
ನಾಸಾದ ಅತ್ಯಾಧುನಿಕ ಜೇಮ್ಸ್ ವೆಬ್ ಬಾಹ್ಯಾಕಾಶ ದೂರದರ್ಶಕವು ಲಯನ್ ನೀಹಾರಿಕೆ ಎಂದೇ ಕರೆಯಲ್ಪಡುವ ಎನ್‌ಜಿಸಿ 2392 (NGC 2392) ನ ಅತಿ ಸ್ಪಷ್ಟ ಮತ್ತು ವಿಸ್ತೃತವಾದ ಹೊಸ ಚಿತ್ರಗಳನ್ನು ಸೆರೆಹಿಡಿದಿದೆ. ಈ ಹೊಸ ನೋಟವು ನೀಹಾರಿಕೆಯ ಗಮನಾರ್ಹ ಆಕಾರ ಹಾಗೂ ಅದರ ಮಧ್ಯಭಾಗದಲ್ಲಿರುವ ಸಾಯುತ್ತಿರುವ ನಕ್ಷತ್ರದ ಕುರಿತು ಹಿಂದೆಂದಿಗಿಂತಲೂ ಹೆಚ್ಚಿನ ವಿವರಗಳನ್ನು ಬಹಿರಂಗಪಡಿಸಿದೆ ಎಂದು ನಾಸಾ ವರದಿ ಮಾಡಿದೆ.
ನಾಸಾದ ಹಬಲ್ ಬಾಹ್ಯಾಕಾಶ ದೂರದರ್ಶಕವು ಮೊದಲು 2000ನೇ ಇಸವಿಯಲ್ಲಿ ಈ ಗ್ರಹಗಳ ನೀಹಾರಿಕೆಯನ್ನು ಗಮನಿಸಿತ್ತು. ಇದು ಸಿಂಹದ ಮುಖದಂತಹ ವಿಶಿಷ್ಟ ಆಕಾರವನ್ನು ಹಾಗೂ ಧೂಮಕೇತುವಿನಂತಿರುವ ವಸ್ತುಗಳಿಂದ ರೂಪುಗೊಂಡ ಮಬ್ಬಾದ Lion's Mane ತರಹದ ವೈಶಿಷ್ಟ್ಯಗಳನ್ನು ಪ್ರದರ್ಶಿಸಿತ್ತು.
ಜೇಮ್ಸ್ ವೆಬ್ ತನ್ನ ‘NIRCam’ (ನಿಯರ್ ಇನ್ಫ್ರಾರೆಡ್ ಕ್ಯಾಮೆರಾ) ಮತ್ತು ‘MIRI’ (ಮಿಡ್-ಇನ್ಫ್ರಾರೆಡ್ ಇನ್‌ಸ್ಟ್ರುಮೆಂಟ್) ಉಪಕರಣಗಳನ್ನು ಬಳಸಿ ಲಯನ್ ನೆಬ್ಯುಲಾದ ಸ್ಪಷ್ಟ ಚಿತ್ರವನ್ನು ಹೊರಹಾಕಿದೆ. ಇದರ ಒಟ್ಟಾರೆ ರಚನೆಯು ಹಬಲ್‌ನ ಗೋಚರ-ಬೆಳಕಿನ ಚಿತ್ರವನ್ನು ಹೋಲುತ್ತದೆಯಾದರೂ, ವೆಬ್‌ನ ಅತಿಗೆಂಪು (Infrared) ದೃಷ್ಟಿಯು ಧೂಳಿನ ಸೂಕ್ಷ್ಮ ಗುಂಪುಗಳನ್ನು ಮತ್ತು ಅಯಾನೀಕೃತ ಅನಿಲದ ಮಬ್ಬುಗಳನ್ನು ಅತ್ಯಂತ ಸ್ಪಷ್ಟವಾಗಿ ತೋರಿಸಿಕೊಟ್ಟಿದೆ.
ಬೃಹತ್ ನಕ್ಷತ್ರಗಳು ಸೂಪರ್ನೋವಾ ಸ್ಫೋಟದ ಮೂಲಕ ತಮ್ಮ ಜೀವನವನ್ನು ಅಂತ್ಯಗೊಳಿಸಿದರೆ, ಕಡಿಮೆ ದ್ರವ್ಯರಾಶಿಯ ನಕ್ಷತ್ರಗಳ ಅಂತ್ಯವು ಸಂಪೂರ್ಣ ಭಿನ್ನವಾಗಿರುತ್ತದೆ. ತಹ ನಕ್ಷತ್ರವು ತನ್ನ ಮಧ್ಯಭಾಗದಲ್ಲಿ ಪರಮಾಣು ಸಮ್ಮಿಳನ (Nuclear Fusion) ಪ್ರತಿಕ್ರಿಯೆಗಳನ್ನು ಮುಂದುವರಿಸಲು ಅಶಕ್ತವಾದಾಗ ಅಸ್ಥಿರಗೊಂಡು ಕಂಪಿಸಲು ಆರಂಭಿಸುತ್ತದೆ. ಳಿಕ ಅದು ತನ್ನ ಹೊರ ಪದರಗಳನ್ನು ಕಳಚಿಕೊಳ್ಳುತ್ತದೆ. ಈ ಅನಿಲ ಮತ್ತು ಧೂಳಿನ ಚಿಪ್ಪುಗಳು ಸೇರಿ 'ಗ್ರಹಗಳ ನೀಹಾರಿಕೆ'ಯಾಗಿ ರೂಪುಗೊಳ್ಳುತ್ತವೆ.ನಕ್ಷತ್ರದಿಂದ ಹೊರಹೊಮ್ಮುವ ತೀವ್ರ ವಿಕಿರಣವು ಈ ವಸ್ತುಗಳನ್ನು ಹೊರತಳ್ಳುತ್ತಾ ಸಾಗಿದಾಗ, ಕೊನೆಗೆ 'ಬಿಳಿ ಕುಬ್ಜ' ಎಂದು ಕರೆಯಲ್ಪಡುವ ಅತಿ ಉಷ್ಣತೆಯುಳ್ಳ ಕೋರ್ (Core) ಮಾತ್ರ ಉಳಿದುಕೊಳ್ಳುತ್ತದೆ.
