ತಾಂತ್ರಿಕ ದೋಷ ಮತ್ತು ನಾಸಾ ಪ್ರಮಾಣೀಕರಣದ ಸುಳಿಯಲ್ಲಿ ಬೋಯಿಂಗ್ ಸ್ಟಾರ್‌ಲೈನರ್: ಮರುಕಳಿಸಿದ ಕಲ್ಪನಾ ಚಾವ್ಲಾ ನೆನಪು

By Santosh Naik  |  First Published Jun 27, 2024, 3:21 PM IST

ಈಗ ನಾಸಾ ಮತ್ತು ಬೋಯಿಂಗ್ ಮುಖ್ಯ ಗಮನ ಸುನಿತಾ ವಿಲಿಯಮ್ಸ್ ಮತ್ತು ವಿಲ್ಮೋರ್ ಅವರನ್ನು ಸುರಕ್ಷಿತವಾಗಿ ಮರಳಿ ಭೂಮಿಗೆ ಕರೆತರುವುದಾಗಿದೆ. ಆದರೆ, ತಾಂತ್ರಿಕ ವಿಳಂಬಗಳು ಮತ್ತು ಅವುಗಳನ್ನು ಸರಿಪಡಿಸುವ ಬೋಯಿಂಗ್ ಸಾಮರ್ಥ್ಯ ಸ್ಟಾರ್‌ಲೈನರ್ ಯೋಜನೆಯ ಭವಿಷ್ಯದ ಮೇಲೆ ಮಾತ್ರವಲ್ಲದೆ, ಬಾಹ್ಯಾಕಾಶ ಅನ್ವೇಷಣೆಯಲ್ಲಿ ಬೋಯಿಂಗ್ ಪಾತ್ರದ ಮೇಲೂ ಪ್ರಭಾವ ಬೀರಲಿದೆ.
 


ಗಿರೀಶ್ ಲಿಂಗಣ್ಣ (ಲೇಖಕರು ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕ)

ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ (ಐಎಸ್ಎಸ್) ತೆರಳಿರುವ ಸ್ಟಾರ್‌ಲೈನರ್ ಬಾಹ್ಯಾಕಾಶ ನೌಕೆ ಜೂನ್ ತಿಂಗಳ ಕೊನೆಯ ಭಾಗದಲ್ಲಿ ಭೂಮಿಗೆ ಮರಳಬೇಕಿತ್ತು. ಆದರೆ, ಜೂನ್ 21ರಂದು ಹೇಳಿಕೆ ನೀಡಿದ ಬೋಯಿಂಗ್, ಈ ಬಾಹ್ಯಾಕಾಶ ನೌಕೆ ಜುಲೈ ತಿಂಗಳ ಆರಂಭದಲ್ಲಿ ಭೂಮಿಗೆ ಮರಳಲಿದೆ ಎಂದು ತಿಳಿಸಿದೆ. ಭಾರತೀಯ ಮೂಲದ ಗಗನಯಾತ್ರಿ ಸುನಿತಾ ವಿಲಿಯಮ್ಸ್ ಮತ್ತು ಬ್ಯಾರಿ 'ಬುಚ್' ವಿಲ್ಮೋರ್ ಎಂಬ ಇಬ್ಬರು ಗಗನಯಾತ್ರಿಗಳು ಜೂನ್ 6ರಂದು ಬೋಯಿಂಗ್ ಸಂಸ್ಥೆಯ ಸ್ಟಾರ್‌ಲೈನರ್ ಬಾಹ್ಯಾಕಾಶ ವಾಹನದ ಮೂಲಕ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ತೆರಳಿದ್ದರು. ಹಲವಾರು ವರ್ಷಗಳ ಹಿನ್ನಡೆಗಳು, ಮತ್ತು ದುಬಾರಿ ವಿಳಂಬಗಳ ಬಳಿಕ, ಸ್ಟಾರ್‌ಲೈನರ್ ಅನ್ನು ಸಂಪೂರ್ಣವಾಗಿ ಪರೀಕ್ಷೆಗೊಳಪಡಿಸಿ ಬಾಹ್ಯಾಕಾಶಕ್ಕೆ ಕಳುಹಿಸಲಾಗಿತ್ತು. ನಾಸಾ ಮತ್ತು ಬೋಯಿಂಗ್ ಸಂಸ್ಥೆಗಳು ಇದು ಸ್ಟಾರ್‌ಲೈನರ್‌ನ ಪರೀಕ್ಷಾ ಹಾರಾಟವಾಗಿರುವುದರಿಂದ, ಎಲ್ಲವೂ ಅಂದುಕೊಂಡಂತೆ ಸುಗಮವಾಗಿ ಸಾಗುತ್ತದೆ ಎನ್ನಲು ಸಾಧ್ಯವಿಲ್ಲ ಎಂದಿದ್ದವು.

