‘ಚಂದ್ರಯಾನ-2’ಕ್ಕೆ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಮುಹೂರ್ತ ನಿಗದಿಪಡಿಸಿದೆ. ಈ ಮೂಲಕ ಭಾರತೀಯರ ಬಹುದಿನಗಳ ಕನಸು ಸಾಕಾರಗೊಳ್ಳುವ ಕಾಲ ಸನ್ನಿಹಿತವಾಗಿದೆ.
ಬೆಂಗಳೂರು : ಮಹತ್ವಾಕಾಂಕ್ಷೆಯ ‘ಚಂದ್ರಯಾನ-2’ಕ್ಕೆ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಮುಹೂರ್ತ ನಿಗದಿಪಡಿಸಿದ್ದು, ಜುಲೈ 15ರ ಬೆಳಗಿನ ಜಾವ 2.51ಕ್ಕೆ ‘ಜಿಎಸ್‌ಎಲ್‌ವಿ ಮಾರ್ಕ್-3’ ರಾಕೆಟ್ ಚಂದ್ರಯಾನದ ಸಲಕರಣೆಗಳನ್ನು ಹೊತ್ತು ಶ್ರೀಹರಿಕೋಟಾದಿಂದ ಉಡಾವಣೆಗೊಳ್ಳಲಿದೆ.
ಚಂದ್ರಯಾನ-2ಕ್ಕೆ ಇಡೀ ದೇಶ ಕಾಯುತ್ತಿದ್ದು, ಭಾರತೀಯರ ಬಹುದಿನಗಳ ಕನಸು ಸಾಕಾರಗೊಳ್ಳುವ ಕಾಲ ಸನ್ನಿಹಿತವಾಗಿದೆ. ಇದಕ್ಕಾಗಿ ಇಸ್ರೋ ಪೂರ್ಣ ತಯಾರಿ ಮಾಡಿಕೊಂಡಿದೆ ಎಂದು ಇಸ್ರೋ ಅಧ್ಯಕ್ಷ ಕೆ.ಶಿವನ್ ಹೇಳಿದ್ದಾರೆ.
undefined
ಬೆಂಗಳೂರಿನ ಇಸ್ರೋ ಕೇಂದ್ರದಲ್ಲಿ ಬುಧವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಜಿಎಸ್‌ಎಲ್‌ವಿ ಮಾರ್ಕ್-3 ಹೆಸರಿನ ಬಾಹ್ಯಾಕಾಶ ನೌಕೆ (ರಾಕೆಟ್) ‘ಚಂದ್ರಯಾನ-2’ಕ್ಕೆ ಅಗತ್ಯವಿರುವ ಪರಿಕರಗಳನ್ನು ಹೊತ್ತು ಆಂಧ್ರಪ್ರದೇಶದ ಶ್ರೀಹರಿಕೋಟಾದಲ್ಲಿರುವ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಜುಲೈ 15ಕ್ಕೆ ಉಡಾವಣೆಗೊಳ್ಳಲಿದೆ. ಆಗಸ್ಟ್ 1ರಂದು ಚಂದ್ರನ ಕಕ್ಷೆ ತಲುಪಿ ಸೆಪ್ಟೆಂಬರ್ 6 ಅಥವಾ 7ಕ್ಕೆ ಚಂದ್ರನ ದಕ್ಷಿಣ ಧ್ರುವದ ಮೇಲ್ಮೈಯಲ್ಲಿ ಉಡಾವಣೆಗೊಂಡ 53 ದಿನಕ್ಕೆ ಹೆಜ್ಜೆ ಇಡುವ ಮೂಲಕ ದಾಖಲೆ ಸೃಷ್ಟಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ದಕ್ಷಿಣ ಧ್ರುವ ಆಯ್ಕೆ ಏಕೆ?
