ಮಧುಮೇಹಿಗಳಿಗೂ ಸುರಕ್ಷಿತವಾಗಲಿದೆ ಬಾಹ್ಯಾಕಾಶ ಯಾತ್ರೆ!

Published : Jul 02, 2025, 04:48 PM IST
Shubanshu Shukla

ಸಾರಾಂಶ

ಆಕ್ಸಿಯಮ್-4 ಯೋಜನೆಯಲ್ಲಿ ಭಾರತೀಯ ಗಗನಯಾತ್ರಿ ಶುಭಾಂಶು ಶುಕ್ಲಾ ಅವರು ಮಧುಮೇಹ ನಿರ್ವಹಣೆಗೆ ಸಂಬಂಧಿಸಿದ ಪ್ರಯೋಗಗಳನ್ನು ನಡೆಸುತ್ತಿದ್ದಾರೆ. ಈ ಪ್ರಯೋಗಗಳು ಬಾಹ್ಯಾಕಾಶದಲ್ಲಿ ಮತ್ತು ಭೂಮಿಯ ಮೇಲೆ ಮಧುಮೇಹ ಚಿಕಿತ್ಸೆಯ ಭವಿಷ್ಯವನ್ನು ಬದಲಾಯಿಸಬಹುದು.

ಗಿರೀಶ್ ಲಿಂಗಣ್ಣ,  ಲೇಖಕರು ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕ

ಭಾರತೀಯ ಗಗನಯಾತ್ರಿ ಶುಭಾಂಶು ಶುಕ್ಲಾ ಅವರು ಐತಿಹಾಸಿಕ ಆಕ್ಸಿಯಮ್-4 ಯೋಜನೆಯ ಭಾಗವಾಗಿದ್ದು, ಈಗ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ (ಐಎಸ್ಎಸ್) ಕಾರ್ಯಾಚರಿಸುತ್ತಿದ್ದಾರೆ. ಆಕ್ಸಿಯಮ್-4 ಯೋಜನೆಯ ಭಾಗವಾಗಿ ಶುಕ್ಲಾ 60ಕ್ಕೂ ಹೆಚ್ಚು ಪ್ರಯೋಗಗಳನ್ನು ನಡೆಸಲಿದ್ದಾರೆ. ಇವುಗಳಲ್ಲಿ ಒಂದು ಪ್ರಯೋಗ, ಭೂಮಿ ಮತ್ತು ಬಾಹ್ಯಾಕಾಶ ಎರಡೂ ಕಡೆ ಮಧುಮೇಹಿಗಳ ಆರೈಕೆಯ ಭವಿಷ್ಯವನ್ನು ಬದಲಿಸಬಲ್ಲದು.