Tap to resize

Latest Videos

undefined

ಈ ಎಚ್ಚರಿಕೆಗಳು ಹುಸಿ ಹೋಗದಂತೆ, ಬಾಹ್ಯಾಕಾಶ ನೌಕೆ ಇಂದಿಗೂ ಬಾಹ್ಯಾಕಾಶ ನಿಲ್ದಾಣದಲ್ಲಿ ಉಳಿದುಕೊಂಡಿದೆ. ಹೀಲಿಯಂ ಸೋರಿಕೆ, ಹಾರಾಟದ ಪ್ರಮುಖ ಘಟ್ಟದಲ್ಲಿ ಥ್ರಸ್ಟರ್‌ಗಳ ಅಸಮರ್ಪಕತೆಯಂತಹ ಹಲವಾರು ತಾಂತ್ರಿಕ ಸಮಸ್ಯೆಗಳ ಕಾರಣದಿಂದಾಗಿ, ಸ್ಟಾರ್‌ಲೈನರ್ ಭೂಮಿಗೆ ಮರಳುವ ದಿನಾಂಕ ಅನಿರ್ದಿಷ್ಟವಾಗಿ ಮುಂದೂಡಲ್ಪಟ್ಟಿದೆ. ಬಾಹ್ಯಾಕಾಶ ನೌಕೆ ಭೂಮಿಗೆ ಮರಳುವ ನಿರ್ದಿಷ್ಟ ದಿನಾಂಕವನ್ನು ನಾಸಾ ಇನ್ನೂ ಘೋಷಿಸದಿರುವುದರಿಂದ, ಇಬ್ಬರು ಗಗನಯಾತ್ರಿಗಳು ಯಾವಾಗ ಭೂಮಿಗೆ ಮರಳುತ್ತಾರೆ ಎಂಬ ಕುರಿತು ಅನಿಶ್ಚಿತತೆಗಳು ಮುಂದುವರಿದಿವೆ.

ಈಗ ನಾಸಾ ಮತ್ತು ಬೋಯಿಂಗ್ ಮುಖ್ಯ ಗಮನ ಸುನಿತಾ ವಿಲಿಯಮ್ಸ್ ಮತ್ತು ವಿಲ್ಮೋರ್ ಅವರನ್ನು ಸುರಕ್ಷಿತವಾಗಿ ಮರಳಿ ಭೂಮಿಗೆ ಕರೆತರುವುದಾಗಿದೆ. ಆದರೆ, ತಾಂತ್ರಿಕ ವಿಳಂಬಗಳು ಮತ್ತು ಅವುಗಳನ್ನು ಸರಿಪಡಿಸುವ ಬೋಯಿಂಗ್ ಸಾಮರ್ಥ್ಯ ಸ್ಟಾರ್‌ಲೈನರ್ ಯೋಜನೆಯ ಭವಿಷ್ಯದ ಮೇಲೆ ಮಾತ್ರವಲ್ಲದೆ, ಬಾಹ್ಯಾಕಾಶ ಅನ್ವೇಷಣೆಯಲ್ಲಿ ಬೋಯಿಂಗ್ ಪಾತ್ರದ ಮೇಲೂ ಪ್ರಭಾವ ಬೀರಲಿದೆ.

ಬೋಯಿಂಗ್ ತಾನು ಗಗನಯಾತ್ರಿಗಳನ್ನು ಸುರಕ್ಷಿತವಾಗಿ ಬಾಹ್ಯಾಕಾಶ ಯಾತ್ರೆಗೆ ಕರೆದೊಯ್ಯಬಲ್ಲೆ ಮತ್ತು ತನ್ನ ಬಾಹ್ಯಾಕಾಶ ನೌಕೆಗಳು ಹಾಗೂ ವಾಣಿಜ್ಯಿಕ ವಿಮಾನಗಳನ್ನು ಬಾಧಿಸುತ್ತಿರುವ ತಾಂತ್ರಿಕ ದೋಷಗಳನ್ನು ಸರಿಪಡಿಸಬಲ್ಲೆ ಎಂದು ಸಾಬೀತುಪಡಿಸುವ ಒತ್ತಡಕ್ಕೆ ಸಿಲುಕಿದೆ.

