3,800 ವರ್ಷಗಳ ಹಿಂದೆಯೇ ಪತಿಗೆ ಪತ್ರ ಬರೆದಿದ್ದ ಪತ್ನಿ! ಅಷ್ಟಕ್ಕೂ ಆ ಪತ್ರದಲ್ಲಿದ್ದ ದೂರೇನು? ಈಗ ಬಯಲಾಯ್ತು ರಹಸ್ಯ!

Published : Nov 06, 2026, 01:40 PM IST
A 3,800-Year-Old Letter Reveals a Wife's Complaint About Unpaid Debt

ಸಾರಾಂಶ

ಸುಮಾರು 3,800 ವರ್ಷಗಳ ಹಿಂದೆ ಅನ್ನಾ-ಅನ್ನಾ ಎಂಬ ಮಹಿಳೆ, ಸಾಲ ವಾಪಸ್ ನೀಡದ ವ್ಯಕ್ತಿಯ ಬಗ್ಗೆ ಬೇಸರಗೊಂಡು ತನ್ನ ವ್ಯಾಪಾರಿ ಪತಿಗೆ ಪತ್ರ ಬರೆದಿದ್ದರು. ಜರ್ಮನಿಯ ಸಂಶೋಧಕರು ವಿಶೇಷ ಎಕ್ಸ್‌ರೇ ತಂತ್ರಜ್ಞಾನ ಬಳಸಿ ಮಣ್ಣಿನ ಲಕೋಟೆ ತೆರೆಯದೆಯೇ ಅದರೊಳಗಿನ ಸಂದೇಶವನ್ನು ಓದಿದ್ದಾರೆ. ಈ ಅಪರೂಪದ ಸಂಶೋಧನೆ ಪ್ರಾಚೀನ ಕಾಲದ ಜನಜೀವನದ ಬಗ್ಗೆ ಕುತೂಹಲ ಮೂಡಿಸಿದೆ.

3,800 ವರ್ಷಗಳ ಹಿಂದೆಯೇ ಗಂಡನಿಗೆ ಪತ್ರ ಬರೆದು ಸಾಲ ವಸೂಲಿ ಬಗ್ಗೆ ದೂರು ನೀಡಿದ್ದ ಮಹಿಳೆ! ಮಣ್ಣಿನ ಲಕೋಟೆ ತೆರೆಯದೆಯೇ ಸಂದೇಶ ಓದಿದ ವಿಜ್ಞಾನಿಗಳು

ಸಾವಿರಾರು ವರ್ಷಗಳ ಹಿಂದಿನ ಮಹಿಳೆಯ ಅಳಲು ಈಗ ಬಹಿರಂಗ!

ಇಂದಿನ ಕಾಲದಲ್ಲಿ ಸಾಲ ಕೊಟ್ಟು ವಾಪಸ್ ಪಡೆಯಲು ಜನರು ಎಷ್ಟು ಕಷ್ಟಪಡುತ್ತಾರೆ ಎಂಬುದು ನಮಗೆಲ್ಲ ಗೊತ್ತಿದೆ. ಸಾಲ ಪಡೆದವರು ಹಣ ಹಿಂದಿರುಗಿಸದೆ ಸತಾಯಿಸುವುದು ಹೊಸ ವಿಚಾರವೇನಲ್ಲ. ಸುಮಾರು 3,800 ವರ್ಷಗಳ ಹಿಂದೆಯೂ ಇಂತಹ ಸಮಸ್ಯೆ ಇತ್ತು ಎಂಬುದಕ್ಕೆ ಪುರಾತತ್ವ ತಜ್ಞರು ಪತ್ತೆಹಚ್ಚಿರುವ ಒಂದು ಹಳೆಯ ಪತ್ರ ಸಾಕ್ಷಿಯಾಗಿದೆ. ಸಾಲ ವಾಪಸ್ ನೀಡದ ವ್ಯಕ್ತಿಯ ಬಗ್ಗೆ ಬೇಸರಗೊಂಡ ಮಹಿಳೆಯೊಬ್ಬರು ತಮ್ಮ ಪತಿಗೆ ಬರೆದಿದ್ದ ಪತ್ರದ ಸಂದೇಶ ಈಗ ಬಹಿರಂಗವಾಗಿದೆ.

