ಅಭಿವ್ಯಕ್ತಿ ಸ್ವಾತಂತ್ರ್ಯ ಹತ್ತಿಕ್ಕುವ ಉದ್ದೇಶ ಇಲ್ಲ: ಮುಖಾಮುಖಿ ಸಂದರ್ಶನದಲ್ಲಿ ಸಚಿವ ಎಚ್‌.ಕೆ.ಪಾಟೀಲ್‌

Published : Dec 27, 2025, 09:09 AM IST
hk patil

ಸಾರಾಂಶ

ರಾಜ್ಯ ಸರ್ಕಾರ ಜಾರಿಗೆ ತರಲು ಮುಂದಾಗಿರುವ ‘ಕರ್ನಾಟಕ ದ್ವೇಷ ಭಾಷಣ ಮತ್ತು ದ್ವೇಷ ಅಪರಾಧಗಳ (ಪ್ರತಿಬಂಧಕ ) ವಿಧೇಯಕ’ ಸದ್ಯ ಹೆಚ್ಚು ಚರ್ಚೆಗೆ ಒಳಗಾಗಿದೆ ‘ಕನ್ನಡಪ್ರಭ’ದೊಂದಿಗೆ ಮುಖಾಮುಖಿಯಾಗಿದ್ದಾರೆ ಸಚಿವ ಎಚ್‌.ಕೆ.ಪಾಟೀಲ್‌.

ಚಂದ್ರಮೌಳಿ.ಎಂ.ಆರ್

ಯಾರಿಗೆ ವಿವೇಕ ಇರುತ್ತದೆಯೋ ಅಂಥವರು ಯಾವುದು ದ್ವೇಷ ಭಾಷಣವೆಂದು ವಿಶ್ಲೇಷಣೆ ಮಾಡಬಹುದು. ತಮಗೆ ಬೇಕಾದವರು ಏನೇ ಮಾತನಾಡಿದರೂ ಅದು ದ್ವೇಷ ಭಾಷಣ ಎಂದು ಅಲ್ಲ ಎಂದು ಹೇಳಬಹುದು. ಆದರೆ ವಿವೇಕ ಇದ್ದವರು ವಿಮರ್ಶೆ ಮಾಡಿದಾಗ ಯಾವುದೇ ದ್ವೇಷ ಭಾಷಣ, ಯಾವುದು ಅಲ್ಲ ಎಂದು ಹೇಳುತ್ತಾರೆ. ಒಂದು ವೇಳೆ ಮಾಡಿರುವ ಭಾಷಣ ದ್ವೇಷ ಹೌದೋ, ಅಲ್ಲವೋ ಎಂಬ ಅಭಿಪ್ರಾಯ ಇದ್ದರೆ ಅದಕ್ಕೆ ಅಂತಿಮವಾಗಿ ಕೋರ್ಟು, ಕಚೇರಿಗಳಿವೆ.