ಪ್ರಸ್ತುತ ಯೋಜನೆ ಪೂರ್ಣಗೊಂಡ ಬಳಿಕ, ನಾಸಾ ಮತ್ತು ಬೋಯಿಂಗ್ ಸಂಸ್ಥೆಗಳು ಸ್ಟಾರ್‌ಲೈನರ್ ಬಾಹ್ಯಾಕಾಶ ನೌಕೆ ನಿಯಮಿತವಾಗಿ ನಾಲ್ವರು ಗಗನಯಾತ್ರಿಗಳನ್ನು ಆರು ತಿಂಗಳ ಅವಧಿಗೆ ಬಾಹ್ಯಾಕಾಶ ನಿಲ್ದಾಣಕ್ಕೆ ಕರೆದೊಯ್ಯಲು ಸಮರ್ಥವಾಗಿದೆ ಎಂದು ಪ್ರಮಾಣೀಕರಣ ನಡೆಸುವ ಕಟ್ಟುನಿಟ್ಟಿನ ಪ್ರಕ್ರಿಯೆ ನಡೆಸಲಿವೆ. ಆ ನಂತರವೇ ಬೋಯಿಂಗ್‌ನ ಸ್ಟಾರ್‌ಲೈನರ್ ಸ್ಪೇಸ್ ಎಕ್ಸ್ ಸಂಸ್ಥೆಯ ಡ್ರ್ಯಾಗನ್‌ ಬಾಹ್ಯಾಕಾಶ ನೌಕೆಯೊಡನೆ ಸೇವೆಗೆ ಸೇರಲಿದೆ. ಡ್ರ್ಯಾಗನ್ ನೌಕೆ ಮೊದಲ ಬಾರಿಗೆ 2020ರಲ್ಲಿ ಗಗನಯಾತ್ರಿಗಳನ್ನು ಬಾಹ್ಯಾಕಾಶಕ್ಕೆ ಕರೆದೊಯ್ದಿತ್ತು. ಈ ಪ್ರಕ್ರಿಯೆ ಪೂರ್ಣಗೊಂಡ ಬಳಿಕ, ಬೋಯಿಂಗ್ ನಾಸಾದಿಂದ ಹತ್ತು ವರ್ಷಗಳ ಅವಧಿಗೆ 4.2 ಬಿಲಿಯನ್ ಡಾಲರ್ ಮೌಲ್ಯದ ಒಪ್ಪಂದ ಪಡೆದುಕೊಳ್ಳಲಿದೆ.

ಬಾಹ್ಯಾಕಾಶ ನಿಲ್ದಾಣಕ್ಕೆ ತೆರಳಲು ಬೋಯಿಂಗ್‌ನ ಸ್ಟಾರ್‌ಲೈನರ್ ನೌಕೆಯೂ ಎರಡನೇ ಆಯ್ಕೆಯಾಗಿ ಲಭಿಸಬೇಕು ಎನ್ನುವುದು ನಾಸಾದ ಉದ್ದೇಶವಾಗಿದೆ. 2020ರ ಬಳಿಕ, ಸ್ಪೇಸ್ಎಕ್ಸ್ ಮಾತ್ರವೇ ಬಾಹ್ಯಾಕಾಶ ಯಾತ್ರೆಯನ್ನು ಒದಗಿಸುವ ಸಂಸ್ಥೆಯಾಗಿದೆ. ಒಂದು ವೇಳೆ, ಕಾರ್ಯಾಚರಿಸುವ ಒಂದು ವ್ಯವಸ್ಥೆ ವಿಫಲವಾದರೆ, ಇನ್ನೊಂದು ಆಯ್ಕೆ ಲಭ್ಯವಿರಬೇಕು ಎನ್ನುವುದು ನಾಸಾದ ಉದ್ದೇಶವಾಗಿದೆ. ಪ್ರಸ್ತುತ ಯೋಜನೆಯಲ್ಲಿ ಬೋಯಿಂಗ್ ಹಲವು ವರ್ಷಗಳ ವಿಳಂಬವನ್ನು ಎದುರಿಸಿದೆ. 2019ರಲ್ಲಿ ಗಗನಯಾತ್ರಿಗಳಿಲ್ಲದೆ ನಡೆಸಿದ ಪರೀಕ್ಷಾ ಹಾರಾಟ ವಿಫಲವಾಗಿ, ಬೋಯಿಂಗ್ 1.5 ಬಿಲಿಯನ್ ಡಾಲರ್ ಹೆಚ್ಚುವರಿ ವೆಚ್ಚ ಎದುರಿಸಿತ್ತು. ಬೋಯಿಂಗ್ ಆದಾಯ ಪಡೆಯಬೇಕಾದರೆ, ಅದರ ಸ್ಟಾರ್‌ಲೈನರ್ ಬಾಹ್ಯಾಕಾಶ ನೌಕೆ ಗಗನಯಾತ್ರಿಗಳನ್ನು ಒಯ್ಯುವ ಯಾತ್ರೆಗಳನ್ನು ಆರಂಭಿಸಬೇಕಾಗುತ್ತದೆ.

