
ಗಿರೀಶ್ ಲಿಂಗಣ್ಣ, (ಲೇಖಕರು ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕ)
2023ರ ಆಗಸ್ಟ್ 23ರಂದು ಭಾರತದ ಮಹತ್ವಾಕಾಂಕ್ಷಿ ಚಂದ್ರಯಾನ - 3 ಯೋಜನೆ ಚಂದ್ರನ ದಕ್ಷಿಣ ಧ್ರುವ ಪ್ರದೇಶದಲ್ಲಿ ಇಳಿದುದನ್ನು ಸ್ಮರಿಸುವ ಸಲುವಾಗಿ ಪ್ರತಿ ವರ್ಷವೂ ಆ ದಿನದಂದು ರಾಷ್ಟ್ರೀಯ ಬಾಹ್ಯಾಕಾಶ ದಿನಾಚರಣೆಯನ್ನು (ನ್ಯಾಷನಲ್ ಸ್ಪೇಸ್ ಡೇ) ಆಚರಿಸಲಾಗುತ್ತದೆ. ಈ ಐತಿಹಾಸಿಕ ಸಾಧನೆ ಚಂದ್ರನ ದಕ್ಷಿಣ ಧ್ರುವ ಪ್ರದೇಶದಲ್ಲಿ ಇಳಿದ ಮೊದಲ ರಾಷ್ಟ್ರ ಎಂಬ ಕೀರ್ತಿಗೆ ಭಾರತ ಪಾತ್ರವಾಗುವಂತೆ ಮಾಡಿತು. ಈ ದಿನ ನಮ್ಮ ಬಾಹ್ಯಾಕಾಶ ಅನ್ವೇಷಣಾ ಸಾಧನೆಗಳು ಸಾಗಿ ಬಂದ ಹಾದಿಯನ್ನು ಸ್ಮರಿಸಲು ಸೂಕ್ತವಾದ ದಿನವಾಗಿದೆ. ಹಾಗೆಂದು ರಾಷ್ಟ್ರೀಯ ಬಾಹ್ಯಾಕಾಶ ದಿನಾಚರಣೆ ಕೇವಲ ಚಂದ್ರಯಾನ - 3 ಯೋಜನೆಯ ಯಶಸ್ಸಿನ ಸಂಭ್ರಮಾಚರಣೆಗೆ ಮಾತ್ರವೇ ಸೀಮಿತವಾಗಿಲ್ಲ. ಬದಲಿಗೆ, ಆಗಷ್ಟೇ ಸ್ವಾತಂತ್ರ್ಯ ಪಡೆದ, ಅತ್ಯಂತ ಕನಿಷ್ಠ ಪ್ರಮಾಣದ ಸಂಪನ್ಮೂಲಗಳನ್ನು ಹೊಂದಿದ್ದ ಭಾರತ ಹೇಗೆ ಬಾಹ್ಯಾಕಾಶ ಕ್ಷೇತ್ರದಲ್ಲಿ ಜಾಗತಿಕ ಗೌರವ ಸಂಪಾದಿಸುವಂತೆ ಬೆಳೆದು ನಿಂತಿತು ಎನ್ನುವುದನ್ನೂ ಸಂಭ್ರಮಿಸುವ ದಿನವಾಗಿದೆ.
ಭಾರತದ ಬಾಹ್ಯಾಕಾಶ ಕಾರ್ಯಕ್ರಮಗಳ ಬೇರು 1962ರಲ್ಲಿ ಆರಂಭಗೊಂಡಿತು. ಆಗ ಭಾರತದ ಸರ್ವಶ್ರೇಷ್ಠ ವಿಜ್ಞಾನಿಗಳಲ್ಲಿ ಒಬ್ಬರಾದ ವಿಕ್ರಮ್ ಸಾರಾಭಾಯಿ ಅವರ ನೇತೃತ್ವದಲ್ಲಿ ಇಂಡಿಯನ್ ನ್ಯಾಷನಲ್ ಕಮಿಟಿ ಫಾರ್ ಸ್ಪೇಸ್ ರಿಸರ್ಚ್ (INCOSPAR) ಸ್ಥಾಪನೆಗೊಂಡಿತು. ಭಾರತದ ಬಾಹ್ಯಾಕಾಶ ಮಹತ್ವಾಕಾಂಕ್ಷೆಗೆ ಪೂರಕವಾದ ಉಡಾವಣಾ ಸ್ಥಳವಾಗಿ ವಿಕ್ರಮ್ ಸಾರಾಭಾಯಿ ಕೇರಳದ ತುಂಬಾ ಎಂಬ ಸಣ್ಣ ಮೀನುಗಾರಿಕಾ ಗ್ರಾಮವನ್ನು ಆರಿಸಿಕೊಂಡರು. ಆ ಬಳಿಕ ನಡೆದ ಅಭಿವೃದ್ಧಿ, ಬೆಳವಣಿಗೆ, ಇಂದು ದಂತಕಥೆಯ ರೂಪದಲ್ಲಿ ನಮ್ಮೆದುರು ನಿಂತಿದೆ. 