ಹಲವಾರು ವರ್ಷಗಳ ಕಾಲ, ಇನ್ಸುಲಿನ್ ಮೇಲೆ ಅವಲಂಬನೆ ಹೊಂದಿದ್ದ ವ್ಯಕ್ತಿಗಳಿಗೆ ಬಾಹ್ಯಾಕಾಶಕ್ಕೆ ತೆರಳಲ ಅವಕಾಶ ಇರಲಿಲ್ಲ. ಶೂನ್ಯ ಗುರುತ್ವಾಕರ್ಷಣೆಯಲ್ಲಿ ರಕ್ತದ ಸಕ್ಕರೆ ಮಟ್ಟವನ್ನು ನಿರ್ವಹಿಸುವುದು ಕಷ್ಟಕರ ಎಂಬ ಕಾರಣದಿಂದ ಈ ಕ್ರಮ ಕೈಗೊಳ್ಳಲಾಗಿತ್ತು. ಬಾಹ್ಯಾಕಾಶದಲ್ಲಿ, ದೇಹದ ಕಾರ್ಯ ಚಟುವಟಿಕೆಗಳು ಸಂಪೂರ್ಣವಾಗಿ ಭಿನ್ನವಾಗಿರುತ್ತವೆ. ಆಹಾರ ಜೀರ್ಣವಾಗುವುದು ನಿಧಾನವಾಗುತ್ತದೆ, ಇನ್ಸುಲಿನ್ ಊಹಿಸಲು ಸಾಧ್ಯವಿಲ್ಲದಂತೆ ವರ್ತಿಸುತ್ತದೆ, ಮತ್ತು ಸ್ನಾಯುಗಳು ದುರ್ಬಲಗೊಳ್ಳುವುದರಿಂದ ದೇಹದ ಸಕ್ಕರೆಯ ಬಳಕೆಯೂ ವ್ಯತ್ಯಾಸ ಹೊಂದುತ್ತದೆ. ಸಂಪೂರ್ಣವಾಗಿ ಆರೋಗ್ಯವಂತರಾದ ಗಗನಯಾತ್ರಿಗಳೂ ಸಹ ಹಲವು ಬಾರಿ ಬಾಹ್ಯಾಕಾಶದಲ್ಲಿನ ಒತ್ತಡ, ನಿದ್ದೆಯ ವ್ಯತ್ಯಯ, ಮತ್ತು ಹಾರ್ಮೋನ್ ಬದಲಾವಣೆಗಳಿಂದ ಮಧುಮೇಹ ಪೂರ್ವದ (ಪ್ರಿಡಯಾಬಿಟಿಕ್) ಲಕ್ಷಣಗಳನ್ನು ತೋರುವುದಿದೆ. ಐಎಸ್ಎಸ್‌ನಲ್ಲಿ ಪೂರ್ಣಾವಧಿಯ ವೈದ್ಯರು ಲಭ್ಯವಿಲ್ಲದ್ದರಿಂದ, ಅಲ್ಲಿ ರಕ್ತದಲ್ಲಿನ ಸಕ್ಕರೆ ಮಟ್ಟ ಅಪಾರವಾಗಿ ಹೆಚ್ಚಿದರೆ, ಅಥವಾ ಕಡಿಮೆಯಾದರೆ ಅದು ಅಪಾಯಕಾರಿಯಾಗಿ ಪರಿಣಮಿಸಬಹುದು.

ಈ ಸವಾಲುಗಳನ್ನು ಎದುರಿಸುವ ಸಲುವಾಗಿ, ಎಎಕ್ಸ್-4 ಯೋಜನೆ ಸೂಟ್ ರೈಡ್ ಪ್ರಾಜೆಕ್ಟ್ ಎಂಬ ವಿಶೇಷ ಅಧ್ಯಯನ ಒಂದನ್ನು ಒಳಗೊಂಡಿದೆ. ಈ ಸಂಶೋಧನೆ ಬಾಹ್ಯಾಕಾಶದಲ್ಲಿ ಮಾನವ ದೇಹ ಹೇಗೆ ಗ್ಲೂಕೋಸ್ (ಸಕ್ಕರೆ) ಅನ್ನು ನಿರ್ವಹಿಸುತ್ತದೆ ಎನ್ನುವುದರತ್ತ ಗಮನ ಹರಿಸಲಿದೆ. ಈ ಅಧ್ಯಯನ ಭವಿಷ್ಯದಲ್ಲಿ ಮಧುಮೇಹಿಗಳು ಬಾಹ್ಯಾಕಾಶಕ್ಕೆ ತೆರಳಿ, ಅಲ್ಲಿ ವಾಸಿಸಲು, ಕಾರ್ಯ ನಿರ್ವಹಿಸಲು ಅನುಕೂಲವಾಗುವಂತೆ ಮಾಡುವ ಗುರಿ ಹೊಂದಿದೆ.

