
ನೇರಳೆ ಹಣ್ಣು ಈ ಬಾರಿ ವಿಪರೀತ ಎನ್ನಿಸುವಷ್ಟು ಫಸಲು ಬಿಟ್ಟಿದೆ. ಕಳೆದ 30-40 ವರ್ಷಗಳಿಗಿಂತಲೂ ಈ ಬಾರಿ ಅಧಿಕ ಫಸಲು ಎಂದೇ ಹೇಳಲಾಗುತ್ತಿದೆ. ಮಧುಮೇಹ ಸೇರಿದಂತೆ ಹಲವಾರು ಅನಾರೋಗ್ಯ ಸಮಸ್ಯೆಗಳಿಗೆ ರಾಮಬಾಣವಾಗಿರುವ ನೇರಳೆ ಹಣ್ಣು, ಹಿಂದೆಂದಿಗಿಂತಲೂ ಹಲವು ಕಡೆಗಳಲ್ಲಿ ಈ ಬಾರಿ ಕಡಿಮೆ ದರದಲ್ಲಿ ಮಾರಾಟ ಆಗುತ್ತಿವೆ.. ಕೆಲವು ಕಡೆಗಳಲ್ಲಿ ವ್ಯಾಪಾರಸ್ಥರು ದುಬಾರಿಯಾಗಿಯೇ ಮಾರುತ್ತಿದ್ದರೂ, ಈ ಬಾರಿ ಮಾತ್ರ ಹಿಂದೆಂದಿಗಿಂತಲೂ ಫಸಲಂತೂ ಭರ್ಜರಿಯಾಗಿ ಬಂದಿದೆ. ಆದರೆ ನೂರಾರು ವರ್ಷಗಳಿಂದ ಇರುವ ಗಾದೆ ಮಾತೊಂದು ಈ ವರ್ಷ ಹಿರಿಯರ ಬಾಯಲ್ಲಿ ಕೇಳಿಬರುತ್ತಿದೆ, ಅದೇನೆಂದರೆ, ಯಾವ ಬೇಸಿಗೆಯಲ್ಲಿ ನೇರಳೆ ಹಣ್ಣು ಹೀಗೆ ರಾಶಿ ರಾಶಿಯಾಗಿ ಬೀಳುತ್ತದೆಯೋ, ಆ ವರ್ಷ ಬರಗಾಲ ಇರುತ್ತದೆ ಎನ್ನುವುದು. ನೇರಳೆ ಹಣ್ಣು ಹೇರಳವಾಗಿ ಬಂದ ವರ್ಷ ಬರಗಾಲ ಕಟ್ಟಿಟ್ಟದ್ದು ಎನ್ನುವುದು ಹಿರಿಕರ ಅಭಿಮತ.
ಆದರೆ, ಅಚ್ಚರಿಯ ವಿಷ್ಯ ಎಂದರೆ, ಹಿರಿಯರ ಮಾತಿಗೂ, ವಿಜ್ಞಾನಕ್ಕೂ ಸಂಬಂಧವಿದೆ. ಸೋಷಿಯಲ್ ಮೀಡಿಯಾದಲ್ಲಿ ಈ ಕುರಿತು ಮಾಹಿತಿ ಕೂಡ ಇದಾಗಲೇ ಹರಿದಾಡುತ್ತಿದೆ. ರಾಶಿ ರಾಶಿಯಾಗಿ ನೇರಳೆ ಹಣ್ಣುಗಳು ಬಿಟ್ಟರೆ ಅದು ನಿಜಕ್ಕೂ ಬರಗಾಲದ ಸೂಚನೆ ಎನ್ನುತ್ತದೆ ವಿಜ್ಞಾನ! ಇದಕ್ಕೆ ವೈಜ್ಞಾನಿಕ ಭಾಷೆಯಲ್ಲಿ ಮಾಸ್ಟಿಂಗ್ (Masting) ಅಥವಾ ಸ್ಟ್ರೆಸ್ ಫ್ರೂಟಿಂಗ್ (Stress Fruiting) ಎಂದು ಕರೆಯುತ್ತಾರೆ. ಇದರ ಅರ್ಥ, ಮರಗಳು ತಮ್ಮನ್ನು ತಾವು ಮುಗಿಸಿಕೊಂಡು ಗರಿಷ್ಠ ಹಣ್ಣು ಕೊಡುವ ಈ ಕೊನೆಯ ಪ್ರಯತ್ನ ಎನ್ನಲಾಗುತ್ತದೆ. ಇದನ್ನು ಮರಗಳ "ಸೂಸೈಡ್ ಫ್ರೂಟಿಂಗ್" (Suicide Fruiting) ಅಥವಾ "ಬಂಪರ್ ಕ್ರಾಪ್" ಎಂದೂ ಕರೆಯುತ್ತಾರೆ.
