ಇಸ್ರೋ ಸ್ಪೇಡೆಕ್ಸ್ ಉಪಗ್ರಹಗಳ ಯಶಸ್ವಿ ಡಿ-ಡಾಕಿಂಗ್ ಪ್ರಕ್ರಿಯೆ ಪೂರ್ಣಗೊಳಿಸಿದೆ. ಇದು ಭಾರತದ ಭವಿಷ್ಯದ ಬಾಹ್ಯಾಕಾಶ ಯೋಜನೆಗಳಿಗೆ ಮಹತ್ವದ ಹೆಜ್ಜೆಯಾಗಿದೆ ಮತ್ತು ಗಗನಯಾನ ಯೋಜನೆಗೆ ಅತ್ಯಂತ ಸಹಾಯವಾಗಲಿದೆ.
ಗಿರೀಶ್ ಲಿಂಗಣ್ಣ, ಲೇಖಕರು ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕ
ಕೇಂದ್ರ ವಿಜ್ಞಾನ ಮತ್ತು ಬಾಹ್ಯಾಕಾಶ ಇಲಾಖೆಯ ರಾಜ್ಯ ಸಚಿವರಾದ ಡಾ. ಜಿತೇಂದ್ರ ಸಿಂಗ್ ಅವರು ತನ್ನ ಸಾಮಾಜಿಕ ಜಾಲತಾಣ ಎಕ್ಸ್ ಖಾತೆಯಲ್ಲಿ ಸ್ಪೇಡೆಕ್ಸ್ ಉಪಗ್ರಹಗಳ ಯಶಸ್ವಿ ಡಿ-ಡಾಕಿಂಗ್ ಪ್ರಕ್ರಿಯೆ ಪೂರ್ಣಗೊಳಿಸಿದ್ದಕ್ಕೆ ಇಸ್ರೋ ತಂಡವನ್ನು ಅಭಿನಂದಿಸಿದ್ದಾರೆ. ಈ ಸಾಧನೆ ಪ್ರತಿಯೊಬ್ಬ ಭಾರತೀಯನಿಗೂ ಹೆಮ್ಮೆಯ ಕ್ಷಣ ಎಂದಿರುವ ಸಚಿವರು, ಭಾರತದ ಭವಿಷ್ಯದ ಮಹತ್ವಾಕಾಂಕ್ಷಿ ಬಾಹ್ಯಾಕಾಶ ಯೋಜನೆಗಳಾದ ಭಾರತೀಯ ಅಂತರಿಕ್ಷ ಸ್ಟೇಷನ್ (ಬಿಎಎಸ್), ಚಂದ್ರಯಾನ-4 ಹಾಗೂ ಗಗನಯಾನ ಯೋಜನೆಗಳಿಗೆ ಈ ತಂತ್ರಜ್ಞಾನ ಮಹತ್ವದ ಹೆಜ್ಜೆಯಾಗಿದೆ ಎಂದಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರು ಇಸ್ರೋ ಪ್ರಯತ್ನಗಳಿಗೆ ಸದಾ ಬೆಂಬಲ ನೀಡುತ್ತಾ ಬಂದಿದ್ದಾರೆ ಎಂದಿರುವ ಸಚಿವರು, ಅವರ ಬೆಂಬಲ ಭಾರತದ ಬಾಹ್ಯಾಕಾಶ ಮಹತ್ವಾಕಾಂಕ್ಷೆಗಳಿಗೆ ಇನ್ನಷ್ಟು ಉತ್ತೇಜನ ನೀಡಿದೆ ಎಂದಿದ್ದಾರೆ. ಡಾ. ಜಿತೇಂದ್ರ ಸಿಂಗ್ ಅವರು ಇಸ್ರೋ ಯಶಸ್ಸನ್ನು ಮಾರ್ಚ್ 13ರ ಬೆಳಗ್ಗೆ 11:39ಕ್ಕೆ ಹಂಚಿಕೊಂಡರು.
