
ವಾಷಿಂಗ್ಟನ್ (ಜು.9): ಒಂದೇ ಸಮಯದಲ್ಲಿ ಒಂದು ವಸ್ತು ಎರಡು ಬೇರೆ ಬೇರೆ ಕಡೆಗಳಲ್ಲಿ ಅಸ್ತಿತ್ವದಲ್ಲಿರಲು ಸಾಧ್ಯವೇ? ಇಂತಹ ಕ್ವಾಂಟಮ್ ಭೌತಶಾಸ್ತ್ರದ (Quantum Physics) ಅತ್ಯಂತ ಸಂಕೀರ್ಣ ರಹಸ್ಯದ ಕುರಿತು ಸಂಶೋಧನೆ ನಡೆಸುತ್ತಿದ್ದ ಅಮೆರಿಕಾದ ಲಾಸ್ ಅಲಾಮೋಸ್ ರಾಷ್ಟ್ರೀಯ ಪ್ರಯೋಗಾಲಯದ (Los Alamos National Laboratory) ನಿವೃತ್ತ ವಿಜ್ಞಾನಿ ಆಂಥೋನಿ ಚಾವೆಜ್ ನಿಗೂಢವಾಗಿ ನಾಪತ್ತೆಯಾಗಿದ್ದಾರೆ. ಅವರ ನಾಪತ್ತೆಯ ಬೆನ್ನಲ್ಲೇ, ಅವರು ಸಂಶೋಧನೆ ನಡೆಸುವಾಗ ಯಾವುದೋ ತಪ್ಪು ಸಂಭವಿಸಿ ‘ಸಮಾಂತರ ವಿಶ್ವ’ (Parallel Dimension) ಅಥವಾ ಮತ್ತೊಂದು ಆಯಾಮಕ್ಕೆ ಜಾರಿಹೋಗಿರಬಹುದು ಎಂಬ ವಿಲಕ್ಷಣ ವದಂತಿಗಳು ಮತ್ತು ಸಿದ್ಧಾಂತಗಳು ಇಂಟರ್ನೆಟ್‌ನಲ್ಲಿ ಭಾರಿ ಸಂಚಲನ ಮೂಡಿಸಿವೆ.
78 ವರ್ಷದ ಆಂಥೋನಿ ಚಾವೆಜ್ (ಮೂಲತಃ ಹೆಚ್‌ವಿಎಸಿ ತಂತ್ರಜ್ಞ ಮತ್ತು ವಿಜ್ಞಾನಿ) ಮೇ 2025 ರಲ್ಲಿ ನಾಪತ್ತೆಯಾಗಿದ್ದರು. ಇತ್ತೀಚೆಗೆ 'ನ್ಯೂಸ್‌ನೇಷನ್' ವರದಿಯಲ್ಲಿ ತನಿಖಾ ಪತ್ರಕರ್ತೆ ಲಾರೆನ್ ಕಾನ್ಲಿನ್ ಅವರು, "ಚಾವೆಜ್ ಅವರು ಕ್ವಾಂಟಮ್ ಭೌತಶಾಸ್ತ್ರದ ಅಡಿಯಲ್ಲಿ ಬರುವ 'ಏಕಕಾಲದಲ್ಲಿ ಎರಡು ಕಡೆಗಳಲ್ಲಿ ಇರುವ ಸಾಧ್ಯತೆ'ಯ (Quantum Superposition) ರಹಸ್ಯದ ಕುರಿತು ವಿಶೇಷವಾಗಿ ಕೆಲಸ ಮಾಡುತ್ತಿದ್ದರು" ಎಂದು ಹೇಳಿಕೆ ನೀಡಿದ್ದರು.
ವಿಜ್ಞಾನದ ಪ್ರಕಾರ, ಒಂದು ಭೌತಿಕ ವ್ಯವಸ್ಥೆಯು ಒಂದೇ ಸಮಯದಲ್ಲಿ ಹಲವು ಸಂಭವನೀಯ ಸ್ಥಿತಿಗಳಲ್ಲಿ ಇರಬಹುದು ಎಂಬುದನ್ನು 'ಕ್ವಾಂಟಮ್ ಸೂಪರ್‌ಪೊಸಿಷನ್' ಎನ್ನಲಾಗುತ್ತದೆ. ಸದ್ಯಕ್ಕೆ ವಿಜ್ಞಾನಿಗಳು ಇದರ ಮೂಲಭೂತ ಘಟಕಗಳಾದ 'ಕ್ಯೂಬಿಟ್ಸ್' (Qubits) ಮಟ್ಟದಲ್ಲಷ್ಟೇ ಸಂಶೋಧನೆ ನಡೆಸುತ್ತಿದ್ದು, ಇದರ ಸಂಪೂರ್ಣ ರಹಸ್ಯ ಇನ್ನೂ ನಿಗೂಢವಾಗಿದೆ. ಈ ಪ್ರಯೋಗ ವಿಫಲಗೊಂಡು ಚಾವೆಜ್ ಅವರು ಯಾವುದೋ 'ವರ್ಮ್‌ಹೋಲ್' (Wormhole) ಮೂಲಕ ಮತ್ತೊಂದು ಆಯಾಮಕ್ಕೆ ಜಿಗಿದಿದ್ದಾರೆ ಎಂಬ ವಾದಕ್ಕೆ ಯಾವುದೇ ಪುರಾವೆಗಳಿಲ್ಲದಿದ್ದರೂ, ನೆಟ್ಟಿಗರು ಮಾತ್ರ ಈ ರಹಸ್ಯದ ಆಯಾಮವನ್ನೇ ನೆಚ್ಚಿಕೊಂಡು ಚರ್ಚಿಸುತ್ತಿದ್ದಾರೆ.