ಬುರ್ಜೀಲ್ ಹೋಲ್ಡಿಂಗ್‌ನ ಅಧ್ಯಯನದ ನೇತೃತ್ವ ವಹಿಸಿರುವ ಡಾ. ಮೊಹಮ್ಮದ್ ಫಿತ್ಯಾನ್ ಅವರು ಈ ಸಂಶೋಧನೆ ಭೂಮಿಯಲ್ಲೂ ಮಧುಮೇಹಕ್ಕೆ ಸಂಬಂಧಿಸಿದ ನಮ್ಮ ಜ್ಞಾನವನ್ನು ಇನ್ನಷ್ಟು ವಿಸ್ತರಿಸಲು ನೆರವಾಗಬಹುದು ಎಂಬ ಅಭಿಪ್ರಾಯ ಹೊಂದಿದ್ದಾರೆ. ಬುರ್ಜೀಲ್ ಹೋಲ್ಡಿಂಗ್ಸ್ ಆಕ್ಸಿಯಮ್ ಸ್ಪೇಸ್ ಸಂಸ್ಥೆಯೊಡನೆ ಸಹಯೋಗ ಹೊಂದಿದ್ದು, ಕಂಟಿನ್ಯುವಸ್ ಗ್ಲೂಕೋಸ್ ಮಾನಿಟರ್ಸ್ (ಸಿಜಿಎಂಗಳು) ಮತ್ತು ಇನ್ಸುಲಿನ್ ಬಾಹ್ಯಾಕಾಶದಲ್ಲಿ ಹೇಗೆ ವರ್ತಿಸುತ್ತವೆ ಎನ್ನುವುದನ್ನು ಅಧ್ಯಯನ ಮಾಡಲಿದೆ. ಸಿಜಿಎಂಗಳು ಈಗಾಗಲೇ ಭೂಮಿಯಲ್ಲಿ ಮಾನವರಿಗೆ ಮಧುಮೇಹವನ್ನು ನಿರ್ವಹಿಸಲು ನೆರವಾಗುತ್ತಿದ್ದು, ವಿಜ್ಞಾನಿಗಳು ಅವು ಬಾಹ್ಯಾಕಾಶದಲ್ಲೂ ಕಾರ್ಯ ನಿರ್ವಹಿಸಬಲ್ಲವೇ ಎಂದು ಪರಿಶೀಲಿಸುತ್ತಿದ್ದಾರೆ.

ಭೂಮಿಯ ಗುರುತ್ವಾಕರ್ಷಣೆಯ ಪ್ರಭಾವ ಇಲ್ಲದಿರುವಾಗ ದೇಹ ಹೇಗೆ ಕಾರ್ಯಾಚರಿಸುತ್ತದೆ ಎನ್ನುವುದನ್ನು ತಿಳಿಯಲು ಸೂಕ್ಷ್ಮ ಗುರುತ್ವಾಕರ್ಷಣೆ ಒಂದು ಅಪರೂಪದ ಅವಕಾಶ ಮಾಡಿಕೊಡುತ್ತದೆ. ಸ್ನಾಯುಗಳಲ್ಲಿನ ಬದಲಾವಣೆ, ದೇಹದ ದ್ರವಗಳ ಬದಲಾವಣೆ ಮತ್ತು ನಿದ್ದೆಯ ರೀತಿಗಳು ಇನ್ಸುಲಿನ್ ಹೇಗೆ ಬಾಹ್ಯಾಕಾಶದಲ್ಲಿ ಭಿನ್ನವಾಗಿ ವರ್ತಿಸುತ್ತದೆ ಎನ್ನುವುದನ್ನು ತಿಳಿಯಲು ನೆರವಾಗುತ್ತದೆ ಎಂದು ಡಾ. ಫಿತ್ಯಾನ್ ವಿವರಿಸಿದ್ದಾರೆ. ಇದು ಇನ್ಸುಲಿನ್ ನಿರೋಧದ ಆರಂಭಿಕ ಸಂಕೇತಗಳನ್ನು (ಬಯೋಮಾರ್ಕರ್ಸ್) ನೀಡಿ, ಮಧುಮೇಹದ ಚಿಕಿತ್ಸೆಗಾಗಿ ಹೊಸ ವಿಧಾನಗಳನ್ನು ಒದಗಿಸಬಹುದು.

