವಿಧೇಯಕ

ನನ್ನ ಪ್ರಕಾರ ಅಸ್ಪಷ್ಟವಾಗಿ ಈ ವಿಧೇಯಕದ ಕರಡು ಸಿದ್ಧಪಡಿಸಲಾಗಿದೆ. ಕರಡು ಸಿದ್ಧಪಡಿಸಿದವರಿಗೆ ದ್ವೇಷ ಭಾಷಣ, ದ್ವೇಷ ಅಪರಾಧ ಕುರಿತು ಸಂಪೂರ್ಣ ತಿಳಿವಳಿಕೆಯೇ ಇಲ್ಲ. ಸಾರ್ವಜನಿಕರ ಅಭಿಪ್ರಾಯ, ಶಾಸನಸಭೆ ಸ್ಥಾಯಿಸಮಿತಿ, ಕಾನೂನು ಆಯೋಗಗಳ ಅಭಿಪ್ರಾಯ ಸಂಗ್ರಹಿಸದೆ ಏಕಪಕ್ಷೀಯವಾಗಿ ವಿಧೇಯಕ ರೂಪಿಸಲಾಗಿದೆ. ವಿಧೇಯಕ ಕಠಿಣವಾಗಿದೆ ಎಂದು ನನಗೆ ಅನಿಸುತ್ತಿಲ್ಲ. ಉದಾಹರಣೆಗೆ ಶಾಸಕರೊಬ್ಬರು ಒಂದು ಊರಿಗೆ ಹೋಗಿ, ‘ಈ ಊರಿನಲ್ಲಿ 5 ಸಾವಿರ ಮುಸ್ಲಿಮರಿದ್ದಾರೆ. ಇನ್ನೂ ಐದು ವರ್ಷವಾದರೆ ಅವರು 10 ಸಾವಿರ ಆಗುತ್ತಾರೆ. ಮುಸ್ಲಿಮರು ದೇಶಕ್ಕೆ ಮಾರಕ. ಅವರ ಜನಸಂಖ್ಯೆ ಹೆಚ್ಚಳವಾಗಲು ಬಿಡಬಾರದು’ ಎಂದು ಭಾಷಣ ಮಾಡುತ್ತಾರೆ. ಇದು ದ್ವೇಷ ಭಾಷಣ. ಅದರಂತೆ ಆ ಶಾಸಕ ಜೈಲಿಗೆ ಹೋಗಬೇಕು. ಆದರೆ, ಎಫ್‌ಐಆರ್‌ ದಾಖಲಾದರೆ ಕೂಡಲೇ ಅವರು ಕೋರ್ಟ್‌ಗೆ ಬರುತ್ತಾರೆ. ಎಫ್‌ಐಆರ್‌ಗೆ ಕೋರ್ಟ್‌ ತಡೆಯಾಜ್ಞೆ ನೀಡುತ್ತದೆ. ಅಂದರೆ ಆರೋಪಿ ಕಾನೂನು ಮುಷ್ಟಿಯಿಂದ ಸುಲಭವಾಗಿ ತಪ್ಪಿಸಿಕೊಳ್ಳುತ್ತಾನೆ. ಒಂದು ಕಾನೂನು ರೂಪಿಸಿದರೆ, ಅದನ್ನು ಉಲ್ಲಂಘಿಸಿದ ವ್ಯಕ್ತಿ ಶಿಕ್ಷೆಯಿಂದ ತಪ್ಪಿಸಿಕೊಳ್ಳಬಾರದು. ಕೋರ್ಟ್‌ ಸಹ ಪ್ರಕರಣಕ್ಕೆ ತಡೆಯಾಜ್ಞೆ ನೀಡಲು ಅವಕಾಶವಿರಬಾರದು. ಅದಕ್ಕಾಗಿ ದ್ವೇಷ ಭಾಷಣ ಪ್ರತಿಬಂಧಕ ವಿಧೇಯಕದಲ್ಲಿ ‘ಸಂಘಟಿತ ಅಪರಾಧ ಚಟುವಟಿಕೆಗಳ ತಡೆ ಕಾಯ್ದೆಯ (ಕೋಕಾ)’ ನಿಯಮಗಳನ್ನು ಸೇರಿಸಬೇಕು. ಇಲ್ಲವಾದರೆ ಈ ವಿಧೇಯಕ ಹಲ್ಲಿಲ್ಲದ ಹಾವು ಆಗಲಿದೆ.

PREV
Read more Articles on
click me!

Recommended Stories

ಅಭಿವ್ಯಕ್ತಿ ಸ್ವಾತಂತ್ರ್ಯ ಹತ್ತಿಕ್ಕುವ ಉದ್ದೇಶ ಇಲ್ಲ: ಮುಖಾಮುಖಿ ಸಂದರ್ಶನದಲ್ಲಿ ಸಚಿವ ಎಚ್‌.ಕೆ.ಪಾಟೀಲ್‌
ದ್ವೇಷಪೂರಿತ ದಾಳಿ ತಡೆಗೆ ರಕ್ಷಾ ಕವಚ ಈ ವಿಧೇಯಕ: ಸುಪ್ರೀಂ ಕೋರ್ಟ್‌ ವಕೀಲ ಸಂಕೇತ ಏಣಗಿ ಲೇಖನ