1963ರ ನವೆಂಬರ್ 21ರಂದು, ಭಾರತೀಯ ವಿಜ್ಞಾನಿಗಳು ರಾಕೆಟ್ ಬಿಡಿಭಾಗಗಳನ್ನು ಸೈಕಲ್ ಮೇಲೆ ಉಡಾವಣಾ ಸ್ಥಳಕ್ಕೆ ಒಯ್ಯುತ್ತಿದ್ದರು. ಆ ಸಮಯದಲ್ಲಿ ಒಂದು ಸ್ಥಳೀಯ ಚರ್ಚ್ ಅನ್ನು ಪ್ರಯೋಗಾಲಯವಾಗಿಯೂ, ಪಾದ್ರಿಯ ಮನೆಯನ್ನು ತಮ್ಮ ಯೋಜನಾ ಕೇಂದ್ರವಾಗಿಯೂ ವಿಜ್ಞಾನಿಗಳು ಬಳಸುತ್ತಿದ್ದರು. ಆ ಸಂಜೆ, ಭಾರತದ ಮೊತ್ತಮೊದಲ ರಾಕೆಟ್ ಆದ ನೈಕ್ - ಅಪಾಚೆ ಆಗಸಕ್ಕೆ ಹಾರಿ, ತನ್ನ ಆವಿಯ ಕಣಗಳಿಂದ ಆಗಸಕ್ಕೆ ಕಿತ್ತಳೆ ಬಣ್ಣ ಎರಚಿತ್ತು. ಈ ರಾಕೆಟ್ ಅಮೆರಿಕಾ ನಿರ್ಮಾಣದ್ದಾಗಿ, ಫ್ರೆಂಚ್ ಪೇಲೋಡನ್ನು ಒಳಗೊಂಡಿದ್ದರೂ, ಭಾರತದ ಬಾಹ್ಯಾಕಾಶ ಯಾತ್ರೆಯ ಆರಂಭಕ್ಕೆ ನಾಂದಿ ಹಾಡಿತ್ತು.
1969ರಲ್ಲಿ, ಸ್ವಾತಂತ್ರ್ಯ ದಿನಾಚರಣೆಯಂದು, ಇಂಡಿಯನ್ ನ್ಯಾಷನಲ್ ಕಮಿಟಿ ಫಾರ್ ಸ್ಪೇಸ್ ರಿಸರ್ಚ್ (ಇನ್ಕೋಸ್ಪಾರ್) ಅನ್ನು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಆಗಿ ಮರು ರೂಪಿಸಲಾಯಿತು. ಇಸ್ರೋ ವಿಸ್ತೃತ ವಿನ್ಯಾಸ ಮತ್ತು ಸ್ಪಷ್ಟತೆಯೊಡನೆ ಭಾರತದ ಬಾಹ್ಯಾಕಾಶ ಸಾಮರ್ಥ್ಯದ ಗಡಿಗಳನ್ನು ವಿಸ್ತರಿಸತೊಡಗಿತು. 1975ರಲ್ಲಿ ಇಸ್ರೋ ಭಾರತದ ಪ್ರಾಚೀನ, ಪ್ರಸಿದ್ಧ ಗಣಿತಶಾಸ್ತ್ರಜ್ಞ ಮತ್ತು ಖಗೋಳಶಾಸ್ತ್ರಜ್ಞ ಆರ್ಯಭಟನ ಹೆಸರಿನಲ್ಲಿ ಭಾರತದ ಮೊದಲ ಉಪಗ್ರಹವನ್ನು ಉಡಾವಣೆಗೊಳಿಸಿತು. ಇದು ಭಾರತದ ಬಾಹ್ಯಾಕಾಶ ಹಾದಿಯಲ್ಲಿ ಪ್ರಮುಖ ಮೈಲಿಗಲ್ಲಾಗಿತ್ತು. ಉಪಗ್ರಹವನ್ನು ಸೋವಿಯತ್ ರಾಕೆಟ್ ಮೂಲಕ ಉಡಾವಣೆಗೊಳಿಸಿದ್ದರೂ, ಆರ್ಯಭಟ ಉಪಗ್ರಹದ ಸಂಪೂರ್ಣ ವಿನ್ಯಾಸ ಮತ್ತು ನಿರ್ಮಾಣವನ್ನು ಇಸ್ರೋ ತಾನೇ ನಡೆಸಿತ್ತು. ಈ ಮೂಲಕ ಭಾರತ ತಾನು ಕನಿಷ್ಠ ಸಂಪನ್ಮೂಲಗಳನ್ನು ಹೊಂದಿದ್ದರೂ, ಅತ್ಯಾಧುನಿಕ ಬಾಹ್ಯಾಕಾಶ ತಂತ್ರಜ್ಞಾನಗಳನ್ನು ನಿರ್ಮಿಸಬಲ್ಲೆ ಎಂದು ಸಾಬೀತುಪಡಿಸಿತ್ತು.