ಈವರೆಗೆ ಭಾರತ ಸೇರಿದಂತೆ ವಿಶ್ವದ ನಾಲ್ಕು ರಾಷ್ಟ್ರಗಳು ಮಾತ್ರ ಯಶಸ್ವಿ ಚಂದ್ರಯಾನ ನಡೆಸಿವೆ. ಆದರೆ ಯಾವುದೇ ದೇಶ ಚಂದ್ರನ ದಕ್ಷಿಣ ಧ್ರುವದಲ್ಲಿ ಅಧ್ಯಯನ ನಡೆಸಿಲ್ಲ. ಹಾಗಾಗಿ, ಭಾರತ ಚಂದ್ರನ ದಕ್ಷಿಣ ಧ್ರುವ ಆಯ್ಕೆ ಮಾಡಿಕೊಂಡಿದೆ ಎಂದರು.
ಜೊತೆಗೆ ದಕ್ಷಿಣ ಧ್ರುವದಲ್ಲಿ ಬೆಳಕು ಹೆಚ್ಚಾಗಿರಲಿದ್ದು, ಕಲ್ಲು, ಬಂಡೆ, ಹಳ್ಳಕೊಳ್ಳಗಳು ಕಡಿಮೆ. ಸಂಶೋಧನೆ ಮಾಡುವುದಕ್ಕೆ ಅನುಕೂಲಕರವಾದ ಸನ್ನಿವೇಶವಿದೆ. ಈ ಮೂಲಕ ಚಂದ್ರನ ದಕ್ಷಿಣ ಧ್ರುವದಲ್ಲಿ ಅಧ್ಯಯನ ನಡೆಸಿದ ಮೊದಲ ರಾಷ್ಟ್ರ ಭಾರತ ಎಂಬ ಹೆಗ್ಗಳಿಕೆಗೆ ಪಾತ್ರವಾಗಲಿದೆ ಎಂದು ತಿಳಿಸಿದರು.
3.8 ಟನ್ ತೂಕದ ನೌಕೆ
ಬಾಹ್ಯಾಕಾಶ ನೌಕೆ ಒಟ್ಟು 3.8 ಟನ್ ತೂಕವಿದ್ದು, ವಿಕ್ರಂ ಹೆಸರಿನ ಲ್ಯಾಂಡರ್ (ಚಂದ್ರನ ಮೇಲೆ ಪರಿಕರ ಇಳಿಸುವ ಸಾಧನ), ಪ್ರಜ್ಞಾನ್ ಹೆಸರಿನ ರೋವರ್ (ಚಂದ್ರನ ಮೇಲೆ ವಿವಿಧ ಪ್ರಯೋಗ ನಡೆಸುವ ಸಾಧನ) ಹಾಗೂ ಆರ್ಬಿಟರ್ (ಚಂದ್ರನ ಕಕ್ಷೆ ಸುತ್ತುವ ಸಾಧನ) ಎಂಬ ಮೂರು ಪರಿಕರಗಳನ್ನು ಚಂದ್ರನ ಅಂಗಳಕ್ಕೆ ಹೊತ್ತೊಯ್ಯುತ್ತಿದೆ.
603 ಕೋಟಿ ರು. ವೆಚ್ಚದ ಯೋಜನೆ
ಚಂದ್ರಯಾನ-2ರ ಒಟ್ಟಾರೆ ವೆಚ್ಚ 603 ಕೋಟಿ ರು. ಆಗಿದ್ದು, ಬಾಹ್ಯಾಕಾಶ ನೌಕೆಗೆ 375 ಕೋಟಿ ರು. ವೆಚ್ಚ ಮಾಡಲಾಗಿದೆ. ಚಂದ್ರಯಾನ ಪರಿಕರಗಳನ್ನು ಸಿದ್ಧಪಡಿಸಲು 500ಕ್ಕೂ ಹೆಚ್ಚು ಖಾಸಗಿ ಸಂಸ್ಥೆಗಳು, ಅಧ್ಯಯನ ಸಂಸ್ಥೆಗಳು ಕೈಜೋಡಿಸಿವೆ. ಒಟ್ಟಾರೆ ವೆಚ್ಚದಲ್ಲಿ ಶೇ.60ರಷ್ಟುಹಾಗೂ ಜಿಎಸ್‌ಎಲ್‌ವಿ ಮಾರ್ಕ್-3 ಬಾಹ್ಯಾಕಾಶ ನೌಕೆ ತಯಾರಿ ವೆಚ್ಚದಲ್ಲಿ ಶೇ.80ರಷ್ಟುವೆಚ್ಚವನ್ನು ಖಾಸಗಿ ಸಂಸ್ಥೆಗಳು ಭರಿಸಿವೆ ಎಂದು ಶಿವನ್ ಮಾಹಿತಿ ನೀಡಿದರು.
