ಮಂಗಳದಲ್ಲಿ ಆಕ್ಸಿಜನ್‌ ತಯಾರಿಸಿದ ನಾಸಾ!

By Kannadaprabha News  |  First Published Apr 23, 2021, 8:39 AM IST

ಇಂಗಾಲದ ಡೈಆಕ್ಸೈಡನ್ನು ಆಮ್ಲಜನಕವಾಗಿ ಪರಿವರ್ತಿಸುವಲ್ಲಿ ಅಮೆರಿಕದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ನಾಸಾ)ಯಶಸ್ವಿಯಾಗಿದೆ.ಮಂಗಳನಲ್ಲಿ ಈ ಪ್ರಯೋಗ ನಡೆದಿದೆ. ಮನುಕುಲದ ಇತಿಹಾಸದಲ್ಲೇ ಇದು ಮಹಾನ್‌ ಸಾಧನೆ ಎನ್ನಿಸಿಕೊಂಡಿದೆ. 


ಲಾಸ್‌ಏಂಜಲೀಸ್‌ (ಏ.23): ಮಂಗಳ ಗ್ರಹದ ವಾತಾವರಣದಲ್ಲಿನ ಇಂಗಾಲದ ಡೈಆಕ್ಸೈಡನ್ನು ಆಮ್ಲಜನಕವಾಗಿ ಪರಿವರ್ತಿಸುವಲ್ಲಿ ಅಮೆರಿಕದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ನಾಸಾ)ಯಶಸ್ವಿಯಾಗಿದೆ. ಮನುಕುಲದ ಇತಿಹಾಸದಲ್ಲೇ ಇದು ಮಹಾನ್‌ ಸಾಧನೆ ಎನ್ನಿಸಿಕೊಂಡಿದೆ. ಮಂಗಳನಲ್ಲಿ ಮಾನವ ಕೂಡ ಮುಂದೊಂದು ದಿನ ಇರಬಹುದು ಎಂಬ ಆಶಾಭಾವನೆಯನ್ನು ಪ್ರಯೋಗ ಹುಟ್ಟುಹಾಕಿದೆ.

ಮಂಗಳ ಗ್ರಹಕ್ಕೆ 6 ಗಾಲಿಯ ರೋವರ್‌ ಅನ್ನು ಕಳೆದ ಫೆಬ್ರವರಿಯಲ್ಲಿ ನಾಸಾ ಕಳಿಸಿತ್ತು. ಇದರಲ್ಲಿ ಕಳಿಸಲಾಗಿದ್ದ ಟೋಸ್ಟರ್‌ ಗಾತ್ರದ ‘ಮಾಕ್ಸಿ’ ಸಾಧನ ಬಳಸಿ ಮಂಗಳ ಗ್ರಹದಲ್ಲಿ ಇಂಗಾಲದಿಂದ ತುಂಬಿದ್ದ ವಾತಾವರಣದಿಂದ 5 ಗ್ರಾಂ ಆಮ್ಲಜನಕವನ್ನು ಪ್ರತ್ಯೇಕಿಸಿ ಹೊರತೆಗೆದಿದೆ. ಇದು ಮಂಗಳನ ಅಂಗಳಕ್ಕೆ ಸಂಶೋಧನೆಗೆಂದು ತೆರಳುವ ಗಗನಯಾನಿಯೊಬ್ಬನಿಗೆ 10 ನಿಮಿಷ ಕಾಲ ಉಸಿರಾಡಲು ಸಾಕಾಗುತ್ತದೆ.

Latest Videos

undefined

ಮಂಗಳನಿಂದ ಹಾರಿದ ನಾಸಾದ ಪುಟ್ಟ ಹೆಲಿಕಾಪ್ಟರ್! ...