ಸ್ಪೇಡೆಕ್ಸ್: ಬಾಹ್ಯಾಕಾಶ ಅನ್ವೇಷಣೆಯಲ್ಲಿ ಮಹತ್ತರ ಸಾಧನೆ: ಭಾರತದ ಸ್ಪೇಸ್ ಡಾಕಿಂಗ್ ಎಕ್ಸ್‌ಪರಿಮೆಂಟ್ (ಸ್ಪೇಡೆಕ್ಸ್) ಆಧುನಿಕ ಕಕ್ಷೀಯ ಕಾರ್ಯಾಚರಣೆಗಳನ್ನು ಕೈಗೊಳ್ಳುವ ಭಾರತದ ಮಹತ್ವದ ಸಾಮರ್ಥ್ಯವನ್ನು ಸಾಬೀತುಪಡಿಸಿದೆ. ಡಿಸೆಂಬರ್ 30, 2024ರಂದು ಉಡಾವಣೆಗೊಂಡ ಸ್ಪೇಡೆಕ್ಸ್ ಯೋಜನೆ, ಜನವರಿ 16, 2025ರಂದು ಯಶಸ್ವಿಯಾಗಿ ಡಾಕಿಂಗ್ ನಡೆಸಿತು. ಆ ಬಳಿಕ, ಇಂದು ಯಶಸ್ವಿಯಾಗಿ ಡಿ-ಡಾಕಿಂಗ್ ನಡೆಸಿತು. ಸ್ಪೇಡೆಕ್ಸ್ ಯೋಜನೆ ಎರಡು ಸಣ್ಣ ಉಪಗ್ರಹಗಳಾದ ಎಸ್‌ಡಿಎಕ್ಸ್-01 ಹಾಗೂ ಎಸ್‌ಡಿಎಕ್ಸ್-02ಗಳನ್ನು ಒಳಗೊಂಡಿದ್ದು, ಅವುಗಳು ಭಾರತದ ಭವಿಷ್ಯದ ಯೋಜನೆಗಳಿಗೆ ಅಗತ್ಯವಿರುವ ಬಾಹ್ಯಾಕಾಶದಲ್ಲಿ ರಾಂಡೇವೂ, ಡಾಕಿಂಗ್ ಮತ್ತು ಡಿ-ಡಾಕಿಂಗ್ ನಡೆಸುವ ಸಾಮರ್ಥ್ಯವನ್ನು ಪ್ರದರ್ಶಿಸಿದವು.
ಯಶಸ್ವಿ ಡಾಕಿಂಗ್ ಮತ್ತು ಡಿ-ಡಾಕಿಂಗ್ ಯಾಕೆ ಮುಖ್ಯ?: ಭವಿಷ್ಯದ ಬಾಹ್ಯಾಕಾಶ ಅನ್ವೇಷಣಾ ಯೋಜನೆಗಳಿಗೆ ಡಾಕಿಂಗ್ ಮತ್ತು ಡಿ-ಡಾಕಿಂಗ್ ಸಾಮರ್ಥ್ಯ ಬಹಳ ಮುಖ್ಯವಾಗಿದೆ. ಈ ಕಾರ್ಯಾಚರಣೆಗಳು ಬಾಹ್ಯಾಕಾಶ ನೌಕೆಗಳಿಗೆ ಪರಸ್ಪರ ಜೋಡಣೆಗೊಳ್ಳಲು, ಸಿಬ್ಬಂದಿಗಳು ಮತ್ತು ವಸ್ತುಗಳನ್ನು ಸಾಗಿಸಲು, ಇಂಧನ ಮರುಪೂರಣ ನಡೆಸಲು, ಮತ್ತು ಬಳಿಕ ಸುರಕ್ಷಿತವಾಗಿ ಬೇರ್ಪಡಲು ಅಗತ್ಯವಾಗಿದ್ದು, ಇವೆಲ್ಲವೂ ಬಾಹ್ಯಾಕಾಶ ನಿಲ್ದಾಣ ನಿರ್ಮಾಣಕ್ಕೆ, ಡೀಪ್ ಸ್ಪೇಸ್ ಅನ್ವೇಷಣೆಗಳನ್ನು