ಸ್ಟಾರ್‌ಲೈನರ್ ಬಾಹ್ಯಾಕಾಶ ನೌಕೆ ಹಲವಾರು ಸಣ್ಣಪುಟ್ಟ ಹೀಲಿಯಂ ಸೋರಿಕೆಗಳನ್ನು ಅನುಭವಿಸಿದ್ದು, ಇದು ನಾಸಾ ಮತ್ತು ಬೋಯಿಂಗ್‌ಗಳಿಗೆ ತಿಳಿಯದ ಒಗಟಾಗಿದೆ. ಆರಂಭದಲ್ಲಿ, ಬೋಯಿಂಗ್ ಮತ್ತು ನಾಸಾದ ತಂಡಗಳು ಹೀಲಿಯಂ ಸೋರಿಕೆ ಸೀಲ್ ವೈಫಲ್ಯದಿಂದ ಸಂಭವಿಸಿರಬಹುದು ಎಂದು ಅಂದಾಜಿಸಿದ್ದವು. ಆದರೆ, ಆ ಬಳಿಕ ನಮಗೆ ಅದು ಯಾವುದರಿಂದ ಸೋರಿದೆ ಎಂದು ಖಾತ್ರಿಯಾಗಿಲ್ಲ ಎಂದಿದ್ದವು. ಅದರೊಡನೆ, ಜೂನ್ 6ರಂದು ಬಾಹ್ಯಾಕಾಶ ನೌಕೆ ಬಾಹ್ಯಾಕಾಶ ನಿಲ್ದಾಣದ ಬಳಿ ತಲುಪುತ್ತಿದ್ದಂತೆ ಅದರ ಐದು ಸಣ್ಣ ಥ್ರಸ್ಟರ್‌ಗಳು ಕಾರ್ಯಾಚರಣೆ ಸ್ಥಗಿತಗೊಳಿಸಿದವು ಎಂದೂ ಹೇಳಲಾಗಿದೆ. ಅವುಗಳು ಸ್ಥಗಿತಗೊಂಡಾಗ,‌ ನಾಸಾ ತಕ್ಷಣ ಬಾಹ್ಯಾಕಾಶ ನೌಕೆಯನ್ನು ಹಿಂದಕ್ಕೆ ಸರಿಸಿ, ಥ್ರಸ್ಟರ್‌ಗಳನ್ನು ಮರಳಿ ಚಾಲನೆಗೊಳಿಸಲು ಪ್ರಯತ್ನಿಸುವಂತೆ ಬೋಯಿಂಗ್‌ಗೆ ನಿರ್ದೇಶಿಸಿತ್ತು.

ಮೂಲ ಯೋಜನೆಯ ಪ್ರಕಾರ, ಸ್ಟಾರ್‌ಲೈನರ್ ನೌಕೆ ಜೂನ್ 18ರಂದು ಭೂಮಿಗೆ ಮರಳಬೇಕಿತ್ತು. ನಾಸಾ ಅದನ್ನು ಜೂನ್ 26ಕ್ಕೆ ಮುಂದೂಡಿತು. ಬಳಿಕ, ಜೂನ್ 21, ಶುಕ್ರವಾರದಂದು ನಾಸಾ ಸ್ಟಾರ್‌ಲೈನರ್ ಪುನರಾಗಮನವನ್ನು ಇನ್ನಷ್ಟು ವಿಳಂಬಗೊಳಿಸಿ, ಜುಲೈಗೆ ಮುಂದೂಡಿತು. ತನ್ನ ತಂಡಗಳು ಪ್ರೊಪಲ್ಷನ್ ವ್ಯವಸ್ಥೆಯ ಸಮಸ್ಯೆಗಳನ್ನು ಪರಿಶೀಲಿಸಲು ಇನ್ನಷ್ಟು ಸಮಯ ಬೇಕಾಗಿರುವುದರಿಂದ, ಈ ಕ್ರಮ ಕೈಗೊಳ್ಳಲಾಗಿದೆ ಎಂದು ನಾಸಾ ತಿಳಿಸಿತು. ಗಗನಯಾತ್ರಿಗಳನ್ನು ಈಗಲೇ ಭೂಮಿಗೆ ಮರಳಿ ತರಲು ಯಾವುದೇ ಅವಸರವಿಲ್ಲ ಎಂದು ನಾಸಾ ಹೇಳಿದ್ದು, ಹೀಲಿಯಂ ಸೋರಿಕೆ ಅವರು ಭೂಮಿಗೆ ಮರಳುವುದಕ್ಕೆ ಯಾವುದೇ ಸಮಸ್ಯೆ ತಂದೊಡ್ಡಿಲ್ಲ ಎಂದಿದೆ.