ಎರಡು ವಾರಗಳ ಎಎಕ್ಸ್-4 ಯೋಜನೆಯ ಅವಧಿಯಲ್ಲಿ, ಒಬ್ಬರಲ್ಲ ಒಬ್ಬರು ಗಗನಯಾತ್ರಿಗಳು ನಿರಂತರವಾಗಿ ಸಿಜಿಎಂಗಳನ್ನು ಧರಿಸಿರುತ್ತಾರೆ. ಈ ಉಪಕರಣಗಳು ಸದಾಕಾಲವೂ ರಕ್ತದ ಸಕ್ಕರೆ ಮಟ್ಟವನ್ನು ಗಮನಿಸುತ್ತಾ, ಆ ಮಾಹಿತಿಗಳನ್ನು ಭೂಮಿಗೆ ರವಾನಿಸುತ್ತವೆ. ಇನ್ಸುಲಿನ್ ಪೆನ್‌ಗಳನ್ನೂ ಬಾಹ್ಯಾಕಾಶಕ್ಕೆ ರವಾನಿಸಲಾಗಿದ್ದು, ಅವುಗಳು ಬಳಕೆಯಾಗಿಲ್ಲ. ಬದಲಿಗೆ, ಬಾಹ್ಯಾಕಾಶದ ವಾತಾವರಣದಲ್ಲಿ ಇನ್ಸುಲಿನ್ ಸ್ಥಿರವಾಗಿರುತ್ತದೆಯೇ ಎಂದು ಪರಿಶೀಲಿಸಲು ಈ ಪೆನ್ ಅನ್ನು ಬಳಸಲಾಗುತ್ತದೆ. ಐ-ಸ್ಟಾಟ್ ಅನಲೈಸರ್‌ನಂತಹ ಉಪಕರಣಗಳನ್ನು ಬಳಸಿಕೊಂಡು, ರಕ್ತದ ಮಾದರಿಯನ್ನು ಸಂಗ್ರಹಿಸಿ, ಸಿಜಿಎಂ ಮಾಹಿತಿಗಳು ನಿಖರವಾಗಿವೆಯೇ ಎಂದು ಪರಿಶೀಲಿಸಲಾಗುತ್ತದೆ. ಈ ಪ್ರಯೋಗಕ್ಕೆ ಅವಶ್ಯಕವಾದ ಲಾನ್ಸೆಟ್‌ಗಳು, ಸೂಜಿಗಳು, ಮತ್ತು ಪರೀಕ್ಷಾ ಉಪಕರಣಗಳು ಸೇರಿದಂತೆ, ಎಲ್ಲ ವೈದ್ಯಕೀಯ ಉಪಕರಣಗಳನ್ನು ಬುರ್ಜೀಲ್ ಹೋಲ್ಡಿಂಗ್ಸ್ ನಿರ್ವಹಿಸುತ್ತದೆ.

ಅದರೊಡನೆ, ಮಧುಮೇಹ ಹೊಂದಿರುವ ವ್ಯಕ್ತಿಗಳು ಬಾಹ್ಯಾಕಾಶಕ್ಕೆ ತೆರಳುವಲ್ಲಿ ಯಾಕೆ ಅಡಚಣೆಗಳನ್ನು ಎದುರಿಸುತ್ತಾರೆ ಎನ್ನುವುದನ್ನೂ ಡಾ. ಫಿತ್ಯಾನ್ ವಿವರಿಸುತ್ತಾರೆ.

ತುರ್ತು ಚಿಕಿತ್ಸೆಯ ಲಭ್ಯತೆ ಇಲ್ಲದಿದ್ದರೆ, ರಕ್ತದ ಸಕ್ಕರೆ ಮಟ್ಟದಲ್ಲಿ ಇದ್ದಕ್ಕಿದ್ದಂತೆ ಉಂಟಾಗುವ ಬದಲಾವಣೆಗಳು ಜೀವಕ್ಕೆ ಹಾನಿ ಉಂಟುಮಾಡಬಲ್ಲವು. ದೇಹದ ದ್ರವಗಳ ಬದಲಾವಣೆಗಳು ಮತ್ತು ಔಷಧಗಳ ಸಂಗ್ರಹಣೆಯಲ್ಲಿನ ಸವಾಲುಗಳ ಕಾರಣದಿಂದ ಔಷಧಗಳು ಬಾಹ್ಯಾಕಾಶದಲ್ಲಿ ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಿಸದಿರಬಹುದು.

