
ಸಮುದ್ರದ ಆಳದಲ್ಲಿ ಅನೇಕ ನಿಗೂಢ ವಿಷಯಗಳು ಅಡಗಿರುತ್ತವೆ . ಆದರೆ ಇವುಗಳಲ್ಲಿ ಯಾವುದಾದರೂ ಮೇಲ್ಮೈಗೆ ಬಂದಾಗ, ಜನರು ಭಯಭೀತರಾಗುತ್ತಾರೆ . ಅಂತಹ ಒಂದು ಮೀನು ಇತ್ತೀಚೆಗೆ ತಮಿಳುನಾಡಿನ ಕಡಲತೀರದಲ್ಲಿ ಸಿಕ್ಕಿದೆ. ಅದು ಸುಮಾರು 30 ಅಡಿ ಉದ್ದದ ಅಪರೂಪದ ಮೀನು. ಇದನ್ನು ‘ಡೂಮ್ಸ್‌ಡೇ ಫಿಶ್’ ಅಥವಾ ‘ಕ್ಯಾಟಾಸ್ಟ್ರೊಫಿ ಫಿಶ್’ ಎಂದು ಕರೆಯಲಾಗುತ್ತಿದೆ. ಈ ಘಟನೆಯಿಂದ ಇಂಟರ್ನೆಟ್‌ನಲ್ಲಿ ತೀವ್ರ ಚರ್ಚೆ ಆರಂಭವಾಗಿದ್ದು, ಜನರು ಇದನ್ನು ಭೂಕಂಪ, ಸುನಾಮಿ, ಅಥವಾ ಇತರ ವಿಪತ್ತುಗಳ ಸಂಕೇತವೆಂದು ಭಯಪಡುತ್ತಿದ್ದಾರೆ. ಕೆಲವರು ಇದನ್ನು ಮೂರನೇ ಮಹಾಯುದ್ಧದ ಸೂಚನೆ ಎಂದೂ ಊಹಿಸುತ್ತಿದ್ದಾರೆ. ಈ ಮೀನಿನ ವೈಜ್ಞಾನಿಕ ಹೆಸರು ರೆಗಲೆಕಸ್ ಗ್ಲೆಸ್ನೆ (ಓರ್ಫಿಶ್) ಎಂದು ಕರೆಯಲಾಗುತ್ತದೆ. ಈ ಓರ್ಫಿಶ್ ಕಾಣಿಸಿಕೊಂಡಾಗಲೆಲ್ಲಾ ವಿನಾಶಕಾರಿ ಘಟನೆಗಳು ಸಂಭವಿಸುತ್ತವೆ ಎಂಬ ನಂಬಿಕೆಯಿಂದ ಜನರಲ್ಲಿ ಆತಂಕ ಮನೆಮಾಡಿದೆ.
ಡೂಮ್ಸ್‌ಡೇ ಫಿಶ್ ಎಂದರೇನು ?
ಓರ್ಫಿಶ್ ವಿಶ್ವದ ಅತಿ ಉದ್ದದ ಮೂಳೆ ಮೀನುಗಳಲ್ಲಿ ಒಂದಾಗಿದ್ದು, ಸಾಮಾನ್ಯವಾಗಿ ಸಮುದ್ರದ 200 ರಿಂದ 1000 ಮೀಟರ್ ಆಳದಲ್ಲಿ (3300 ಅಡಿಗಳವರೆಗೆ) ವಾಸಿಸುತ್ತದೆ. 30 ಅಡಿ ಉದ್ದ ಮತ್ತು 300 ಕೆಜಿ ತೂಕದ ಇದು ಬೆಳ್ಳಿ ಬಣ್ಣದ ಉದ್ದನೆಯ ರಿಬ್ಬನ್‌ನಂತೆ ಕಾಣುತ್ತದೆ. ಮನುಷ್ಯರಿಗೆ ಅಪಾಯಕಾರಿಯಲ್ಲದಿದ್ದರೂ, ಸಣ್ಣ ಜೀವಿಗಳನ್ನು ತಿನ್ನುವ ಈ ಮೀನು ಆಳವಾದ ಸಮುದ್ರದಲ್ಲಿ ವಾಸಿಸುವುದರಿಂದ, ಇದನ್ನು ಮೇಲ್ಮೈಯಲ್ಲಿ ನೋಡುವುದು ಬಹಳ ಅಪರೂಪ.
ವಿನಾಶದ ಸಂಕೇತ ಎಂಬ ನಂಬಿಕೆಯ ಹಿಂದಿನ ಕಾರಣ?