1980ರ ದಶಕ ಭಾರತದ ಬಾಹ್ಯಾಕಾಶ ಕ್ಷೇತ್ರದಲ್ಲಿ ಹೊಸ ಇತಿಹಾಸ ನಿರ್ಮಾಣಕ್ಕೆ ಸಾಕ್ಷಿಯಾಯಿತು. 1984ರಲ್ಲಿ ರಾಕೇಶ್ ಶರ್ಮಾ ಬಾಹ್ಯಾಕಾಶಕ್ಕೆ ತೆರಳಿದ ಪ್ರಥಮ ಭಾರತೀಯ ಎಂಬ ಕೀರ್ತಿಗೆ ಪಾತ್ರರಾದರು. ಇದಕ್ಕೂ ಮುನ್ನ ರಾಕೇಶ್ ಶರ್ಮಾ ಕಠಿಣ ತರಬೇತಿಗೆ ಒಳಗಾಗಿದ್ದರು. ಈ ತರಬೇತಿಯಲ್ಲಿ ಕೇವಲ ಮೂರು ತಿಂಗಳ ಒಳಗಾಗಿ ರಷ್ಯನ್ ಭಾಷೆ ಕಲಿಯುವುದು, ಕೃತಕ ಹಾರಾಟದಲ್ಲಿ 74 ಗಂಟೆ ಉಳಿಯುವುದು, ಮತ್ತು ಒಲಿಂಪಿಕ್ ತರಬೇತಿದಾರರ ಪರೀಕ್ಷೆಗಳಲ್ಲಿ ಉತ್ತೀರ್ಣಾರಾಗುವುದೂ ಸೇರಿತ್ತು. ಇದಾದ ಬಳಿಕ, ಸೋವಿಯತ್ ಒಕ್ಕೂಟದ ಜೊತೆಗಿನ ಜಂಟಿ ಯೋಜನೆಯ ಭಾಗವಾಗಿ, ರಾಕೇಶ್ ಶರ್ಮಾ ಬಾಹ್ಯಾಕಾಶದಲ್ಲಿ ಏಳು ದಿನಗಳ ಕಾಲ ವಾಸಿಸಿದರು. ಬಾಹ್ಯಾಕಾಶದಿಂದ ನೋಡುವಾಗ ಭಾರತ ಹೇಗೆ ಕಾಣಿಸಿತು ಎಂಬ ಪ್ರಶ್ನೆಗೆ ರಾಕೇಶ್ ಶರ್ಮಾ "ಸಾರೇ ಜಹಾಂಸೆ ಅಚ್ಚಾ" ಎಂದು ಉತ್ತರಿಸಿದ್ದು ಸಮಸ್ತ ಭಾರತೀಯರಿಗೂ ಹೆಮ್ಮೆಯ ಕ್ಷಣವಾಗಿತ್ತು. ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ಪ್ರಸಿದ್ಧವಾಗಿದ್ದ ಗೀತೆಯ ಈ ಸಾಲುಗಳು, ಭಾರತದ ಉತ್ಕರ್ಷವನ್ನು ಇನ್ನು ಯಾರಿಂದಲೂ ತಡೆಯಲು ಸಾಧ್ಯವಿಲ್ಲ ಎಂಬ ಸಂದೇಶವನ್ನು ಜಗತ್ತಿಗೆ ರವಾನಿಸಿತ್ತು.
ನಂತರದ ದಶಕಗಳಲ್ಲಿ, ಇಸ್ರೋ ಸಮರ್ಥ ರಾಕೆಟ್‌ಗಳ ನಿರ್ಮಾಣ ನಡೆಸಲಾರಂಭಿಸಿತು. ಇಸ್ರೋ ಮೊದಲಿಗೆ ಪಿಎಸ್ಎಲ್‌ವಿ (ಪೋಲಾರ್ ಸ್ಯಾಟಲೈಟ್ ಲಾಂಚ್ ವೆಹಿಕಲ್) ಮತ್ತು ಬಳಿಕ ಜಿಎಸ್ಎಲ್‌ವಿ (ಜಿಯೋಸಿಂಕ್ರೊನಸ್ ಸ್ಯಾಟಲೈಟ್ ಲಾಂಚ್ ವೆಹಿಕಲ್) ಅಭಿವೃದ್ಧಿ ಪಡಿಸಿತು. ಆದರೆ, ಆಧುನಿಕ ರಾಕೆಟ್‌ಗಳನ್ನು ನಿರ್ಮಿಸಲು ಕ್ರಯೋಜನಿಕ್ ಇಂಜಿನ್ ತಂತ್ರಜ್ಞಾನದ ಅವಶ್ಯಕತೆ ಇತ್ತು. ಕ್ರಯೋಜನಿಕ್ ಇಂಜಿನ್ ಹೆಚ್ಚಿನ ಥ್ರಸ್ಟ್ ಮತ್ತು ದಕ್ಷತೆ ಒದಗಿಸುವ ಸಲುವಾಗಿ ದ್ರವ ಜಲಜನಕ ಮತ್ತು ದ್ರವ ಆಮ್ಲಜನಕಗಳನ್ನು ಬಳಸುತ್ತದೆ. ಭಾರತ ಈ ತಂತ್ರಜ್ಞಾನವನ್ನು ಜಪಾನ್, ಯುರೋಪ್ ಮತ್ತು ರಷ್ಯಾಗಳಿಂದ ಪಡೆಯಲು ಪ್ರಯತ್ನಿಸಿದಾಗ ಹಲವು ಅಡೆತಡೆಗಳು ತಲೆದೋರಿ, ಅದನ್ನು ಭಾರತ ಮಿಲಿಟರಿ ಬಳಕೆ ಮಾಡಬಹುದು ಎಂದು ಶಂಕಿಸಿ ಅಮೆರಿಕಾ ನಿರ್ಬಂಧಗಳನ್ನು ಹೇರಿತು. ಆದರೆ, ಭಾರತ ದಿಟ್ಟ ಹೆಜ್ಜೆಗಳನ್ನಿಟ್ಟು, 2000ನೇ ದಶಕದ ಆರಂಭದಲ್ಲಿ ತನ್ನದೇ ಆದ ಸ್ವಂತ ಕ್ರಯೋಜನಿಕ್ ಇಂಜಿನ್ ಅಭಿವೃದ್ಧಿ ಪಡಿಸಿತು. ಆ ಮೂಲಕ ಬಾಹ್ಯಾಕಾಶ ತಂತ್ರಜ್ಞಾನದಲ್ಲಿ ಸ್ವಾವಲಂಬನೆ ಸಾಧಿಸುವುದು ತನ್ನ ಗುರಿ ಎಂದು ಭಾರತ ಸ್ಪಷ್ಟಪಡಿಸಿತು.