ಅನ್ನಾ-ಅನ್ನಾ (Anna-anna) ಎಂಬ ಮಹಿಳೆ ತಮ್ಮ ಪತಿ ಎನ್ನಮ್-ಅಶೂರ್ (Ennum-Assur) ಅವರಿಗೆ ಈ ಪತ್ರ ಬರೆದಿದ್ದರು. ಅವರ ಪತಿ ವ್ಯಾಪಾರಿಯಾಗಿದ್ದು, ವ್ಯವಹಾರದ ನಿಮಿತ್ತ ವಿವಿಧ ನಗರಗಳಿಗೆ ಪ್ರಯಾಣಿಸುತ್ತಿದ್ದರು. ಈ ಸಂದರ್ಭದಲ್ಲಿ ಪತಿಗೆ ಬರಬೇಕಿದ್ದ ಬೆಳ್ಳಿಯನ್ನು ವಸೂಲಿ ಮಾಡುವಂತೆ ಪತ್ನಿಗೆ ಜವಾಬ್ದಾರಿ ನೀಡಿದ್ದರು.

ಸಾಲಗಾರನ ಉತ್ತರದಿಂದ ಬೇಸರಗೊಂಡಿದ್ದ ಪತ್ನಿ!

ಪತಿಯ ಸೂಚನೆಯಂತೆ ಅನ್ನಾ-ಅನ್ನಾ, ಲಾಕೇಪುಮ್ (Laqepum) ಎಂಬ ಮತ್ತೊಬ್ಬ ವ್ಯಾಪಾರಿಯನ್ನು ಸಂಪರ್ಕಿಸಿ ಹಣ ಕೇಳಿದ್ದರು. ಆದರೆ ಆತ ಬೆಳ್ಳಿಯನ್ನು ನೀಡಲು ನಿರಾಕರಿಸಿದ್ದ. ಪತಿ ಮರಳಿ ಬಂದಾಗ ಅವರಿಗೇ ಹಣ ನೀಡುವುದಾಗಿ ಹೇಳಿದ್ದ. ಅಷ್ಟೇ ಅಲ್ಲದೆ, ಆ ಹಣವನ್ನು ಈಗಾಗಲೇ ಕುಡಾಟುಮ್ (Kudatum) ಎಂಬ ಮತ್ತೊಬ್ಬ ವ್ಯಕ್ತಿಗೆ ನೀಡಿರುವುದಾಗಿ ತಿಳಿಸಿದ್ದ.

ಇದರಿಂದ ಬೇಸರಗೊಂಡ ಅನ್ನಾ-ಅನ್ನಾ ನಡೆದ ಸಂಗತಿಯನ್ನೆಲ್ಲ ವಿವರಿಸಿ ಪತಿಗೆ ಪತ್ರ ಬರೆದಿದ್ದರು. ಈ ಪತ್ರದಲ್ಲಿ ವ್ಯಕ್ತವಾಗಿರುವುದು ಕೇವಲ ಹಣದ ವ್ಯವಹಾರವಲ್ಲ; ಸಾವಿರಾರು ವರ್ಷಗಳ ಹಿಂದಿನ ಸಾಮಾನ್ಯ ಕುಟುಂಬದ ಬದುಕು, ದಂಪತಿಗಳ ನಡುವಿನ ಸಂವಹನ ಮತ್ತು ದೈನಂದಿನ ಸಮಸ್ಯೆಗಳ ಒಂದು ಸಣ್ಣ ನೋಟವೂ ಹೌದು.

ಮಣ್ಣಿನ ಲಕೋಟೆ ತೆರೆಯದೆಯೇ ಪತ್ರ ಓದಿದ ವಿಜ್ಞಾನಿಗಳು!

ಈ ಪತ್ರವನ್ನು ಇಂದಿನ ಟರ್ಕಿಯಲ್ಲಿರುವ ಪ್ರಾಚೀನ ಕಾನೇಶ್ (Kanesh) ನಗರದ ಕುಲ್ಟೆಪೆ (Kultepe) ಪ್ರದೇಶದಲ್ಲಿ ನಡೆದ ಉತ್ಖನನದ ವೇಳೆ ಪತ್ತೆಹಚ್ಚಲಾಗಿತ್ತು. ಪತ್ರವನ್ನು ಮಣ್ಣಿನ ಫಲಕದ ಮೇಲೆ ಕೀಲಾಕ್ಷರ (Cuneiform) ಲಿಪಿಯಲ್ಲಿ ಬರೆಯಲಾಗಿತ್ತು. ಅದರ ಮೇಲೆ ಮತ್ತೊಂದು ಮಣ್ಣಿನ ಪದರದ ಹೊದಿಕೆ ಹಾಕಿ ಸುರಕ್ಷಿತವಾಗಿ ಮುಚ್ಚಲಾಗಿತ್ತು.