ಚಂದ್ರನಲ್ಲಿ ಕಾರ್ಯಾಚರಣೆ ಹೇಗಿರುತ್ತೆ?
2008ರ ಚಂದ್ರಯಾನ-1 ಮಾದರಿಯ ಕಾರ್ಯತಂತ್ರವನ್ನು ಇಲ್ಲಿ ಮರು ಬಳಕೆ ಮಾಡಲಾಗುತ್ತಿದೆ. ಚಂದ್ರನ ಅಂಗಳದಲ್ಲಿ ಯಾವುದೇ ಅಡೆತಡೆ ಇಲ್ಲದೇ ಇಳಿಯಲು ಈ ಬಾರಿ ನೂತನ ತಂತ್ರಜ್ಞಾನ ಬಳಕೆ ಮಾಡಲಾಗುತ್ತಿದೆ. ಆರ್ಬಿಟ್ ಚಂದ್ರನ ಕಕ್ಷೆಯ 100 ಕಿ.ಮೀ. ಅಂತರದಲ್ಲಿ ಸುತ್ತಲಿದೆ. ಇನ್ನೊಂದೆಡೆ ವಿಕ್ರಂ ಲ್ಯಾಂಡರ್ ಚಂದ್ರನ ಮೇಲೆ ಸುರಕ್ಷಿತವಾಗಿ ಪರಿಕರಗಳನ್ನು ಇಳಿಸಲಿದೆ. ಮೊದಲು ಲ್ಯಾಂಡರ್ ಬಾಗಿಲು ತೆರೆಯಲಿದೆ. ಆಗ ರೋವರ್ ಹೊರಬರಲಿದೆ. ಕ್ರಮೇಣ ಚಂದ್ರನ ನೆಲದ ಮೇಲೆ ಚಲನೆ ಆರಂಭಿಸುತ್ತದೆ. ಈ ರೋವರ್ ಪ್ರತಿ ಸೆಕೆಂಡಿಗೆ 1 ಸೆಂ.ಮೀ.ನಷ್ಟುವೇಗದಲ್ಲಿ ಚಲಿಸಲಿದೆ. ಒಟ್ಟು ಚಂದ್ರನ 500 ಮೀ. ದೂರದ ಮೇಲ್ಮೈಯಲ್ಲಿ ಸುತ್ತುತ್ತಾ 4ರಿಂದ 5 ಗಂಟೆ ವಿವಿಧ ಪ್ರಯೋಗ ನಡೆಸಲಿದೆ. ಆ ಪ್ರಯೋಗದ ಮಾಹಿತಿಯನ್ನು ಲ್ಯಾಂಡರ್ ಮೂಲಕ ಕಕ್ಷೆ ಸುತ್ತುತ್ತಿರುವ ಆರ್ಬಿಟರ್‌ಗೆ ತಲುಪಿಸುತ್ತದೆ. ಆರ್ಬಿಟರ್ ಚಂದ್ರನ ಕಕ್ಷೆಯಿಂದ ಇಸ್ರೋ ಕೇಂದ್ರಕ್ಕೆ ಮಾಹಿತಿ ವರ್ಗಾಯಿಸುತ್ತದೆ ಎಂದು ಅವರು ವಿವರಿಸಿದರು.