ರಾಜ್ಯ ಸರ್ಕಾರ ಜಾರಿಗೆ ತರಲು ಮುಂದಾಗಿರುವ ‘ಕರ್ನಾಟಕ ದ್ವೇಷ ಭಾಷಣ ಮತ್ತು ದ್ವೇಷ ಅಪರಾಧಗಳ (ಪ್ರತಿಬಂಧಕ ) ವಿಧೇಯಕ’ ಸದ್ಯ ಹೆಚ್ಚು ಚರ್ಚೆಗೆ ಒಳಗಾಗಿದೆ. ಆಡಳಿತ ಹಾಗೂ ಪ್ರತಿಪಕ್ಷಗಳ ನಡುವೆ ನಡೆಯುತ್ತಿರುವ ಪರ-ವಿರೋಧ ಅಭಿಪ್ರಾಯಗಳು ಒಂದೆಡೆಯಾದರೆ, ವಕೀಲರು, ಜನಸಾಮಾನ್ಯರು ವಿಧೇಯಕ ಕುರಿತು ಬೇರೆ ರೀತಿಯಲ್ಲಿ ಚರ್ಚಿಸುತ್ತಿದ್ದಾರೆ. ಅದರಲ್ಲೂ ವಿಧೇಯಕದಲ್ಲಿ ಸ್ಪಷ್ಟತೆ ಇಲ್ಲ, ವ್ಯಕ್ತಿ ನಿಷ್ಠವಾಗಿದೆಯೇ ಹೊರತು ವಸ್ತು ನಿಷ್ಠವಾಗಿಲ್ಲ. ಅಧಿಕಾರಿಗಳಿಗೆ ಹೆಚ್ಚಿನ ಅಧಿಕಾರ ನೀಡಲಾಗಿದೆ. ದಂಡದ ಪ್ರಮಾಣಗಳು ಮುಕ್ತವಾಗಿ ಅಭಿಪ್ರಾಯ ಹೇಳಲು ಹಿಂಜರಿಯುವಂಥ ವಾತಾವರಣ ಸೃಷ್ಟಿಸುತ್ತದೆ. ಸದುದ್ದೇಶದ ಟೀಕೆ, ವಿಮರ್ಶೆ, ಚರ್ಚೆ ಮಾಡಿದಾಗ ಕಿರುಕುಳ ನೀಡಲು ದೂರು ನೀಡುವ ಸಾಧ್ಯತೆ ಇದೆ ಎಂಬ ಹತ್ತು ಹಲವು ಆತಂಕ, ಸಂಶಯ ವ್ಯಕ್ತಪಡಿಸುತ್ತಿದ್ದಾರೆ. ಈ ಎಲ್ಲ ಸಂಶಯ, ಆತಂಕಗಳಿಗೆ ಉತ್ತರಿಸಲು ‘ಕನ್ನಡಪ್ರಭ’ದೊಂದಿಗೆ ಮುಖಾಮುಖಿಯಾಗಿದ್ದಾರೆ ಕಾನೂನು ಸಚಿವ ಎಚ್‌.ಕೆ. ಪಾಟೀಲ್‌.

* ರಾಜ್ಯದಲ್ಲಿ ಸೀಮಿತವಾಗಿ ದ್ವೇಷ ಭಾಷಣ ತಡೆ ಮಸೂದೆ ಜಾರಿ ಅಗತ್ಯ ಎಷ್ಟಿದೆ?
ಕರ್ನಾಟಕದಲ್ಲಿ ಈ ಮಸೂದೆಯ ಅಗತ್ಯ ಹೆಚ್ಚೇ ಇದೆ. ಏಕೆಂದರೆ ನಮ್ಮ ರಾಜ್ಯವನ್ನು ಸರ್ವ ಜನಾಂಗಳ ಶಾಂತಿಯ ತೋಟವನ್ನಾಗಿ ಮಾಡಬೇಕೆಂಬುದು ನಮ್ಮ ಉದ್ದೇಶ, ಗುರಿ ಮತ್ತು ಪ್ರಯತ್ನ. ಅಂಥದ್ದರಲ್ಲಿ ಕೆಲ ವರ್ಷಗಳಿಂದ ದ್ವೇಷ ಹೆಚ್ಚಿಸುವ ಭಾಷಣಗಳು, ದ್ವೇಷ ಉಲ್ಬಣ ಆಗುವಂಥ ಮಾತು, ಜನರ ಭಾವನೆಗೆ ತೀವ್ರ ಧಕ್ಕೆಯಾಗುವಂಥ ಪ್ರಯತ್ನಗಳನ್ನು ನೋಡುತ್ತಿದ್ದೇವೆ. ಮನಸ್ಸಿಗೆ ಬಂದಂತೆ ಮಾತನಾಡುವ, ವಾಟ್ಸ್‌ ಆ್ಯಪ್‌, ಸೋಷಿಯಲ್‌ ಮೀಡಿಯಾದಲ್ಲಿ ಅವುಗಳನ್ನು ಪಸರಿಸುವ ಅಸಹ್ಯಕರ ಹಾಗೂ ದ್ವೇಷ ಹುಟ್ಟಿಸುವ ಪ್ರಯತ್ನಗಳನ್ನು ಕೆಲ ವರ್ಷಗಳಿಂದ ಮಾಡಿಕೊಂಡು ಬರಲಾಗುತ್ತಿದೆ. ಇವುಗಳನ್ನು ತಡೆಯಲು ಈ ವಿಧೇಯಕ ಜಾರಿ ತರುತ್ತಿದ್ದೇವೆ.