ಈ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಒಂದು ಅದ್ಭುತ ಬರಹ ಹರಿದಾಡುತ್ತಿದೆ. ಇದನ್ನು ವಿಶ್ಲೇಷಿಸಿದವರು ಯಾರು ಎನ್ನುವ ಮಾಹಿತಿ ಇಲ್ಲ. ಆದರೆ ರಾಶಿ ರಾಶಿ ನೇರಳೆ ಹಣ್ಣು ಬಿಡುತ್ತಿರುವುದಕ್ಕೂ ಬರಗಾಲಕ್ಕೂ ಏನು ಸಂಬಂಧ ಎನ್ನುವ ಬಗ್ಗೆ ಇದರಲ್ಲಿ ಮಾಹಿತಿ ನೀಡಲಾಗಿದೆ. ಈ ಲೇಖನದಲ್ಲಿ ಇರುವಂತೆ ಇದನ್ನು 'ಸರ್ವೈವಲ್ ಇನ್‌ಸ್ಟಿಂಕ್ಟ್' (ಅಸ್ತಿತ್ವದ ಹೋರಾಟ) ಎಂದು ಕರೆಯಲಾಗುತ್ತದೆ. ಇದು ಪ್ರಕೃತಿಯ 'ಜಾತಿಯನ್ನು ಉಳಿಸಿಕೊಳ್ಳುವ' (Survival of the Species) ನಿಯಮ. ಮರಕ್ಕೆ ಭೂಮಿಯೊಳಗಿನ ನೀರಿನ ಅಭಾವ ಅನಿಸಲು ಪ್ರಾರಂಭಿಸಿದಾಗ ಅಥವಾ ಹವಾಮಾನದಲ್ಲಿ ದೊಡ್ಡ ಬದಲಾವಣೆ ಆಗಲಿದೆ ಎಂಬ ಸೂಚನೆ ಸಿಕ್ಕಾಗ, ಮರವು "ರಕ್ಷಣಾತ್ಮಕ ಮೋಡ್" (Defense Mode) ಗೆ ಹೋಗುತ್ತದೆ. ಮರಕ್ಕೆ ಅನಿಸುತ್ತದೆ, ಬಹುಶಃ ಮುಂದಿನ ದಿನಗಳಲ್ಲಿ ನಾವು ಬದುಕದೇ ಇರಬಹುದು. ಆಗ ತನ್ನನ್ನು ಉಳಿಸಿಕೊಳ್ಳುವ ಬದಲು, ತನ್ನ ಪ್ರಜಾತಿ ಭೂಮಿಯ ಮೇಲೆ ಉಳಿಯಲಿ ಎಂದು ಮರವು ತನ್ನ ಸಂಪೂರ್ಣ ಶಕ್ತಿಯನ್ನು 'ಬೀಜ' (ಹಣ್ಣು) ತಯಾರಿಸಲು ಬಳಸುತ್ತದೆ.
ಅಂತಹ ವರ್ಷದಲ್ಲಿ ಮರವು ಹೊಸ ಚಿಗುರು ಬಿಡುವುದನ್ನು ಅಥವಾ ಕೊಂಬೆಗಳನ್ನು ಬೆಳೆಸುವುದನ್ನು ಸಂಪೂರ್ಣವಾಗಿ ನಿಲ್ಲಿಸುತ್ತದೆ. ಏಕೆಂದರೆ ಹೊಸ ಎಲೆಗಳನ್ನು ಬದುಕಿಸಲು ಹೆಚ್ಚು ನೀರು ಮತ್ತು ಆಹಾರ ಬೇಕಾಗುತ್ತದೆ. ಮರವು ಆ ಶಕ್ತಿಯನ್ನು ಉಳಿಸಿ ಕೇವಲ ನೇರಳೆ ಹಣ್ಣಿನ ಉತ್ಪಾದನೆಯನ್ನು ಹೆಚ್ಚಿಸುವುದರ ಮೇಲೆ ಕೇಂದ್ರೀಕರಿಸುತ್ತದೆ. ಇದರಿಂದಲೇ ಕಳೆದ ವರ್ಷ ತೀರಾ ಕಡಿಮೆ ಹಣ್ಣು ಬಿಟ್ಟಿದ್ದ ಮರಗಳೂ ಈ ವರ್ಷ ಹಣ್ಣುಗಳಿಂದ ತುಂಬಿ ಹೋಗಿವೆ.