ಚಾವೆಜ್ ನಾಪತ್ತೆಯಾದ ಕೇವಲ ಒಂದು ತಿಂಗಳ ಅಂತರದಲ್ಲಿ, ಲಾಸ್ ಅಲಾಮೋಸ್‌ನ ಆಡಳಿತ ಸಹಾಯಕಿ ಮೆಲಿಸ್ಸಾ ಕಾಸಿಯಾಸ್ ನಾಪತ್ತೆಯಾಗಿದ್ದರು. ನಂತರ ನ್ಯೂ ಮೆಕ್ಸಿಕೋದ ಕಾರ್ಸನ್ ರಾಷ್ಟ್ರೀಯ ಅರಣ್ಯದ ಮೆಕ್‌ಗಾಫಿ ರಿಡ್ಜ್ ಪ್ರದೇಶದಲ್ಲಿ ಅವರ ಮೃತದೇಹ ಪತ್ತೆಯಾಗಿತ್ತು ಹಾಗೂ ಶವದ ಪಕ್ಕದಲ್ಲಿ ಒಂದು ಪಿಸ್ತೂಲ್ ಪತ್ತೆಯಾಗಿತ್ತು. ಚಾವೆಜ್ ಮತ್ತು ಕಾಸಿಯಾಸ್ ಇಬ್ಬರೂ ಯುಎಸ್ ಅಣು ರಹಸ್ಯಗಳು ಅಥವಾ ರಾಕೆಟ್ ತಂತ್ರಜ್ಞಾನಕ್ಕೆ ಸಂಬಂಧಿಸಿದ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದರು ಎನ್ನಲಾಗಿದೆ. ಆದರೆ, ಇವರಿಬ್ಬರ ನಡುವೆ ಪರಿಚಯವಿತ್ತೇ ಎಂಬುದು ಇನ್ನು ಸ್ಪಷ್ಟವಾಗಿಲ್ಲ.
ಕಳೆದ ಕೆಲವು ವರ್ಷಗಳಲ್ಲಿ ಅಮೆರಿಕಾದಲ್ಲಿ ಪರಮಾಣು ಮತ್ತು ಬಾಹ್ಯಾಕಾಶ ಕಾರ್ಯಕ್ರಮಗಳಿಗೆ ಸಂಬಂಧಿಸಿದ ಹಲವು ವಿಜ್ಞಾನಿಗಳು ನಿಗೂಢವಾಗಿ ನಾಪತ್ತೆಯಾಗುತ್ತಿದ್ದಾರೆ ಅಥವಾ ಸಾವನ್ನಪ್ಪುತ್ತಿದ್ದಾರೆ.
ವಿಲಿಯಂ ನೀಲ್ ಮೆಕ್‌ಕಾಸ್ಲ್ಯಾಂಡ್: ಫೆಬ್ರವರಿ 28 ರಂದು ನಿವೃತ್ತ ಏರ್ ಫೋರ್ಸ್ ರಿಸರ್ಚ್ ಲ್ಯಾಬೋರೇಟರಿ ಕಮಾಂಡರ್ ವಿಲಿಯಂ ನೀಲ್ ಮೆಕ್‌ಕಾಸ್ಲ್ಯಾಂಡ್ ಅವರು ತಮ್ಮ ನ್ಯೂ ಮೆಕ್ಸಿಕೋದ ಮನೆಯಿಂದ ನಾಪತ್ತೆಯಾಗಿದ್ದರು. ಅವರು ಹೋಗುವಾಗ ಕೇವಲ ಪಿಸ್ತೂಲ್ ಮಾತ್ರ ತೆಗೆದುಕೊಂಡು, ತಮ್ಮ ಕೀಲಿ ಕೈ, ಕನ್ನಡಕ ಮತ್ತು ಫೋನ್ ಅನ್ನು ಮನೆಯಲ್ಲೇ ಬಿಟ್ಟು ಹೋಗಿದ್ದಾರೆ. ಪ್ರಸಿದ್ಧ ಪತ್ರಕರ್ತ ರಾಸ್ ಕೌಲ್ಥರ್ಟ್ ಇದನ್ನು "ಅತ್ಯಂತ ಗಂಭೀರ ರಾಷ್ಟ್ರೀಯ ಭದ್ರತಾ ಬಿಕ್ಕಟ್ಟು" ಎಂದು ಕರೆದಿದ್ದಾರೆ. ಟೆನ್ನೆಸ್ಸಿಯ ಕಾಂಗ್ರೆಸ್ ಸದಸ್ಯ ಟಿಮ್ ಬರ್ಚೆಟ್ ಕೂಡ ಇದನ್ನು ಒಪ್ಪಿದ್ದಾರೆ. ಇವರು ರೈಟ್-ಪ್ಯಾಟರ್ಸನ್ ಏರ್ ಫೋರ್ಸ್ ಬೇಸ್‌ನಲ್ಲಿ ರಹಸ್ಯ ಯುಎಫ್‌ಒ (UFO) ಕಾರ್ಯಕ್ರಮಗಳೊಂದಿಗೆ ಸಂಪರ್ಕ ಹೊಂದಿದ್ದರು ಎನ್ನಲಾಗಿದೆ.
