ನೂತನವಾಗಿ ಪ್ರಾರಂಭವಾಗಿರುವ ಮದ್ಯ ಮಾರಾಟ ಮಳಿಗೆ ತೆರವುಗೊಳಿಸಬೇಕೆಂದು ಒತ್ತಾಯಿಸಿ ಕರ್ನಾಟಕ ಕಟ್ಟಡ ಕಾರ್ಮಿಕರ ಸೇವಾ ಸಂಘ ಹಾಗೂ ಆರ್‌ಎಂಎಲ್ ನಗರ ಸಮಾಜ ಸೇವಾ ಸಮಿತಿ ನೇತೃತ್ವದಲ್ಲಿ ಬುದ್ಧನಗರ ಮತ್ತು ಆರ್‌ಎಂಎಲ್ ನಗರ ನಿವಾಸಿಗಳು ಶನಿವಾರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಶಿವಮೊಗ್ಗ (ಅ.20): ಇಲ್ಲಿನ ಬುದ್ಧನಗರದಲ್ಲಿ ನೂತನವಾಗಿ ಪ್ರಾರಂಭವಾಗಿರುವ ಮದ್ಯ ಮಾರಾಟ ಮಳಿಗೆ ತೆರವುಗೊಳಿಸಬೇಕೆಂದು ಒತ್ತಾಯಿಸಿ ಕರ್ನಾಟಕ ಕಟ್ಟಡ ಕಾರ್ಮಿಕರ ಸೇವಾ ಸಂಘ ಹಾಗೂ ಆರ್‌ಎಂಎಲ್ ನಗರ ಸಮಾಜ ಸೇವಾ ಸಮಿತಿ ನೇತೃತ್ವದಲ್ಲಿ ಬುದ್ಧನಗರ ಮತ್ತು ಆರ್‌ಎಂಎಲ್ ನಗರ ನಿವಾಸಿಗಳು ಶನಿವಾರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಬುದ್ಧನಗರ 1ನೇ ತಿರುವಿನಲ್ಲಿ ಮದ್ಯ ಮಾರಾಟ ಮಳಿಗೆಯನ್ನು ಶುಕ್ರವಾರ ಆರಂಭಿಸಲಾಗಿದೆ. ಮದ್ಯ ಮಾರಾಟ ಮಳಿಗೆ ಸಮೀಪದಲ್ಲೇ ದೇವಾಲಯ, ಪ್ರಾರ್ಥನಾ ಮಂದಿರ, ಅಂಗನವಾಡಿ ಕೇಂದ್ರ ಹಾಗೂ ಶಾಲೆ-ಕಾಲೇಜುಗಳಿವೆ ಎಂದು ತಿಳಿಸಿದರು.
ಈ ಭಾಗದ ನಿವಾಸಿಗಳಲ್ಲಿ ಬಹುತೇಕ ಮಂದಿ ಕೂಲಿ ಕಾರ್ಮಿಕರಾಗಿದ್ದಾರೆ. ಮಳಿಗೆಯ ಸಮೀಪದಲ್ಲೇ ಕೆಎಸ್‌ಆರ್‌ಟಿಸಿ ಡಿಪೋ ಇರುವುದರಿಂದ ಪ್ರತಿನಿತ್ಯ ವಾಹನ ಸಂಚಾರ ದಟ್ಟಣೆ ಹೆಚ್ಚಾಗಿರುತ್ತದೆ. ಮಳಿಗೆ ಇರುವ ರಸ್ತೆ ಕಿರಿದಾಗಿದ್ದು, ಮದ್ಯಮಾರಾಟ ಮಳಿಗೆಯಿಂದ ನಿವಾಸಿಗಳಿಗೆ ತೊಂದರೆಯಾಗುತ್ತದೆ ಎಂದು ದೂರಿದರು.
ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ಈ ಭಾಗದಲ್ಲಿ ಎಲ್ಲಾ ಧರ್ಮಿಯರು ಸಹಬಾಳ್ವೆ ಮತ್ತು ಸೌಹಾರ್ದತೆಯಿಂದ ವಾಸಿಸುತ್ತಿದ್ದಾರೆ. ಕೂಲಿ ಕಾರ್ಮಿಕರು ಹೆಚ್ಚಿನ ಸಂಖ್ಯೆಯಲ್ಲಿರುವ ಬಡಾವಣೆಯಲ್ಲಿ ಮದ್ಯಮಾರಾಟ ಮಳಿಗೆಯಿಂದ ಸೌಹಾರ್ದತೆ ಕದಡುವ ಸಾಧ್ಯತೆ ಇರುತ್ತದೆ. ಈ ಹಿನ್ನೆಲೆಯಲ್ಲಿ ಮದ್ಯ ಮಾರಾಟ ಮಳಿಗೆಯನ್ನು ತೆರವುಗೊಳಿಸಬೇಕು ಎಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಅಶ್ವಿನಿ, ಪದ್ಮಾವತಿ, ರಾಜೇಶ್ವರಿ, ಮುಸ್ತಾಫ, ಇಮ್ರಾನ್, ರುಕ್ಸಾನಾ, ಅರ್ಚನಾ, ಶಕ್ತಿವೇಲು, ಅನ್ನಪೂರ್ಣ ಸೇರಿದಂತೆ ಹಲವರಿದ್ದರು