
ರಾತ್ರಿ ವೇಳೆ ಕತ್ತಲೆಯನ್ನು ಹೋಗಲಾಡಿಸಲು ಬೀದಿ ದೀಪ, ಟ್ಯೂಬ್ಲೈಟ್ ಅಥವಾ ಎಲ್ಇಡಿ ದೀಪಗಳನ್ನು ಬಳಸುತ್ತೇವೆ. ಆದರೆ ಇನ್ಮುಂದೆ ಬಾಹ್ಯಾಕಾಶದಿಂದಲೇ ಸೂರ್ಯನ ಬೆಳಕನ್ನು ಭೂಮಿಗೆ ತರುವ ಪ್ರಯತ್ನ ನಡೆಯುತ್ತಿದೆ. ಹೌದು, ಅಮೆರಿಕದ ಸ್ಟಾರ್ಟ್ಅಪ್ ಕಂಪನಿಯೊಂದು ರಾತ್ರಿ ವೇಳೆಯೂ ಸೂರ್ಯನ ಬೆಳಕನ್ನು ಮಾರಾಟ ಮಾಡುವ ಯೋಜನೆ ರೂಪಿಸಿದೆ. ಈ ಮಹತ್ವಾಕಾಂಕ್ಷೆಯ ಯೋಜನೆಗೆ ಭಾರತದ ಹೈದರಾಬಾದ್ ಮೂಲದ ಸ್ಕೈರೂಟ್ ಏರೋಸ್ಪೇಸ್ ಕೂಡ ಕೈಜೋಡಿಸಿದೆ.
ಕ್ಯಾಲಿಫೋರ್ನಿಯಾ ಮೂಲದ 'ರಿಫ್ಲೆಕ್ಟ್ ಆರ್ಬಿಟಲ್' (Reflect Orbital) ಎಂಬ ಕಂಪನಿ ಈ ಹೊಸ ಪ್ರಯೋಗಕ್ಕೆ ಮುಂದಾಗಿದೆ. ಭೂಮಿಯಿಂದ ನೂರಾರು ಕಿಲೋಮೀಟರ್ ಎತ್ತರದಲ್ಲಿರುವ ಕಕ್ಷೆಯಲ್ಲಿ ಬೃಹತ್ ಪ್ರತಿಫಲಕ ಕನ್ನಡಿಗಳನ್ನು ಹೊಂದಿರುವ ಉಪಗ್ರಹಗಳನ್ನು ಅಳವಡಿಸುವುದು ಇದರ ಯೋಜನೆ. ಈ ಕನ್ನಡಿಗಳು ಸೂರ್ಯನ ಬೆಳಕನ್ನು ಪ್ರತಿಫಲಿಸಿ, ರಾತ್ರಿ ವೇಳೆ ಭೂಮಿಯ ನಿರ್ದಿಷ್ಟ ಪ್ರದೇಶಗಳ ಮೇಲೆ ಬೀಳುವಂತೆ ಮಾಡಲಿವೆ.
ಕಂಪನಿಯ ಯೋಜನೆಯಂತೆ ಸುಮಾರು ಐದು ಕಿಲೋಮೀಟರ್ ವ್ಯಾಪ್ತಿಯ ಪ್ರದೇಶಕ್ಕೆ ಬೆಳಕು ಒದಗಿಸಬಹುದು. ಅಗತ್ಯಕ್ಕೆ ತಕ್ಕಂತೆ ಬೆಳಕಿನ ತೀವ್ರತೆಯನ್ನು ಕಡಿಮೆ ಮಾಡುವುದು ಅಥವಾ ಸಂಪೂರ್ಣವಾಗಿ ನಿಲ್ಲಿಸುವ ವ್ಯವಸ್ಥೆಯನ್ನೂ ರೂಪಿಸುವ ಉದ್ದೇಶವಿದೆ.
ಈ ಯೋಜನೆಗಾಗಿ ರಿಫ್ಲೆಕ್ಟ್ ಆರ್ಬಿಟಲ್ ಭಾರತದ ಸ್ಕೈರೂಟ್ ಏರೋಸ್ಪೇಸ್ ಜೊತೆ ಎರಡು ರಾಕೆಟ್ ಉಡಾವಣೆಗಳ ಒಪ್ಪಂದ ಮಾಡಿಕೊಂಡಿದೆ. ಮೊದಲ ಉಪಗ್ರಹವನ್ನು ಸ್ಕೈರೂಟ್ನ ವಿಕ್ರಮ್-1 ರಾಕೆಟ್ ಮೂಲಕ ಹಾಗೂ ಎರಡನೇ ಉಡಾವಣೆಯನ್ನು ಅಭಿವೃದ್ಧಿಯಲ್ಲಿರುವ ವಿಕ್ರಮ್-1U ರಾಕೆಟ್ ಮೂಲಕ ಕಳುಹಿಸುವ ಯೋಜನೆಯಿದೆ.