ಸಿಂಹ ನೀಹಾರಿಕೆಯ ಕೇಂದ್ರಭಾಗದಲ್ಲಿ ಆಮ್ಲಜನಕ-ಸಮೃದ್ಧವಾಗಿರುವ ನಕ್ಷತ್ರದ ಮರಣದ ನಂತರ ಉಳಿದುಕೊಂಡಿರುವ ಬಿಳಿ ಕುಬ್ಜ ನಕ್ಷತ್ರವಿದೆ. ಇದು ಸಿಂಹದ 'ಗುಂಡಿ ಮೂಗು'ಯಂತೆ ಭಾಸವಾಗುತ್ತದೆ. ಈ ನಕ್ಷತ್ರದಿಂದ ಬಿಡುಗಡೆಯಾಗುತ್ತಿರುವ ಶಕ್ತಿ ಮತ್ತು ವಿಕಿರಣವು ಸುತ್ತಮುತ್ತಲಿನ ಸಂಕೀರ್ಣ ರಚನೆಗಳನ್ನು ರೂಪಿಸುತ್ತಿದೆ.
ಈ ಬಿಳಿ ಕುಬ್ಜವು ತನ್ನ ಸುತ್ತಲಿನ ವಸ್ತುಗಳನ್ನು ಒಳಗಿನಿಂದಲೇ "ಬೇಯಿಸುತ್ತಿದ್ದು", ಒಂದು ದೊಡ್ಡ ಅಯಾನೀಕೃತ ಅನಿಲದ ಗುಳ್ಳೆಯನ್ನು ಸೃಷ್ಟಿಸಿದೆ. ಇದುವೇ ನೀಹಾರಿಕೆಗೆ ಸಿಂಹದ ಮುಖದ ಸ್ವರೂಪವನ್ನು ನೀಡಿದೆ. ಈ ಅನಿಲದ ಗುಳ್ಳೆಯು ನಿರಂತರವಾಗಿ ವಿಸ್ತರಿಸುತ್ತಾ, ತನ್ನ ಹಾದಿಯಲ್ಲಿ ಎದುರಾಗುವ ಧೂಳಿನ ಕಣಗಳನ್ನು ನಾಶಪಡಿಸುತ್ತಿದೆ.
ಅನಿಲ ಮತ್ತು ಧೂಳು ಒಗ್ಗೂಡಿ ಈ ನೀಹಾರಿಕೆಯನ್ನು ಇಂದಿನ ಪ್ರಸ್ತುತ ರೂಪಕ್ಕೆ ತರಲು ಸಾವಿರಾರು ವರ್ಷಗಳು ಬೇಕಾಗಿವೆ. ಇದರ ವಿವಿಧ ಭಾಗಗಳಲ್ಲಿ ಬದಲಾವಣೆಗಳು ಇಂದಿಗೂ ನಿರಂತರವಾಗಿ ಮುಂದುವರಿದಿವೆ. ಗ್ರಹಗಳ ನೀಹಾರಿಕೆಗಳಲ್ಲಿ ಇಂತಹ ಸಂಕೀರ್ಣ ಉಂಗುರಗಳು ಮತ್ತು ಚಿಪ್ಪುಗಳು ಸಾಮಾನ್ಯವಾಗಿ ಕಂಡುಬಂದರೂ, ಅವುಗಳ ಸಂಪೂರ್ಣ ರಚನಾಕ್ರಿಯೆಯನ್ನು ವೈಜ್ಞಾನಿಕವಾಗಿ ಅರ್ಥಮಾಡಿಕೊಳ್ಳುವುದು ಇಂದಿಗೂ ಸಂಶೋಧನೆಯ ಪ್ರಮುಖ ಕ್ಷೇತ್ರವಾಗಿ ಉಳಿದಿದೆ.
ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್ ಸಿಗುವ ಏಕೈಕ ತಾಣ ಏಷ್ಯಾನೆಟ್ ಸುವರ್ಣ ನ್ಯೂಸ್. ಹೊಸ ಗ್ಯಾಜೆಟ್ ರಿಲೀಸ್ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್ ಎಕ್ಸ್‌ಪ್ಲೇನರ್ಸ್ ಹಾಗೂ ಗ್ಯಾಜೆಟ್ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.