ಟೀಕಾಕಾರರು, ಅದರಲ್ಲೂ ವಿಶೇಷವಾಗಿ ಪಾಶ್ಚಾತ್ಯ ದೇಶಗಳು ಭಾರತದ ಬಾಹ್ಯಾಕಾಶ ಮಹತ್ವಾಕಾಂಕ್ಷೆಗಳನ್ನು ಟೀಕಿಸುತ್ತಲೇ ಬಂದಿದ್ದರು. ಅಪಾರ ಪ್ರಮಾಣದಲ್ಲಿ ಬಡತನ ಹೊಂದಿರುವ ಭಾರತದಂತಹ ದೇಶ ನಕ್ಷತ್ರಗಳನ್ನು ತಲುಪುವ ಕನಸು ಕಾಣಬಾರದು ಎನ್ನುವುದು ಆ ದೇಶಗಳ ಅಭಿಪ್ರಾಯವಾಗಿತ್ತು. ಭಾರತೀಯ ವಿಜ್ಞಾನಿಗಳು ವಾದದ ಮೂಲಕ ಉತ್ತರಿಸುವ ಬದಲು, ಒಂದಾದ ನಂತರ ಒಂದರಂತೆ ಸಾಲು ಸಾಲು ಸಾಧನೆಗಳ ಮೂಲಕವೇ ಉತ್ತರಿಸಿದರು. 2008ರಲ್ಲಿ ಭಾರತದ ಮೊದಲ ಚಂದ್ರ ಅನ್ವೇಷಣಾ ಯೋಜನೆಯಾದ ಚಂದ್ರಯಾನ - 1 ಕೇವಲ ಚಂದ್ರನ ಮೇಲ್ಮೈ ಪರಿಭ್ರಮಣೆ ನಡೆಸಲು ಯಶಸ್ವಿಯಾಗಿದ್ದು ಮಾತ್ರವಲ್ಲ, ಬದಲಿಗೆ, ಚಂದ್ರನ ಅಂಗಳದಲ್ಲಿ ನೀರಿನ ಇರುವಿಕೆಯನ್ನೂ ಪತ್ತೆಹಚ್ಚಿತು. ಆ ಮೂಲಕ, ಜಗತ್ತಿನಾದ್ಯಂತ ವಿಜ್ಞಾನಿಗಳ ಕುತೂಹಲ ಕೆರಳಿಸಿತು. ಇದಾದ ಬಳಿಕ, ಇನ್ನಷ್ಟು ಮಹತ್ವಾಕಾಂಕ್ಷೆಯ ಮಾರ್ಸ್ ಆರ್ಬಿಟರ್ ಮಿಷನ್ ಅಥವಾ ಮಂಗಳಯಾನ 2013ರಲ್ಲಿ ಉಡಾವಣೆಗೊಂಡಿತು.