ಈ ತಂತ್ರಜ್ಞಾನದಿಂದ ಸೌರ ವಿದ್ಯುತ್ ಘಟಕಗಳು ಸೂರ್ಯಾಸ್ತದ ನಂತರವೂ ಹೆಚ್ಚು ಸಮಯ ಕಾರ್ಯನಿರ್ವಹಿಸಲು ನೆರವಾಗಬಹುದು. ಅಲ್ಲದೆ, ನೈಸರ್ಗಿಕ ವಿಕೋಪಗಳ ಸಂದರ್ಭದಲ್ಲಿ ರಕ್ಷಣಾ ಕಾರ್ಯಾಚರಣೆ, ತುರ್ತು ಹುಡುಕಾಟ ಮತ್ತು ಕೈಗಾರಿಕಾ ಚಟುವಟಿಕೆಗಳಿಗೂ ಬೆಳಕು ಒದಗಿಸಬಹುದು ಎಂಬುದು ಕಂಪನಿಯ ಉದ್ದೇಶ.
ಆದರೆ ಈ ಯೋಜನೆಗೆ ಖಗೋಳ ವಿಜ್ಞಾನಿಗಳು ಮತ್ತು ಪರಿಸರ ತಜ್ಞರಿಂದ ವಿರೋಧವೂ ವ್ಯಕ್ತವಾಗಿದೆ. ಬಾಹ್ಯಾಕಾಶ ಕನ್ನಡಿಗಳಿಂದ ಪ್ರತಿಫಲಿಸುವ ಬೆಳಕು ಕೇವಲ ಗುರಿ ಪ್ರದೇಶಕ್ಕೆ ಸೀಮಿತವಾಗಿರುವುದಿಲ್ಲ. ವಾತಾವರಣದಲ್ಲಿನ ಧೂಳಿನ ಕಣಗಳು ಮತ್ತು ಅಣುಗಳು ಬೆಳಕನ್ನು ಬೇರೆ ಪ್ರದೇಶಗಳಿಗೂ ಚದುರಿಸಬಹುದು.
ವೈಜ್ಞಾನಿಕ ಅಧ್ಯಯನದ ಮಾದರಿ ಲೆಕ್ಕಾಚಾರದ ಪ್ರಕಾರ, ಈ ಬೆಳಕಿನ ಪರಿಣಾಮ ಗುರಿ ಪ್ರದೇಶದಿಂದ ಸುಮಾರು 30 ಕಿಲೋಮೀಟರ್ ದೂರದವರೆಗೂ ಕಾಣಿಸಿಕೊಳ್ಳಬಹುದು. ಇದರಿಂದ ನಕ್ಷತ್ರ ವೀಕ್ಷಣೆ, ಖಗೋಳ ಸಂಶೋಧನೆ, ಪ್ರಾಣಿಗಳ ನೈಸರ್ಗಿಕ ಜೀವನಚಕ್ರ ಮತ್ತು ಮನುಷ್ಯರ ನಿದ್ರೆಯ ಮೇಲೂ ಪರಿಣಾಮ ಬೀರುವ ಆತಂಕವಿದೆ.
ಹೀಗಾಗಿ ರಾತ್ರಿ ವೇಳೆಯೂ ಸೂರ್ಯನ ಬೆಳಕು ಒದಗಿಸುವ ಈ ಪ್ರಯೋಗ ನಿಜಕ್ಕೂ ಯಶಸ್ವಿಯಾಗುತ್ತದೆಯೇ ಅಥವಾ ಪರಿಸರಕ್ಕೆ ಹೊಸ ಸವಾಲಾಗುತ್ತದೆಯೇ ಎಂಬುದನ್ನು ಕಾದು ನೋಡಬೇಕಿದೆ.
ಸ್ಮಾರ್ಟ್ಫೋನ್ಗಳು ಮತ್ತು AI ನಿಂದ ಸೈಬರ್ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್ಡೇಟ್. ಡಿಜಿಟಲ್ ಟ್ರೆಂಡ್ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್ ಸಿಗುವ ಏಕೈಕ ತಾಣ ಏಷ್ಯಾನೆಟ್ ಸುವರ್ಣ ನ್ಯೂಸ್. ಹೊಸ ಗ್ಯಾಜೆಟ್ ರಿಲೀಸ್ ಆಯ್ತಾ? ಹೊಸ ಸ್ಟಾರ್ಟ್ಅಪ್ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್ ಎಕ್ಸ್ಪ್ಲೇನರ್ಸ್ ಹಾಗೂ ಗ್ಯಾಜೆಟ್ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.