
ಕೆನಡಾದ ಎಂಟು ವರ್ಷದ ಬಾಲಕನೊಬ್ಬ 'ಅರ್ಬನ್ ವೈಲ್ಡ್ ವಾಚ್' (Urban Wild Watch) ಎಂಬ ವಿನೂತನ ಅಪ್ಲಿಕೇಶನ್ ಅನ್ನು ನಿರ್ಮಿಸುವ ಮೂಲಕ ಇಂಟರ್ನೆಟ್‌ನಲ್ಲಿ ಸಂಚಲನ ಮೂಡಿಸಿದ್ದಾರೆ. ಸಮುದಾಯದ ಜನರು ತಾವು ಕಂಡ ವನ್ಯಜೀವಿಗಳ ಬಗ್ಗೆ ವರದಿ ಮಾಡಲು ಈ ಉಚಿತ ಆ್ಯಪ್ ನೆರವಾಗುತ್ತದೆ. ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ (AI) ತಂತ್ರಜ್ಞಾನದ ಸಹಾಯದಿಂದ, ಬಾಲಕ ವಿಯೂಹನ್ ಸಯೂರನ್ (Viyuhan Sayuran) ಪ್ರಾಣಿಗಳ ನಿಖರವಾದ ಸ್ಥಳದ ಬದಲು ಕೇವಲ ಸಾಮಾನ್ಯ ಪ್ರದೇಶವನ್ನು ಮಾತ್ರ ತೋರಿಸುವ ಲೈವ್ ನಕ್ಷೆಯನ್ನು ಸಿದ್ಧಪಡಿಸಿದ್ದಾರೆ. ಇದರಿಂದ ವನ್ಯಜೀವಿಗಳಿಗೆ ಯಾವುದೇ ತೊಂದರೆಯಾಗದಂತೆ ಜನರಿಗೆ ಸುರಕ್ಷಿತವಾಗಿ ಮಾಹಿತಿ ಲಭ್ಯವಾಗುತ್ತದೆ.
ಕೆನಡಾದ ಮಾರ್ಕಾಮ್‌ನಲ್ಲಿರುವ ತನ್ನ ನೆರೆಹೊರೆಯಲ್ಲಿ ಕೊಯೊಟ್‌ಗಳು (ಕಾಡು ನಾಯಿಗಳು) ಮತ್ತು ಕರಡಿಗಳು ಕಾಣಿಸಿಕೊಳ್ಳಲು ಪ್ರಾರಂಭಿಸಿದಾಗ, ಎಂಟು ವರ್ಷದ ವಿಯೂಹನ್‌ಗೆ ಒಂದು ಪ್ರಶ್ನೆ ಎದುರಾಯಿತು. ನೆರೆಹೊರೆಯವರು ಪ್ರಾಣಿಗಳನ್ನು ಅಪಾಯಕ್ಕೆ ಸಿಲುಕಿಸದೆ, ವನ್ಯಜೀವಿಗಳ ಓಡಾಟದ ಬಗ್ಗೆ ಪರಸ್ಪರ ಎಚ್ಚರಿಕೆ ನೀಡಿದರೆ ಹೇಗೆ?
ಈ ಯೋಚನೆಯೇ ಅರ್ಬನ್ ವೈಲ್ಡ್ ವಾಚ್ ಅಪ್ಲಿಕೇಶನ್ ರೂಪಿಸಲು ಪ್ರೇರಣೆಯಾಯಿತು. ಈ ಆ್ಯಪ್ ಮೂಲಕ ಜನರು ಕೊಯೊಟೆಗಳು, ಕರಡಿಗಳು, ನರಿಗಳು, ಜಿಂಕೆಗಳು ಮತ್ತು ಇತರೆ ವನ್ಯಜೀವಿಗಳನ್ನು ಕಂಡರೆ ಸುಲಭವಾಗಿ ವರದಿ ಮಾಡಬಹುದು. ಅಷ್ಟೇ ಅಲ್ಲದೆ, ಗಾಯಗೊಂಡ ಅಥವಾ ಅನಾಥ ಪ್ರಾಣಿಗಳ ಬಗ್ಗೆಯೂ ಮಾಹಿತಿ ನೀಡಬಹುದು ಹಾಗೂ ಅಂತಹ ಸಂದರ್ಭಗಳಲ್ಲಿ ಸುರಕ್ಷಿತವಾಗಿ ಹೇಗೆ ಪ್ರತಿಕ್ರಿಯಿಸಬೇಕು ಎಂಬುದರ ಕುರಿತು ಅಗತ್ಯ ಮಾರ್ಗದರ್ಶನವನ್ನೂ ಪಡೆಯಬಹುದು.