ಮಂಗಳಯಾನ ಯೋಜನೆಯ ಯಶಸ್ಸಿನ ಮೂಲಕ ಭಾರತ ಮಂಗಳ ಗ್ರಹವನ್ನು ತಲುಪಿದ ಏಷ್ಯಾದ ಮೊದಲ ರಾಷ್ಟ್ರ ಮತ್ತು ಜಗತ್ತಿನ ನಾಲ್ಕನೇ ರಾಷ್ಟೃ ಎಂಬ ಕೀರ್ತಿ ಸಂಪಾದಿಸಿತು. ಭಾರತ ಮೊದಲ ಪ್ರಯತ್ನದಲ್ಲೇ ಈ ಸಾಧನೆ ಮಾಡಿದ್ದು, ಅಲ್ಲಿಯ ತನಕ ಯಾವ ದೇಶವೂ ಮೊದಲ ಪ್ರಯತ್ನದಲ್ಲೇ ಮಂಗಳ ಗ್ರಹವನ್ನು ತಲುಪಿರಲಿಲ್ಲ. ಈ ಯಶಸ್ಸನ್ನು ಇನ್ನಷ್ಟು ಮಹತ್ವದ್ದಾಗಿಸಿದ ವಿಚಾರವೆಂದರೆ, ಭಾರತ ಮಂಗಳಯಾನ ಯೋಜನೆಯನ್ನು ಕೇವಲ 74 ಮಿಲಿಯನ್ ಡಾಲರ್ ಮೊತ್ತದಲ್ಲಿ ಪೂರೈಸಿತ್ತು. ಇದು ಜಗತ್ತಿನಲ್ಲೇ ಅತ್ಯಂತ ಕಡಿಮೆ ವೆಚ್ಚದಲ್ಲಿ ನಡೆಸಿದ ಅಂತರ ಗ್ರಹ ಅನ್ವೇಷಣಾ ಯೋಜನೆ ಎನಿಸಿಕೊಂಡಿತು. ಇನ್ನೂ ಸರಳವಾಗಿ ಹೇಳುವುದಾದರೆ, ಈ ಯೋಜನೆಯಲ್ಲಿ ಪ್ರತಿ ಕಿಲೋಮೀಟರ್ ಪ್ರಯಾಣಕ್ಕೆ ತಗಲಿದ ವೆಚ್ಚ, ಪ್ರತಿ ಕಿಲೋಮೀಟರ್ ಪ್ರಯಾಣಕ್ಕೆ ಬೆಂಗಳೂರಿನಂತಹ ನಗರದ ಆಟೋ ದರಕ್ಕಿಂತಲೂ ಕಡಿಮೆಯಾಗಿತ್ತು. ಎಷ್ಟೋ ವೈಜ್ಞಾನಿಕ ಚಲನಚಿತ್ರ ನಿರ್ಮಾಣಕ್ಕೂ ಇದಕ್ಕಿಂತ ಹೆಚ್ಚಿನ ಹಣ ವೆಚ್ಚ ಮಾಡಲಾಗಿದೆ! ಈ ಸಾಧನೆಗೆ ಜಗತ್ತು ಮೆಚ್ಚಿ, ಭಾರತವನ್ನು ಶ್ಲಾಘಿಸಬೇಕಿತ್ತು.
ಆದರೆ, ಒಂದಷ್ಟು ಪಾಶ್ಚಾತ್ಯ ದೇಶಗಳು ಭಾರತವನ್ನು ಟೀಕಿಸುವುದನ್ನೇ ಕಾಯಕವಾಗಿಸಿದವು. ನ್ಯೂಯಾರ್ಕ್ ಟೈಮ್ಸ್ ಪತ್ರಿಕೆ ಹಸುವಿನ ಜೊತೆ ಇರುವ ರೈತನೊಬ್ಬ 'ಪ್ರತಿಷ್ಠಿತ ಬಾಹ್ಯಾಕಾಶ ಕ್ಲಬ್'ಗೆ ಪ್ರವೇಶ ಕೋರುವ ವ್ಯಂಗ್ಯಚಿತ್ರವನ್ನು ಪ್ರಕಟಿಸಿತ್ತು. ಇದರ ಬೆನ್ನಲ್ಲೇ ಕಂಡುಬಂದ ಜಾಗತಿಕ ಆಕ್ರೋಶದ ಪರಿಣಾಮವಾಗಿ, ನ್ಯೂಯಾರ್ಕ್ ಟೈಮ್ಸ್ ಪತ್ರಿಕೆ ಕ್ಷಮೆ ಕೋರಬೇಕಾಯಿತು. ಇಷ್ಟೆಲ್ಲ ಆಗುತ್ತಿದ್ದರೂ, ಭಾರತ ಯಾವುದೇ ಋಣಾತ್ಮಕ ಅಂಶಗಳಿಗೆ ತಲೆ ಕೆಡಿಸಿಕೊಳ್ಳದೆ, ತನ್ನ ಗುರಿಗಳನ್ನು ಸಾಧಿಸುವತ್ತ ಗಮನ ಮುಂದುವರಿಸಿತ್ತು. ಇದರ ಬಳಿಕ 2019ರಲ್ಲಿ ನಡೆಸಿದ ಚಂದ್ರಯಾನ 2 ಯೋಜನೆ ಭಾರತಕ್ಕೆ ಅರ್ಧ ಯಶಸ್ಸು ನೀಡಿತು. ಆದರೆ 2023ರಲ್ಲಿ ಕೈಗೊಂಡ ಐತಿಹಾಸಿಕ ಚಂದ್ರಯಾನ 3 ಯೋಜನೆಯಲ್ಲಿ ಭಾರತ ಚಂದ್ರನ ದಕ್ಷಿಣ ಧ್ರುವ ಪ್ರದೇಶದಲ್ಲಿ ಸಾಫ್ಟ್ ಲ್ಯಾಂಡಿಂಗ್ ನಡೆಸಲು ಯಶಸ್ವಿಯಾಯಿತು.