ನಡೆಸಲು, ಮತ್ತು ದೀರ್ಘಾವಧಿಯ ಬಾಹ್ಯಾಕಾಶ ಯೋಜನೆಗಳನ್ನು ನಡೆಸಲು ಮೂಲಭೂತ ಸಾಮರ್ಥ್ಯವಾಗಿವೆ. ಈ ಪ್ರಕ್ರಿಯೆಗಳನ್ನು ನಡೆಸುವಲ್ಲಿ ಭಾರತ ಯಶಸ್ವಿಯಾಗಿರುವುದರಿಂದ, ಭಾರತಕ್ಕೆ ಹಲವಾರು ಅನುಕೂಲತೆಗಳು ಲಭಿಸಿವೆ:
ಮಾಡ್ಯುಲರ್ ಬಾಹ್ಯಾಕಾಶ ನೌಕೆಯ ನಿರ್ಮಾಣ: ಬಾಹ್ಯಾಕಾಶ ನೌಕೆಗಳನ್ನು ಹಲವು ಬಿಡಿಭಾಗಗಳ ರೂಪದಲ್ಲಿ ನಿರ್ಮಿಸಿ, ಅವುಗಳನ್ನು ಬಾಹ್ಯಾಕಾಶದ ಕಕ್ಷೆಯಲ್ಲಿ ಜೋಡಿಸುವ ಮೂಲಕ ಬಾಹ್ಯಾಕಾಶ ನೌಕೆಯನ್ನು ಸಿದ್ಧಪಡಿಸಬಹುದು. ಇದರಿಂದ, ಅತ್ಯಂದ ದೊಡ್ಡದಾದ, ಬೃಹತ್ತಾದ ಬಾಹ್ಯಾಕಾಶ ರಚನೆಗಳನ್ನು ಭೂಮಿಯಿಂದಲೇ ಉಡಾವಣೆಗೊಳಿಸುವ ಅವಶ್ಯಕತೆ ಕಡಿಮೆಯಾಗುತ್ತದೆ.
ಬಾಹ್ಯಾಕಾಶ ನಿಲ್ದಾಣಗಳ ಕಾರ್ಯಚರಣೆ: ಭಾರತೀಯ ಅಂತರಿಕ್ಷ ಸ್ಟೇಷನ್ (ಬಿಎಎಸ್) ಸೇರಿದಂತೆ, ಭವಿಷ್ಯದ ಯೋಜನೆಗಳು ಸಿಬ್ಬಂದಿ, ವಸ್ತುಗಳ ಸಾಗಾಣಿಕೆ ನಡೆಸಲು, ವೈಜ್ಞಾನಿಕ ಸಂಶೋಧನೆಗಳನ್ನು ನಡೆಸಲು, ಡಾಕಿಂಗ್ ಪ್ರಕ್ರಿಯೆಯ ಮೇಲೆ ಅವಲಂಬಿತವಾಗಿರಲಿವೆ.
ಬಾಹ್ಯಾಕಾಶ ದುರಸ್ತಿ ಮತ್ತು ಇಂಧನ ಪೂರೈಕೆ: ಡಾಕಿಂಗ್ ಪ್ರಕ್ರಿಯೆಯ ಮೂಲಕ, ಉಪಗ್ರಹಗಳು ಮತ್ತು ಬಾಹ್ಯಾಕಾಶ ನೌಕೆಗಳನ್ನು ಕಕ್ಷೆಯಲ್ಲೇ ದುರಸ್ತಿಗೊಳಿಸಬಹುದು, ಅವುಗಳನ್ನು ಮೇಲ್ದರ್ಜೆಗೆ ಏರಿಸಬಹುದು, ಮತ್ತು ಇಂಧನ ಮರು ಪೂರಣ ನಡೆಸಬಹುದು. ಇದರಿಂದಾಗಿ ಉಪಗ್ರಹಗಳ ಜೀವಿತಾವಧಿ ಇನ್ನಷ್ಟು ಹೆಚ್ಚಿ, ಕಾರ್ಯಾಚರಣಾ ವೆಚ್ಚವೂ ಕಡಿಮೆಯಾಗುತ್ತದೆ.