ಮೋನಿಕಾ ಜಾಸಿಂಟೊ ರೆಜಾ: ನಾಸಾ (NASA) ಬಾಹ್ಯಾಕಾಶ ಇಂಜಿನಿಯರ್ ಮೋನಿಕಾ ಜಾಸಿಂಟೊ ಅವರು ಹೈಕಿಂಗ್ ಹೋಗಿದ್ದಾಗ ನಿಗೂಢವಾಗಿ ನಾಪತ್ತೆಯಾಗಿದ್ದಾರೆ. ಇವರು ಕ್ಷಿಪಣಿ ಮತ್ತು ರಾಕೆಟ್ ತಂತ್ರಜ್ಞಾನಕ್ಕಾಗಿ ಬಳಸಲಾಗುವ ವಿಶೇಷ ಲೋಹಗಳ ಕುರಿತು ಮೆಕ್‌ಕಾಸ್ಲ್ಯಾಂಡ್ ಜೊತೆ ಕೆಲಸ ಮಾಡುತ್ತಿದ್ದರು.
ಭೌತವಿಜ್ಞಾನಿ ನುನೊ ಲೌರೆರೊ: ಪ್ಲಾಸ್ಮಾ ಭೌತಶಾಸ್ತ್ರದ ವಿಜ್ಞಾನಿಯಾಗಿದ್ದ ಇವರು, ಇಂಧನ ವಲಯದಲ್ಲಿ ಕ್ಲೀನ್ ಎನರ್ಜಿಯ ಮೂಲಕ ಕ್ರಾಂತಿ ಮಾಡಲು ಹತ್ತಿರವಾಗಿದ್ದರು. ಆದರೆ, ಡಿಸೆಂಬರ್ 15, 2025 ರಂದು ಇವರ ಬೋಸ್ಟನ್ ಮನೆಯ ಹೊರಗಡೆ ಪೋರ್ಚುಗಲ್ ಮೂಲದ ಇವರ ಹಳೆಯ ಸಹಪಾಠಿ ಕ್ಲಾಡಿಯೊ ನೆವೆಸ್ ವಾಲೆಂಟೆ ಎಂಬಾತ ಇವರನ್ನು ಹತ್ಯೆ ಮಾಡಿದ್ದ.
ಖಗೋಳ ಭೌತವಿಜ್ಞಾನಿ ಕಾರ್ಲ್ ಗ್ರಿಲ್‌ಮೈರ್: ಬಾಹ್ಯಾಕಾಶದ ಹೊರಗ್ರಹದಲ್ಲಿ (Exoplanet) ನೀರು ಪತ್ತೆಹಚ್ಚುವ ಯೋಜನೆಯಲ್ಲಿ ಕೆಲಸ ಮಾಡುತ್ತಿದ್ದ ಕಾರ್ಲ್ ಅವರನ್ನು ಫೆಬ್ರವರಿ 16, 2026 ರಂದು ಹತ್ಯೆ ಮಾಡಲಾಗಿದೆ.
ಜೇಸನ್ ಥಾಮಸ್: ನೊವಾರ್ಟಿಸ್ ಕಂಪನಿಯ ಕೆಮಿಕಲ್ ಬಯಾಲಜಿಯ ಸಹಾಯಕ ನಿರ್ದೇಶಕರಾಗಿದ್ದ ಜೇಸನ್ ಥಾಮಸ್ ಕೂಡ ಇತ್ತೀಚೆಗೆ ನಿಗೂಢವಾಗಿ ಸಾವನ್ನಪ್ಪಿದ ವಿಜ್ಞಾನಿಗಳ ಪಟ್ಟಿಯಲ್ಲಿದ್ದಾರೆ.
ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್ ಸಿಗುವ ಏಕೈಕ ತಾಣ ಏಷ್ಯಾನೆಟ್ ಸುವರ್ಣ ನ್ಯೂಸ್. ಹೊಸ ಗ್ಯಾಜೆಟ್ ರಿಲೀಸ್ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್ ಎಕ್ಸ್‌ಪ್ಲೇನರ್ಸ್ ಹಾಗೂ ಗ್ಯಾಜೆಟ್ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.