ಮಾನಸಿಕ ಆರೋಗ್ಯ ನಿಯಂತ್ರಿಸಲು ನಿದ್ರೆ ನಮ್ಮ ಮೆದುಳಿಗೆ ಹೇಗೆ ಸಹಾಯ ಮಾಡುತ್ತದೆ ಗೊತ್ತಾ?

By Suvarna NewsFirst Published May 16, 2022, 10:59 PM IST
Highlights

ತಮ್ಮ ಅಧ್ಯಯನದೊಂದಿಗೆ, ಬರ್ನ್ ವಿಶ್ವವಿದ್ಯಾಲಯ ಮತ್ತು ಬರ್ನ್ ವಿಶ್ವವಿದ್ಯಾಲಯ ಆಸ್ಪತ್ರೆಯ ಸಂಶೋಧಕರು ಕನಸು ಕಾಣುವ ಸಮಯದಲ್ಲಿ ಮೆದುಳು ಹೇಗೆ  ಭಾವನೆಗಳ ಬಳಸಿಕೊಳ್ಳುತ್ತದೆ ಎಂಬುದನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸಿದ್ದಾರೆ. 

 ವೇಗವಾಗಿ ಬದಲಾಗುತ್ತಿರುವ ಜಗತ್ತಿನಲ್ಲಿ ಜೀವನಶೈಲಿಯ ಬದಲಾವಣೆಗಳು ಮಾನವನ ದೈಹಿಕ ಮತ್ತು ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿವೆ.  ಹೀಗಾಗಿ ಪ್ರತಿಯೊಬ್ಬರಿಗೂ ರಾತ್ರಿಯ ನಿದ್ರೆಯ ಅಗತ್ಯವಿದೆ. ಸಾಕಷ್ಟು ಪ್ರಮಾಣದ ನಿದ್ರೆಯು ನಮ್ಮ ಆರೋಗ್ಯ ಕಾಪಾಡಲು ಮತ್ತು ನಮ್ಮ ದೈನಂದಿನ ಕೆಲಸಗಳನ್ನು ಪರಿಣಾಮಕಾರಿಯಾಗಿ ನಿರ್ವಹಿಸಲು ಹೇಗೆ ಸಹಾಯ ಮಾಡುತ್ತದೆ ಎಂಬುದನ್ನು ಅಧ್ಯಯನವೊಂದು ಬಹಿರಂಗಪಡಿಸಿದೆ. ನಿದ್ರೆಯೂ ನಮಗೆ ಶಕ್ತಿ ತುಂಬಿದ ಭಾವನೆ ಮೂಡಿಸುತ್ತದೆ. ಆದರೆ ಇದು ಏಕೆ ಸಂಭವಿಸುತ್ತದೆ? ಈ ಹೊಸ ಅಧ್ಯಯನವು ಇದಕ್ಕೆ ಉತ್ತರ ನೀಡಿದೆ. 

ಧನಾತ್ಮಕ ಭಾವನೆಗಳನ್ನು ಸಂಗ್ರಹಿಸಲು ಮತ್ತು ನಕಾರಾತ್ಮಕ ಭಾವನೆಗಳನ್ನು ತಗ್ಗಿಸಲು ಕನಸು ಕಾಣುವ ಸಮಯದಲ್ಲಿ ಮೆದುಳು ಭಾವನೆಗಳನ್ನು ಸಕ್ರಿಯಗೊಳಿಸತ್ತದೆ ಎಂದು ವರದಿ ಹೇಳುತ್ತದೆ. ಹೆಚ್ಚು ಮುಖ್ಯವಾಗಿ, ಈ ಅಧ್ಯಯನವು ಮಾನಸಿಕ ಆರೋಗ್ಯಕ್ಕಾಗಿ ನಿದ್ರೆಯ ಪ್ರಾಮುಖ್ಯತೆಯನ್ನು ಎತ್ತಿ ತೋರಿಸುತ್ತದೆ ಮತ್ತು ವ್ಯಾಪಕ ಶ್ರೇಣಿಯ ಮಾನಸಿಕ ಅಡಚಣೆಗಳಿಗೆ ಹೊಸ ಚಿಕಿತ್ಸಕ ಮಾರ್ಗಗಳಿಗೆ ದಾರಿ ಮಾಡಿಕೊಡುತ್ತದೆ.