ಮಾನವ ಸಹಿತ ಬಾಹ್ಯಾಕಾಶ ಯೋಜನೆಗಳು: ಚಂದ್ರ, ಮಂಗಳ ಗ್ರಹ, ಮತ್ತು ಅವುಗಳಾಚೆಗಿನ ಬಾಹ್ಯಾಕಾಶಕ್ಕೆ ಮಾನವ ಸಹಿತ ಬಾಹ್ಯಾಕಾಶ ಯಾನ ನಡೆಸುವಾಗ ಗಗನಯಾತ್ರಿಗಳ ಸುರಕ್ಷತೆ ಮತ್ತು ಯೋಜನೆಯ ಯಶಸ್ಸಿಗೆ ಡಾಕಿಂಗ್ ಅತ್ಯವಶ್ಯಕವಾಗಿದೆ.
ಗಗನಯಾನಕ್ಕೆ ಮಹತ್ವದ ಹೆಜ್ಜೆ: ಸ್ಪೇಡೆಕ್ಸ್ ಯೋಜನೆಯ ಯಶಸ್ಸು ಭಾರತದ ಪ್ರಥಮ ಮಾನವ ಸಹಿತ ಬಾಹ್ಯಾಕಾಶ ಯಾನವಾದ ಗಗನಯಾನ ಯೋಜನೆಗೆ ಅತ್ಯಂತ ಮಹತ್ವದ್ದಾಗಿದೆ. ಭವಿಷ್ಯದ ಮಾನವ ಸಹಿತ ಯೋಜನೆಗಳಿಗೆ ಡಾಕಿಂಗ್ ಮತ್ತು ಡಿ-ಡಾಕಿಂಗ್ ಸಾಮರ್ಥ್ಯಗಳು ಅವಶ್ಯಕವಾಗಿದ್ದು, ಈ ಯೋಜನೆಗಳಲ್ಲಿ ಗಗನಯಾತ್ರಿಗಳು ಒಂದು ಬಾಹ್ಯಾಕಾಶ ನೌಕೆಯಿಂದ ಇನ್ನೊಂದಕ್ಕೆ ಚಲಿಸಬೇಕಾಗಬಹುದು, ಅಥವಾ ಬಾಹ್ಯಾಕಾಶ ನಿಲ್ದಾಣದಲ್ಲಿ ಡಾಕಿಂಗ್ ನಡೆಸಬೇಕಾಗಬಹುದು, ಅಥವಾ ತುರ್ತು ರಕ್ಷಣಾ ಕ್ರಮಗಳನ್ನು ಕೈಗೊಳ್ಳಬೇಕಾಗಿ ಬರಬಹುದು.
ಭವಿಷ್ಯದ ಗಗನಯಾನ ಯೋಜನೆಗಳಲ್ಲಿ ಡಾಕಿಂಗ್ ತಂತ್ರಜ್ಞಾನದ ಅನುಕೂಲತೆಗಳು: ಮಾಡ್ಯುಲ್ ವರ್ಗಾವಣೆ ಮತ್ತು ಸುರಕ್ಷಿತ ಹಿಂತಿರುಗುವಿಕೆ: ಒಂದು ವೇಳೆ, ಗಗನಯಾತ್ರಿಗಳು ಗಗನಯಾನ ಬಾಹ್ಯಾಕಾಶ ನೌಕೆಯ ಒಂದು ಭಾಗದಿಂದ ಇನ್ನೊಂದು ಭಾಗಕ್ಕೆ ತೆರಳಬೇಕಾದರೆ, ಆಗ ಡಾಕಿಂಗ್ ಸಾಮರ್ಥ್ಯ ಅವರಿಗೆ ಸುರಕ್ಷಿತ ಮತ್ತು ಸುಲಭ ವರ್ಗಾವಣೆಗೆ ಅನುಕೂಲ ಕಲ್ಪಿಸುತ್ತದೆ.