ಚಂದ್ರನ ಅಂಗಳಕ್ಕೆ ಅಶೋಕ ಚಕ್ರದ ಮುದ್ರೆ
ಪ್ರಜ್ಞಾನ್ ಹೆಸರಿನ ರೋವರ್ (ಚಂದ್ರನ ಮೇಲೆ ವಿವಿಧ ಪ್ರಯೋಗ ನಡೆಸುವ ಸಾಧನ)ಗೆ ಎರಡು ಚಕ್ರಗಳಿರಲಿದ್ದು, ಒಂದು ಚಕ್ರದಲ್ಲಿ ಅಶೋಕ ಚಕ್ರದ ಗುರುತು, ಮತ್ತೊಂದು ಚಕ್ರದಲ್ಲಿ ಇಸ್ರೋ ಲಾಂಛನ ಇರಲಿದೆ. 14 ದಿನಗಳಲ್ಲಿ ಪ್ರಜ್ಞಾನ್ ಚಂದ್ರನ ಅಂಗಳದಲ್ಲಿ ಸುಮಾರು 500 ಮೀಟರ್ ಸಂಚರಿಸಲಿದೆ. ನಂತರ ಅಶೋಕ ಚಕ್ರ ಮತ್ತು ಇಸ್ರೋ ಲಾಂಛನ ಚಂದ್ರನ ಅಂಗಳದಲ್ಲಿ ನೂರಾರು ವರ್ಷ ಉಳಿಯಲಿದೆ. ಮುಂದೆ ವಿಶ್ವದ ಯಾವುದೇ ರಾಷ್ಟ್ರ ಚಂದ್ರನ ದಕ್ಷಿಣ ಧ್ರುವಕ್ಕೆ ಭೇಟಿ ನೀಡಿದಾಗ ಇದು ಕಾಣಿಸಬಹುದು ಎಂಬ ಕಾರಣಕ್ಕೆ ಇವುಗಳನ್ನು ಕಳುಹಿಸಲಾಗುತ್ತಿದೆ. ಚಂದ್ರನ ಮೇಲೆ ಪರಿಕರ ಇಳಿಸುವ ಸಾಧನ ವಿಕ್ರಂ ಹೆಸರಿನ ಲ್ಯಾಂಡರ್‌ನ ಮೇಲೆ ಭಾರತದ ತ್ರಿವರ್ಣ ಧ್ವಜ ಇರಲಿದೆ ಎಂದು ಶಿವನ್ ತಿಳಿಸಿದರು.
ಮಹಿಳಾ ವಿಜ್ಞಾನಿಗಳ ನೇತೃತ್ವ
ಚಂದ್ರಯಾನ-2ರ ನೇತೃತ್ವವನ್ನು ಇಸ್ರೋದ ಇಬ್ಬರು ಮಹಿಳಾ ವಿಜ್ಞಾನಿಗಳು ವಹಿಸಿರುವುದು ವಿಶೇಷವಾಗಿದೆ. ಯೋಜನಾ ನಿರ್ದೇಶಕಿಯಾಗಿ ಎಂ. ವನಿತಾ, ಅಭಿಯಾನ(ಮಿಷನ್) ನಿರ್ದೇಶಕಿಯಾಗಿ ರಿತು ಕರೀದ್ ಲಾಲ್ ನೇತೃತ್ವ ವಹಿಸಿದ್ದಾರೆ. ಯೋಜನೆಯಲ್ಲಿ ಇಸ್ರೋದ ಶೇ.30ರಷ್ಟುಮಹಿಳಾ ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದಾರೆ.