ಇದನ್ನೂ ಓದಿ: ನೈಟ್​ಶಿಫ್ಟ್​ನಲ್ಲಿ ಕೆಲಸ ಮಾಡುವವರ ಆಹಾರಕ್ರಮ ಹೀಗಿದ್ದರೆ ಆರೋಗ್ಯವಾಗಿರ್ಬೋದು

ತಮ್ಮ ಅಧ್ಯಯನದೊಂದಿಗೆ, ಬರ್ನ್ ವಿಶ್ವವಿದ್ಯಾಲಯ ಮತ್ತು ಬರ್ನ್ ವಿಶ್ವವಿದ್ಯಾಲಯ ಆಸ್ಪತ್ರೆಯ ಸಂಶೋಧಕರು ಕನಸು ಕಾಣುವ ಸಮಯದಲ್ಲಿ ಮೆದುಳು ಹೇಗೆ  ಭಾವನೆಗಳ ಬಳಸಿಕೊಳ್ಳುತ್ತದೆ ಎಂಬುದನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸಿದ್ದಾರೆ. ಆದಾಗ್ಯೂ ರ‍್ಯಾಪಿಡ್‌ ಆಯ್‌ ಮೂಮೆಂಟ್  (REM) ನಿದ್ರೆಯ ಸಮಯದಲ್ಲಿ ತೀವ್ರವಾದ ಭಾವನೆಗಳು ಹೇಗೆ ಪುನಃ ಸಕ್ರಿಯಗೊಳ್ಳುತ್ತವೆ ಎಂಬುದನ್ನು ಸಂಶೋಧಕರು ಕಂಡುಹಿಡಿಯಲಾಗಲಿಲ್ಲ.

"ಅಂತಹ ಆಶ್ಚರ್ಯಕರ ವಿದ್ಯಮಾನದ ಆಧಾರವಾಗಿರುವ ಕಾರ್ಯವಿಧಾನ ಮತ್ತು ಕಾರ್ಯಗಳನ್ನು ಅರ್ಥಮಾಡಿಕೊಳ್ಳುವುದು ನಮ್ಮ ಗುರಿಯಾಗಿದೆ" ಎಂದು ಅಧ್ಯಯನದ ನೇತೃತ್ವದ ಪ್ರೊಫೆಸರ್ ಆಂಟೊಯಿನ್ ಅಡಮಾಂಟಿಡಿಸ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ರ‍್ಯಾಪಿಡ್‌ ಆಯ್‌ ಮೂಮೆಂಟ್ ನಿದ್ರೆಯ ಸಮಯದಲ್ಲಿ, ವ್ಯಕ್ತಿಯ ಮೆದುಳಿನ ಚಟುವಟಿಕೆ, ಉಸಿರಾಟ, ಹೃದಯ ಬಡಿತ ಮತ್ತು ರಕ್ತದೊತ್ತಡ ಹೆಚ್ಚಾಗುತ್ತದೆ ಮತ್ತು ಕಣ್ಣುಗಳು ಮುಚ್ಚಿದಾಗ ವೇಗವಾಗಿ ಚಲಿಸುತ್ತವೆ. ಕೈ ಮತ್ತು ಕಾಲುಗಳ ಸ್ನಾಯುಗಳು ತಾತ್ಕಾಲಿಕವಾಗಿ ಚಲಿಸಲು ಸಾಧ್ಯವಾಗುವುದಿಲ್ಲ. ರ‍್ಯಾಪಿಡ್‌ ಆಯ್‌ ಮೂಮೆಂಟ್ ಸ್ಮರಣೆ ಮತ್ತು ಕಲಿಕೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಎಂದು ಭಾವಿಸಲಾಗಿದೆ.

