
ದಶಕಗಳಿಂದ ಭಾರತದ ವಿರುದ್ಧ ಸಂಚು ರೂಪಿಸುತ್ತಿದ್ದ ಚೀನಾ ಮತ್ತು ಪಾಕಿಸ್ತಾನಕ್ಕೆ 'ಪೃಥ್ವಿ' ಕ್ಷಿಪಣಿ ಬಲವಾದ ತಿರುಗೇಟು ನೀಡಿದೆ. 1983ರಲ್ಲಿ ಭಾರತದ ರಕ್ಷಣಾ ಕ್ಷೇತ್ರದಲ್ಲಿ ಸ್ವಾವಲಂಬನೆ ಸಾಧಿಸಲು 'ಇಂಟಿಗ್ರೇಟೆಡ್ ಗೈಡೆಡ್ ಕ್ಷಿಪಣಿ ಅಭಿವೃದ್ಧಿ ಕಾರ್ಯಕ್ರಮ' (IGMDP) ಆರಂಭವಾಯಿತು. ಆಗಿನ ಪ್ರಧಾನಿ ಇಂದಿರಾ ಗಾಂಧಿ ಅವರ ಸರ್ಕಾರದ ಅನುಮೋದನೆಯೊಂದಿಗೆ DRDO ಈ ಯೋಜನೆಯನ್ನು ಕೈಗೆತ್ತಿಕೊಂಡಿತು. ಈ ಯೋಜನೆಯಡಿ ಅಭಿವೃದ್ಧಿಪಡಿಸಲಾದ ಮೊದಲ ಬ್ಯಾಲಿಸ್ಟಿಕ್ ಕ್ಷಿಪಣಿಯೇ 'ಪೃಥ್ವಿ'. ಇದು ಭಾರತಕ್ಕೆ ರಕ್ಷಣಾ ವಲಯದಲ್ಲಿ ಹೊಸ ಭರವಸೆ ಮೂಡಿಸಿತು.
ಫೆಬ್ರವರಿ 25, 1988 ರಂದು ಶ್ರೀಹರಿಕೋಟಾದಿಂದ ಪೃಥ್ವಿ ಕ್ಷಿಪಣಿಯ ಮೊದಲ ಯಶಸ್ವಿ ಪರೀಕ್ಷೆ ನಡೆಯಿತು. ಆ ಸಮಯದಲ್ಲಿ ಬ್ಯಾಲಿಸ್ಟಿಕ್ ಕ್ಷಿಪಣಿ ತಂತ್ರಜ್ಞಾನವು ಪ್ರಪಂಚದ ಕೆಲವೇ ಬಲಶಾಲಿ ದೇಶಗಳ ಬಳಿ ಮಾತ್ರ ಇತ್ತು. ಭಾರತ ತನ್ನದೇ ತಂತ್ರಜ್ಞಾನ ಬಳಸಿ ಇದನ್ನು ಯಶಸ್ವಿಯಾಗಿ ಪರೀಕ್ಷಿಸಿದಾಗ ಚೀನಾ, ಪಾಕಿಸ್ತಾನ ಸೇರಿದಂತೆ ಇಡೀ ಜಗತ್ತೇ ಆಶ್ಚರ್ಯಚಕಿತಗೊಂಡಿತು. ಈ ಪರೀಕ್ಷೆಯ ಮೂಲಕ ಭಾರತೀಯ ವಿಜ್ಞಾನಿಗಳು ಕ್ಷಿಪಣಿ ವಿನ್ಯಾಸ, ಇಂಧನ ಹಾಗೂ ಮಾರ್ಗದರ್ಶನ ವ್ಯವಸ್ಥೆಯ ಬಗ್ಗೆ ಆಳವಾದ ಜ್ಞಾನ ಪಡೆದರು.
ಪೃಥ್ವಿ ಕ್ಷಿಪಣಿಯನ್ನು ಸೇನೆಯ ಮೂರು ಪಡೆಗಳ ಅಗತ್ಯಕ್ಕೆ ತಕ್ಕಂತೆ ವಿಭಿನ್ನ ಆವೃತ್ತಿಗಳಲ್ಲಿ ವಿನ್ಯಾಸಗೊಳಿಸಲಾಯಿತು:
ಪೃಥ್ವಿ-1 (ಭಾರತೀಯ ಸೇನೆ); 1994ರಲ್ಲಿ ಸೇನೆಗೆ ಸೇರ್ಪಡೆಯಾದ ಇದು 150 ಕಿ.ಮೀ ವ್ಯಾಪ್ತಿ ಹೊಂದಿದ್ದು, 1,000 ಕೆಜಿ ತೂಕದ ಶಸ್ತ್ರಾಸ್ತ್ರ ಹೊರಬಲ್ಲ ಸಾಮರ್ಥ್ಯ ಹೊಂದಿತ್ತು.