* ವಿಧೇಯಕ ಜಾರಿಯಾಗುವಂಥ ವಾತಾವರಣ ಸೃಷ್ಟಿಯಾಗಿದ್ದು ಹೇಗೆ?
ವಿಕೃತ ಮನಸ್ಸಿನವರೇ ಇದಕ್ಕೆ ಕಾರಣ. ಅವರು ಎಲ್ಲಿ ಬೇಕಾದರೂ ನುಸುಳಿಕೊಂಡಿರಬಹುದು. ಸಮಾಜ ಒಡೆಯುವ, ಸಮಾಜದಲ್ಲಿ ದ್ವೇಷ ಉಲ್ಬಣವಾಗಬೇಕೆಂದು ನೋಡುವ, ಸಮಾಜದ ಶಾಂತಿ ಕದಡುವ, ಆರೋಗ್ಯಕರ ಸಮಾಜ ಉಳಿಯದಂತೆ ಯತ್ನಿಸುವ ಜನ ದ್ವೇಷ ಭಾಷಣಗಳ ಮೂಲಕ ಪ್ರಯತ್ನಿಸುತ್ತಿದ್ದಾರೆ.

* ಮಸೂದೆಯಲ್ಲಿನ ‘ದ್ವೇಷ ಭಾಷಣ’ ಮತ್ತು ‘ದ್ವೇಷ ಅಪರಾಧ’ ವ್ಯಾಖ್ಯೆ ವ್ಯಕ್ತಿನಿಷ್ಠವಾಗಿದೆ, ವಸ್ತುನಿಷ್ಠವಾಗಿಲ್ಲ ಎಂಬ ಅಭಿಪ್ರಾಯವಿದೆಯಲ್ವಾ?
ಯಾವುದೇ ರೀತಿಯಲ್ಲೂ ಅಭಿವ್ಯಕ್ತಿ ಸ್ವಾತಂತ್ರ್ಯ ಕಡಿತಗೊಳಿಸುವುದಾಗಲಿ, ಹತ್ತಿಕ್ಕುವುದಾಗಲಿ ಈ ವಿಧೇಯಕದ ಉದ್ದೇಶವಲ್ಲ. ಸಂವಿಧಾನ ಬದ್ಧವಾಗಿ ಬಂದಿರುವ ಹಕ್ಕು ಹತ್ತಿಕ್ಕಲು ಸಾಧ್ಯವೂ ಇಲ್ಲ.

* ಒಬ್ಬರಿಗೆ ದ್ವೇಷ ಭಾಷಣ ಅನ್ನಿಸುವುದು, ಬೇರೋಬ್ಬರಿಗೆ ಅನ್ನಿಸುವುದಿಲ್ಲವಲ್ಲ?
ಹಾಗಲ್ಲ, ಯಾರಿಗೆ ವಿವೇಕ ಇರುತ್ತದೆಯೋ ಅಂಥವರು ಯಾವುದು ದ್ವೇಷ ಭಾಷಣವೆಂದು ವಿಶ್ಲೇಷಣೆ ಮಾಡಬಹುದು. ತಮಗೆ ಬೇಕಾದವರು ಏನೇ ಮಾತನಾಡಿದರೂ ಅದು ದ್ವೇಷ ಭಾಷಣ ಎಂದು ಅಲ್ಲ ಎಂದು ಹೇಳಬಹುದು. ಆದರೆ ವಿವೇಕ ಇದ್ದವರು ವಿಮರ್ಶೆ ಮಾಡಿದಾಗ ಯಾವುದೇ ದ್ವೇಷ ಭಾಷಣ, ಯಾವುದು ಅಲ್ಲ ಎಂದು ಹೇಳುತ್ತಾರೆ. ಒಂದು ವೇಳೆ ಮಾಡಿರುವ ಭಾಷಣ ದ್ವೇಷ ಹೌದೋ, ಅಲ್ಲವೋ ಎಂಬ ಅಭಿಪ್ರಾಯ ಇದ್ದರೆ ಅದಕ್ಕೆ ಅಂತಿಮವಾಗಿ ಕೋರ್ಟು, ಕಚೇರಿಗಳಿವೆ.