ಸ್ಥಗಿತಗೊಂಡಿದ್ದ ಐದು ಥ್ರಸ್ಟರ್‌ಗಳ ಪೈಕಿ, ನಾಲ್ಕು ಥ್ರಸ್ಟರ್‌ಗಳು ಈಗ ಸರಿಯಾಗಿ ಕಾರ್ಯಾಚರಿಸುತ್ತಿವೆ. ಬಾಹ್ಯಾಕಾಶ ನೌಕೆ ಒಟ್ಟು 28 ಥ್ರಸ್ಟರ್‌ಗಳನ್ನು ಹೊಂದಿರುವುದರಿಂದ, ಅದರ ಕಾರ್ಯಾಚರಣೆಗೆ ಯಾವುದೇ ಸಮಸ್ಯೆ ಉಂಟಾಗುವುದಿಲ್ಲ. ಬಾಹ್ಯಾಕಾಶ ನೌಕೆ ಬಾಹ್ಯಾಕಾಶದಲ್ಲೇ 45 ದಿನಗಳ ಕಾಲ ಉಳಿದುಕೊಳ್ಳಬಹುದಾಗಿದ್ದು, ಸಮಸ್ಯೆಗಳನ್ನು ಸರಿಪಡಿಸಲು ಹೆಚ್ಚಿನ ಸಮಯಾವಕಾಶ ಲಭಿಸುತ್ತದೆ. ನಾಸಾ ಮತ್ತು ಬೋಯಿಂಗ್ ಎರಡೂ ಸ್ಟಾರ್‌ಲೈನರ್ ಉತ್ತಮ ಸ್ಥಿತಿಯಲ್ಲಿದ್ದು, ಬಾಹ್ಯಾಕಾಶ ನಿಲ್ದಾಣದಲ್ಲಿ ಏನಾದರೂ ತುರ್ತು ಪರಿಸ್ಥಿತಿ ಎದುರಾದರೆ, ತಕ್ಷಣವೇ ಗಗನಯಾತ್ರಿಗಳನ್ನು ಭೂಮಿಗೆ ಮರಳಿ ಕರೆತರಬಲ್ಲದು ಎಂದಿವೆ.

ಪ್ರಮಾಣೀಕರಣ ಪ್ರಕ್ರಿಯೆಗೆ ಥ್ರಸ್ಟರ್ ಸಮಸ್ಯೆಗಳನ್ನು ಪರಿಹರಿಸುವುದು ಮತ್ತು ಹೀಲಿಯಂ ಸೋರಿಕೆ ತಡೆಗಟ್ಟುವುದು ಅತ್ಯಂತ ಮುಖ್ಯ ಎಂದು ಅಧಿಕಾರಿಗಳು ಹೇಳಿದ್ದಾರೆ.