ಈ ಐತಿಹಾಸಿಕ ಸಾಧನೆಯನ್ನು ಭಾರತ ಕೇವಲ 75 ಮಿಲಿಯನ್ ಡಾಲರ್ ವೆಚ್ಚದಲ್ಲಿ ಪೂರ್ಣಗೊಳಿಸಿತ್ತು. ಚಂದ್ರನ ದಕ್ಷಿಣ ಧ್ರುವದಲ್ಲಿ ಇಳಿದ ಮೊದಲ ರಾಷ್ಟ್ರ ಎಂಬ ಸಾಧನೆಯನ್ನು ಭಾರತ ನಿರ್ಮಿಸಿದ್ದು, ಇದರೊಂದಿಗೆ ಬಾಹ್ಯಾಕಾಶ ಅನ್ವೇಷಣೆಯ ಚರಿತ್ರೆಯಲ್ಲಿ ಶಾಶ್ವತ ಸ್ಥಾನ ಸಂಪಾದಿಸಿತು. ಅದೇ ವರ್ಷ, ಇಸ್ರೋ ಭಾರತದ ಮೊದಲ ಸೂರ್ಯ ಅನ್ವೇಷಣಾ ಯೋಜನೆಯಾದ ಆದಿತ್ಯ ಎಲ್ 1 ಅನ್ನು ಕೈಗೆತ್ತಿಕೊಂಡಿತು. ಇದಕ್ಕಾಗಿ ಬಾಹ್ಯಾಕಾಶ ನೌಕೆಯೊಂದನ್ನು ಸೂರ್ಯ ಮತ್ತು ಭೂಮಿಯ ಲ್ಯಾಗ್ರಾಂಜ್ ಬಿಂದುವಿನಲ್ಲಿ ಇರಿಸಿ, ಸೌರ ಮಾರುತಗಳು, ಸೌರ ಜ್ವಾಲೆಗಳು ಮತ್ತು ಕೊರೋನಲ್ ಮಾಸ್ ಇಜೆಕ್ಷನ್‌ಗಳನ್ನು ಗಮನಿಸಲು ಆರಂಭಿಸಿತು. ಇದು ಭೂಮಿಯ ಉಪಗ್ರಹಗಳು ಮತ್ತು ಸಂವಹನಾ ವ್ಯವಸ್ಥೆಗಳನ್ನು ಕಾಪಾಡಿಕೊಳ್ಳಲು ಅತ್ಯಂತ ಮುಖ್ಯವಾಗಿದೆ.
ರಾಕೇಶ್ ಶರ್ಮಾ ಬಾಹ್ಯಾಕಾಶಕ್ಕೆ ತೆರಳಿದ 41 ವರ್ಷಗಳ ಬಳಿಕ, 2025ರಲ್ಲಿ, ಶುಭಾಂಶು ಶುಕ್ಲಾ ಬಾಹ್ಯಾಕಾಶಕ್ಕೆ ತೆರಳಿದಾಗ ಭಾರತ ಇನ್ನೊಂದು ಬಾಹ್ಯಾಕಾಶ ಮೈಲಿಗಲ್ಲು ಸ್ಥಾಪಿಸಿತು. ಈ ಮೂಲಕ ಶುಭಾಂಶು ಶುಕ್ಲಾ ಬಾಹ್ಯಾಕಾಶಕ್ಕೆ ತೆರಳಿದ ಎರಡನೇ ಭಾರತೀಯ ಎನಿಸಿದರು. ನಾಸಾದ ಕೆನೆಡಿ ಬಾಹ್ಯಾಕಾಶ ಕೇಂದ್ರದಿಂದ ಉಡಾವಣೆಗೊಂಡ ಖಾಸಗಿ ಬಾಹ್ಯಾಕಾಶ ಯೋಜನೆಯಾದ ಆಕ್ಸಿಯಮ್ ಸ್ಪೇಸ್ ಮಿಷನ್ 4 ಮೂಲಕ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ತೆರಳಿದ ಶುಭಾಂಶು ಶುಕ್ಲಾ, ತನ್ನೊಡನೆ 140 ಕೋಟಿ ಭಾರತೀಯರ ನಿರೀಕ್ಷೆಗಳನ್ನೂ ಹೊತ್ತೊಯ್ದರು. ಸಮಸ್ತ ದೇಶ ಶುಕ್ಲಾ ಸಾಧನೆಯನ್ನು ವೀಕ್ಷಿಸಿ, ಸಂಭ್ರಮಿಸಿತು.
