ಲೋ ಶುಗರ್ ಹಾಗೂ ಗ್ರೋತ್ ಆರ್ಗನ್ ಸಮಸ್ಯೆಯಿಂದ ಬಳಲುತ್ತಿದ್ದ 5 ವರ್ಷದ ಬಾಲಕನಿಗೆ ನಿರಂತರ ಚಿಕಿತ್ಸೆಗೆ ವ್ಯವಸ್ಥೆ ಮಾಡುವ ಮೂಲಕ ಶಿವಮೊಗ್ಗ ಲೋಕಸಭಾ ಕ್ಷೇತ್ರದ ಸಂಸದ ಬಿ.ವೈ. ರಾಘವೇಂದ್ರ ಮಾನವೀಯತೆ ಮೆರೆದಿದ್ದಾರೆ.
ಶಿವಮೊಗ್ಗ: ಲೋ ಶುಗರ್ ಹಾಗೂ ಗ್ರೋತ್ ಆರ್ಗನ್ ಸಮಸ್ಯೆಯಿಂದ ಬಳಲುತ್ತಿದ್ದ 5 ವರ್ಷದ ಬಾಲಕನಿಗೆ ನಿರಂತರ ಚಿಕಿತ್ಸೆಗೆ ವ್ಯವಸ್ಥೆ ಮಾಡುವ ಮೂಲಕ ಶಿವಮೊಗ್ಗ ಲೋಕಸಭಾ ಕ್ಷೇತ್ರದ ಸಂಸದ ಬಿ.ವೈ. ರಾಘವೇಂದ್ರ ಮಾನವೀಯತೆ ಮೆರೆದಿದ್ದಾರೆ. ಶಿವಮೊಗ್ಗ ತಾಲೂಕಿನ ಇಟ್ಟಿಗೆ ಹಳ್ಳಿ ಗ್ರಾಮದಲ್ಲಿ ಗಾರೆ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದ ರಾಘವೇಂದ್ರ ಹಾಗೂ ಅಶ್ವಿನಿ ದಂಪತಿಗಳಿಗೆ ಇಬ್ಬರು ಮಕ್ಕಳು. ಮೊದಲನೆಯವನು ಎಲ್ಲರಂತೆಯೇ ಇದ್ದರೂ ಎರಡನೆಯ ಮಗು ಶ್ರೇಯಸ್‍ಗೆ (Shreyas) 6 ತಿಂಗಳಿನಿಂದಲೇ ವಿಚಿತ್ರ ಸಮಸ್ಯೆ ಕಾಣಿಸಿಕೊಂಡಿತ್ತು. ಲೋ ಶುಗರ್‌ನಿಂದಾಗಿ ಬಳಲುತ್ತಿದ್ದ ಈ ಪುಟಾಣಿಗೆ ಇದರ ಜೊತೆಗೆ ಗ್ರೋತ್ ಆರ್ಗನ್ ಸಮಸ್ಯೆ ಕೂಡ ಕಾಣಿಸಿಕೊಂಡಿತ್ತು. ಇದು ಮಗುವಿನ ಬೆಳವಣಿಗೆ ಕುಂಠಿತಗೊಳಿಸುತ್ತಿದ್ದಲ್ಲದೆ, ಪ್ರಾಣಾಪಾಯವೂ ಇತ್ತು.
ವೈದ್ಯರಿಗೆ ಮಗುವಿನ ಸಮಸ್ಯೆ ಏನೆಂದು ಗುರುತಿಸಲು ಮೂರು ವರ್ಷಗಳು ಬೇಕಾಯ್ತು. ನಂತರ ಪ್ರತಿ ತಿಂಗಳೂ ಹತ್ತಾರು ಸಾವಿರ ರೂ.ಗಳ ಮೆಡಿಸಿನ್ ಮತ್ತು ಚಿಕಿತ್ಸಾ ವೆಚ್ಚ ಬರಿಸಬೇಕಾಗಿತ್ತು. ಆದರೆ ಕೂಲಿ ಕೆಲಸ ಮಾಡಿಕೊಂಡು ಜೀವನ ನಡೆಸುತ್ತಿದ್ದ ಕುಟುಂಬಕ್ಕೆ ದುಬಾರಿ ಚಿಕಿತ್ಸಾ ವೆಚ್ಚ ಭರಿಸುವುದೇ ಅಸಾಧ್ಯ ಎನ್ನುವಂತಾಗಿತ್ತು. ಸದ್ಯ ಮಗುವಿಗೆ 5 ವರ್ಷ 4 ತಿಂಗಳಾಗಿದ್ದು, ಇನ್ನು ಚಿಕಿತ್ಸೆ ಕೊಡಿಸುವುದು ಅಸಾಧ್ಯ ಎನ್ನುವಂತಹ ಪರಿಸ್ಥಿತಿ ಎದುರಾಗಿತ್ತು, ಈ ಬಗ್ಗೆ ಸ್ಥಳೀಯ ಬಿಜೆಪಿ ಮುಖಂಡರು(BJP Leaders) ಸಂಸದ ಬಿ.ವೈ. ರಾಘವೇಂದ್ರ (MP B.Y. Raghavendra) ಅವರ ಗಮನ ಸೆಳೆದಿದ್ದರು.