ಸುದೀರ್ಘ ಬಾಹ್ಯಾಕಾಶ ಪ್ರಯಾಣದ ಸಂದರ್ಭದಲ್ಲಿ ಸರಿಯಾದ ಸಕ್ಕರೆ ಮಟ್ಟವನ್ನು ನಿರ್ವಹಿಸುವುದು ಬಹಳ ಕಷ್ಟಕರ. ಆದರೂ, ಎಎಕ್ಸ್-4 ಯೋಜನೆ ಸಂಶೋಧಕರಿಗೆ ಸಿಜಿಎಂಗಳನ್ನು ಬಾಹ್ಯಾಕಾಶದಲ್ಲಿ ಸುರಕ್ಷಿತವಾಗಿ ಬಳಸಬಹುದೇ ಎಂದು ಅನ್ವೇಷಿಸಲು ನೆರವಾಗಲಿದೆ. ಈ ಸಂಶೋಧನೆಗಳು ಭವಿಷ್ಯದಲ್ಲಿ ಮಧುಮೇಹ ಹೊಂದಿರುವ ಗಗನಯಾತ್ರಿಗಳಿಗೂ ಬಾಹ್ಯಾಕಾಶದ ಬಾಗಿಲು ತೆರೆಯಬಹುದು.

ಈ ಅಧ್ಯಯನ ಕೇವಲ ಬಾಹ್ಯಾಕಾಶಕ್ಕೆ ಸೀಮಿತವಾಗಿಲ್ಲ. ಜೊತೆಗೆ, ಇದು ಭೂಮಿಯಲ್ಲಿನ ದುರ್ಗಮ, ಬಡ ಪ್ರದೇಶಗಳಿಗೂ ಪ್ರಯೋಜನಕಾರಿಯಾಗಬಹುದು. ಇದರ ಸಂಭಾವ್ಯ ಫಲಿತಾಂಶಗಳು ತೀವ್ರ ಪರಿಸ್ಥಿತಿಗಳಲ್ಲೂ ಗ್ಲೂಕೋಸ್ ನಿರ್ವಹಣೆ ನಡೆಸಲು, ನೈಜ ಸಮಯದಲ್ಲಿ ಸಕ್ಕರೆ ಮಟ್ಟವನ್ನು ಗಮನಿಸಲು, ಮತ್ತು ವೈಯಕ್ತಿಕ ಮಧುಮೇಹ ನಿರ್ವಹಣೆಗೆ ಕೃತಕ ಬುದ್ಧಿಮತ್ತೆಯ (ಎಐ) ಟೂಲ್‌ಗಳ ನಿರ್ಮಾಣಕ್ಕೆ ಹಾದಿ ಮಾಡಿಕೊಡಬಹುದು. ಇದರಿಂದ ದೇಹ ಇನ್ಸುಲಿನ್‌ಗೆ ಪ್ರತಿಕ್ರಿಯಿಸುವುದನ್ನು ಉತ್ತಮಪಡಿಸಲು ಹೊಸ ಔಷಧಗಳ ಸಂಶೋಧನೆಗೂ ಪೂರಕವಾಗಲಿದೆ.

ಡಾ. ಫಿತ್ಯಾನ್ ಅವರು ಈ ಸಂಶೋಧನೆ ದೀರ್ಘಾವಧಿಯ ಆರೋಗ್ಯ ಸಮಸ್ಯೆ ಹೊಂದಿರುವವರಿಗೂ ಬಾಹ್ಯಾಕಾಶಕ್ಕೆ ತೆರಳಲು ಅವಕಾಶ ಮಾಡಿಕೊಡುತ್ತದೆ ಎಂದಿದ್ದಾರೆ. ಇದಕ್ಕಾಗಿ ಯೋಜನೆಗಳ ಗುಣಮಟ್ಟದಲ್ಲಿ ರಾಜಿಯಾಗದೆ, ಸೂಕ್ತ ತಂತ್ರಜ್ಞಾನ ಮತ್ತು ಸುರಕ್ಷತಾ ವ್ಯವಸ್ಥೆಗಳನ್ನು ಅಭಿವೃದ್ಧಿ ಪಡಿಸಲಾಗುತ್ತದೆ.