ಈ ಹೊದಿಕೆಯನ್ನು ಒಡೆದರೆ ಐತಿಹಾಸಿಕ ದಾಖಲೆ ಹಾನಿಯಾಗುವ ಸಾಧ್ಯತೆಯಿತ್ತು. ಹೀಗಾಗಿ ಜರ್ಮನಿಯ ಹ್ಯಾಂಬರ್ಗ್ ವಿಶ್ವವಿದ್ಯಾಲಯದ ಸಂಶೋಧಕರು ಮತ್ತು DESY ಸಂಸ್ಥೆಯ ತಜ್ಞರು ವಿಶೇಷ ಎಕ್ಸ್‌ರೇ ತಂತ್ರಜ್ಞಾನ ಬಳಸಿದರು. ENCI ಎಂದು ಕರೆಯುವ ಈ ಮೊಬೈಲ್ ಸ್ಕ್ಯಾನರ್ ಮೂಲಕ ಮಣ್ಣಿನ ಹೊದಿಕೆಯನ್ನು ತೆರೆಯದೆಯೇ ಒಳಗಿದ್ದ ಬರಹವನ್ನು ಮೂರು ಆಯಾಮಗಳಲ್ಲಿ ಮರುರಚಿಸಿ ಓದಲು ಸಾಧ್ಯವಾಯಿತು.

ಇತಿಹಾಸದ ಪುಟಗಳನ್ನು ತೆರೆದ ಹೊಸ ತಂತ್ರಜ್ಞಾನ!

ಈ ಆವಿಷ್ಕಾರವು ಸಾವಿರಾರು ವರ್ಷಗಳ ಹಿಂದಿನ ಜನರ ಬದುಕಿನ ಬಗ್ಗೆ ತಿಳಿದುಕೊಳ್ಳಲು ಹೊಸ ಅವಕಾಶ ಕಲ್ಪಿಸಿದೆ. ಈ ಪತ್ರ ತನ್ನ ಪತಿಯನ್ನು ತಲುಪಿತ್ತೇ ಎಂಬುದು ಮಾತ್ರ ಇನ್ನೂ ತಿಳಿದಿಲ್ಲ. ಬಹುಶಃ ಅದು ಆತನ ಕೈ ಸೇರದೇ ಇರಲೂಬಹುದು.

ಆದರೆ ಸುಮಾರು 3,800 ವರ್ಷಗಳ ಹಿಂದಿನ ಒಬ್ಬ ಮಹಿಳೆಯ ಮನದಾಳದ ಬೇಸರ ಇಂದು ನಮ್ಮ ಮುಂದೆ ಬಂದಿದೆ. ಕಾಲ ಬದಲಾದರೂ ಮನುಷ್ಯರ ಸಮಸ್ಯೆಗಳು, ಸಂಬಂಧಗಳು ಮತ್ತು ಭಾವನೆಗಳು ಅಷ್ಟಾಗಿ ಬದಲಾಗಿಲ್ಲ ಎಂಬುದನ್ನು ಈ ಅಪರೂಪದ ಐತಿಹಾಸಿಕ ಪತ್ರ ನೆನಪಿಸುತ್ತದೆ.

PREV

ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್‌ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್‌. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್‌ ಸಿಗುವ ಏಕೈಕ ತಾಣ ಏಷ್ಯಾನೆಟ್‌ ಸುವರ್ಣ ನ್ಯೂಸ್‌. ಹೊಸ ಗ್ಯಾಜೆಟ್‌ ರಿಲೀಸ್‌ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್‌ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್‌ ಎಕ್ಸ್‌ಪ್ಲೇನರ್ಸ್‌ ಹಾಗೂ ಗ್ಯಾಜೆಟ್‌ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.

Read more Articles on
click me!

Recommended Stories

ಸಾವಿನ ನಂತರ 13 ದಿನಗಳವರೆಗೆ ಆಪ್ತರ ಜೊತೆಯಲ್ಲೇ ಇರುತ್ತಾ ಆತ್ಮ? ಅಚ್ಚರಿಯ ಸತ್ಯ ಬಿಚ್ಚಿಟ್ಟ ಪ್ಯಾರಾನಾರ್ಮಲ್ ಎಕ್ಸ್‌ಪರ್ಟ್
Success story: ಎಂಜಿನಿಯರಿಂಗ್ ಇಲ್ಲ, ವರ್ಕ್‌ಶಾಪ್ ಇಲ್ಲ: 1 ಲಕ್ಷ ರೂ.ಗೆ ಸೋಲಾರ್ ವಾಹನ ನಿರ್ಮಿಸಿದ 17ರ ಬಾಲಕ!