ನಾಸಾದ ಕಮರ್ಷಿಯಲ್ ಕ್ರ್ಯೂ ಪ್ರೋಗ್ರಾಂ ಮ್ಯಾನೇಜರ್ ಆಗಿರುವ ಸ್ಟೀವ್ ಸ್ಟಿಚ್ ಅವರು ಅಧಿಕೃತ ಮಾಹಿತಿ ನೀಡುತ್ತಾ, ನಾವು ಸಮಸ್ಯೆಗಳನ್ನು ಪರಿಹರಿಸಲು ಸಾಕಷ್ಟು ಸಮಯ ತೆಗೆದುಕೊಳ್ಳುತ್ತಿದ್ದು, ಯೋಜನೆ ನಿರ್ವಹಣಾ ನಿರ್ದೇಶನಗಳನ್ನು ಪಾಲಿಸುತ್ತಿದ್ದೇವೆ ಎಂದು ಹೇಳಿದ್ದಾರೆ. ಸಣ್ಣ ಪ್ರಮಾಣದ ಹೀಲಿಯಂ ಸೋರಿಕೆ ಅಂಕಿಅಂಶಗಳು ಮತ್ತು ಬಾಹ್ಯಾಕಾಶ ನಿಲ್ದಾಣ ತಲುಪಿ, ಡಾಕಿಂಗ್ ನಡೆಸುವ ಸಮಯದಲ್ಲಿ ಥ್ರಸ್ಟರ್‌ಗಳು ಸ್ಥಗಿತಗೊಂಡಿದ್ದರ ಕುರಿತು ನಿರ್ಧಾರ ಕೈಗೊಳ್ಳಲಾಗುತ್ತಿದೆ ಎಂದು ಅವರು ಹೇಳಿದ್ದಾರೆ. ಇಂತಹ ಹೀಲಿಯಂ ಸೋರಿಕೆ ಹೊಂದಿರುವಾಗ ಇನ್ನಾವುದೇ ಬಾಹ್ಯಾಕಾಶ ಯಾತ್ರೆ ನಡೆಸಲಾಗುವುದಿಲ್ಲ ಎಂದು ಸ್ಟಿಚ್ ಭರವಸೆ ನೀಡಿದ್ದು, ಕಾರ್ಯಾಚರಿಸಿದ ತಂಡಗಳು ಥ್ರಸ್ಟರ್‌ಗಳು ಯಾಕೆ ಕಡಿಮೆ ಪ್ರಮಾಣದಲ್ಲಿ ಥ್ರಸ್ಟ್ ಉತ್ಪಾದಿಸಿವೆ ಎಂದು ಖಾತ್ರಿಪಡಿಸಬೇಕಿದೆ ಎಂದಿದ್ದಾರೆ.

ಸ್ಟಾರ್‌ಲೈನರ್‌ನ ಸರ್ವಿಸ್ ಮಾಡ್ಯುಲ್‌ನಲ್ಲಿ ಬಾಹ್ಯಾಕಾಶ ನೌಕೆಯ ಬಹುತೇಕ ಇಂಜಿನ್‌ಗಳಿವೆ. ಆದರೆ ಇದೇ ಮಾಡ್ಯುಲ್‌ನಲ್ಲಿ ಹೀಲಿಯಂ ಸೋರಿಕೆ ಥ್ರಸ್ಟರ್ ಸಮಸ್ಯೆ ಎದುರಾಗಿರುವುದರಿಂದ, ಇದೊಂದು ಸಂಕೀರ್ಣ ಪರಿಸ್ಥಿತಿಯಾಗಿದೆ. ಬಾಹ್ಯಾಕಾಶ ನೌಕೆ ಭೂಮಿಗೆ ತಲುಪುವ ಮುನ್ನ, ವಾತಾವರಣದಲ್ಲಿ ಈ ಮಾಡ್ಯುಲ್ ನೌಕೆಯಿಂದ ಬೇರ್ಪಟ್ಟು, ಉರಿದು ಹೋಗಲಿದೆ. ಆದ್ದರಿಂದ, ಇಂಜಿನಿಯರ್‌ಗಳು ಇದರ ಮೇಲೆ ನಿಯಂತ್ರಣ ಹೊಂದಿರುವ ಸಂದರ್ಭದಲ್ಲೇ ಸಮಸ್ಯೆಯನ್ನು ಅರ್ಥೈಸಿಕೊಂಡು ಪರಿಹರಿಸಲು ಪ್ರಯತ್ನ ನಡೆಸುತ್ತಿದ್ದಾರೆ.

