ಮಲೆನಾಡಿನ ಭಾಗದ ಜನರಿಗೆ ಮಂಗನ ಕಾಯಿಲೆ ಇನ್ನಿಲ್ಲದಂತೆ ಕಾಡುತ್ತಿದೆ. ಇದೀಗ ಸಾಗರ ತಾಲೂಕಿನಲ್ಲಿ ಮತ್ತೆರಡು ಪ್ರಕರಣಗಳು ಬೆಳಕಿಗೆ ಬಂದಿವೆ. ಈ ಕುರಿತಾದ ರಿಪೋರ್ಟ್ ಇಲ್ಲಿದೆ ನೋಡಿ.
ಸಾಗರ(ಏ.06): ತಾಲೂಕಿನಲ್ಲಿ ಹೊಸದಾಗಿ ಎರಡು ಮಂಗನ ಕಾಯಿಲೆ(ಕೆಎಫ್‌ಡಿ) ಪ್ರಕರಣ ದಾಖಲಾಗಿದೆ. ಹೆನ್ನಿ ಗ್ರಾಮದ ವೀರರಾಜ್ ಮತ್ತು ಮುಪ್ಪಾನೆ ಗ್ರಾಮದ ಗಿರಿರಾಜ್‌ರನ್ನು ಹೆಚ್ಚಿನ ಚಿಕಿತ್ಸೆಗೆ ಮಣಿಪಾಲ ಆಸ್ಪತ್ರೆಗೆ ಕಳಿಸಿಕೊಡಲಾಗುತ್ತದೆ ಎಂದು ತಾಲೂಕು ಆರೋಗ್ಯಾಧಿಕಾರಿ ಡಾ.ಮೋಹನ್ ತಿಳಿಸಿದ್ದಾರೆ.
ಉಪವಿಭಾಗೀಯ ಆಸ್ಪತ್ರೆಯ ಮಂಗನಕಾಯಿಲೆ ವಿಶೇಷ ಚಿಕಿತ್ಸಾ ವಾರ್ಡ್‌ನಲ್ಲಿ ಭಾನುವಾರ ದಾಖಲಾಗಿರುವ ಹೆನ್ನಿ ಗ್ರಾಮದ ವೀರರಾಜ್ ಮತ್ತು ಮುಪ್ಪಾನೆ ಗ್ರಾಮದ ಗಿರಿರಾಜ್ ಅವರ ಆರೋಗ್ಯ ತಪಾಸಣೆ ನಡೆಸಿ ಪತ್ರಕರ್ತರೊಂದಿಗೆ ಅವರು ಮಾತನಾಡಿದರು.
ಮೆಗ್ಗಾನ್ ಆಸ್ಪತ್ರೆಯಲ್ಲಿ ಆಕಸ್ಮಿಕ ಬೆಂಕಿ: 3 ಮಕ್ಕಳ ಸ್ಥಿತಿ ಗಂಭೀರ
ವೀರರಾಜ್ ಈ ಹಿಂದೆ ಕೆಎಫ್‌ಡಿಗೆ ಸಂಬಂಧಪಟ್ಟಂತೆ ಮಣಿಪಾಲದಲ್ಲಿ ಚಿಕಿತ್ಸೆ ಪಡೆದಿದ್ದಾರೆ. ಆದರೂ, ಕಳೆದ ಎರಡು ಮೂರು ದಿನಗಳಿಂದ ಜ್ವರ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಅವರಿಗೆ ಉಪವಿಭಾಗೀಯ ಆಸ್ಪತ್ರೆಯ ಕೆಎಫ್‌ಡಿ ವಾರ್ಡ್‌ನಲ್ಲಿ ಸದ್ಯ ಚಿಕಿತ್ಸೆ ನೀಡುತ್ತಿದ್ದು, ಅವರನ್ನು ಮಣಿಪಾಲ ಆಸ್ಪತ್ರೆಗೆ ಕಳಿಸಲಾಗುತ್ತದೆ ಎಂದು ಹೇಳಿದರು.