ಇದನ್ನೂ ಓದಿ: Sleep Disorders : ರಾತ್ರಿಯ ನಿದ್ರಾಭಂಗಕ್ಕೆ ಕಾರಣ ಬೆಳಗಿನ ಅಭ್ಯಾಸ

ಸಂಶೋಧಕರ ಪ್ರಕಾರ, ಪ್ರಾಣಿಗಳ ಉಳಿವಿಗಾಗಿ ಭಾವನೆಗಳನ್ನು ಸಂಸ್ಕರಿಸುವುದು ನಿರ್ಣಾಯಕವಾಗಿದೆ. ಅತಿಯಾದ ನಕಾರಾತ್ಮಕ ಭಾವನೆಗಳು ಮಾನವರಲ್ಲಿ ಪೋಸ್ಟ್-ಟ್ರಾಮಾಟಿಕ್ ಸ್ಟ್ರೆಸ್ ಡಿಸಾರ್ಡರ್ಸ್ (PTSD) ನಂತಹ ರೋಗದ ಸ್ಥಿತಿಗಳಿಗೆ ಕಾರಣವಾಗಬಹುದು. ಡೇಟಾವನ್ನು ಉಲ್ಲೇಖಿಸಿ, ಯುರೋಪ್‌ನಲ್ಲಿ ಸುಮಾರು 15 ಪ್ರತಿಶತದಷ್ಟು ಜನಸಂಖ್ಯೆಯು ನಿರಂತರ ಆತಂಕ ಮತ್ತು ತೀವ್ರ ಮಾನಸಿಕ ಅಸ್ವಸ್ಥತೆಯಿಂದ ಪ್ರಭಾವಿತವಾಗಿದೆ ಎಂದು ವರದಿಯಲ್ಲಿ ಹೇಳಲಾಗಿದೆ. 

ರ‍್ಯಾಪಿಡ್‌ ಆಯ್‌ ಮೂಮೆಂಟ್ ನಿದ್ರೆಯ ಸಮಯದಲ್ಲಿ ಧನಾತ್ಮಕ ಭಾವನೆಗಳನ್ನು ಬಲಪಡಿಸಲು ಮತ್ತು ಬಲವಾಗಿ ನಕಾರಾತ್ಮಕ ಅಥವಾ ಆಘಾತಕಾರಿ ಭಾವನೆಗಳನ್ನು ದುರ್ಬಲಗೊಳಿಸಲು ಮೆದುಳು ಹೇಗೆ ಸಹಾಯ ಮಾಡುತ್ತದೆ ಎಂಬುದರ ಕುರಿತು ಈ ಅಧ್ಯಯನವು ಒಳನೋಟಗಳನ್ನು ಒದಗಿಸುತ್ತದೆ. 

ಜರ್ನಲ್ ಸೈನ್ಸ್‌ನಲ್ಲಿ ಪ್ರಕಟವಾದ ಅವರ ಸಂಶೋಧನೆಗಳು, PTSD ಸೇರಿದಂತೆ ಮಾನಸಿಕ ಆರೋಗ್ಯ ಸಮಸ್ಯೆಗಳನ್ನು ಅರ್ಥಮಾಡಿಕೊಳ್ಳಲು ಮತ್ತು ಪರಿಹರಿಸಲು ಹೊಸ ಮಾರ್ಗಗಳನ್ನು ತೆರೆಯಬಹುದು. "ನಮ್ಮ ಸಂಶೋಧನೆಗಳು ರೋಗಿಗಳಿಗೆ ಮಾತ್ರವಲ್ಲ, ವಿಶಾಲ ಸಾರ್ವಜನಿಕರಿಗೂ ಆಸಕ್ತಿಯನ್ನುಂಟುಮಾಡುತ್ತವೆ ಎಂದು ನಾವು ಭಾವಿಸುತ್ತೇವೆ" ಎಂದು ಪ್ರೊ.ಅಡಮಾಂಟಿಡಿಸ್ ಹೇಳಿದ್ದಾರೆ

click me!