* ನಿಗದಿಪಡಿಸಿರುವ ದೊಡ್ಡ ಪ್ರಮಾಣದ ಶಿಕ್ಷೆ, ದಂಡದ ಪರಿಣಾಮಗಳು ಮುಕ್ತ ಅಭಿವ್ಯಕ್ತಿ ಮೇಲೆ ನಕಾರಾತ್ಮಕ ಪರಿಣಾಮ ಬೀರಬಹುದು ಎಂಬ ಆತಂಕ‍ವಿದೆಯಲ್ವಾ?
ಕಳೆದ 10 ವರ್ಷಗಳಿಂದ ದ್ವೇಷ ಭಾಷಣ ಮಾಡುವುದೇ ಒಂದು ದೊಡ್ಡ ಸಾಧನೆ ಎಂದು ತಿಳಿದುಕೊಂಡವರನ್ನು ನಾವು ನೋಡಿಲ್ಲವೇ? ಟೀವಿ, ಪತ್ರಿಕೆ, ಸೋಷಿಯಲ್‌ ಮೀಡಿಯಾದಲ್ಲಿ ನೋಡಿಲ್ಲವೇ? ಇದರ ಪರಿಣಾಮ ಶಾಂತಿ ಕದಡುವ ಪ್ರಯತ್ನ ನಡೆದವು. ಮಂಗಳೂರಿನಲ್ಲಿ ಯಾವ ರೀತಿ ಭಾಷೆ ಇತ್ತು. ಶಾಂತಿ ಇರುವ ಇತರೆ ಜಿಲ್ಲೆಗಳಲ್ಲಿ ಭಾಷೆ ಯಾವ ರೀತಿ ಇರುತ್ತದೆ ಎಂಬುದನ್ನು ನೋಡಿ. ಹಾಗಾಗಿ ಖಂಡಿತವಾಗಿ ನಕಾರಾತ್ಮಕ ಪರಿಣಾಮ ಬೀರುವುದಿಲ್ಲ.

* ಭವಿಷ್ಯದಲ್ಲಿ ಅಪರಾಧ ನಡೆಯಬಹುದು ಎಂಬ ಕಾರಣದಿಂದ ಅಧಿಕಾರಿಗಳು ಪ್ರತಿಬಂಧಕ ಕ್ರಮ ಕೈಗೊಳ್ಳಬಹುದೆಂಬ ನಿಯಮವಿದೆ. ಇದನ್ನು ಹೇಗೆ ಸಮರ್ಥಿಸುವಿರಿ?
ಎಲ್ಲಾ ಕಾನೂನುಗಳಲ್ಲಿ ಸರ್ಕಾರಿ ಅಧಿಕಾರಿಗೆ ವಿಶೇಷವಾದ ವಿವೇಚನೆ ಕೊಡಲಾಗಿರುತ್ತದೆ. ಅದೇ ರೀತಿ ವಿವೇಚನೆಯನ್ನು ಈ ವಿಧೇಯಕದ ಮೂಲಕ ಅಧಿಕಾರಿಗಳಿಗೆ ಕೊಡಲಾಗಿದೆ.

* ದ್ವೇಷ ಭಾಷಣ, ದ್ವೇಷ ಅಪರಾಧ, ಸಂವಹನ- ಈ ಮೂರು ಅಪರಾಧಗಳಿಗೆ ಒಂದೇ ರೀತಿ ಶಿಕ್ಷೆ ಸರಿಯೇ? ಅಪರಾಧದ ತೀವ್ರತೆ ಮೇಲೆ ಬೇರೆ ಬೇರೆ ರೀತಿಯ ಶಿಕ್ಷೆ ನಿಗದಿ ಯಾಕಿಲ್ಲ?
ನೋಡಿ, ಈ ಗುನ್ಹೆಗಳ ಹಿಂದೆ ಇರುವುದು ಸೂಕ್ಷ್ಮವಾದ ಗುನ್ಹೆ, ‘ನಾನೇನು ಮಾಡಲಿ, ನಾನಿಷ್ಟೇ ಮಾತನಾಡಿದೆ, ಅವರು ಬಡಿದಾಟ ಮಾಡಿಕೊಂಡರೆ, ಕೊಲೆ ಮಾಡಿದರೆ ನಾನೇನು ಮಾಡಲಿ ಅಂದ್ರೆ’ ಹೇಗೆ? ಅವರಾಡಿದ ಮಾತು ಆ ದ್ವೇಷ ಹುಟ್ಟಿಸಿರುತ್ತದೆ. ಹಾಗಾಗಿ ಅದನ್ನು ಗಂಭೀರವಾಗಿ ಪರಿಗಣಿಸಿ ದ್ವೇಷದ ಬಗ್ಗೆ ವಿಸ್ತೃತವಾಗಿ ವ್ಯಾಖ್ಯಾನಿಸಲಾಗಿದೆ.