ನಾಸಾದ ಮಾಜಿ ಗಗನಯಾತ್ರಿ ಮತ್ತು ಕೊಲಂಬಿಯಾ ಯುನಿವರ್ಸಿಟಿಯ ಮೆಕ್ಯಾನಿಕಲ್ ಇಂಜಿನಿಯರಿಂಗ್ ಉಪನ್ಯಾಸಕರಾದ ಮೈಕ್ ಮಸ್ಸಿಮಿನೋ ಅವರು ಈ ಕುರಿತು ವಿವರಣೆ ನೀಡುತ್ತಾ, ಸರ್ವಿಸ್ ಮಾಡ್ಯುಲ್ ಭೂಮಿಗೆ ಮರಳದಿರುವುದರಿಂದ, ನೌಕೆ ಭೂಮಿಗೆ ಆಗಮಿಸಿದ ಬಳಿಕ ಏನೂ ಮಾಹಿತಿ ಪಡೆಯಲು ಸಾಧ್ಯವಿಲ್ಲ. ಆದ್ದರಿಂದ ಇಂಜಿನಿಯರ್‌ಗಳು ಈಗಲೇ ಸಾಧ್ಯವಾದಷ್ಟು ಮಾಹಿತಿಗಳನ್ನು ಕಲೆಹಾಕುತ್ತಿದ್ದಾರೆ ಎಂದಿದ್ದಾರೆ. ಅವಶ್ಯಕ ಮಾಹಿತಿಗಳನ್ನು ಕಲೆಹಾಕುವ ಸಲುವಾಗಿ, ಬಾಹ್ಯಾಕಾಶ ನೌಕೆ ಸಾಧ್ಯವಿರುವಷ್ಟು ಸಮಯ ಕಕ್ಷೆಯಲ್ಲೇ ಉಳಿಯುವುದು ಸೂಕ್ತ ನಿರ್ಧಾರವಾಗಿದೆ ಎಂದು ಅವರು ವಿವರಿಸಿದ್ದಾರೆ.

ಇದಕ್ಕಾಗಿ ಸಿದ್ಧತೆ ನಡೆಸುತ್ತಿರುವ ಬೋಯಿಂಗ್ ಮತ್ತು ನಾಸಾಗಳು, ಬಾಹ್ಯಾಕಾಶ ನೌಕೆಯ ಸಿಸ್ಟಮ್‌ಗಳಿಂದ ಸಾಧ್ಯವಾದಷ್ಟೂ ಮಾಹಿತಿಗಳನ್ನು ಕಲೆಹಾಕುತ್ತಿವೆ. ಬಾಹ್ಯಾಕಾಶ ನೌಕೆ ಇನ್ನೂ ಬಾಹ್ಯಾಕಾಶ ನಿಲ್ದಾಣದಲ್ಲಿ ನಿಲುಗಡೆಯಾಗಿರುವಾಗಲೇ ಬೋಯಿಂಗ್ ಅದರ ಥ್ರಸ್ಟರ್‌ಗಳನ್ನು ಉರಿಸಿ ಪರೀಕ್ಷಿಸಿದೆ. ಬೋಯಿಂಗ್ ವಿವಿಧ ಪರಿಸ್ಥಿತಿಗಳನ್ನು ಪರಿಶೀಲಿಸುವ ಸಲುವಾಗಿ, ಭೂಮಿಯ ಸಿಮ್ಯುಲೇಟರ್‌ಗಳನ್ನು ಬಳಸುತ್ತಿದೆ. ಆ ಮೂಲಕ ಸಮಸ್ಯೆ ಏನಾಗಿರಬಹುದು ಎಂದು ಗುರುತಿಸಿ, ಬಾಹ್ಯಾಕಾಶ ನೌಕೆಯ ಸುರಕ್ಷತೆಯನ್ನು ಖಾತ್ರಿಪಡಿಸಲು ಯೋಜಿಸುತ್ತಿದೆ.