‘ಮಾಕ್ಸಿ ಸಾಧನವು ಇನ್ನೊಂದು ವಿಶ್ವದಲ್ಲಿ ಆಮ್ಲಜನಕ ಉತ್ಪಾದಿಸುವ ಮೊದಲ ಉಪಕರಣ ಮಾತ್ರವಲ್ಲ, ಇದು ಇನ್ನೊಂದು ಗ್ರಹದಲ್ಲಿ ವಾಸಯೋಗ್ಯ ವಾತಾವರಣ ಸೃಷ್ಟಿಸುವ ಯತ್ನಗಳ ಮುಂದಿನ ಬಾಹ್ಯಾಕಾಶ ಯೋಜನೆಗಳಿಗೆ ನೆರವಾಗುವ ಮೊದಲ ತಂತ್ರಜ್ಞಾನ’ ಎಂದು ನಾಸಾ ವಿಜ್ಞಾನಿ ಟ್ರುಡಿ ಕೋರ್ಟಸ್‌ ಹೇಳಿದ್ದಾರೆ.

ಮಂಗಳನಲ್ಲಿ ಶೇ.95ರಷ್ಟುವ್ಯಾಪಿಸಿರುವ ಕಾರ್ಬನ್‌ ಡೈಆಕ್ಸೈಡ್‌ನಲ್ಲಿರುವ ಸಣ್ಣ ಕಣಗಳಲ್ಲಿನ ಆಮ್ಲಜನಕದ ಕಣಗಳನ್ನು ಇಲೆಕ್ಟ್ರೋಲಿಸಿಸ್‌ ವಿಧಾನ ಬಳಸಿ ಪ್ರತ್ಯೇಕಿಸಲಾಗಿದೆ. ಇಲೆಕ್ಟ್ರೋಲಿಸಿಸ್‌ ವಿಧಾನವು ಅತಿಯಾದ ಬಿಸಿಯನ್ನು ಹೊರಸೂಸಿ ಇಂಗಾಲದಲ್ಲಿನ ಆಮ್ಲಜನಕ ಕಣಗಳನ್ನು ಪ್ರತ್ಯೇಕಿಸುತ್ತದೆ. ಮಂಗಳ ಗ್ರಹದ ವಾತಾವರಣದ ಇತರ ಶೇ.5 ಭಾಗವು ನೈಟ್ರೋಜನ್‌ ಹಾಗೂ ಅರ್ಗೋನ್‌ ಅನ್ನು ಒಳಗೊಂಡಿದೆ. ಆಮ್ಲಜನಕ ಪ್ರಮಾಣ ತೀರಾ ನಗಣ್ಯ.

ಆದರೆ ಇದೇ ನಗಣ್ಯ ಪ್ರಮಾಣ ಕೂಡ ಮಂಗಳನಲ್ಲಿನ ಸಂಶೋಧನೆಗೆ ಅಗತ್ಯವಾಗಿದ್ದು, ಗಗನಯಾನಿಗಳಿಗೆ ಉಸಿರಾಡುವ ಮೂಲವಾಗಿದೆ. ಗಗನಯಾನಿಗಳಿಗೆ ಅಂತರಿಕ್ಷದಲ್ಲಿ 1 ವರ್ಷ ನೆಲೆಸಲು 1 ಟನ್‌ ಆಮ್ಲಜನಕ ಅಗತ್ಯ.

ಇಂಥದ್ದರಲ್ಲಿ ಮಾಕ್ಸಿ 1 ತಾಸಿಗೆ 10 ಗ್ರಾಂ ಆಮ್ಲಜನಕ ತಯಾರಿಸುವ ಶಕ್ತಿ ಹೊಂದಿದೆ. ಈ ಯಂತ್ರವನನ್ನು ಮುಂದಿನ 2 ವರ್ಷ ಮಂಗಳನ ವಿವಿಧ ವಾತಾವರಣದಲ್ಲಿ ಪ್ರಯೋಗಿಸುವ ಉದ್ದೇಶವನ್ನು ನಾಸಾ ಹೊಂದಿದೆ.

click me!