* ಒಬ್ಬ ವ್ಯಕ್ತಿ ಮಾಡಿದ ಅಪರಾಧಕ್ಕೆ ಸಂಘ ಅಥವಾ ಸಂಸ್ಥೆಯನ್ನು ಹೊಣೆ ಮಾಡುವುದು ಸುಲಭ ಸಾಧ್ಯವೇ?
ಸಂಘಟನೆ ಆಹ್ವಾನದ ಮೇರೆಗೆ ಬಂದ ವ್ಯಕ್ತಿ ದ್ವೇಷ ಭಾಷಣ ಮಾಡಿದಾಗ, ಅಂಥ ವ್ಯಕ್ತಿ ವಿರುದ್ಧ ಸಂಘಟನೆಯೇ ಕ್ರಮ ಕೈಗೊಳ್ಳಬೇಕು. ರಾಜಕೀಯ ಪಕ್ಷಗಳು ಯಾರೇ ತಪ್ಪು ಮಾಡಿದಾಗ ಅಂಥ ವ್ಯಕ್ತಿಯನ್ನು ಪಕ್ಷದಿಂದ ಹೊರ ಹಾಕುವುದಿಲ್ಲವೇ, ಅದೇ ರೀತಿ ಮಾಡಬೇಕು. ಅಂತಿಮವಾಗಿ ಸಂಘ, ಸಂಘಟನೆ ಮೇಲೆ ಕ್ರಮ ಕೈಗೊಳ್ಳಬೇಕಾದರೆ ವಿವೇಚನೆಯಿಂದ ನಿರ್ಧರಿಸಬೇಕಾಗುತ್ತದೆ.

* ದ್ವೇಷ ಅಪರಾಧದಿಂದಾಗಿ ಸಂತ್ರಸ್ತ ವ್ಯಕ್ತಿಗೆ ಪರಿಹಾರ ಯಾರು ನೀಡಬೇಕು? ಪರಿಹಾರ ವ್ಯಕ್ತಿಗತ ಅಥವಾ ಸಾಮೂಹಿಕವಾಗಿ ನೀಡುತ್ತೀರಾ ಇಲ್ಲವೇ ದೂರು ನೀಡಿದವರಿಗೆ ಮಾತ್ರ ಸಿಗುತ್ತಾ?
ಪರಿಹಾರವನ್ನು ಸರ್ಕಾರ ನೀಡುತ್ತದೆ. ನಿಯಮಾವಳಿ ರಚನೆಯಾದ ಮೇಲೆ ಅದರಂತೆ ಪರಿಹಾರ ನೀಡಲಾಗುವುದು. ನಮ್ಮಲ್ಲಿ ಸಂತ್ರಸ್ತನಿಗೆ ಪರಿಹಾರ ನೀಡಬೇಕು ಎಂಬ ನಿಯಮ ಇದೆ. ಯಾರು, ಎಷ್ಟು ಕೊಡಬೇಕು ಎಂಬುದನ್ನು ನ್ಯಾಯಾಲಯ ನಿರ್ಧರಿಸುತ್ತದೆ. ದ್ವೇಷ ಭಾಷಣದ ಪರಿಣಾಮ ಕೊಲೆ, ಆಸ್ತಿ ಹಾನಿಯಾದರೆ ಅವರೆಲ್ಲರೂ ಸಂತ್ರಸ್ತರಾಗುತ್ತಾರೆ, ಇಲ್ಲವೇ ದ್ವೇಷ ಭಾಷಣದ ಒಬ್ಬ ವ್ಯಕ್ತಿ ಮೇಲೆ ಹಲ್ಲೆಯಾದರೆ ಆತ ಮಾತ್ರ ಸಂತ್ರಸ್ತನಾಗುತ್ತಾನೆ. ಅಂತಿಮವಾಗಿ ಎಲ್ವವನ್ನೂ ನ್ಯಾಯಾಲಯ ಅವಲೋಕನ ಮಾಡುತ್ತದೆ.