ನೇರಳೆ ಮರದ ಬೇರು 'ಆಣಿ ಬೇರು' (Taproot) ಆಗಿದ್ದು, ಭೂಮಿಯ ತೀರಾ ಆಳದ ಪದರದವರೆಗೂ ಹೋಗುತ್ತದೆ. ಭೂಗರ್ಭದ ನೀರಿನ ಮಟ್ಟ ವಿಪರೀತ ಕುಸಿದಾಗ ಮಾತ್ರ ಈ ಬೇರುಗಳಿಗೆ ಒತ್ತಡ (Water Stress) ಅನಿಸುತ್ತದೆ. ಈ ನೀರಿನ ಒತ್ತಡವೇ ಮುಂದೆ ಬರುವ ಬರಗಾಲದ ಅಥವಾ ತೀವ್ರ ಬೇಸಿಗೆಯ ಸೂಚನೆಯಾಗಿರುತ್ತದೆ. ಅದಕ್ಕಾಗಿಯೇ, ಯಾವ ಬೇಸಿಗೆಯಲ್ಲಿ ನೇರಳೆಯ ಅಭೂತಪೂರ್ವ ಫಸಲು ಬರುತ್ತದೆಯೋ, ಅದು ಪ್ರಕೃತಿಯು ಭವಿಷ್ಯದ ಶುಷ್ಕ ಕಾಲದ ಬಗ್ಗೆ ನೀಡುವ ಎಚ್ಚರಿಕೆಯಾಗಿರುತ್ತದೆ.
ನೇರಳೆ ಮರ ಆತ್ಮಹತ್ಯೆ ಮಾಡಿಕೊಳ್ಳುವುದಿಲ್ಲ, ಬದಲಾಗಿ ತನ್ನ ಬಲಿದಾನ ನೀಡಿ ತನ್ನ ಮುಂದಿನ ಪೀಳಿಗೆಗೆ (ಬೀಜಗಳಿಗೆ) ಜನ್ಮ ನೀಡಲು ಪ್ರಯತ್ನಿಸುತ್ತಿರುತ್ತದೆ. ಪ್ರಕೃತಿಯ ಈ ಚಕ್ರ ಬೆರಗುಗೊಳಿಸುವಂತಿದೆ. ಅಜ್ಜಿಯ ತಲೆಮಾರುಗಳ ನಿರೀಕ್ಷಣೆ ಮತ್ತು ವಿಜ್ಞಾನದ ತತ್ವಗಳು ಇಲ್ಲಿ ತಂತೋತಂತ ಜೊತೆಯಾಗಿವೆ. ಈ ವರ್ಷ ನೇರಳೆ ಹಣ್ಣಿನ ಸವಿಯನ್ನು ನೋಡಿ, ಆದರೆ ಪ್ರಕೃತಿ ನೀಡಿದ ಈ 'ಬರಗಾಲದ' ಸೂಚನೆಯನ್ನು ಗಂಭೀರವಾಗಿ ಪರಿಗಣಿಸಿ ನೀರು ಮತ್ತು ಸಂಪನ್ಮೂಲಗಳನ್ನು ಜಾಗರೂಕತೆಯಿಂದ ಬಳಸುವ ಅಗತ್ಯವಿದೆ ಎಂದು ಈ ಬರಹದಲ್ಲಿ ಸೂಚಿಸಲಾಗಿದೆ.
ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್ ಸಿಗುವ ಏಕೈಕ ತಾಣ ಏಷ್ಯಾನೆಟ್ ಸುವರ್ಣ ನ್ಯೂಸ್. ಹೊಸ ಗ್ಯಾಜೆಟ್ ರಿಲೀಸ್ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್ ಎಕ್ಸ್‌ಪ್ಲೇನರ್ಸ್ ಹಾಗೂ ಗ್ಯಾಜೆಟ್ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.