ಜೂನ್ 5 ರಂದು ಬಿಡುಗಡೆಯಾದ ಈ ಅಪ್ಲಿಕೇಶನ್, ಜುಲೈ ವೇಳೆಗೆ ಕೆನಡಾ ಮತ್ತು ಅಮೆರಿಕದಾದ್ಯಂತ 150 ಕ್ಕೂ ಹೆಚ್ಚು ವನ್ಯಜೀವಿಗಳ ಮುಖಾಮುಖಿಗಳನ್ನು ದಾಖಲಿಸಿದೆ. ಕೆನಡಾದಲ್ಲಿ ವನ್ಯಜೀವಿಗಳ ಹಾವಳಿ ಸಾಮಾನ್ಯವಾಗಿದ್ದು, ಉದಾಹರಣೆಗೆ ಟೊರೊಂಟೊ ಒಂದರಲ್ಲೇ 2024ರಲ್ಲಿ 2,584 ಕೊಯೊಟೆ ವೀಕ್ಷಣೆಗಳು, 303 ಸಾರ್ವಜನಿಕ ಸುರಕ್ಷತಾ ಎನ್ಕೌಂಟರ್‌ಗಳು ಹಾಗೂ ನಾಯಿಗಳ ಮೇಲೆ ದಾಳಿ ಮಾಡಿದ 91 ಪ್ರಕರಣಗಳು ವರದಿಯಾಗಿವೆ.
ಅರ್ಬನ್ ವೈಲ್ಡ್ ವಾಚ್ ಅಪ್ಲಿಕೇಶನ್‌ನ ಅತ್ಯಂತ ವಿಶೇಷ ಹಾಗೂ ಪ್ರಮುಖ ಅಂಶವೆಂದರೆ, ಇದು ಪ್ರಾಣಿಯ ನಿಖರವಾದ ಸ್ಥಳವನ್ನು (Exact Location) ಬಹಿರಂಗಪಡಿಸುವುದಿಲ್ಲ. ಬದಲಾಗಿ, ಕೇವಲ ಒಂದು ಸಾಮಾನ್ಯ ಪ್ರದೇಶವನ್ನು ಮಾತ್ರ ತೋರಿಸುತ್ತದೆ.
ಸಾಮಾಜಿಕ ಜಾಲತಾಣಗಳಲ್ಲಿ ಫೋಟೋಗಳನ್ನು ಕ್ಲಿಕ್ ಮಾಡಲು ಜನರು ವನ್ಯಜೀವಿಗಳಿರುವ ಜಾಗಕ್ಕೆ ಗುಂಪುಗುಂಪಾಗಿ ನುಗ್ಗುವುದು ವಿಯೂಹನ್‌ಗೆ ಇಷ್ಟವಿರಲಿಲ್ಲ. ಜನರು ಮುಗಿಬೀಳುವುದು ಪ್ರಾಣಿಯನ್ನು ಹೆದರಿಸುವುದಲ್ಲದೆ, ಮಾನವರು ಹಾಗೂ ವನ್ಯಜೀವಿಗಳಿಬ್ಬರಿಗೂ ಅಪಾಯವನ್ನುಂಟುಮಾಡಬಹುದು" ಎಂದು ಅವರು ತಮ್ಮ ಯೂಟ್ಯೂಬ್ ವೀಡಿಯೊದಲ್ಲಿ ವಿವರಿಸಿದ್ದಾರೆ.