ಅರ್ಬನ್ ಹೀಟ್ ಐಲ್ಯಾಂಡ್: ನಗರಗಳ ಕಾಂಕ್ರೀಟ್ ಗೂಡುಗಳು ಮತ್ತು ಸುಡುಸೆಖೆಯ ರಾತ್ರಿಗಳು

ನಾಸಾ ಸ್ಪೇಸ್ ಶಟಲ್ ಯೋಜನೆಯ ಮಾಜಿ ನಿರ್ದೇಶಕರು ಮತ್ತು 40 ಬಾಹ್ಯಾಕಾಶ ಯೋಜನೆಗಳ ಹಾರಾಟ ನಿರ್ದೇಶಕರಾಗಿದ್ದ ವೇಯ್ನ್ ಹೇಲ್ ಅವರು ಪ್ರಮಾಣೀಕರಣ ಪ್ರಕ್ರಿಯೆ ಅತ್ಯಂತ ವಿವರಣಾತ್ಮಕವಾದ, ಸಮಗ್ರವಾದ ಪರಿಶೀಲನೆಗಳನ್ನು ಒಳಗೊಂಡಿರುತ್ತದೆ ಎಂದಿದ್ದಾರೆ. ಬೋಯಿಂಗ್ ಪೂರ್ಣ ಪ್ರಮಾಣದಲ್ಲಿ ಗಗನಯಾತ್ರಿಗಳನ್ನು ಒಯ್ಯಲು ನಾಸಾ ಅನುಮತಿ ನೀಡುವ ಮುನ್ನ, ಎರಡು ಮುಖ್ಯ ಸಮಸ್ಯೆಗಳನ್ನು ಸರಿಪಡಿಸಬೇಕಾಗುತ್ತದೆ ಎಂದು ಅವರು ಹೇಳಿದ್ದಾರೆ. ಥ್ರಸ್ಟರ್‌ಗಳ ವೈಫಲ್ಯ ಮತ್ತು ಹೀಲಿಯಂ ಸೋರಿಕೆಯಂತಹ ಸಮಸ್ಯೆಗಳು ಸಾಮಾನ್ಯವಾಗಿದ್ದು, ಬಾಹ್ಯಾಕಾಶ ಯಾತ್ರೆಯ ಸಂದರ್ಭದಲ್ಲಿ ಬಹಳಷ್ಟು ಬಾರಿ ಕಾಣಿಸಿಕೊಂಡಿವೆ ಎಂದು ಹೇಲ್ ವಿವರಿಸಿದ್ದಾರೆ. ಸ್ಟಿಚ್ ಅವರ ಪ್ರಕಾರ, ಇಂತಹ ಸಮಸ್ಯೆಗಳನ್ನು ಈಗಲೇ ಅರ್ಥ ಮಾಡಿಕೊಂಡು ಸರಿಪಡಿಸುವುದರಿಂದ, ಪ್ರಮಾಣೀಕರಣದ ನಂತರ ನಡೆಸುವ ಭವಿಷ್ಯದ ಯೋಜನೆಗಳಿಗೆ ನೌಕೆಯ ವ್ಯವಸ್ಥೆಗಳನ್ನು ಉತ್ತಮಪಡಿಸಲು ಸುಲಭವಾಗುತ್ತದೆ.

ಐಎನ್‌ಎಸ್ ವಿಕ್ರಾಂತ್ ಹೆಗಲೇರಲಿದೆ ರಫೇಲ್ ಫೈಟರ್: ಭಾರತ-ಫ್ರಾನ್ಸ್ ಒಪ್ಪಂದಕ್ಕೆ ಹೊಸ ಖದರ್..!

ಯಾವುದೇ ಗಗನಯಾತ್ರೆಯಲ್ಲಿ ಸುರಕ್ಷತೆ ಪ್ರಥಮ ಆದ್ಯತೆಯಾಗಿರುತ್ತದೆ. 2003ರಲ್ಲಿ ಕೊಲಂಬಿಯಾ ಬಾಹ್ಯಾಕಾಶ ನೌಕೆ ಕಕ್ಷೆಯಿಂದ ಭೂಮಿಗೆ ಮರಳುವ ಸಂದರ್ಭದಲ್ಲಿ ಒಡೆದು ದುರಂತ ಅಂತ್ಯ ಕಂಡಿದ್ದು ಸುರಕ್ಷತೆಯ ಮಹತ್ವವನ್ನು ನಿರಂತರವಾಗಿ ನೆನಪಿಸುತ್ತದೆ. ಕಲ್ಪನಾ ಚಾವ್ಲಾ ಅವರು ಪ್ರಾಣ ಕಳೆದುಕೊಂಡ ಆ ದುರಂತ ಘಟನೆಯಿಂದ ಕಲಿತ ಪಾಠಗಳು ಎಂದಿಗೂ ಮರೆಯಲು ಸಾಧ್ಯವಿಲ್ಲ ಎಂದು ವೇಯ್ನ್ ಹೇಲ್ ಹೇಳಿದ್ದಾರೆ. ಸುನಿತಾ ವಿಲಿಯಮ್ಸ್ ಕೊನೆಯ ಬಾರಿಗೆ 2012ರಲ್ಲಿ ಮತ್ತು ವಿಲ್ಮೋರ್ 2015ರಲ್ಲಿ ಬಾಹ್ಯಾಕಾಶಕ್ಕೆ ತೆರಳಿದ್ದರಿಂದ, ಅವರು ಇನ್ನಷ್ಟು ಕಾಲ ಬಾಹ್ಯಾಕಾಶದಲ್ಲಿ ಇರಲು ಉತ್ಸುಕರಾಗಿದ್ದಾರೆ ಎನ್ನಲಾಗಿದೆ.
 

click me!