ಇಂದು ಭಾರತದ ಬಾಹ್ಯಾಕಾಶ ಉದ್ಯಮ 8.4 ಬಿಲಿಯನ್ ಡಾಲರ್ ಮೌಲ್ಯ ಹೊಂದಿದ್ದು, ಜಾಗತಿಕ ಬಾಹ್ಯಾಕಾಶ ಮಾರುಕಟ್ಟೆಯಲ್ಲಿ ಅಂದಾಜು 2% ಪಾಲು ಹೊಂದಿದೆ. ಭಾರತ 2033ರ ವೇಳೆಗೆ ತನ್ನ ಬಾಹ್ಯಾಕಾಶ ಆರ್ಥಿಕತೆಯನ್ನು 44 ಬಿಲಿಯನ್ ಡಾಲರ್‌ಗೆ ವೃದ್ಧಿಸಿ, ಜಾಗತಿಕ ಮಾರುಕಟ್ಟೆಯಲ್ಲಿ 8% ಪಾಲು ಹೊಂದುವ ನಿಟ್ಟಿನಲ್ಲಿ ಸರಿಯಾದ ದಿಕ್ಕಿನಲ್ಲಿ ಹೆಜ್ಜೆ ಇಡುತ್ತಿದೆ. ಈ ಸಮಗ್ರ ಬದಲಾವಣೆಗೆ ಸರ್ಕಾರದ ಉತ್ತಮ ಬೆಂಬಲ, ಕ್ಷಿಪ್ರ ತಾಂತ್ರಿಕ ನಾವೀನ್ಯತೆ, ಇಸ್ರೋದ ಸಂಶೋಧನಾ ಆಧಾರಿತ ವಿಧಾನ, ಮತ್ತು ಖಾಸಗಿ ಸಂಸ್ಥೆಗಳ ಹೆಚ್ಚಿನ ಪಾಲ್ಗೊಳ್ಳುವಿಕೆಗಳು ಕಾರಣವಾಗಿದ್ದವು. ಐದು ವರ್ಷಗಳ ಹಿಂದೆ ಭಾರತದಲ್ಲಿ 50ಕ್ಕೂ ಕಡಿಮೆ ಬಾಹ್ಯಾಕಾಶ ಸ್ಟಾರ್ಟಪ್ ಸಂಸ್ಥೆಗಳಿದ್ದು, ಈಗ ಅವುಗಳ ಸಂಖ್ಯೆ 200ನ್ನೂ ಮೀರಿದೆ. ಇದು ಭಾರತೀಯ ಬಾಹ್ಯಾಕಾಶ ವಲಯದ ಪ್ರಗತಿಯ ಪ್ರತಿನಿಧಿಯಾಗಿದೆ.
ಮುಂದಿನ ದಿನಗಳಲ್ಲಿ ಬಾಹ್ಯಾಕಾಶ ಗಡಿಗಳನ್ನು ವಿಸ್ತರಿಸುವಂತಹ ಮಹತ್ವಾಕಾಂಕ್ಷಿ ಯೋಜನೆಗಳನ್ನು ಭಾರತ ಹಾಕಿಕೊಂಡಿದೆ. ಮಾನವ ಸಹಿತ ಬಾಹ್ಯಾಕಾಶ ಯಾನವಾದ ಗಗನಯಾನ ಯೋಜನೆ 2027ರಲ್ಲಿ ನಡೆಯುವ ನಿರೀಕ್ಷೆಗಳಿದ್ದು, ಮೂವರು ಗಗನಯಾತ್ರಿಗಳನ್ನು ಬಾಹ್ಯಾಕಾಶಕ್ಕೆ ಒಯ್ಯಲಿದೆ. ಆ ಮೂಲಕ ಮಾನವ ಸಹಿತ ಬಾಹ್ಯಾಕಾಶ ಸಾಮರ್ಥ್ಯವುಳ್ಳ ದೇಶಗಳ ಸಾಲಿಗೆ ಭಾರತ ಹೆಜ್ಜೆ ಇಡಲಿದೆ. ಇನ್ನು 2035ರ ವೇಳೆಗೆ ಭಾರತ 'ಭಾರತೀಯ ಅಂತರಿಕ್ಷ ಸ್ಟೇಷನ್' ಎಂಬ ತನ್ನ ಸ್ವಂತ ಬಾಹ್ಯಾಕಾಶ ನಿಲ್ದಾಣವನ್ನು ಸ್ಥಾಪಿಸುವ ಗುರಿ ಹಾಕಿಕೊಂಡಿದ್ದು, 2040ರ ಸಮಯದಲ್ಲಿ ಚಂದ್ರನ ಅಂಗಳಕ್ಕೆ ಭಾರತೀಯ ಗಗನಯಾತ್ರಿಯನ್ನು ಕಳುಹಿಸಲು ಯೋಜಿಸಿದೆ. ಈ ಗುರಿಗಳು ಅತ್ಯಂತ ಮಹತ್ವಾಕಾಂಕ್ಷಿಯಾಗಿ ತೋರಿ, ಸಾಧಿಸಲು ಸಾಧ್ಯವೇ ಎಂಬ ಅನುಮಾನಗಳು ಕಾಣಬಹುದು. ಆದರೆ, ಬಹುತೇಕ ಅಸಾಧ್ಯ ಎಂದು ಭಾವಿಸಲಾದ ಯೋಜನೆಗಳನ್ನೂ ಭಾರತ ಕನಿಷ್ಠ ಸಂಪನ್ಮೂಲಗಳ ಲಭ್ಯತೆಯಲ್ಲೂ ಯಶಸ್ವಿಯಾಗಿ ಪೂರ್ಣಗೊಳಿಸಿದ ಇತಿಹಾಸ ನಮ್ಮ ಕಣ್ಣ ಮುಂದಿದೆ. ಆದ್ದರಿಂದ ಈ ಗುರಿಗಳೂ ಭಾರತದ ಕೈಯಳತೆಯಲ್ಲೇ ಇವೆ.