ಪೃಥ್ವಿ-2 (ಭಾರತೀಯ ವಾಯುಪಡೆ); ವಾಯುಪಡೆಗಾಗಿ ಇದನ್ನು ಅಭಿವೃದ್ಧಿಪಡಿಸಲಾಯಿತು. 1996ರಲ್ಲಿ ಯಶಸ್ವಿಯಾಗಿ ಪರೀಕ್ಷಿಸಲ್ಪಟ್ಟ ಈ ಕ್ಷಿಪಣಿಯ ವ್ಯಾಪ್ತಿ 250 ರಿಂದ 350 ಕಿ.ಮೀ ಹಾಗೂ 500 ರಿಂದ 1,000 ಕೆಜಿ ಪೇಲೋಡ್ ಹೊರುವ ಸಾಮರ್ಥ್ಯ ಹೊಂದಿದೆ.
ಆರಂಭದಲ್ಲಿ ಪೃಥ್ವಿ ಕ್ಷಿಪಣಿಗೆ ದ್ರವ ಇಂಧನ (Liquid Fuel) ಬಳಸಲಾಗುತ್ತಿತ್ತು. ಆದರೆ ದ್ರವ ಇಂಧನವನ್ನು ಹೆಚ್ಚು ಕಾಲ ಸಂಗ್ರಹಿಸಿಡುವುದು ಮತ್ತು ಉಡಾವಣೆಗೆ ಮುನ್ನ ಇಂಧನ ತುಂಬುವುದು ದೀರ್ಘ ಹಾಗೂ ಸವಾಲಿನ ಕೆಲಸವಾಗಿತ್ತು. ಈ ಸವಾಲನ್ನು ಮೆಟ್ಟಿ ನಿಲ್ಲಲು ನಂತರದ ದಿನಗಳಲ್ಲಿ ಅಗ್ನಿ ಕ್ಷಿಪಣಿಗಳಿಗಾಗಿ ಘನ ಇಂಧನ ತಂತ್ರಜ್ಞಾನವನ್ನು ಹುಡುಕಲಾಯಿತು.
ಪೃಥ್ವಿಯ ಮತ್ತೊಂದು ಪ್ರಮುಖ ವೈಶಿಷ್ಟ್ಯವೆಂದರೆ ಇದರ ಜಡತ್ವ ಸಂಚರಣೆ ವ್ಯವಸ್ಥೆ (INS) ಹಾಗೂ ಸುಧಾರಿತ ಮಾರ್ಗದರ್ಶನ ತಂತ್ರಜ್ಞಾನ. ಇದು ಶತ್ರುಗಳ ಯಾವುದೇ ವಾಯು ರಕ್ಷಣಾ ವ್ಯವಸ್ಥೆಯನ್ನು ಭೇದಿಸಿ, ನಿಖರವಾಗಿ ಗುರಿ ತಲುಪುವ ಸಾಮರ್ಥ್ಯ ಹೊಂದಿದೆ. ಜೊತೆಗೆ, 'ಟ್ರಾನ್ಸ್‌ಪೋರ್ಟರ್-ಎರೆಕ್ಟರ್-ಲಾಂಚರ್' (TEL) ಎಂಬ ಮೊಬೈಲ್ ಲಾಂಚರ್ ಬಳಸಿ ಈ ಕ್ಷಿಪಣಿಯನ್ನು ರಸ್ತೆ ಮಾರ್ಗದ ಮೂಲಕ ಎಲ್ಲಿಗೆ ಬೇಕಾದರೂ ಕೊಂಡೊಯ್ಯಬಹುದು. ಇದು ಶತ್ರುಗಳ ಕಣ್ಣಿಗೆ ಬೀಳದಂತೆ ಕಾರ್ಯನಿರ್ವಹಿಸಲು ನೆರವಾಗುತ್ತದೆ.
ಪೃಥ್ವಿ ಕ್ಷಿಪಣಿಯ ಯಶಸ್ಸು ಭಾರತಕ್ಕೆ ಮುಂದಿನ ದಿನಗಳಲ್ಲಿ ಅಗ್ನಿ, ಆಕಾಶ್, ತ್ರಿಶೂಲ್, ನಾಗ್ ಮತ್ತು ಬ್ರಹ್ಮೋಸ್‌ನಂತಹ ಅತ್ಯಂತ ಮಾರಕ ಹಾಗೂ ಅತ್ಯಾಧುನಿಕ ಕ್ಷಿಪಣಿಗಳನ್ನು ಅಭಿವೃದ್ಧಿಪಡಿಸಲು ದಾರಿದೀಪವಾಯಿತು. ಇಂದು ಪೃಥ್ವಿಯ ಕೆಲವು ಆರಂಭಿಕ ಆವೃತ್ತಿಗಳು ಸೇವೆಯಿಂದ ನಿವೃತ್ತಿಯಾಗಿದ್ದರೂ, ಭಾರತವನ್ನು ಕ್ಷಿಪಣಿ ಕ್ಷೇತ್ರದಲ್ಲಿ 'ಸೂಪರ್ ಪವರ್' ಮಾಡಿದ ಕೀರ್ತಿ ಪೃಥ್ವಿಗೆ ಸಲ್ಲುತ್ತದೆ.
ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್ ಸಿಗುವ ಏಕೈಕ ತಾಣ ಏಷ್ಯಾನೆಟ್ ಸುವರ್ಣ ನ್ಯೂಸ್. ಹೊಸ ಗ್ಯಾಜೆಟ್ ರಿಲೀಸ್ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್ ಎಕ್ಸ್‌ಪ್ಲೇನರ್ಸ್ ಹಾಗೂ ಗ್ಯಾಜೆಟ್ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.