ರಕ್ಷಣೆ ಮತ್ತು ಆಕಸ್ಮಿಕ ಕಾರ್ಯಾಚರಣೆಗಳು: ತಾಂತ್ರಿಕ ಸಮಸ್ಯೆಗಳು ಕಾಣಿಸಿಕೊಂಡರೆ, ತುರ್ತು ಪರಿಸ್ಥಿತಿಯ ಸಿಬ್ಬಂದಿ ವಾಹನ ಮುಖ್ಯ ಬಾಹ್ಯಾಕಾಶ ನೌಕೆಯೊಡನೆ ಡಾಕಿಂಗ್ ನಡೆಸಬಹುದು. ಆ ಮೂಲಕ, ಗಗನಯಾತ್ರಿಗಳು ಸುರಕ್ಷಿತವಾಗಿ ಭೂಮಿಗೆ ಮರಳಲು ಸಾಧ್ಯವಾಗುತ್ತದೆ.
ಸುದೀರ್ಘ ಯೋಜನಾ ಸಾಮರ್ಥ್ಯ: ಭವಿಷ್ಯದ ಗಗನಯಾನ ಯೋಜನೆಗಳಲ್ಲಿ, ಡಾಕಿಂಗ್ ತಂತ್ರಜ್ಞಾನವನ್ನು ಬಳಸಿಕೊಂಡು, ಕಕ್ಷೆಯಲ್ಲಿ ದೊಡ್ಡ ಬಾಹ್ಯಾಕಾಶ ನೌಕೆಗಳನ್ನು ಜೋಡಿಸಬಹುದು. ಆ ಮೂಲಕ, ಹೆಚ್ಚು ದೀರ್ಘವಾದ ಮತ್ತು ಡೀಪ್ ಸ್ಪೇಸ್ ಅನ್ವೇಷಣೆಯಂತಹ ಬಾಹ್ಯಾಕಾಶ ಯೋಜನೆಗಳನ್ನು ನಡೆಸಲು ಸಾಧ್ಯ.
ಬಜೆಟ್ 2025: ಭಾರತದ ಬಾಹ್ಯಾಕಾಶ ಕನಸಿಗೆ 13,416 ಕೋಟಿ ರೂಪಾಯಿಗಳ ಉತ್ತೇಜನ
ಬಾಹ್ಯಾಕಾಶ ಸಾಮರ್ಥ್ಯದಲ್ಲಿ ಭಾರತದ ಜಿಗಿತ: ಇಂದು ಯಶಸ್ವಿಯಾಗಿ ಡಿ-ಡಾಕಿಂಗ್ ನಡೆಸಿರುವುದು ಅತ್ಯಂತ ಸಂಕೀರ್ಣವಾದ ಬಾಹ್ಯಾಕಾಶ ಪ್ರಕ್ರಿಯೆಗಳನ್ನೂ ನಿಖರವಾಗಿ ನಡೆಸುವ ಭಾರತದ ಸಾಮರ್ಥ್ಯಕ್ಕೆ ಸಾಕ್ಷಿಯಾಗಿದೆ. ಈ ಸಾಧನೆಯನ್ನು ಇಲ್ಲಿಯತನಕ ಕೇವಲ ಬೆರಳೆಣಿಕೆಯ ರಾಷ್ಟ್ರಗಳು ಮಾತ್ರವೇ ನಡೆಸಿವೆ. ಈ ಸಾಧನೆ, ಭಾರತವನ್ನು ತನ್ನದೇ ಆದ ಸ್ವಂತ ಬಾಹ್ಯಾಕಾಶ ನಿಲ್ದಾಣವಾದ 'ಭಾರತೀಯ ಅಂತರಿಕ್ಷ ಸ್ಟೇಷನ್ (ಬಿಎಎಸ್)' ನಿರ್ಮಿಸುವ ಕನಸನ್ನು ನನಸಾಗಿಸುವತ್ತ ಕರೆದೊಯ್ದಿದೆ. ಅದರೊಡನೆ, ಚಂದ್ರಯಾನ-4, ಗಗನಯಾನ, ಮತ್ತು ಡೀಪ್ ಸ್ಪೇಸ್ ಅನ್ವೇಷಣೆಗಳಂತಹ ಯೋಜನೆಗಳಿಗೂ ಇದು ನೆರವಾಗಲಿದೆ.