ಮುಪ್ಪಾನೆ ಗ್ರಾಮದ ಗಿರಿರಾಜ್ ಮತ್ತು ಕುಟುಂಬದವರು ಆರೋಗ್ಯ ಇಲಾಖೆ ವೈದ್ಯ ಸಿಬ್ಬಂದಿ ಅವರ ಮನೆಗೆ ಭೇಟಿ ನೀಡಿದಾಗ ವ್ಯಾಕ್ಸಿನೇಷನ್ ತೆಗೆದುಕೊಳ್ಳಲು ಒಪ್ಪಿರಲಿಲ್ಲ. ಈಗ ಕುಟುಂಬದ ಯಜಮಾನ ಗಿರಿರಾಜ್ ಅವರಿಗೆ ಕೆಎಫ್‌ಡಿ ಸೋಂಕು ಕಾಣಿಸಿಕೊಂಡಿದ್ದು, ಕುಟುಂಬದ ಉಳಿದವರನ್ನು ತಪಾಸಣೆಗೆ ಒಳಪಡಿಸಲಾಗುತ್ತಿದೆ. ಗಿರಿರಾಜ್ ಅವರಿಗೆ ಅಗತ್ಯ ಚಿಕಿತ್ಸೆಗಾಗಿ ಮಣಿಪಾಲಕ್ಕೆ ಕಳಿಸಲಾಗುತ್ತದೆ ಎಂದರು.
ರಾಜ್ಯದ ಜಿಲ್ಲಾ ಸುದ್ದಿಗಳಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ
ತಾಲೂಕಿನಲ್ಲಿ ಕೆಎಫ್‌ಡಿಗೆ ಸಂಬಂಧಪಟ್ಟಂತೆ ಒಟ್ಟು 27 ಪ್ರಕರಣ ದಾಖಲಾಗಿದೆ. ತುಮರಿ 5, ಕಾರ್ಗಲ್ 9, ಅರಳಗೋಡು 8, ಆವಿನಹಳ್ಳಿ 1 ಪ್ರಕರಣವಿದ್ದು, ಬಹುತೇಕರು ಚಿಕಿತ್ಸೆ ಪಡೆದು ಗುಣಮುಖರಾಗಿ ಮನೆಗೆ ಬಂದಿದ್ದಾರೆ. ಶಾಸಕರ ಸೂಚನೆಯಂತೆ ಕೆಎಫ್‌ಡಿ ಸೋಂಕು ಕಂಡು ಬಂದವರನ್ನು ನೇರವಾಗಿ ಮಣಿಪಾಲ ಆಸ್ಪತ್ರೆಗೆ ಕಳಿಸಲಾಗುತ್ತಿದ್ದು, ರೋಗಿಗಳ ಚಿಕಿತ್ಸಾ ವೆಚ್ಚವನ್ನು ಸರ್ಕಾರದ ಪರವಾಗಿ ಜಿಲ್ಲಾ ಆರೋಗ್ಯಾಧಿಕಾರಿಗಳ ಖಾತೆಯಿಂದ ಜಮೆ ಮಾಡಲಾಗುತ್ತಿದೆ. ತಾಲೂಕಿನಲ್ಲಿ ಕೆಎಫ್‌ಡಿ ಜಾಗೃತಿ ಹಾಗೂ ವ್ಯಾಕ್ಸಿನೇಷನ್ ಮತ್ತು ಸರ್ವೆ ಕಾರ್ಯ ಪ್ರಗತಿಯಲ್ಲಿದೆ ಎಂದು ತಿಳಿಸಿದರು.
ಕೋವಿಡ್ ಬಗ್ಗೆ ಜಾಗೃತಿ:
ಉಪವಿಭಾಗೀಯ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ.ಪ್ರಕಾಶ್ ಬೋಸ್ಲೆ ಮಾತನಾಡಿ, ಕೊರೋನಾ ಬಗ್ಗೆ ಉಪವಿಭಾಗೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಹಾಗೂ ಅಗತ್ಯ ಜಾಗೃತಿ ಕಾರ್ಯಕ್ರಮಗಳನ್ನು ಕೈಗೊಳ್ಳಲಾಗಿದೆ. ಮಾ.24ರ ಲಾಕ್‌ಡೌನ್ ನಂತರ 23ಜನ ಕೊರೋನಾ ಶಂಕೆ ಹಿನ್ನೆಲೆಯಲ್ಲಿ ಒಳರೋಗಿಗಳಾಗಿ ಚಿಕಿತ್ಸೆ ಪಡೆದಿದ್ದು, ಅವರ ಪೈಕಿ 9 ರೋಗಿಗಳ ಗಂಟಲು ದ್ರವವನ್ನು ಪರೀಕ್ಷೆಗೆ ಕಳಿಸಲಾಗಿತ್ತು. ಎಲ್ಲವೂ ನೆಗಟಿವ್ ಬಂದಿದೆ. ತಾಲೂಕಿನಲ್ಲಿ ಕೊರೋನಾ ಶಂಕಿತರು ಯಾರೂ ಇರುವುದಿಲ್ಲ ಎಂದು ತಿಳಿಸಿದರು.