* ಪೊಲೀಸರಿಗೆ ಅತಿಯಾದ ಅಧಿಕಾರ ನೀಡಲಾಗಿದೆ ? ದ್ವೇಷ ಭಾಷಣ ಎಂಬುದನ್ನು ನಿರ್ಣಯಿಸುವಲ್ಲಿ ಅಧಿಕಾರಿ ತಪ್ಪು ಮಾಡದಂತೆ ಯಾವ ಕ್ರಮವಿದೆ?
ನೋಡಿ ಕಳ್ಳರು, ಸುಳ್ಳರು, ದರೋಡೆ ಮಾಡುವವರು, ದ್ವೇಷ ಮಾಡುವವರ ಬಗ್ಗೆ ಇನ್ನೆಷ್ಟು ಸಾಫ್ಟ್‌ ಇರಬೇಕು. ಪೊಲೀಸ್‌ ಅಧಿಕಾರಿ ಎಡವದಂತೆ ಮಾಡಲು ಸಾಕಷ್ಟು ಕ್ರಮ ಕೈಗೊಂಡಿದ್ದೇವೆ. ಅಗತ್ಯ ಬಿದ್ದರೆ ನಿಯಮಾವಳಿಯಲ್ಲಿ ಸೂಕ್ತ ಬದಲಾವಣೆ ಮಾಡಲಾಗುವುದು.

* ದ್ವೇಷ ಭಾಷಣ ವಿಧೇಯಕ ಮತ್ತು ಎಸ್‌ಸಿ, ಎಸ್‌ಟಿ ಕಾಯ್ದೆ ಎರಡರಲ್ಲೂ ಜಾತಿ ಬಗ್ಗೆ ಮಾತನಾಡುವುದು ಅಪರಾಧ ಆಗುತ್ತದೆ. ಇಂತಹ ಸಂದರ್ಭದಲ್ಲಿ ಯಾವ ಕಾನೂನು ಅಡಿ ಕ್ರಮ ಕೈಗೊಳ್ಳುತ್ತೀರಿ?
ಪರಿಶಿಷ್ಟ ಸಮುದಾಯವನ್ನು ಅಪಮಾನಿಸಿದರೆ ಎಸ್‌ಸಿ, ಎಸ್‌ಟಿ ಕಾಯ್ದೆ ಅಡಿ ಕ್ರಮ ಜರುಗಿಸಲಾಗುವುದು. ದ್ವೇಷ ಭಾಷಣದಲ್ಲಿ ಸಮಾಜದಲ್ಲಿ ಬೆಂಕಿ ಹಚ್ಚುವ ಮಾತಿರುತ್ತದೆ. ಹಾಗಾಗಿ ಎರಡು ಕಾನೂನುಗಳು ಪ್ರತ್ಯೇಕವಾಗಿ ಜಾರಿಯಲ್ಲಿರುತ್ತದೆ. ಜಾರಿ ಮಾಡುವಲ್ಲಿ ಯಾವುದೇ ರೀತಿ ಗೊಂದಲ ಮೂಡುವುದಿಲ್ಲ.

* ಜನಪ್ರತಿನಿಧಿಗಳ ಒತ್ತಡದಿಂದ ಈ ಕಾಯ್ದಯನ್ನು ಸರ್ಕಾರಿ ಅಧಿಕಾರಿಗಳು ಸರಿಯಾಗಿ ಜಾರಿ ಮಾಡುವುದಿಲ್ಲ ಎಂಬ ಗ್ಯಾರಂಟಿ ಏನಿದೆ?
ಸರ್ಕಾರ ಒತ್ತಡ ಹೇರುವುದಿಲ್ಲ. ಸರ್ಕಾರಿ ಅಧಿಕಾರಿಗಳಿಗೆ ವಿವೇಚನಾ ಅಧಿಕಾರ ನೀಡಲಾಗಿದೆ. ಅದರಂತೆ ಅವರು ನಡೆದುಕೊಳ್ಳಬೇಕಾಗುತ್ತದೆ.