ಎಎಕ್ಸ್-4 ಯೋಜನೆ ಪೂರ್ಣಗೊಂಡ ಬಳಿಕ, ಇದರಲ್ಲಿ ಸಂಗ್ರಹಿಸಲಾಗುವ ಎಲ್ಲ ಮಾಹಿತಿಗಳನ್ನು ಅಧ್ಯಯನ ನಡೆಸಿ, ಮುಂದಿನ ಹಂತಗಳನ್ನು ನಿರ್ಧರಿಸಲಾಗುತ್ತದೆ. ಸಂಶೋಧಕರು ಈ ಮಾಹಿತಿಗಳು ಮಧುಮೇಹ ಹೊಂದಿರುವ ಗಗನಯಾತ್ರಿಗಳಿಗೆ ಅವಕಾಶ ಕಲ್ಪಿಸಿ, ದೀರ್ಘಾವಧಿಯ ಆರೋಗ್ಯ ಸ್ಥಿತಿಯನ್ನು ಅಧ್ಯಯನ ಮಾಡಲು ನೆರವಾಗಬಹುದು. ಶುಭಾಂಶು ಶುಕ್ಲಾ ಅವರು ಭಾಗಿಯಾಗಿರುವ ಎಎಕ್ಸ್-4 ಯೋಜನೆ ಒಂದು ಮಹತ್ವದ ತಿರುವಾಗುವ ಸಾಧ್ಯತೆಗಳಿದ್ದು, ಆರೋಗ್ಯ ಸವಾಲುಗಳನ್ನು ಹೊಂದಿರುವವರೂ ನಕ್ಷತ್ರಗಳ ಲೋಕಕ್ಕೆ ತೆರಳಬಹುದು ಎಂದು ಸಾಬೀತುಪಡಿಸಬಲ್ಲದು. ಈ ಯೋಜನೆಯಿಂದ ಕಲಿಯುವ ಪಾಠಗಳು ಭೂಮಿಯಲ್ಲೂ ಜೀವನಮಟ್ಟವನ್ನು ಸುಧಾರಿಸಲು ನೆರವಾಗಬಹುದು.

(ಗಿರೀಶ್ ಲಿಂಗಣ್ಣ ಅವರು ವಿಜ್ಞಾನ ಬರಹಗಾರ, ರಕ್ಷಣೆ, ಏರೋಸ್ಪೇಸ್, ಮತ್ತು ರಾಜಕೀಯ ವಿಶ್ಲೇಷಕರಾಗಿದ್ದು, ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಅವರು ಜರ್ಮನಿಯ ಎಡಿಡಿ ಇಂಜಿನಿಯರಿಂಗ್ ಜಿಎಂಬಿಎಚ್ ಸಂಸ್ಥೆಯ ಅಂಗಸಂಸ್ಥೆಯಾದ ಎಡಿಡಿ ಇಂಜಿನಿಯರಿಂಗ್ ಕಾಂಪೊನೆಂಟ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ನಿರ್ದೇಶಕರಾಗಿದ್ದಾರೆ. ಗಿರೀಶ್ ಲಿಂಗಣ್ಣ ಅವರನ್ನು ಸಂಪರ್ಕಿಸಲು ಇಮೇಲ್ ವಿಳಾಸ: girishlinganna@gmail.com)

 

PREV

ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್‌ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್‌. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್‌ ಸಿಗುವ ಏಕೈಕ ತಾಣ ಏಷ್ಯಾನೆಟ್‌ ಸುವರ್ಣ ನ್ಯೂಸ್‌. ಹೊಸ ಗ್ಯಾಜೆಟ್‌ ರಿಲೀಸ್‌ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್‌ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್‌ ಎಕ್ಸ್‌ಪ್ಲೇನರ್ಸ್‌ ಹಾಗೂ ಗ್ಯಾಜೆಟ್‌ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.

Read more Articles on
click me!

Recommended Stories

ಭಾರತದ ಶಾಶ್ವತ ಬಾಹ್ಯಾಕಾಶ ನಿವಾಸ ಬಿಎಎಸ್-01ಕ್ಕೆ ನೀಲಿ ನಕ್ಷೆ ಅಂತಿಮಗೊಳಿಸಿದ ಇಸ್ರೋ
ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಮೊದಲ ಖಗೋಳ ವಿಜ್ಞಾನ ಪ್ರಯೋಗಾಲಯ ಉದ್ಘಾಟನೆ