ಕ್ಷೇತ್ರ ಅಭಿವೃದ್ಧಿಯಲ್ಲಿ ತಾರತಮ್ಯ ಮಾಡಿಲ್ಲ: ಸಂಸದ ಬಿ.ವೈ.ರಾಘವೇಂದ್ರ
ಹೀಗಾಗಿ ಸಮಸ್ಯೆಯನ್ನು ಅರಿತ ಸಂಸದರು ಆರೋಗ್ಯ ಇಲಾಖೆ ಅಧಿಕಾರಿಗಳೊಂದಿಗೆ ಚರ್ಚಿಸಿ, ಮಗುವಿಗೆ 18 ವರ್ಷವಾಗುವವರೆಗೂ ಸರ್ಕಾರದಿಂದಲೇ ಚಿಕಿತ್ಸಾ ವೆಚ್ಚ ಭರಿಸಲು ಕ್ರಮ ಕೈಗೊಂಡಿದ್ದಾರೆ. ಇಂದು ಬೆಳಗ್ಗೆ ಮಗುವಿಗೆ ಸರ್ಕಾರದಿಂದ ಮೊದಲ ಔಷಧಿಗಳನ್ನು ಒದಗಿಸಲಾಗಿದ್ದು, ಸಂಸದರ ಬಿ.ವೈ. ರಾಘವೇಂದ್ರ ಮಗುವಿಗೆ ಔಷಧಿ ನೀಡಿ, ಶೀಘ್ರದಲ್ಲೇ ಮಗು ಎಲ್ಲ ಮಕ್ಕಳಂತೆ ಆರೋಗ್ಯವಾಗಿರಲಿ ಎಂದು ಹಾರೈಸಿದರು.
ಈ ಸಂದರ್ಭದಲ್ಲಿ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ತಮ್ಮಡಿಹಳ್ಳಿ ನಾಗರಾಜ್, ಬಿಜೆಪಿ ರೈತಮೋರ್ಚಾ ಪ್ರಧಾನ ಕಾರ್ಯದರ್ಶಿ ಇಟ್ಟಿಗೆಹಳ್ಳಿ ನಾಗೇಂದ್ರ, ಪ್ರಮುಖರಾದ ಸತೀಶ್, ಚೇತನ್ ಮತ್ತಿತರರಿದ್ದರು. ಸಂಸದ ಬಿ.ವೈ. ರಾಘವೇಂದ್ರ ಅವರಿಗೆ ಕೃತಜ್ಞತೆ ಸಲ್ಲಿಸಿರುವ ಮಗುವಿನ ಪೋಷಕರಾದ ರಾಘವೇಂದ್ರ ಹಾಗೂ ಅಶ್ವಿನಿ ದಂಪತಿಗಳು, ಸಂಸದರು ಸಂಕಷ್ಟದ ಸಂದರ್ಭದಲ್ಲಿ ನಮಗೆ ಸ್ಪಂದಿಸಿ, ಮಗುವಿಗೆ ಚಿಕಿತ್ಸೆ ವ್ಯವಸ್ಥೆ ಮಾಡಿಸುವ ಮೂಲಕ ತಮ್ಮ ಬದುಕಲ್ಲಿ ಭರವಸೆ ಮೂಡಿಸಿದ್ದಾರೆ ಎಂದರು.
ವಿಎಸ್‌ಐಎಲ್ ಉಳಿವಿಗೆ ಸಿಎಂ ಬಳಿ ನಿಯೋಗ: ಸಂಸದ ಬಿ.ವೈ.ರಾಘವೇಂದ್ರ