* ವಿವಿಧ ಸಾಮಾಜಿಕ ಮಾಧ್ಯಮಗಳ ಮೂಲಕ ತನಗೆ ಬಂದ ತಪ್ಪು ಸಂದೇಶ, ಚಿತ್ರ, ವಿಡಿಯೋ, ಚರ್ಚೆಯನ್ನು ಬೇರೆಯವರಿಗೂ ಕಳಿಸಿದಾಗ ಅದು ಅಪರಾಧವಾಗುತ್ತದಲ್ಲ?
ನಮ್ಮ ಮೂಲ ಉದ್ದೇಶ ಸ್ಪಷ್ಟವಾಗಿದೆ. ಸಮಾಜದ ಶಾಂತಿ ಕಾಪಾಡಬೇಕು, ಈ ಉದ್ದೇಶಕ್ಕೆ ತಕ್ಕಂತೆ ಎಲ್ಲರೂ ನಡೆಯಬೇಕು, ಆಗ ಏನೂ ಆಗುವುದಿಲ್ಲ.

* ಇತಿಹಾಸ, ಧರ್ಮಗ್ರಂಥಗಳ ಉಲ್ಲೇಖ, ಪುಸ್ತಕ, ಲೇಖನ, ಭಾಷಣಗಳ ಕಟು ವಿಮರ್ಶೆ ಮಾಡುವುದು ದ್ವೇಷ ಎಂದು ದೂರುವ ಮೂಲಕ ಕಾನೂನಿನ ದುರುಪಯೋಗದ ಸಾಧ್ಯತೆ ಇಲ್ಲವೇ?
ಹಿಂದೆ ಪತ್ರಿಕೆಯೊಂದರಲ್ಲಿ ಬಂದ ಲೇಖನದಲ್ಲಿ ಏನೂ ಇರಲಿಲ್ಲ, ಆದರೆ ಲೇಖನದ ಹೆಡ್ಡಿಂಗ್‌ನಿಂದ ಏನೇನು ಆಯಿತು ಎಂಬುದು ಎಲ್ಲರಿಗೂ ಗೊತ್ತು. ಇನ್ನುಳಿದಂತೆ ನಮ್ಮ ಮನುಸ್ಮೃತಿಯಲ್ಲಿ ಉಲ್ಲೇಖಿಸಿರುವ ಕೆಲ ಅಂಶಗಳು ಅನಿಷ್ಠ ಪದ್ಧತಿಗಳು. ಅದರ ವಿರುದ್ಧ ಕಾನೂನುಗಳಿವೆ, ಆದರೆ ಅವು ದ್ವೇಷ ಭಾಷಣಗಳಲ್ಲ. ಆದರೆ ಮನುಸ್ಮೃತಿ ಹಿಡಿದುಕೊಂಡು ಅಪಮಾನಿಸುವಂತಹ, ಶಾಂತಿ ಕದಡುವಂಥ ಮಾತನಾಡಿದರೆ ಅದು ದ್ವೇಷ ಭಾಷಣವಾಗುತ್ತದೆ. ಅಂತಿಮವಾಗಿ ದ್ವೇಷ ಭಾಷಣ ನಿಮ್ಮ ಸಾಕ್ಷಿ ಪ್ರಜ್ಞೆಯನ್ನು ಪ್ರಶ್ನಿಸುತ್ತದೆ. ಮನ ಬಂದಂತೆ ಮಾತನಾಡುವಂತಹ ಸ್ವಭಾವ ಇರುವವರಿಗೆ ತಡೆ ಹಾಕುವ ಲಗಾಮು ಹಾಕಲು ಈ ವಿಧೇಯಕ ಜಾರಿಗೆ ಮಾಡಲಾಗಿದೆ.