ಬಜೆಟ್ 2025-26: ಸ್ಮಾರ್ಟ್ ಹೂಡಿಕೆಗಳ ಮೂಲಕ ರಕ್ಷಣಾ ಬಲವರ್ಧನೆ
ಇಂತಹ ಬಹುಮುಖ್ಯ ತಂತ್ರಜ್ಞಾನಗಳಲ್ಲಿ ಪ್ರಾವೀಣ್ಯತೆ ಸಾಧಿಸುವ ಮೂಲಕ, ಭಾರತ ತನ್ನ ಬಾಹ್ಯಾಕಾಶ ಯಾತ್ರೆಯಲ್ಲಿ ಬಹುದೊಡ್ಡ ಹೆಜ್ಜೆಯನ್ನಿಟ್ಟಿದೆ. ಆ ಮೂಲಕ ಪ್ರಮುಖ ಬಾಹ್ಯಾಕಾಶ ಶಕ್ತಿ ಎಂಬ ತನ್ನ ಸ್ಥಾನವನ್ನು ಇನ್ನಷ್ಟು ಭದ್ರಪಡಿಸಿಕೊಂಡಿದೆ. ಈ ಯಶಸ್ಸು, ಮುಂದಿನ ವರ್ಷಗಳಲ್ಲಿ ಹೆಚ್ಚು ಮಹತ್ವಾಕಾಂಕ್ಷಿ, ಕಡಿಮೆ ವೆಚ್ಚದಾಯಕವಾದ, ಮತ್ತು ಸುಸ್ಥಿರ ಬಾಹ್ಯಾಕಾಶ ಯೋಜನೆಗಳನ್ನು ನಡೆಸಲು ಭಾರತದ ಬಾಗಿಲನ್ನು ತೆರೆದಿದೆ.
(ಗಿರೀಶ್ ಲಿಂಗಣ್ಣ ಅವರು ವಿಜ್ಞಾನ ಬರಹಗಾರ, ರಕ್ಷಣೆ, ಏರೋಸ್ಪೇಸ್, ಮತ್ತು ರಾಜಕೀಯ ವಿಶ್ಲೇಷಕರಾಗಿದ್ದು, ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಅವರು ಜರ್ಮನಿಯ ಎಡಿಡಿ ಇಂಜಿನಿಯರಿಂಗ್ ಜಿಎಂಬಿಎಚ್ ಸಂಸ್ಥೆಯ ಅಂಗಸಂಸ್ಥೆಯಾದ ಎಡಿಡಿ ಇಂಜಿನಿಯರಿಂಗ್ ಕಾಂಪೊನೆಂಟ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ನಿರ್ದೇಶಕರಾಗಿದ್ದಾರೆ. ಗಿರೀಶ್ ಲಿಂಗಣ್ಣ ಅವರನ್ನು ಸಂಪರ್ಕಿಸಲು ಇಮೇಲ್ ವಿಳಾಸ: girishlinganna@gmail.com)