ಬೆಂಗಳೂರಿನಲ್ಲಿ ಉಪಕರಣ ಸಿದ್ಧತೆ
ಬೆಂಗಳೂರಿನ ಇಸ್ರೋ ಸ್ಪೇಸ್‌ಕ್ರಾಫ್ಟ್ ಇಂಟಿಗ್ರೇಷನ್ ಟೆಸ್ಟ್ ಎಸ್ಟಾಬ್ಲಿಷ್‌ಮೆಂಟ್‌ನಲ್ಲಿ (ಐಸೈಟ್) ತಯಾರಿಕೆ ಹಾಗೂ ಪರೀಕ್ಷೆಯಾಗುತ್ತಿರುವ ಕಕ್ಷೆಗಾಮಿ ಮತ್ತು ಪ್ರಜ್ಞಾನ್ ರೋವರ್ ಅನ್ನು ಇದೇ ಮೊದಲ ಬಾರಿಗೆ ಬುಧವಾರ ಇಸ್ರೋ ಪ್ರದರ್ಶನ ಮಾಡಿದೆ. ಎರಡೂ ಉಪಕರಣಗಳು ಈಗಾಗಲೇ ನೂರಾರು ಪರೀಕ್ಷೆಗೆ ಒಳಪಟ್ಟಿವೆ. ಜೂ.14ಕ್ಕೆ ಕಕ್ಷೆಗಾಮಿಯನ್ನು ಆಂಧ್ರಪ್ರದೇಶದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದತ್ತ ತೆಗೆದುಕೊಂಡು ಹೋಗಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಜೂ.17ಕ್ಕೆ ವಿಕ್ರಂ ಲ್ಯಾಂಡರ್ ಸಾಗಣೆ ಆರಂಭಿಸಲಾಗುತ್ತದೆ ಎಂದು ಶಿವನ್ ತಿಳಿಸಿದರು.
2 ಸೆಕೆಂಡ್‌ನಲ್ಲಿ ಸಂದೇಶ ರವಾನೆ!
ಭೂಮಿಯಿಂದ ಚಂದ್ರ 384 ಸಾವಿರ ಕಿ.ಮೀ. ದೂರದಲ್ಲಿದ್ದು, ಅಲ್ಲಿಂದ ರವಾನೆಯಾದ ಸಂದೇಶ ಮತ್ತು ಚಿತ್ರಗಳು ಎರಡು ಸೆಕೆಂಡ್ ಅವಧಿಯಲ್ಲಿ ಇಸ್ರೋ ಕೇಂದ್ರದಲ್ಲಿ ಲಭಿಸುತ್ತವೆ. ಚಂದ್ರನ ಸುತ್ತ 100 ಕಿ.ಮೀ. ಅಂತರದಲ್ಲಿ ಸುತ್ತುವ ಕಕ್ಷೆಗಾಮಿಯು ಇಸ್ರೋಗೆ ಈ ಮಾಹಿತಿ ನೀಡಲಿದೆ. ಲ್ಯಾಂಡರ್ ಸಂಪರ್ಕ ವ್ಯವಸ್ಥೆಯಲ್ಲಿ ಯಾವುದೇ ತೊಂದರೆ ಕಾಣಿಸಿಕೊಂಡರೆ ಕಕ್ಷೆಗಾಮಿ ಮೂಲಕ ಸಂದೇಶ ರವಾನಿಸಲು ವ್ಯವಸ್ಥೆ ಮಾಡಲಾಗಿದೆ ಎಂದು ಶಿವನ್ ಹೇಳಿದರು.
ಯಾವ ದೇಶವೂ ಮಾಡಿರದ ಸಾಹಸ
ಅಮೆರಿಕ, ರಷ್ಯಾ, ಚೀನಾ ಬಳಿಕ ಚಂದ್ರನ ಮೇಲೆ ಸಂಶೋಧನಾ ಸಲಕರಣೆ ಇಳಿಸುವ 4ನೇ ರಾಷ್ಟ್ರ ಎಂಬ ಹೆಗ್ಗಳಿಕೆಗೆ ಭಾರತ ಪಾತ್ರವಾಗಲಿದೆ. ಇದೇ ವೇಳೆ, ಚಂದ್ರನ ದಕ್ಷಿಣ ಧ್ರುವ ತಲುಪಲಿರುವ ವಿಶ್ವದ ಮೊದಲ ದೇಶ ಖ್ಯಾತಿಯೂ ಭಾರತಕ್ಕೆ ಲಭ್ಯವಾಗಲಿದೆ.