* ಒಂದು ಸಮಾಜದ ನಂಬಿಕೆ, ಆಚರಣೆ, ಪದ್ಧತಿಗಳು ಸರಿಯಲ್ಲ ಎಂದು ವಿಮರ್ಶಿಸುವುದು ಇನ್ನೊಬ್ಬರ ದೃಷ್ಟಿಯಲ್ಲಿ ದ್ವೇಷವಾಗಬಹುದಲ್ವಾ?
ನಮ್ಮ ಹಿಂದೂ ಪದ್ಧತಿಯಲ್ಲಿ ಮೂಢನಂಬಿಕೆ ಇದೆ ಎಂದು ಹೇಳುತ್ತೇವೆ. ಮೂಢನಂಬಿಕೆ ವಿರುದ್ಧ ಕಾನೂನನ್ನೇ ನಾವು ತಂದಿದ್ದೇವೆ. ಮೂಢನಂಬಿಕೆ ಇಟ್ಟುಕೊಳ್ಳಬೇಡಿ ಎಂದು ಹೇಳುವುದು ದ್ವೇಷ ಭಾಷಣ ಆಗುವುದಿಲ್ಲ. ಎಲ್ಲ ಸಮಾಜ. ಜಾತಿಗಳಲ್ಲಿ ಅನಿಷ್ಠಗಳಿವೆ. ಜನರ ಅಜ್ಞಾನವನ್ನುಇಟ್ಟುಕೊಂಡು ಶೋಷಣೆ ಮಾಡುವ ಅನಿಷ್ಟಗಳ ಬಗ್ಗೆ ಮಾತನಾಡುವುದು ದ್ವೇಷ ಭಾಷಣ ಆಗುವುದಿಲ್ಲ. ಇವುಗಳನ್ನು ಮುಂದಿಟ್ಟುಕೊಂಡು ನೀಡುವ ದೂರುಗಳನ್ನು ಸ್ವೀಕರಿಸುವುದಿಲ್ಲ.

* ಈ ವಿಧೇಯಕದ ಕುರಿತು ಬಿಜೆಪಿ ಮುಖಂಡರು ವಿವಿಧ ರೀತಿಯ ಟೀಕೆ-ಟಿಪ್ಪಣಿ, ಸಂಶಯ ವ್ಯಕ್ತಪಡಿಸಿದ್ದಾರೆ?
ವಿಧೇಯಕದ ವಿರುದ್ಧ ಬಿಜೆಪಿಯವರು ಮಾತನಾಡುವುದು ರಾಜಕಾರಣ ಅಷ್ಟೇ. ಏನಾದರೂ ಮಾಡಿ ಈ ಕಾನೂನು ವಿರೋಧಿಸಬೇಕು ಎಂಬ ಉದ್ದೇಶವಿದೆ. ಕಳ್ಳನ ಮನಸ್ಸು ಹುಳ್ಳು ಹುಳ್ಳಗೆ ಎಂಬಂತೆ ಅವರ ವರ್ತನೆ ಇದೆ.

* ವಿಧೇಯಕ ಕುರಿತು ಉಂಟಾಗಿರುವ ಸಂಶಯ, ಆತಂಕಗಳನ್ನು ನಿಯಮಾವಳಿಯಲ್ಲಿ ನಿವಾರಿಸುವ ಚಿಂತನೆ ಇದೆಯೇ?

ಈ ವಿಧೇಯಕದಲ್ಲಿ ಸಂಶಯ, ಆತಂಕಗಳೇನೂ ಇಲ್ಲ. ವಿಧೇಯಕ ಅತ್ಯಂತ ಪಕ್ವವಾಗಿದೆ. ಆದಷ್ಟು ಬೇಗ ನಿಯಮಾವಳಿ ರೂಪಿಸಲಾಗುವುದು.

PREV
Read more Articles on
click me!

Recommended Stories

ದ್ವೇಷಪೂರಿತ ದಾಳಿ ತಡೆಗೆ ರಕ್ಷಾ ಕವಚ ಈ ವಿಧೇಯಕ: ಸುಪ್ರೀಂ ಕೋರ್ಟ್‌ ವಕೀಲ ಸಂಕೇತ ಏಣಗಿ ಲೇಖನ
ಅಹಿಂದ, ಎಡಪಂಥೀಯರೇ ನಿಜವಾದ ದ್ವೇಷಭಾಷಣಕಾರರು: ಎನ್.ರವಿಕುಮಾರ್ ಲೇಖನ