ಬೈಸಿಕಲ್ ಮೇಲೆ ರಾಕೆಟ್ ಬಿಡಿಭಾಗಗಳನ್ನು ಹೊತ್ತು ಸಾಗುತ್ತಿದ್ದ ದೇಶ ಇಂದು ಚಂದ್ರನ ಮೇಲೆ ಲ್ಯಾಂಡಿಂಗ್ ನಡೆಸಿರುವುದನ್ನು, ಮೀನುಗಾರಿಕಾ ಹಳ್ಳಿಯನ್ನು ಉಡಾವಣಾ ತಾಣವಾಗಿಸಿದ ಇಸ್ರೋ ಇಂದು ಮಂಗಳ ಗ್ರಹದಲ್ಲಿ ಇಳಿಯಲು ಯಶಸ್ವಿಯಾಗಿರುವುದನ್ನು ಸ್ಮರಿಸಲು, ಒಂದು ಕಾಲದಲ್ಲಿ ನಿರ್ಬಂಧಗಳನ್ನು ಎದುರಿಸಿದ ದೇಶ ಇಂದು ಎಲ್ಲ ದೇಶಗಳಿಗೂ ಬೇಕಾದ ಬಾಹ್ಯಾಕಾಶ ಸಹಯೋಗಿಯಾಗಿ ಬೆಳೆದಿರುವುದನ್ನು ನೆನೆಯಲು ರಾಷ್ಟ್ರೀಯ ಬಾಹ್ಯಾಕಾಶ ದಿನವನ್ನು ಆಚರಿಸಲಾಗುತ್ತಿದೆ. ಈ ದಿನ ಕೇವಲ ತಾಂತ್ರಿಕ ಸಾಧನೆಗಳನ್ನು ಸಂಭ್ರಮಿಸುವುದು ಮಾತ್ರವಲ್ಲದೆ, ಭಾರತದ ಬಾಹ್ಯಾಕಾಶ ಅನ್ವೇಷಣಾ ವಿಧಾನವನ್ನು ವಿವರಿಸುವ ನಾವೀನ್ಯತೆಗಳ ಪ್ರಯತ್ನ, ಸಮರ್ಥ ಇಂಜಿನಿಯರಿಂಗ್‌ಗಳನ್ನೂ ಗೌರವಿಸುತ್ತದೆ. ಬಾಹ್ಯಾಕಾಶ ಅನ್ವೇಷಣೆಗೆ ಮಿತಿಯಿಲ್ಲದ ಹಣಕಾಸಿನ ಪೂರೈಕೆಯ ಅವಶ್ಯಕತೆ ಇಲ್ಲ. ಯಾವುದೇ ರಾಷ್ಟ್ರ ತನ್ನೊಳಗೆ ಮಹತ್ವಾಕಾಂಕ್ಷೆ ಹೊಂದಿ, ಸಾಧಿಸುವ ಬಯಕೆ ಹೊಂದಿದ್ದರೆ, ಅದಕ್ಕೆ ಆಗಸವೂ ಮಿತಿಯಲ್ಲ ಎನ್ನುವುದನ್ನು ಭಾರತ ಸಾಬೀತುಪಡಿಸಿದೆ. ಭಾರತದ ಬಾಹ್ಯಾಕಾಶ ಗಾಥೆ ಮಿಲಿಯಾಂತರ ಜನರಿಗೆ ಸ್ಫೂರ್ತಿ ನೀಡಿದ್ದು, ಬದ್ಧತೆ, ವೈಜ್ಞಾನಿಕತೆ, ಮತ್ತು ದೃಢ ನಿರ್ಧಾರಗಳು ಎಂತಹ ಕನಸನ್ನೂ ನನಸಾಗಿಸಬಲ್ಲವು ಎಂದು ಜಗತ್ತಿಗೆ ಪ್ರದರ್ಶಿಸಿದೆ.
(ಗಿರೀಶ್ ಲಿಂಗಣ್ಣ ಅವರು ವಿಜ್ಞಾನ ಬರಹಗಾರ, ರಕ್ಷಣೆ, ಏರೋಸ್ಪೇಸ್, ಮತ್ತು ರಾಜಕೀಯ ವಿಶ್ಲೇಷಕರಾಗಿದ್ದು, ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಅವರು ಜರ್ಮನಿಯ ಎಡಿಡಿ ಇಂಜಿನಿಯರಿಂಗ್ ಜಿಎಂಬಿಎಚ್ ಸಂಸ್ಥೆಯ ಅಂಗಸಂಸ್ಥೆಯಾದ ಎಡಿಡಿ ಇಂಜಿನಿಯರಿಂಗ್ ಕಾಂಪೊನೆಂಟ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ನಿರ್ದೇಶಕರಾಗಿದ್ದಾರೆ. ಗಿರೀಶ್ ಲಿಂಗಣ್ಣ ಅವರನ್ನು ಸಂಪರ್ಕಿಸಲು ಇಮೇಲ್ ವಿಳಾಸ: girishlinganna@gmail.com)
ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್ ಸಿಗುವ ಏಕೈಕ ತಾಣ ಏಷ್ಯಾನೆಟ್ ಸುವರ್ಣ ನ್ಯೂಸ್. ಹೊಸ ಗ್ಯಾಜೆಟ್ ರಿಲೀಸ್ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್ ಎಕ್ಸ್‌ಪ್ಲೇನರ್ಸ್ ಹಾಗೂ ಗ್ಯಾಜೆಟ್ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.