ಜಪಾನ್ ಮತ್ತು ಇತರ ಏಷ್ಯಾದ ದೇಶಗಳ ಜಾನಪದ ಕಥೆಗಳಲ್ಲಿ ಓರ್ಫಿಶ್‌ಗೆ ವಿಶೇಷ ಸ್ಥಾನವಿದೆ. ಜಪಾನಿನಲ್ಲಿ ಇದನ್ನು ರ್ಯುಗು ನೋ ತ್ಸುಕೈ ಎಂದು ಕರೆಯಲಾಗುತ್ತದೆ, ಅಂದರೆ ‘ಸಮುದ್ರ ದೇವರ ಅರಮನೆಯ ಸಂದೇಶವಾಹಕ’ ಎಂದು. ಈ ಮೀನು ಭೂಮಿಯ ಕೆಳಗಿನ ಚಲನೆಯನ್ನು ಮುಂಚಿತವಾಗಿ ಗ್ರಹಿಸಿ, ಮೇಲ್ಮೈಗೆ ಬಂದು ಎಚ್ಚರಿಕೆ ನೀಡುತ್ತದೆ ಎಂಬ ನಂಬಿಕೆ ಇದೆ. 2011ರ ಜಪಾನ್‌ನ ಭೀಕರ ಸುನಾಮಿಗೆ ಮೊದಲು 20 ಓರ್ಫಿಶ್‌ಗಳು ಸತ್ತ ಸ್ಥಿತಿಯಲ್ಲಿ ಕಂಡುಬಂದಿದ್ದವು. ಆ ಸುನಾಮಿಯಲ್ಲಿ 20,000ಕ್ಕೂ ಹೆಚ್ಚು ಜನರು ಪ್ರಾಣ ಕಳೆದುಕೊಂಡಿದ್ದರು. ಈ ಘಟನೆಯಿಂದಾಗಿ, ಓರ್ಫಿಶ್‌ಗಳು ಕಾಣಿಸಿಕೊಂಡಾಗ ವಿಪತ್ತು ಸಂಭವಿಸುತ್ತದೆ ಎಂಬ ಭಯ ಜನರಲ್ಲಿ ಬೇರೂರಿದೆ.
ವಿಜ್ಞಾನಿಗಳು ಹೇಳೋದೇ ಬೇರೆ:
ಆದರೆ, ವಿಜ್ಞಾನಿಗಳು ಈ ನಂಬಿಕೆಯನ್ನು ಒಪ್ಪುವುದಿಲ್ಲ. ಓರ್ಫಿಶ್ ಮೇಲ್ಮೈಗೆ ಬರುವುದಕ್ಕೆ ಭೂಕಂಪ ಅಥವಾ ಸುನಾಮಿಗಿಂತ ಇತರ ಕಾರಣಗಳಿರಬಹುದು ಎಂದು ಅವರು ವಾದಿಸುತ್ತಾರೆ. ಉದಾಹರಣೆಗೆ, ಮೀನು ಅನಾರೋಗ್ಯಕ್ಕೆ ಒಳಗಾಗಿರಬಹುದು, ಗಾಯಗೊಂಡಿರಬಹುದು, ಅಥವಾ ಸಮುದ್ರದೊಳಗಿನ ಬಲವಾದ ಪ್ರವಾಹಗಳು ಇದನ್ನು ಮೇಲಕ್ಕೆ ತಂದಿರಬಹುದು. 2019ರಲ್ಲಿ ಪೆಸಿಫಿಕ್ ಮಹಾಸಾಗರದಲ್ಲಿ ನಡೆದ ಅಧ್ಯಯನವೊಂದು, ಓರ್ಫಿಶ್‌ನ ಗೋಚರ ಮತ್ತು ಭೂಕಂಪಗಳ ನಡುವೆ ಯಾವುದೇ ನೇರ ಸಂಬಂಧವಿಲ್ಲ ಎಂದು ಕಂಡುಹಿಡಿದಿದೆ.
ತಮಿಳುನಾಡಿನಲ್ಲಿ ಈ ಮೀನಿನ ಗೋಚರವು ಕುತೂಹಲ ಮತ್ತು ಭಯ ಎರಡನ್ನೂ ಹುಟ್ಟುಹಾಕಿದೆ. ಆದರೆ, ಇದು ಕೇವಲ ಸಮುದ್ರದ ನೈಸರ್ಗಿಕ ರಹಸ್ಯವೇ ಎಂಬುದನ್ನು ವಿಜ್ಞಾನಿಗಳು ಹೇಳಿದ್ದಾರೆ. ಈ ಘಟನೆಯಿಂದ ಸಮುದ್ರದ ಆಳದ ಜೀವಿಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿದರೂ, ಇದನ್ನು ವಿನಾಶದ ಸಂಕೇತವೆಂದು ಭಾವಿಸುವುದು ಕೇವಲ ಜಾನಪದ ನಂಬಿಕೆಯೇ ಎಂಬುದು ವಿಜ್ಞಾನಿಗಳ ವಾದವಾಗಿದೆ.
ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್ ಸಿಗುವ ಏಕೈಕ ತಾಣ ಏಷ್ಯಾನೆಟ್ ಸುವರ್ಣ ನ್ಯೂಸ್. ಹೊಸ ಗ್ಯಾಜೆಟ್ ರಿಲೀಸ್ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್ ಎಕ್ಸ್‌ಪ್ಲೇನರ್ಸ್ ಹಾಗೂ ಗ್ಯಾಜೆಟ್ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.