ಕೊರೋನಾ ಹಿನ್ನೆಲೆಯಲ್ಲಿ ಉಪವಿಭಾಗೀಯ ಆಸ್ಪತ್ರೆಯಲ್ಲಿ ಅಗತ್ಯ ಸೇವೆಗಳನ್ನು ಹೊರತುಪಡಿಸಿ ಇತರೆ ಸೇವೆಗಳಿಗೆ ಮಿತಿ ಹೇರಲಾಗಿದೆ. ವೈದ್ಯರು ಪಾಳಿಯಲ್ಲಿ ಕೆಲಸ ಮಾಡುತ್ತಿದ್ದು, ಕೋವಿಡ್ ಸೋಂಕಿತ ವಾರ್ಡ್‌ಗಳಿಗೆ ಹೊರಗಿನವರ ಪ್ರವೇಶ ನಿಷೇಧಿಸಲಾಗಿದೆ. ಕೊರೋನಾಗೆ ಸಂಬಂಧಪಟ್ಟಂತೆ ಅಗತ್ಯ ಔಷಧಗಳು, ಮಾಸ್ಕ್, ಹ್ಯಾಂಡ್ ಸ್ಯಾನಿಟೈಸರ್ ಸಂಗ್ರಹ ಇದೆ. ದಿನದ 24ಗಂಟೆಯೂ ವೈದ್ಯ ಸಿಬ್ಬಂದಿ ಕರ್ತವ್ಯ ನಿರ್ವಹಿಸುತ್ತಿದ್ದು, ಅವರಿಗೆ ಮಾರಿಕಾಂಬಾ ವ್ಯವಸ್ಥಾಪಕ ಸಮಿತಿ, ರೆಡ್ ಚಿಲ್ಲಿ ಸೇರಿ ವಿವಿಧ ಸಂಸ್ಥೆಗಳು ಊಟದ ವ್ಯವಸ್ಥೆ ಮಾಡಿವೆ. ಕೊರೋನಾ ಶಂಕಿತರನ್ನು ಶಿವಮೊಗ್ಗಕ್ಕೆ ಕರೆದುಕೊಂಡು ಹೋಗಲು ಒಂದು ಆ್ಯಂಬುಲೆನ್ಸ್ ಮೀಸಲಿಡಲಾಗಿದೆ ಎಂದರು.
ಆರೋಗ್ಯ ಇಲಾಖೆ ನೌಕರರ ಒಕ್ಕೂಟದ ಜಿಲ್ಲಾಧ್ಯಕ್ಷ ಮಾ.ಸ.ನಂಜುಂಡಸ್ವಾಮಿ ಮಾತನಾಡಿ, ಉಪವಿಭಾಗೀಯ ಆಸ್ಪತ್ರೆಯಲ್ಲಿ ಎರಡು ಆ್ಯಂಬುಲೆನ್ಸ್ ಇದ್ದು, ಒಂದು ಆ್ಯಂಬುಲೆನ್ಸ್ ಶಿಥಿಲಾವಸ್ಥೆಯಲ್ಲಿದೆ. ಇರುವ ಆ್ಯಂಬುಲೆನ್ಸ್‌ಗೆ ಕಾಯಂ ಚಾಲಕರು ಇಲ್ಲ. ಗುತ್ತಿಗೆ ಮೇಲೆ ಪಡೆದ ನೌಕರರ ಪೈಕಿ ಒಬ್ಬರು ಚಾಲಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಇದರಿಂದ ಆ್ಯಂಬ್ಯುಲೆನ್ಸ್ ನಿರ್ವಹಣೆ ಸರಿಯಾಗಿ ಆಗುತ್ತಿಲ್ಲ. ಸರ್ಕಾರ ಉಪವಿಭಾಗೀಯ ಆಸ್ಪತ್ರೆ ಆ್ಯಂಬುಲೆನ್ಸ್‌ಗೆ ಚಾಲಕನನ್ನು ನೇಮಕ ಮಾಡುವ ಅಗತ್ಯವಿದೆ ಎಂದರು. ಡಾ.ಹರೀಶ್, ಆರೋಗ್ಯ ಇಲಾಖೆ ನೌಕರರ ಸಂಘದ ರಾಜು ಈಳಿಗೇರ್, ರವಿ, ನಗರಸಭಾ ಸದಸ್ಯ ಬಿ.ಎಚ್.ಲಿಂಗರಾಜ್ ಇತರರು ಇದ್ದರು.