ತಮ್ಮ ಆಲೋಚನೆಗಳನ್ನು ವ್ಯವಸ್ಥಿತವಾಗಿ ರೂಪಿಸಲು ವಿಯೂಹನ್ 'ಕ್ಲಾಡ್' ಅನ್ನು ಬಳಸಿಕೊಂಡರೆ, ಆ ಸದಾಶಯವನ್ನು ಸುಲಭ ಇಂಗ್ಲಿಷ್ ಸೂಚನೆಗಳ ಮೂಲಕ ಕಾರ್ಯನಿರ್ವಹಿಸುವ ವೆಬ್ ಅಪ್ಲಿಕೇಶನ್ ಆಗಿ ಪರಿವರ್ತಿಸಲು 'ಲವ್‌ಬಲ್' (Lovable) ತಂತ್ರಜ್ಞಾನವನ್ನು ಬಳಸಿದರು. ತಂತ್ರಜ್ಞಾನದ ಬಳಕೆಯಿಂದ ಇಂದು ಸಾಮಾನ್ಯ ಆಲೋಚನೆಗಳು ಕೂಡ ಎಷ್ಟು ಬೇಗ ಸಾಕಾರಗೊಳ್ಳಬಹುದು ಎಂಬುದಕ್ಕೆ ಈ ಯೋಜನೆಯೇ ಸಾಕ್ಷಿಯಾಗಿದೆ. ವಿಯೂಹನ್ ಇದಕ್ಕಾಗಿ ತಿಂಗಳುಗಟ್ಟಲೆ ಕೋಡಿಂಗ್ ಬರೆಯುತ್ತಾ ಕುಳಿತುಕೊಳ್ಳಬೇಕಾಗಿ ಬರಲಿಲ್ಲ.
ಸಾಮಾನ್ಯವಾಗಿ ಈ ವಯಸ್ಸಿನ ಮಕ್ಕಳು ಶಾಲೆ ಹಾಗೂ ಮನೆಕೆಲಸಗಳಲ್ಲಿ ಮಗ್ನರಾಗಿರುತ್ತಾರೆ. ಆದರೆ ವಿಯೂಹನ್ ಮಾತ್ರ ವಯಸ್ಕರ ಸಹಾಯವನ್ನು ಕೋರದೆ, ತನ್ನ ಸುತ್ತಮುತ್ತಲಿನ ನೈಜ ಸಮಸ್ಯೆಗೆ ತಾನೇ ಸ್ವತಃ ಪರಿಹಾರ ಕಂಡುಕೊಂಡಿದ್ದಾರೆ. ತಂತ್ರಜ್ಞಾನ ಕ್ಷೇತ್ರವು ಇಂದು ಬದಲಾಗುತ್ತಿದ್ದು, ಕೇವಲ ತಾಂತ್ರಿಕ ಪರಿಣತಿ ಇದ್ದವರಷ್ಟೇ ಅಲ್ಲ, ಕುತೂಹಲ, ಸಹಾನುಭೂತಿ ಮತ್ತು ಸಮಸ್ಯೆ ಪರಿಹರಿಸುವ ಇಚ್ಛಾಶಕ್ತಿ ಇರುವ ಯಾರಿ ಬೇಕಾದರೂ ನಾವೀನ್ಯತೆ ಮೆರೆಯಬಹುದು ಎಂಬುದನ್ನು ಈ ಬಾಲಕ ಸಾಬೀತುಪಡಿಸಿದ್ದಾನೆ. ವಯಸ್ಸು ಯಾವುದೇ ಹೊಸ ಕಲ್ಪನೆಗೆ ಅಡ್ಡಿಯಾಗುವುದಿಲ್ಲ ಎಂಬುದಕ್ಕೆ ವಿಯೂಹನ್ ಅವರ ಈ ಸಾಧನೆಯೇ ಒಂದು ರೋಮಾಂಚಕ ಉದಾಹರಣೆಯಾಗಿದೆ.
ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್ ಸಿಗುವ ಏಕೈಕ ತಾಣ ಏಷ್ಯಾನೆಟ್ ಸುವರ್ಣ ನ್ಯೂಸ್. ಹೊಸ ಗ್ಯಾಜೆಟ್ ರಿಲೀಸ್ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್ ಎಕ್ಸ್‌ಪ್ಲೇನರ್ಸ್ ಹಾಗೂ ಗ್ಯಾಜೆಟ್ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.